ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಮತ್ತೆ ಬಾಯ್ದೆರೆದಿವೆ ರಸ್ತೆ ಗುಂಡಿಗಳು

Last Updated 6 ಸೆಪ್ಟೆಂಬರ್ 2021, 3:00 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಪ್ರಮುಖ ರಸ್ತೆಗಳಲ್ಲಿ ಗುಂಡಿಗಳು ಮತ್ತೆ ಬಾಯ್ದೆರೆದಿವೆ. ಬಿಸಿ ಡಾಂಬರು ಘಟಕ ಸ್ಥಾಪನೆಯಾದ ಬಳಿಕ ನಗರದಲ್ಲಿ ರಸ್ತೆ ಗುಂಡಿಗಳ ಸಮಸ್ಯೆ ಸಂಪೂರ್ಣ ನೀಗಲಿದೆ ಎಂಬ ಬಿಬಿಎಂಪಿಯ ಭರವಸೆ ಸಂಪೂರ್ಣ ಹುಸಿಯಾಗಿದೆ.

ರಸ್ತೆ ಗುಂಡಿ ಕಾಣಿಸಿಕೊಳ್ಳುತ್ತಿದ್ದಂತೆಯೇ ಅವುಗಳನ್ನು ಮುಚ್ಚಲು ಸಾಧ್ಯವಾಗಬೇಕು ಎಂಬ ಕಾರಣಕ್ಕೆ ನಗರದ ಹೊರವಲಯದ ಕಣ್ಣೂರಿನಲ್ಲಿ ಬಿಬಿಎಂಪಿ ಬಿಸಿ ಡಾಂಬರು– ಜಲ್ಲಿ ಮಿಶ್ರಣ ಘಟಕವನ್ನು ಎರಡು ವರ್ಷಗಳ ಹಿಂದೆ ಆರಂಭಿಸಿತ್ತು. ₹ 7.5 ಕೋಟಿ ವೆಚ್ಚದಲ್ಲಿ ಸ್ಥಾಪಿಸಿರುವ ಈ ಘಟಕ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ಹಾಗಾಗಿ ನಗರದ ರಸ್ತೆಗಳ ಗುಂಡಿಗಳ ದುಃಸ್ಥಿತಿ ಹಾಗೆಯೇ ಮುಂದುವರಿದಿದೆ.

ಕಣ್ಣೂರಿನ ಘಟಕವು ಗಂಟೆಗೆ 120 ಟನ್‌ನಂತೆ 10 ಗಂಟೆಗಳಲ್ಲಿ 50 ಟ್ರಕ್‌ಗಳಷ್ಟು 160 ಡಿಗ್ರಿ ಉಷ್ಣಾಂಶದ ಹಾಟ್‌ ಮಿಕ್ಸ್‌ ಸಿದ್ಧಪಡಿಸುವ ಸಾಮರ್ಥ್ಯ ಹೊಂದಿದೆ. ಆದರೂ ಗುತ್ತಿಗೆದಾರರು ಷರತ್ತಿನ ಪ್ರಕಾರ ಬಿಬಿಎಂಪಿಯ ಬೇಡಿಕೆಯಷ್ಟು ಜಲ್ಲಿ– ಡಾಂಬರು ಮಿಶ್ರಣ ಪೂರೈಸುತ್ತಿಲ್ಲ. ಹಾಗಾಗಿ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯ ಈ ಘಟಕ ಆರಂಭವಾದಂದಿನಿಂದಲೇ ಹಳಿ ತಪ್ಪಿದೆ.

ನಗರದ ಶೇಷಾದ್ರಿಪುರ, ಮಲ್ಲೇಶ್ವರ, ಲಗ್ಗೆರೆ, ಜೆ.‍ಪಿ.ನಗರ, ಬನಶಂಕರಿ, ಹಲಸೂರು ಸೇರಿದಂತೆ ವಿವಿಧ ಕಡೆ ರಸ್ತೆಗಳಲ್ಲಿ ಡಾಂಬರು ಕಿತ್ತು ಹೋಗಿ ಭಾರಿ ಗಾತ್ರದ ಗುಂಡಿಗಳು ಸೃಷ್ಟಿಯಾಗಿವೆ. ಕೋವಿಡ್‌ ನಿಯಂತ್ರಣಕ್ಕಾಗಿ ಜಾರಿಗೊಳಿಸಿದ ಲಾಕ್‌ಡೌನ್‌ ತೆರವಿನ ಬಳಿಕ ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಿದೆ. ಹೊಂಡ ಗುಂಡಿಗಳಿಂದ ಕೂಡಿದ ರಸ್ತೆಗಳಲ್ಲಿ ಸಂಚರಿಸುವಾಗ ಪ್ರಯಾಣಿಕರು ಹೈರಾಣಾಗುತ್ತಿದ್ದಾರೆ. ದ್ವಿಚಕ್ರ ವಾಹನ ಸವಾರರಂತೂ ಕೆಸರುಗಳಿಂದ ತುಂಬಿದ ಗುಂಡಿಗಳ ಮೂಲಕ ಹಾದು ಹೋಗುವಾಗ ಜೀವ ಭಯವನ್ನು ಎದುರಿಸುತ್ತಿದ್ದಾರೆ.

ಕಣ್ಣೂರಿನ ಹಾಟ್‌ ಮಿಕ್ಸ್‌ ಘಟಕವನ್ನು ಸಮರ್ಪಕವಾಗಿ ನಡೆಸದ ಕಾರಣ ಎಂ.ಎಸ್.ವೆಂಕಟೇಶ್‌ ಅವರಿಗೆ ನೀಡಿದ್ದ ಗುತ್ತಿಗೆಯನ್ನು ಬಿಬಿಎಂಪಿ ರದ್ದುಪಡಿಸಿ ಹೊಸತಾಗಿ ಟೆಂಡರ್‌ ಕರೆದಿತ್ತು.

‘ಕಣ್ಣೂರಿನ ಹಾಟ್‌ ಮಿಕ್ಸ್‌ ಘಟಕದ ನಿರ್ವಹಣೆಗೆ ಹೊಸತಾಗಿ ಜೆಎಂಸಿ ಕಂಪನಿಗೆ ಟೆಂಡರ್‌ ನೀಡಲಾಗಿದೆ. ಈ ಸಂಸ್ಥೆಗೆ ಆಗಸ್ಟ್‌ ತಿಂಗಳ ಅಂತ್ಯದಲ್ಲಿ ಕಾರ್ಯಾದೇಶ ನೀಡಲಾಗಿದೆ. ರಸ್ತೆ ಗುಂಡಿ ಸಮಸ್ಯೆ ಶೀಘ್ರವೇ ಬಗೆಹರಿಯಲಿದೆ’ ಎಂದು ಬಿಬಿಎಂ‍ಪಿ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT