ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಗದೆದುರು ನವ ಭಾರತದ ಶಕ್ತಿ ಪ್ರದರ್ಶನ: ರಾಷ್ಟ್ರಪತಿ ಬಣ್ಣನೆ

‘ಏರೊ ಇಂಡಿಯಾ 2021’ ಸಮಾರೋಪ * ಪೈಲಟ್‌ಗಳ ಶೌರ್ಯ ಕೊಂಡಾಡಿದ ಕೋವಿಂದ್‌
Last Updated 5 ಫೆಬ್ರುವರಿ 2021, 19:31 IST
ಅಕ್ಷರ ಗಾತ್ರ

ಬೆಂಗಳೂರು: ‘ಜಾಗತಿಕ ಮಟ್ಟದಲ್ಲಿ ರಕ್ಷಣೆ ಮತ್ತು ವೈಮಾಂತರಿಕ್ಷ ಕ್ಷೇತ್ರಗಳಲ್ಲಿ ಬಲಾಢ್ಯವಾಗಿ ಬೆಳೆಯುತ್ತಿರುವ ಭಾರತದ ಸಾಮರ್ಥ್ಯಕ್ಕೆ ಏರೊ ಇಂಡಿಯಾ 2021 ವೈಮಾನಿಕ ಪ್ರದರ್ಶನವು ಕನ್ನಡಿ ಹಿಡಿದಿದೆ. ರಕ್ಷಣಾ ಕ್ಷೇತ್ರದಲ್ಲಿ ದೇಶದ ಶಕ್ತಿ ಏನೆಂಬುದನ್ನು ವಿಶ್ವದೆದುರು ಇದು ತೆರೆದಿಟ್ಟಿದೆ’ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್‌ ಬಣ್ಣಿಸಿದರು.

ಮೂರು ದಿನಗಳ ಕಾಲ ನಡೆದ ವೈಮಾನಿಕ ಪ್ರದರ್ಶನದ 13ನೇ ಆವೃತ್ತಿಯ ಸಮಾರೋಪದಲ್ಲಿ ಶುಕ್ರವಾರ ಭಾಗವಹಿಸಿದ ಅವರು ಭಾರತೀಯ ವಾಯು ಸೇನೆಯ ಯುದ್ಧವಿಮಾನಗಳ ರೋಮಾಂಚನಕಾರಿ ಕಸರತ್ತುಗಳನ್ನು ಪತ್ನಿ ಸವಿತಾ ಅವರ ಜೊತೆ ವೀಕ್ಷಿಸಿದರು.

ಭಾರತೀಯ ವಾಯುಪ್ರದೇಶದ ರಕ್ಷಣೆ ಮತ್ತು ದೇಶದ ಸೇನಾ ಸಾಮರ್ಥ್ಯವನ್ನು ಬಲಪಡಿಸುವಲ್ಲಿ ವಾಯುಸೇನೆಯ ಪೈಲಟ್‌ಗಳು ತೋರುತ್ತಿರುವ ಶೌರ್ಯವನ್ನು ಹಾಗೂ ಅವರ ಅಸಾಮಾನ್ಯ ವೃತ್ತಿಪರತೆಯನ್ನು ಕೊಂಡಾಡಿದರು.

‘ಈ ಪ್ರದರ್ಶನವು ಭಾರತವು ರಕ್ಷಣಾ ವಲಯದಲ್ಲಿ ಸ್ವಾವಲಂಬನೆ ಸಾಧಿಸುವುದಕ್ಕೆ ಮಹತ್ತರ ಕೊಡುಗೆ ನೀಡಲಿದೆ. ಮಾರುಕಟ್ಟೆ ಕಂಡುಕೊಳ್ಳುವುದಕ್ಕೆ ನೆರವಾಗುವುದರ ಜೊತೆಗೆ ಇದು ಅವಕಾಶಗಳ ಆಗರವನ್ನೇ ತೆರೆದಿಡುತ್ತದೆ. ಭಾರತವು ಜಗತ್ತಿನ ಪ್ರಮುಖ ರಕ್ಷಣಾ ಉತ್ಪಾದನಾ ರಾಷ್ಟ್ರವಾಗಿ ಹೊರಹೊಮ್ಮುವುದಕ್ಕೆ ನೆರವಾಗಲಿದೆ. ತನ್ನ ಸ್ಥಿರ ಬೆಳವಣಿಗೆ ಸಾಮರ್ಥ್ಯದ ಬಗ್ಗೆ ಜಾಗತಿಕವಾಗಿ ವಿಶ್ವಾಸ ಗಳಿಸುವಲ್ಲಿಯೂ ಪ್ರಮುಖ ಪಾತ್ರ ವಹಿಸಲಿದೆ’ ಎಂದರು.

‘ಕೋವಿಡ್‌ನಿಂದಾಗಿ ಉಂಟಾದ ಅನಿಶ್ಚಿತತೆಯು ಒಡ್ಡಿರುವ ಸವಾಲಿನ ನಡುವೆಯೂ ದಿಟ್ಟವಾಗಿ ಹಮ್ಮಿಕೊಂಡಿರುವ ಈ ಕಾರ್ಯಕ್ರಮ ಅಭೂತಪೂರ್ವ ಯಶಸ್ಸು ಕಂಡಿದೆ. 43 ದೇಶಗಳ ನಿಯೋಗಗಳು ಹಾಗೂ 540 ಕಂಪನಿಗಳು ಈ ಪ್ರದರ್ಶನದಲ್ಲಿ ಭಾಗವಹಿಸಿವೆ ಎಂದು ಹೇಳಲಾಗಿದೆ. ಅಷ್ಟೇ ಅಲ್ಲದೇ ಜಗತ್ತಿನ ವಿವಿಧ ರಾಷ್ಟ್ರಗಳು ಹೈಬ್ರಿಡ್‌ ಮಾದರಿಯಲ್ಲಿ ನಡೆದ ಮೊದಲ ವೈಮಾನಿಕ ಪ್ರದರ್ಶನದಲ್ಲಿ ವರ್ಚುವಲ್‌ ರೂಪದಲ್ಲೂ ಭಾಗಿಯಾಗಿವೆ’ ಎಂದರು.

‘ಹಿಂದೂ ಮಹಾಸಾಗರ ಪ್ರದೇಶದಲ್ಲಿ ಭದ್ರತೆ ಹಾಗೂ ಸಹಕಾರ ವೃದ್ಧಿಸುವಲ್ಲೂ ಈ ಕಾರ್ಯಕ್ರಮ ಮಹತ್ತರವಾದುದು. ರಾಜಕೀಯ, ಆರ್ಥಿಕ, ಸಾಂಸ್ಕೃತಿಕ ಹಾಗೂ ರಕ್ಷಣಾ ಕ್ಷೇತ್ರಗಳಲ್ಲಿನ ಸಹಕಾರ ಉತ್ತೇಜನಕ್ಕೆ ದೇಶವು ಹಮ್ಮಿಕೊಂಡ ಸಾಗರ್‌–1 ಕಾರ್ಯಕ್ರಮ ಜ್ಞಾನ ವಿನಿಮಯ ಹಾಗೂ ಮಾನವೀಯ ಹಸ್ತ ಚಾಚುವ ನಮ್ಮ ನಿಲುವನ್ನು ಸಾರಿದೆ. ಕೋವಿಡ್‌ ಪರೀಕ್ಷಾ ಕಿಟ್‌, ಲಸಿಕೆ, ವೆಂಟಿಲೇಟರ್, ಮಾಸ್ಕ್‌ ಮುಂತಾದ ವೈದ್ಯಕೀಯ ನೆರವುಗಳನ್ನು ಒದಗಿಸುವ ಮೂಲಕ ಇಡೀ ಮಾನವ ಸಮುದಾಯಕ್ಕಾಗಿ ಕಾರ್ಯನಿರ್ವಹಿಸುವುದರ ಮಹತ್ವವನ್ನು ದೇಶವು ಸಾರಿದೆ’ ಎಂದು ತಿಳಿಸಿದರು.

‘ಮಹಾತ್ಮ ಗಾಂಧಿ ಅವರ ಸ್ವದೇಶಿ ಮತ್ತು ಸ್ವಾವಲಂಬನೆ ಮಂತ್ರದ ಇನ್ನೊಂದು ರೂಪ ಆತ್ಮನಿರ್ಭರ ಭಾರತ ಅಭಿಯಾನ. ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕ ಪೂರೈಕೆ ಸರಪಣಿಯನ್ನು ಅಭಿವೃದ್ಧಿಪಡಿಸುವುದರ ಜೊತೆ ಬಲಿಷ್ಠ ಆರ್ಥಿಕತೆ ಹಾಗೂ ಮೂಲಸೌಕರ್ಯ ನಿರ್ಮಿಸುವುದು ಇದರ ಉದ್ದೇಶ’ ಎಂದರು.

‘ಭಾರತದಲ್ಲಿ ಆರು ವರ್ಷಗಳಲ್ಲಿ ಕೈಗೊಂಡಿರುವ ಸುಧಾರಣಾ ಕ್ರಮಗಳು ರಕ್ಷಣೆ ಮತ್ತು ವೈಮಾಂತರಿಕ್ಷ ಕ್ಷೇತ್ರಗಳಲ್ಲಿ ಹೂಡಿಕೆದಾರರಿಗೆ ಹಾಗೂ ಖಾಸಗಿ ಕಂಪನಿಗಳಿಗೆ ಅಭೂತಪೂರ್ವ ಅವಕಾಶಗಳನ್ನು ತೆರೆದಿಟ್ಟಿವೆ. ರಕ್ಷಣಾ ವಲಯದಲ್ಲಿ ವಿದೇಶಿ ನೇರ ಹೂಡಿಕೆ ಪ್ರಮಾಣವು ಶೇ 200ರಷ್ಟು ಹೆಚ್ಚಳ ಕಂಡಿದೆ’ ಎಂದರು.

ಏರೊ ಇಂಡಿಯಾದಲ್ಲಿ ಭಾಗವಹಿಸಿದ ಮೊದಲ ರಾಷ್ಟ್ರಪತಿ ಎಂಬ ಹೆಗ್ಗಳಿಕೆ ಕೋವಿಂದ್‌ ಅವರದು.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ಸೇನಾಪಡೆಗಳ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್‌ ಭಾಗವಹಿಸಿದರು.

‘16 ಸಾವಿರ ಮಂದಿ ಭಾಗಿ’

‘ವೈಮಾನಿಕ ಪ್ರದರ್ಶನದಲ್ಲಿ 16ಸಾವಿರಕ್ಕೂ ಅಧಿಕ ಮಂದಿ ನೇರವಾಗಿ ಭಾಗವಹಿಸಿದ್ದಾರೆ. 4.5 ಲಕ್ಷ ಮಂದಿ ವರ್ಚುವಲ್‌ ರೂಪದಲ್ಲಿ ಈ ಕಾರ್ಯಕ್ರಮವನ್ನು ವೀಕ್ಷಿಸಿದ್ದಾರೆ. ಈ ಕಾರ್ಯಕ್ರಮ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ’ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್‌ ತಿಳಿಸಿದರು.

‘55 ದೇಶಗಳ 84 ಸಂಸ್ಥೆಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿವೆ. 128 ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ತಂತ್ರಜ್ಞಾನ ವರ್ಗಾವಣೆಗೆ ಸಂಬಂಧಿಸಿದ 19 ಹಾಗೂ ಉತ್ಪನ್ನ ಹಸ್ತಾಂತರಕ್ಕೆ ಸಂಬಂಧಿಸಿದ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ. 18 ಹೊಸ ಉತ್ಪನ್ನಗಳನ್ನು ಪರಿಚಯಿಸಲಾಗಿದೆ. 32 ಪ್ರಮುಖ ಕಾರ್ಯಕ್ರಮಗಳನ್ನು ಪ್ರಕಟಿಸಲಾಗಿದೆ. ಒಟ್ಟು 201 ಮಹತ್ತರ ಸಾಧನೆಗಳಿಗೆ ಈ ವೈಮಾನಿಕ ಪ್ರದರ್ಶನ ಸಾಕ್ಷಿಯಾಗಿದೆ. ಅಷ್ಟೇ ಅಲ್ಲ, ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ತಮ್ಮ ಉತ್ಪನ್ನ ಮಾರಾಟಕ್ಕೆ ಸಂಬಂಧ ₹ 203 ಕೋಟಿ ಮೊತ್ತದ ಬೇಡಿಕೆಗಳನ್ನು ಸ್ವೀಕರಿಸಿವೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT