ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಅಲ್ಪಸಂಖ್ಯಾತರಿಗೆ ಸಮಾನ ಅವಕಾಶ ಒದಗಿಸಿಲ್ಲ: ಪ್ರಕಾಶ್‌ ಕಾರಟ್ ಆರೋಪ

ಅಲ್ಪಸಂಖ್ಯಾತರ ದಿನಾಚರಣೆ
Last Updated 19 ಡಿಸೆಂಬರ್ 2020, 21:36 IST
ಅಕ್ಷರ ಗಾತ್ರ

ಬೆಂಗಳೂರು: ‘ಶತಮಾನಗಳಿಂದ ಈ ನೆಲದಲ್ಲಿ ವಾಸವಿರುವ ಧಾರ್ಮಿಕ ಅಲ್ಪಸಂಖ್ಯಾತರಿಗೆ ಸಮಾನ ಅವಕಾಶಗಳನ್ನು ನೀಡಲು ಬಿಜೆಪಿ ನೇತೃತ್ವದ ಸರ್ಕಾರ ತಯಾರಿಲ್ಲ. ಇದು ಪ್ರಜಾಪ್ರಭುತ್ವವಿರೋಧಿ ನಡೆ’ ಎಂದು ಸಿಪಿಎಂ ಪಾಲಿಟ್‌ ಬ್ಯೂರೊ ಸದಸ್ಯ ಪ್ರಕಾಶ್ ಕಾರಟ್ ದೂರಿದರು.

ಅಂತರರಾಷ್ಟ್ರೀಯ ಅಲ್ಪಸಂಖ್ಯಾತರ ದಿನಾಚರಣೆ ಅಂಗವಾಗಿ ಸಿಪಿಎಂ ಅಲ್ಪಸಂಖ್ಯಾತ ಹಕ್ಕುಗಳ ಸಮಿತಿಯು ಶುಕ್ರವಾರ ಆನ್‌ಲೈನ್‌ನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಂವಿಧಾನ ಪ್ರತಿಪಾದಿಸಿರುವ ಮೂಲಭೂತ ಹಕ್ಕುಗಳಲ್ಲಿ ಅವರಿಗೆ ಬೇಕಾದ ಧರ್ಮಾಚರಣೆ ಪ್ರಚಾರಕ್ಕೆ ಅವಕಾಶವಿದೆ. ಆದರೆ ಒತ್ತಾಯಪೂರ್ವಕ ಮತಾಂತರಕ್ಕೆ ಅವಕಾಶವಿಲ್ಲ. ಪೌರತ್ವವನ್ನು ಧರ್ಮದ ಆಧಾರದಲ್ಲಿ ನಿರ್ಧರಿಸಲು ಬಿಜೆಪಿ ಮುಂದಾಗಿದೆ’ ಎಂದು ಆರೋಪಿಸಿದರು.

‘ಲವ್‌ ಜಿಹಾದ್ ಹೆಸರಲ್ಲಿ ಸಂಗಾತಿ ಆಯ್ಕೆಯನ್ನು ಹಾಗೂ ಅನ್ಯ ಧರ್ಮಿಯರಿಬ್ಬರ ನಡುವಿನ ಮದುವೆಗಳನ್ನು ತಡೆಯಲಾಗುತ್ತಿದೆ. ಆಹಾರದ ಹಕ್ಕಿನ ಮೇಲೆ ದಾಳಿ ನಡೆಸಲಾಗುತ್ತಿದೆ. ಇದಕ್ಕೆ ಕಾನೂನು ಮಾನ್ಯತೆ ನೀಡಿರುವುದರಿಂದ, ಮಾಂಸಹಾರಿಗಳು ತಾವು ತಿಂದ ಮಾಂಸವು ದನದ ಮಾಂಸವಲ್ಲ ಎಂಬುದನ್ನು ಸಾಬೀತುಪಡಿಸಬೇಕಾಗುತ್ತದೆ’ ಎಂದರು.

‘ಅಲ್ಪಸಂಖ್ಯಾತರು ಪ್ರಜಾಪಭುತ್ವವಾದಿ ಮತ್ತು ಜಾತ್ಯತೀತ ಶಕ್ತಿಗಳ ಜತೆಗೂಡಿ ಸಮಾನತೆಗಾಗಿ ಚಳವಳಿ ಕಟ್ಟಬೇಕಾಗಿದೆ. ಎಡ ಪಕ್ಷಗಳು ಜಾತ್ಯತೀತ ತತ್ವಕ್ಕೆ ಬದ್ದವಾಗಿವೆ. ಕಮ್ಯುನಿಸ್ಟ್‌ ಪಕ್ಷದ ಆಡಳಿತದಲ್ಲಿ ಅಲ್ಪಸಂಖ್ಯಾತರಿಗೆ ಅಸುರಕ್ಷತೆಯ ಭಾವ ಇರುವುದಿಲ್ಲ’ ಎಂದರು.

ಸಾಹಿತಿ ಬಾನು ಮುಷ್ತಾಕ್‌, ‘ಸಮಾಜ ಸಂವೇದನಾಶೀಲತೆ ಕಳೆದುಕೊಳ್ಳುತ್ತಿದೆ. ಸಂಕಟ, ನೋವು, ಹತಾಶೆಗಳಿಗೆ ಒಳಗಾಗಿರುವ ಅಲ್ಪಸಂಖ್ಯಾತರನ್ನು ನಾಗರಿಕ ಸಮಾಜ ಸಮಾನತೆಯಿಂದ ನಡೆಸಿಕೂಳ್ಳಬೇಕು’ ಎಂದರು.

‘ಶೈಕ್ಷಣಿಕವಾಗಿ ಹಿಂದುಳಿದಿರುವ ಅಲ್ಪಸಂಖ್ಯಾತರ ಉನ್ನತ ಶಿಕ್ಷಣಕ್ಕೆ ನೀಡಲಾಗುತ್ತಿದ್ದ ವಿದ್ಯಾರ್ಥಿವೇತನವನ್ನು ಕಡಿತ ಮಾಡಿರುವುದು ಸರಿಯಲ್ಲ. ಅಲ್ಪಸಂಖ್ಯಾತ ಸಮುದಾಯ ಸಂವಿಧಾನತ್ಮಾಕ ಹಕ್ಕುಗಳ ಸಮಾನತೆ ಹಕ್ಕು ಉಳಿಸಬೇಕು’ ಎಂದರು.

ಹಿರಿಯ ಕಾರ್ಮಿಕ ಮುಖಂಡ ಅಮಾನುಲ್ಲಾ ಖಾನ್, ‘ದೇಶದಲ್ಲಿ ಮುಸ್ಲಿಮರ ಜನಸಂಖ್ಯೆ ಶೇ 14ರಷ್ಟಿದೆ. ಆದರೆ, ರಾಜಕೀಯ ಪ್ರಾತಿನಿಧ್ಯ ಶೇ 3ನ್ನೂ ಮೀರಿಲ್ಲ. ಉದ್ಯೋಗದಲ್ಲೂ ಶೇ 3ರಷ್ಟು ಪ್ರಾತಿನಿಧ್ಯವೂ ಸಿಕ್ಕಿಲ್ಲ. ಡಾ.ರಾಜೇಂದ್ರ ಸಾಚಾರ್ ಸಮಿತಿ ಹಾಗೂ ರಂಗನಾಥ ಮಿಶ್ರಾ ಸಮಿತಿಯ ಶಿಫಾರಸ್ಸುಗಳನ್ನು ಸರ್ಕಾರವು ಪೂರ್ಣಪ್ರಮಾಣದಲ್ಲಿ ಅನುಷ್ಠಾನಗೊಳಿಸಬೇಕು’ ಎಂದು ಒತ್ತಾಯಿಸಿದರು.

ಸಿಪಿಎಂ ರಾಜ್ಯ ಕಾರ್ಯದರ್ಶಿ ಯು. ಬಸವರಾಜು, ಸಮಿತಿಯ ರಾಜ್ಯ ಸಂಚಾಲಕ ಸಯ್ಯದ್‌ ಮುಜೀಬ್ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT