ಕೆ.ಆರ್.ಪುರ: ‘ಅಪೌಷ್ಟಿಕತೆಯಿಂದ ಬಳಲುವ ಮಕ್ಕಳು, ಗರ್ಭಿಣಿಯರು, ಬಾಣಂತಿಯರು, ಕಿಶೋರಿಯರಿಗಾಗಿ ಪೋಷಣ್ ಮಾಸ ಆಚರಿಸಲಾಗುತ್ತದೆ’ ಎಂದು ತಾಲ್ಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಜಿ. ಎನ್. ಶಶಿಧರ್ ತಿಳಿಸಿದರು.
ಕೆ.ಆರ್.ಪುರ ಸಮೀಪದ ಯಮಲೂರಿನ ಅಂಗನವಾಡಿ ಕೇಂದ್ರದಲ್ಲಿ ಏರ್ಪಡಿಸಿದ್ದ ಪೋಷಣ್ ಮಾಸಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಅಪೌಷ್ಟಿಕತೆಯಿಂದ ಬಳಲುವವರು ವಿವಿಧ ರೋಗಗಳಿಗೆ ಈಡಾಗುತ್ತಿದ್ದಾರೆ. ಮೊದಲು ಅವರಲ್ಲಿರುವ ಅನಾರೋಗ್ಯವನ್ನು ಗುರುತಿಸಿ ಸಕಾಲದಲ್ಲಿ ಚಿಕಿತ್ಸೆ ಹಾಗೂ ಪೌಷ್ಟಿಕ ಆಹಾರ ನೀಡಬೇಕು ಎಂದರು
ವೃತ್ತ ಮೇಲ್ವಿಚಾರಕಿ ಕೆ.ಎಲ್. ಅನಿತಾ ಲಕ್ಷ್ಮಿ ಮಾತನಾಡಿ, ‘ಕಿಶೋರಿಯರಿಂದ ಹಿಡಿದು ಗರ್ಭಿಣಿಯರು ಸೇರಿದಂತೆ ಮಹಿಳೆಯರು ಮತ್ತು ಮಕ್ಕಳನ್ನು ಅಪೌಷ್ಟಿಕತೆಯಿಂದ ಮುಕ್ತಗೊಳಿಸುವುದು ಸರ್ಕಾರದ ಉದ್ದೇಶವಾಗಿದೆ’ ಎಂದರು
ಯಮಲೂರು ಸರ್ಕಾರಿ ಶಾಲೆಯ ಮುಖ್ಯಶಿಕ್ಷಕ ಪ್ರಸನ್ನ ಮೂರ್ತಿ, ಮಕ್ಕಳ ಜಾಗೃತಿ ಸಂಸ್ಥೆಯ ನವೀನ್, ರಶ್ಮಿ ಮತ್ತು ಶಿಬಿರಾರ್ಥಿಗಳು, ಪೋಷಣ್ ಸಂಯೋಜಕರಾದ ಸುರೇಶ್, ಪರಿಸರವಾದಿ ಮಂಜುನಾಥ್ ಇದ್ದರು.