ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

1.80 ಲಕ್ಷ ಜನರಿಗೆ ಪ್ರಧಾನಮಂತ್ರಿ ಸ್ವನಿಧಿ: ಡಾ. ವಿ. ರಾಮ್‌ಪ್ರಸಾದ್‌ ಮನೋಹರ್‌

ಬೀದಿ ವ್ಯಾಪಾರಿಗಳಿಗೆ ಯೋಜನೆ: ಸಹಾಯ ಕೇಂದ್ರ
Last Updated 7 ಜುಲೈ 2022, 19:24 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಧಾನಮಂತ್ರಿ ಸ್ವನಿಧಿ ಯೋಜನೆಯಲ್ಲಿ ಬಿಬಿಎಂಪಿ ಸಮಾಜಕಲ್ಯಾಣ ವಿಭಾಗದ ವತಿಯಿಂದ 1.80 ಲಕ್ಷ ಜನರಿಗೆ ಸಾಲ ನೀಡುವ ಗುರಿ ಹೊಂದಲಾಗಿದೆ ಎಂದು ವಿಶೇಷ ಆಯುಕ್ತ ಡಾ. ವಿ. ರಾಮ್‌ಪ್ರಸಾದ್‌ ಮನೋಹರ್‌ ಹೇಳಿದರು.

‘ಈ ಮೊದಲು 55 ಸಾವಿರ ಜನರಿಗೆ ಸೌಲಭ್ಯ ಕಲ್ಪಿಸುವ ಯೋಜನೆ ಇತ್ತು. ಅದನ್ನು 1.80 ಲಕ್ಷ ಜನರಿಗೆ ಹೆಚ್ಚಿಸಿ, ಅದರ ಸಮ್ಮತಿಗೆ ಕಳುಹಿಸಲಾಗಿದೆ. ಫಲಾನುಭವಿಗಳಿಗೆ ಇದನ್ನು ತಲುಪಿಸುವ ಕಾರ್ಯ ಆರಂಭವಾಗಿದೆ’ ಎಂದರು.

ಗಾಂಧಿಬಜಾರ್‌ನಲ್ಲಿ ಬೀದಿ ವ್ಯಾಪಾರಿಗಳಿಗೆ ಸ್ವನಿಧಿ ಯೋಜನೆಯನ್ನು ಆರಂಭಿಸಲಾಗಿದೆ. ಮುಂದಿನ ವಾರ ಸಿಟಿ ಮಾರುಕಟ್ಟೆಯಲ್ಲೂ ಕಾರ್ಯಕ್ರಮ ಆಯೋಜಿಸಲಾಗಿದೆ. ಬೀದಿ ವ್ಯಾಪಾರಿಗಳು ಇರುವ ಕಡೆಯೇ ಸಹಾಯ ಕೇಂದ್ರ ತೆರೆಯಲಾಗುತ್ತದೆ. ಅರ್ಜಿ ಪಡೆದು, ಸಾಲ ವಿತರಿಸುವ ಕೆಲಸವನ್ನೂ ಅಲ್ಲೇ ಮಾಡಲಾಗುತ್ತದೆ ಎಂದು ತಿಳಿಸಿದರು.

ಬ್ಯಾಂಕ್‌ಗಳಲ್ಲಿ ಬೀದಿ ವ್ಯಾಪಾರಿಗಳು ಸಾಲ ಪಡೆಯಲು ಸಾಕಷ್ಟು ಪ್ರಯಾಸ ಪಡಬೇಕು. ಆದರೆ ಈ ಯೋಜನೆಯಲ್ಲಿ ಅವರಿಗೆ ಸುಲಭ ಹಾಗೂ ತುರ್ತಾಗಿ ಸಾಲ ಲಭ್ಯವಾಗಲಿದೆ ಎಂದು ತಿಳಿಸಿದರು.

ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯಕ್ರಮಗಳಿಗೆ ಅನುಮತಿ ನೀಡಲು ಕೆಲವು ಇತಿಮಿತಿಗಳನ್ನು ಪರಿಶೀಲಿಸಲಾಗುತ್ತದೆ. ಎಲ್ಲದಕ್ಕೂ ಒಂದೇ ರೀತಿಯ ಮಾನದಂಡ ಇರುವುದಿಲ್ಲ. ಅದು ಆಯಾ ಪ್ರಕರಣ ಆಧಾರವಾಗಿರುತ್ತದೆ ಎಂದು ಮಾಹಿತಿ ನೀಡಿದರು.

ಚಾಮರಾಜಪೇಟೆ ಈದ್ಗಾ ಆಟದ ಮೈದಾನಕ್ಕೆ ಸಂಬಂಧಿಸಿದಂತೆ ಕಾನೂನು ತಜ್ಞರ ಸಲಹೆ ಪಡೆದು ಮುಂದುವರಿಯಲಾಗುತ್ತದೆ. ಯಾರು ಏನೇ ಹೇಳಿದರೂ ಕಾನೂನು ರೀತಿಯೇ ಕ್ರಮವಾಗುತ್ತದೆ ಎಂದು ಉತ್ತರಿಸಿದರು.

ಜಿಎಸ್‌ಟಿ ಪರಿಶೀಲನೆ: ‘ಬಿಬಿಎಂಪಿ ವತಿಯಿಂದ ಜಿಎಸ್‌ಟಿ ಪಾವತಿಸುವುದು ಕಡಿಮೆಯಾಗಿದೆ ಎಂಬ ದೂರಿದೆ. ಆದರೆ ಇದು ಯಾವ ಪ್ರಕರಣ ಎಂದು ಪರಿಶೀಲಿಸಬೇಕಾಗಿದೆ. ಕೆಲವು ಕಾಮಗಾರಿಗಳಿಗೆ, ಗುತ್ತಿಗೆದಾರರಿಗೆ ವಿನಾಯಿತಿ ಇದೆ. ನಾವು ಯಾವುದೇ ರೀತಿಯಲ್ಲಿ ತಪ್ಪು ಮಾಡಲು ಸಾಧ್ಯವಿಲ್ಲ. ಎಲ್ಲವೂ ಆನ್‌ಲೈನ್‌ನಲ್ಲೇ ಇರುತ್ತದೆ. ಅಲ್ಲದೆ ಆಡಿಟ್‌ ಕೂಡ ಆಗುತ್ತದೆ’ ಎಂದು ರಾಮ್‌ಪ್ರಸಾದ್‌ ವಿವರ ನೀಡಿದರು.

ಬಿಬಿಎಂಪಿ ಶಾಲೆ ಮಕ್ಕಳಿಗೆ ಶೂಗಳನ್ನುನೀಡಲು ಟೆಂಡರ್‌ ಕರೆಯಲಾಗಿದೆ. ಪ್ರಕ್ರಿಯೆ ಪೂರ್ಣಗೊಂಡ ಕೂಡಲೇ ಗುಣಮಟ್ಟದ ಶೂಗಳನ್ನು ವಿತರಿಸಲಾಗುತ್ತದೆ. ಕನ್ನಡ ಮತ್ತು ಸಮಾಜ ವಿಜ್ಞಾನ ಪಠ್ಯಪುಸ್ತಕಗಳು ಬಂದಿಲ್ಲ. ಸರ್ಕಾರಕ್ಕೆ ಈ ಬಗ್ಗೆ ಮನವಿ ಮಾಡಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT