ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾರಿಗೂ ಅಂಜದೇ ಸಿದ್ದರಾಮಯ್ಯ ಹಾಸನಕ್ಕೆ ಭೇಟಿ ನೀಡಲಿ: ಸಾಹಿತಿಗಳ ಆಗ್ರಹ

Published 25 ಮೇ 2024, 15:57 IST
Last Updated 25 ಮೇ 2024, 15:57 IST
ಅಕ್ಷರ ಗಾತ್ರ

ಬೆಂಗಳೂರು: ‘ಸಂಸದ ಪ್ರಜ್ವಲ್‌ ರೇವಣ್ಣ ಅವರಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತೆಯರಿಗೆ ಧೈರ್ಯ ತುಂಬುವ ಒಂದು ಹೇಳಿಕೆಯನ್ನೂ ನೀಡದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಅಸಮಾಧಾನ ಇದೆ’ ಎಂದು ಲೇಖಕಿ ವಿಜಯಾ ಹೇಳಿದರು.

ನಗರದಲ್ಲಿ ಶನಿವಾರ ಪ್ರಗತಿಪರ ಚಿಂತಕರ ವೇದಿಕೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮೇ 30ರ ‘ಹೋರಾಟದ ನಡಿಗೆ ಹಾಸನದ ಕಡೆಗೆ’ ಜಾಥಾದ ಭಿತ್ತಿಪತ್ರ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಸಿದ್ದರಾಮಯ್ಯ ಅವರು ಹಾಸನಕ್ಕೆ ಭೇಟಿ ನೀಡದಿರುವುದಕ್ಕೆ ವೈಯಕ್ತಿಕ ಕಾರಣವೂ  ಇರಬಹುದು. ಧೈರ್ಯವಾಗಿ ಇರಿ; ಸರ್ಕಾರ ನಿಮ್ಮನ್ನು (ಸಂತ್ರಸ್ತ ಮಹಿಳೆಯರನ್ನು) ರಕ್ಷಿಸುತ್ತದೆ ಎಂಬುದನ್ನೂ ಹೇಳದ ಮುಖ್ಯಮಂತ್ರಿ ಕರ್ತವ್ಯ ಮರೆತಿದ್ದಾರೆ’ ಎಂದರು.

‘ಸಮಾಜವಾದಿ ಹಿನ್ನೆಲೆಯ ಸಿದ್ದರಾಮಯ್ಯ ಅವರು ನೊಂದವರಿಗೆ ನ್ಯಾಯ ಕಲ್ಪಿಸುತ್ತಾರೆ ಎನ್ನುವ ಭರವಸೆ ಇತ್ತು. ಅದು ಆಗುತ್ತಿಲ್ಲ’ ಎಂದು ಹೇಳಿದರು.

ಪತ್ರಕರ್ತ ಜಾಣಗೆರೆ ವೆಂಕಟರಾಮಯ್ಯ ಮಾತನಾಡಿ, ‘ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಮೊದಲು ಬಂಧಿಸಬೇಕು. ಶಾಸಕ ಎಚ್‌.ಡಿ.ರೇವಣ್ಣ ಅವರ ಬಂಧನದ ಬಳಿಕ ಕುಮಾರಸ್ವಾಮಿ ಏನೇನೋ ಮಾತನಾಡುತ್ತಿದ್ದಾರೆ. ಕುಮಾರಸ್ವಾಮಿ ಅವರು ಈ ಪ್ರಕರಣದಲ್ಲಿ ಆರೋಪಿಗಳ ರಕ್ಷಣೆಗೆ ಇಳಿದಿರುವ ಅನುಮಾನ ಕಾಡುತ್ತಿದೆ’ ಎಂದು ಹೇಳಿದರು.

ಸಾಹಿತಿ ಕೆ.ಮರುಳಸಿದ್ದಪ್ಪ ಮಾತನಾಡಿ, ‘ಅಧಿಕಾರ, ವಂಶ ಹಾಗೂ ಜಾತಿ ಮದದಿಂದ ಆತ ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿದ್ದಾನೆ. ಇಂತಹ ವ್ಯಕ್ತಿಗೆ ಶಿಕ್ಷೆ ಆಗಬೇಕು’ ಎಂದು ಆಗ್ರಹಿಸಿದರು.

ಸಾಹಿತಿ ಬಂಜಗೆರೆ ಜಯಪ್ರಕಾಶ್‌ ಮಾತನಾಡಿ, ‘ಅಧಿಕಾರವನ್ನು ಅಭಿವೃದ್ಧಿಗೆ ಬಳಕೆ ಮಾಡಿಕೊಳ್ಳದೇ ಹೀನ ಕೃತ್ಯಕ್ಕೆ ಬಳಸಿದ್ದು ಖಂಡನೀಯ’ ಎಂದು ಹೇಳಿದರು.

ಪತ್ರಕರ್ತ ದಿನೇಶ್ ಅಮಿನ್‌ಮಟ್ಟು ಮಾತನಾಡಿ, ‘ರಾಜ್ಯದಲ್ಲಿ ಕಳೆದ ಹತ್ತು ವರ್ಷದಲ್ಲಿ ಈ ರೀತಿಯ ಮೂರನೇ ಘಟನೆ ನಡೆಯುತ್ತಿದೆ. ಇಬ್ಬರು ಸ್ವಾಮೀಜಿಗಳ ಮೇಲೆ ಇಂತಹದ್ದೇ ಆರೋಪವಿದೆ. ಈ ಬಾರಿ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬೇಕು. ಸಂತ್ರಸ್ತರಿಗೆ ನ್ಯಾಯ ಸಿಗುವಂತೆ ಮಾಡಬೇಕು’ ಎಂದು ಹೇಳಿದರು.

ನ್ಯಾಯ ಸಿಗುವಂತೆ ಮಾಡಲು ‘ವಿಶೇಷ ನ್ಯಾಯಾಲಯ’ ಸ್ಥಾಪಿಸಬೇಕು. ಎಸ್‌ಐಟಿ ತನಿಖೆಯ ಅಂತಿಮ ವರದಿಯನ್ನು ಹೈಕೋರ್ಟ್‌ ನ್ಯಾಯಾಧೀಶರೊಬ್ಬರ ಉಸ್ತುವಾರಿ ಹಾಗೂ ಪರಿಶೀಲನೆಯಲ್ಲಿ ಅಂತಿಮ ಮಾಡಬೇಕು. ನಂತರ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ತಕ್ಷಣವೇ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಸಭೆಯಲ್ಲಿದ್ದ ಸಾಹಿತಿಗಳು ಹಾಗೂ ಹೋರಾಟಗಾರರು ಆಗ್ರಹಿಸಿದರು.

ಜಿ.ರಾಮಕೃಷ್ಣ, ಎಲ್‌.ಎನ್‌.ಮುಕುಂದರಾಜ್‌, ಎಸ್‌.ಜಿ.ಸಿದ್ದರಾಮಯ್ಯ, ಕೆ.ಎಸ್.ವಿಮಲಾ, ಶೂದ್ರ ಶ್ರೀನಿವಾಸ್‌, ಬಿ.ಸುರೇಶ್‌, ಪತ್ರಕರ್ತ ಲಕ್ಷ್ಮಣ್‌ ಕೊಡಸೆ, ಕಾ.ತ. ಚಿಕ್ಕಣ್ಣ, ಕೆ.ವಿ.ನಾಗರಾಜಮೂರ್ತಿ, ಗೋವಿಂದನಾಯಕ್, ಟಿ.ಆರ್‌.ಚಂದ್ರಶೇಖರ್‌, ಭಾರತಿ ಹೆಗಡೆ, ದಯಾನಂದ ಪಾಟೀಲ, ಆರ್‌.ನಾಗೇಶ್‌ ಅರಳಕುಪ್ಪೆ, ಜಯಲಕ್ಷ್ಮಿ ಪಾಟೀಲ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT