ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

14 ಕ್ಷೇತ್ರಗಳಲ್ಲಿ ಮತದಾನಕ್ಕೆ ಸಿದ್ಧತೆ ಬಹುತೇಕ ಪೂರ್ಣ: ಮನೋಜ್ ಕುಮಾರ್ ಮೀನಾ

Published 14 ಏಪ್ರಿಲ್ 2024, 8:25 IST
Last Updated 14 ಏಪ್ರಿಲ್ 2024, 8:25 IST
ಅಕ್ಷರ ಗಾತ್ರ

ಬೆಂಗಳೂರು: ಏಪ್ರಿಲ್ 26 ರಂದು ರಾಜ್ಯದಲ್ಲಿ ಮೊದಲ ಹಂತದ ಮತದಾನ ನಡೆಯಲಿದ್ದು, 14 ಕ್ಷೇತ್ರಗಳಲ್ಲಿ ಮತದಾನದ ಸಿದ್ಧತೆ ಬಹುತೇಕ ಪೂರ್ಣಗೊಂಡಿದೆ ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಮನೋಜ್‌ ಕುಮಾರ್ ಮೀನಾ ತಿಳಿಸಿದರು.

ಬೆಂಗಳೂರು ಪ್ರೆಸ್ ಕ್ಲಬ್ ಭಾನುವಾರ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, 'ಮೊದಲ ಹಂತದ ಮತದಾನಕ್ಕಾಗಿ 30,602 ಮತಗಟ್ಟೆಗಳನ್ನು ಸಜ್ಜುಗೊಳಿಸಲಾಗಿದೆ' ಎಂದರು‌.

ಏ.26ರಂದು ಮತದಾನ ನಡೆಯುವ 14 ಲೋಕಸಭಾ ಕ್ಷೇತ್ರಗಳಲ್ಲಿ 2.88 ಕೋಟಿ ಮತದಾರರಿದ್ದಾರೆ. ಅವರಲ್ಲಿ 5.99 ಲಕ್ಷ ಜನರು‌ ಮೊದಲ ಬಾರಿ ಮತ ಚಲಾಯಿಸುವವರು' ಎಂದರು.

15ಕ್ಕಿಂತ ಕಡಿಮೆ ಅಭ್ಯರ್ಥಿಗಳಿರುವ ಆರು ಕ್ಷೇತ್ರಗಳಲ್ಲಿ ಒಂದೇ ಬ್ಯಾಲೆಟ್ ಯೂನಿಟ್ ಬಳಸಲಾಗುತ್ತದೆ. 15ಕ್ಕಿಂತ ಹೆಚ್ಚು ಅಭ್ಯರ್ಥಿಗಳಿರುವ ಎಂಟು ಕ್ಷೇತ್ರಗಳಲ್ಲಿ ಎರಡು ಬ್ಯಾಲೆಟ್ ಯೂನಿಟ್ ಬಳಸಲಾಗುವುದು ಎಂದು ವಿವರಿಸಿದರು.

ಮತದಾನದ ದಿನ ನೆರೆಯ ರಾಜ್ಯಗಳಿಗೆ ಹೊಂದಿಕೊಂಡಿರುವ ರಾಜ್ಯದ ಗಡಿಗಳನ್ನು ಮುಚ್ಚಲಾಗುವುದು. ಏ. 19ರಂದು ತಮಿಳುನಾಡಿನಲ್ಲಿ ಮತದಾನ ನಡೆಯಲಿದ್ದು, ಆ ದಿನ ಕೂಡ ತಮಿಳುನಾಡಿಗೆ ಹೊಂದಿಕೊಂಡಿರುವ ಗಡಿಗಳನ್ನು ಮುಚ್ಚಲಾಗುವುದು ಎಂದರು.

ಶೇಕಡ 49ರಷ್ಟು ವಾಪಸ್: ಚುನಾವಣಾ ಅಕ್ರಮ ತಡೆ ಕಾರ್ಯಾಚರಣೆಯಲ್ಲಿ ₹345 ಕೋಟಿ ಮೌಲ್ಯದ ನಗದು, ಚಿನ್ನಾಭರಣ ಮತ್ತು ಇತರ ಸ್ವತ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಪೈಕಿ ಶೇಕಡ 49ರಷ್ಟು ಮೌಲ್ಯದ ಸ್ವತ್ತುಗಳನ್ನು ಸೂಕ್ತ ದಾಖಲೆಗಳನ್ನು ಆಧರಿಸಿ ವಾರಸುದಾರರಿಗೆ ಹಿಂದಿರುಗಿಸಲಾಗಿದೆ ಎಂದರು.

2023ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಮಾದರಿ ನೀತಿಸಂಹಿತೆ ಉಲ್ಲಂಘನೆ ಆರೋಪದಡಿ ದಾಖಲಿಸಿದ್ದ ಪ್ರಕರಣಗಳ ಪೈಕಿ ಶೇ 90ರಷ್ಟರಲ್ಲಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲಾಗಿದೆ. ಶೇ 40ರಷ್ಟು ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆಯಾಗಿದೆ ಎಂದು ತಿಳಿಸಿದರು.

ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿಗಳಾದ ಎಂ.‌ಕೂರ್ಮರಾವ್, ವೆಂಕಟೇಶ್ ಕುಮಾರ್, ಮಾಧ್ಯಮ ವಿಶೇಷಾಧಿಕಾರಿ ಸೂರ್ಯಸೇನ್, ಬೆಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಆರ್. ಶ್ರೀಧರ್, ಪ್ರಧಾನ ಕಾರ್ಯದರ್ಶಿ ಬಿ.ಪಿ. ಮಲ್ಲಪ್ಪ‌ ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT