ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | ಮೇ ಮಳೆ: 66 ವರ್ಷಗಳಲ್ಲೇ ದಾಖಲೆ

ರಾಜಧಾನಿಯಲ್ಲಿ ಅಬ್ಬರಿಸಿದ ಮುಂಗಾರು ಪೂರ್ವ ಮಳೆ
Published 2 ಜೂನ್ 2023, 22:31 IST
Last Updated 2 ಜೂನ್ 2023, 22:31 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯಕ್ಕೆ ಮುಂಗಾರು ಪ್ರವೇಶಿಸಲು ಕೆಲವೇ ದಿನಗಳಿದ್ದು, ರಾಜಧಾನಿಯಲ್ಲಿ ಮುಂಗಾರು ಪೂರ್ವ ಅವಧಿಯ ಮೇ ತಿಂಗಳಲ್ಲಿ ದಾಖಲೆ ಪ್ರಮಾಣದಲ್ಲಿ ಮಳೆಯಾಗಿದೆ.

ನಗರದಲ್ಲಿ ಮೇ  ತಿಂಗಳಲ್ಲಿ ಸುರಿದ ಮಳೆಯು, 66 ವರ್ಷಗಳ ಹಳೆಯ ದಾಖಲೆಯನ್ನೇ ಅಳಿಸಿ ಹಾಕಿ ಹೊಸ ದಾಖಲೆ ಬರೆದಿದೆ. ಅಲ್ಲದೇ ಮಳೆಯು ನಗರದಲ್ಲಿ ಸಾಕಷ್ಟು ಅನಾಹುತವನ್ನೂ ಸೃಷ್ಟಿಸಿತ್ತು. ಮೇನಲ್ಲಿ ವಾಡಿಕೆ ಮಳೆಯ ಪ್ರಮಾಣವು 13 ಸೆಂ.ಮೀ. ಆದರೆ, 31 ಸೆಂ.ಮೀ ಮಳೆ ಸುರಿದಿದೆ. ಒಂದೇ ತಿಂಗಳಲ್ಲಿ 18 ಸೆಂ.ಮೀನಷ್ಟು ಹೆಚ್ಚು ಮಳೆಯಾಗಿದೆ.

‘1957ರ ಮೇನಲ್ಲಿ 29 ಸೆಂ.ಮೀ ಮಳೆಯಾಗಿತ್ತು. ಅದನ್ನು ಬಿಟ್ಟರೆ ಇದೇ ಮೊದಲ ಬಾರಿಗೆ ಮೇನಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಮಳೆಯಾಗಿದೆ’ ಎಂದು ಹವಾಮಾನ ಇಲಾಖೆ ತಜ್ಞ ಎ.ಪ್ರಸಾದ್‌ ತಿಳಿಸಿದ್ದಾರೆ.

‘ಮಾರ್ಚ್‌ 1ರಿಂದ ಮೇ 31ರ ತನಕ (ಮುಂಗಾರು ಪೂರ್ವ ಅವಧಿ) 20 ಸೆಂ.ಮೀ ವಾಡಿಕೆ ಮಳೆ ಆಗಬೇಕಿತ್ತು. ಆದರೆ, 34 ಸೆಂ.ಮೀ ಮಳೆಯಾಗಿದೆ. ನಗರದಲ್ಲಿ 14 ಸೆಂ.ಮೀನಷ್ಟು ಹೆಚ್ಚು ಮಳೆ ಸುರಿದಿದೆ’ ಎಂದು ತಿಳಿಸಿದ್ದಾರೆ.

‘ಕಳೆದ 8 ವರ್ಷಗಳಲ್ಲಿ ಮೇನಲ್ಲಿ ಸರಾಸರಿ 18.5 ಸೆಂ.ಮೀನಷ್ಟು ಮಳೆ ಆಗುತ್ತಿತ್ತು. ಕಳೆದ ವರ್ಷ ಮೇನಲ್ಲಿ 27 ಸೆಂ.ಮೀ ಮಳೆಯಾಗಿದ್ದರೆ, 2020 ಹಾಗೂ 2021ರ ಮೇನಲ್ಲಿ ಅತಿ ಕಡಿಮೆಯೆಂದರೆ 13 ಸೆಂ.ಮೀ ಮಳೆಯಾಗಿತ್ತು.

‘ಬೆಂಗಳೂರಿನಲ್ಲಿ ಫೆಬ್ರುವರಿ ಹಾಗೂ ಮಾರ್ಚ್‌ ತಿಂಗಳಲ್ಲಿ ಉಷ್ಣಾಂಶವು ಗರಿಷ್ಠ ಮಟ್ಟ ಮುಟ್ಟಿತ್ತು. ಈ ವರ್ಷ ರಾಜ್ಯದ ಗಡಿಭಾಗದಲ್ಲಿಯೇ ಸುಳಿಗಾಳಿ ಹಾದು ಹೋಗುತ್ತಿತ್ತು. ಉಷ್ಣಾಂಶವು ಹೆಚ್ಚಾಗಿ ಈ ರೀತಿ ಸುಳಿಗಾಳಿ ಬಂದರೆ ಜೋರು ಮಳೆ ಸುರಿಯುತ್ತದೆ. ಆ ರೀತಿಯ ವಾತಾವರಣ ಈ ವರ್ಷ ಕಂಡು ಬಂದಿತ್ತು. ಉತ್ತರ ಪ್ರದೇಶ ಹಾಗೂ ರಾಜಸ್ಥಾನದಲ್ಲೂ ಮುಂಗಾರು ಪೂರ್ವ ದಾಖಲೆ ಪ್ರಮಾಣದಲ್ಲಿ ಮಳೆಯಾಗಿತ್ತು’ ಎಂದು ಪ್ರಸಾದ್‌ ತಿಳಿಸಿದ್ದಾರೆ.

ಮೂವರ ಸಾವು: ಮೇ 21ರಂದು ಒಂದೇ ದಿನ ನಗರದಲ್ಲಿ ಸುರಿದ ಮಹಾಮಳೆಯಿಂದ ಮೂವರು ಮೃತಪಟ್ಟಿದ್ದರು. ಕೆ.ಆರ್‌.ವೃತ್ತದ ಅಂಡರ್‌ಪಾಸ್‌ನಲ್ಲಿ ನೀರಿನಲ್ಲಿ ಕಾರು ಮುಳುಗಿ ವಿಜಯವಾಡದ ಭಾನುರೇಖಾ, ಕಾಚೋಹಳ್ಳಿ ಅಂಡರ್‌ಪಾಸ್‌ನಲ್ಲಿ ಬೈಕ್ ನಿಯಂತ್ರಣ ತಪ್ಪಿ ಕೆಳಗೆ ಬಿದ್ದು ಸವಾರ ಫಕ್ರುದ್ದೀನ್  ಮೃತಪಟ್ಟಿದ್ದರು. ಕೆ.ಪಿ.ಅಗ್ರಹಾರದ ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿ ಲೋಕೇಶ್ ಮೃತಪಟ್ಟಿದ್ದರು. ‌

ಕಳೆದ ತಿಂಗಳ ಮಹಾಮಳೆಗೆ ನೂರಾರು ಮರಗಳು ಧರೆಗೆ ಉರುಳಿದ್ದವು. ವಿದ್ಯುತ್‌ ಕಂಬಗಳು, ವಿದ್ಯುತ್‌ ಮಾರ್ಗ ಹಾಗೂ ವಿದ್ಯುತ್‌ ಪರಿವರ್ತಕ ಉರುಳಿ ಬೆಸ್ಕಾಂಗೂ ನಷ್ಟ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು ನಗರದಲ್ಲಿ ಈ ವರ್ಷ ಮುಂಗಾರು ಅವಧಿಯಲ್ಲಿ ಮಳೆಯು ಸಾಧಾರಣವಾಗಿ ಇರಲಿದೆ.
ಎ.ಪ್ರಸಾದ್‌, ಹವಾಮಾನ ಇಲಾಖೆ ತಜ್ಞ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT