ಶನಿವಾರ, ಜನವರಿ 28, 2023
15 °C

ರಸ್ತೆಯಲ್ಲಿ ಹೊಂಡ: ಮುಖ್ಯಮಂತ್ರಿಗಳೇ ಸ್ವಲ್ಪ ನೋಡಿ ಎಂದು ಮನವಿ ಮಾಡಿದ ಬಾಲಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ತಿಂಗಳ ಹಿಂದೆಯಷ್ಟೇ ಹಾಕಿದ್ದ ಡಾಂಬರ್ ಅಗೆದು ಹೊಂಡ ತೋಡಿದ್ದನ್ನು ‍ಪ್ರಶ್ನಿಸಿ ಒಂದನೇ ತರಗತಿ ಬಾಲಕಿ ಶಿವನ್ಯಾ ವಿಡಿಯೊ ಹರಿಬಿಟ್ಟಿದ್ದು, ಇದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ವೈಯಾಲಿಕಾವಲ್ 15ನೇ ಅಡ್ಡರಸ್ತೆಯಲ್ಲಿ ತಿಂಗಳ ಹಿಂದೆಯಷ್ಟೇ ಹಾಕಿದ್ದ ಡಾಂಬರ್‌ ಅಗೆದು, ಹೊಂಡ ತೋಡಲಾಗಿದೆ. ಇದೇ ರಸ್ತೆಯಲ್ಲಿ ಹಾದು ನಿತ್ಯವೂ ಶಾಲೆಗೆ ಹೋಗಿ ಬರುವ ಬಾಲಕಿ, ಹೊಂಡದ ಬಳಿಯೇ ವಿಡಿಯೊ ಚಿತ್ರೀಕರಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಪ್ರಶ್ನಿಸಿದ್ದಾಳೆ.

‘ನೋಡಿ ಸರ್. ಡಾಂಬರ್ ಹಾಕಿ ಒಂದು ತಿಂಗಳಾಯ್ತು. ಮತ್ತೆ ರೋಡ್‌ನಲ್ಲಿ ಹೊಂಡ ಮಾಡ್ತಾ ಇದ್ದಾರೆ. ಎಷ್ಟು ಕಷ್ಟ ಆಗುತ್ತಿದೆ ನೋಡಿ ನಮಗೆ. ಮುಖ್ಯಮಂತ್ರಿಗಳೇ ಸ್ವಲ್ಪ ನೋಡಿ...’ ಎಂದು ಶಿವನ್ಯಾ ವಿಡಿಯೊದಲ್ಲಿ ಮಾತನಾಡಿದ್ದಾಳೆ. ವಿಡಿಯೊವನ್ನು ಹಲವರು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದು, ಬಾಲಕಿಯ ಧೈರ್ಯವನ್ನು ಹಲವರು ಕೊಂಡಾಡಿದ್ದಾರೆ.

ವಿಡಿಯೊ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡಿದ ಶಿವನ್ಯಾ, ‘ಮೊನ್ನೆ ಶಾಲೆಗೆ ಹೋಗುವಾಗ ಹೊಂಡದಿಂದಾಗಿ ಆಯತಪ್ಪಿ ಬಿದ್ದೆ. ನನ್ನ ಕನ್ನಡಕ ಒಡೆಯಿತು. ತುಂಬಾ ಅಳುತ್ತಿದ್ದೆ. ಹೊಸ ಕನ್ನಡಕ ಕೊಡಿಸುವುದಾಗಿ ತಂದೆ ಹೇಳಿದರು. ಆದರೆ, ಹೊಸ ಕನ್ನಡಕ ಖರೀದಿಗೆ ನಮ್ಮದೇ ಹಣ ಹೋಗುತ್ತದೆ. ಹೊಂಡ ತೋಡಿದ್ದರಿಂದ ಕನ್ನಡಕ ಒಡೆದಿದ್ದು, ನಮ್ಮ ದುಡ್ಡು ಏಕೆ ಕೊಡಬೇಕು. ಸಿಟ್ಟಾಗಿ ವಿಡಿಯೊ ಮಾಡಿದೆ’ ಎಂದಳು.

‘ರಸ್ತೆಗಳನ್ನು ಮೊದಲು ಸರಿಪಡಿಸಬೇಕು. ಮಕ್ಕಳು ಹಾಗೂ ಪೋಷಕರಿಗೆ ಆಗುತ್ತಿರುವ ತೊಂದರೆಯನ್ನು ನಿವಾರಿಸಬೇಕು. ಹೊಂಡ ಮುಚ್ಚದಿದ್ದರೆ, ಮುಂದಿನ ದಿನಗಳಲ್ಲೂ ಇದೇ ರೀತಿ ವಿಡಿಯೊ ಮಾಡುತ್ತೇನೆ’ ಎಂದು ಬಾಲಕಿ ಹೇಳಿದಳು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು