ಭಾನುವಾರ, ಜುಲೈ 3, 2022
25 °C

ಪ್ರಧಾನಿ ಕಚೇರಿ ಅಧಿಕಾರಿ ಸೋಗಿನಲ್ಲಿ ₹ 89 ಲಕ್ಷ ವಂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪ್ರಧಾನ ಮಂತ್ರಿ ಕಚೇರಿ ಅಧಿಕಾರಿ ಸೋಗಿನಲ್ಲಿ ವೀಸಾ ಸಮಸ್ಯೆ ಬಗೆಹರಿಸುವ ಆಮಿಷವೊಡ್ಡಿ ₹ 89 ಲಕ್ಷ ಪಡೆದು ವಂಚಿಸಿದ್ದ ಆರೋಪದಡಿ ಅರಹಂತ್ ಮೋಹನ್‌ಕುಮಾರ್ ಲಕ್ಕವಳ್ಳಿ (33) ಅವರನ್ನು ಬೆಳ್ಳಂದೂರು ಪೊಲೀಸರು ಬಂಧಿಸಿದ್ದಾರೆ.

‘ರಾಜಾಜಿನಗರ 4ನೇ ಹಂತದ ನಿವಾಸಿ ಅರಹಂತ್ ಮೋಹನ್‌ಕುಮಾರ್, ಆನಂದ್ ಹಾಗೂ ಅನಂತ್ ಹೆಸರಿನಲ್ಲೂ ಜನರನ್ನು ವಂಚಿಸುತ್ತಿದ್ದ. ಯುವತಿ ಸುನಾಲ್ ಸೆಕ್ಸೆನಾ ಅವರು ಏಪ್ರಿಲ್ 26ರಂದು ನೀಡಿದ್ದ ದೂರು ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ದೂರುದಾರ ಯುವತಿ, 2019ರ ಜೂನ್‌ನಲ್ಲಿ ವಿಮಾನದಲ್ಲಿ ಶ್ರೀಲಂಕಾಕ್ಕೆ ಪ್ರಯಾಣಿಸುತ್ತಿದ್ದರು. ಅದೇ ವೇಳೆಯೇ ಆರೋಪಿಯ ಪರಿಚಯವಾಗಿತ್ತು. ತಾನು ಗುಪ್ತದಳ ಹಾಗೂ ರಾ (ಸಂಶೋಧನೆ ಮತ್ತು ವಿಶ್ಲೇಷಣೆ ವಿಭಾಗ) ಅಧಿಕಾರಿ ಎಂದಿದ್ದ ಆರೋಪಿ, ಪ್ರಧಾನ ಮಂತ್ರಿ ಕಚೇರಿಯಲ್ಲಿ ಸದ್ಯ ಕೆಲಸ ಮಾಡುತ್ತಿರುವುದಾಗಿ ಹೇಳಿದ್ದ.’

‘ಇಟಲಿಗೆ ಹೋಗಲು ಮುಂದಾಗಿದ್ದ ಯುವತಿ, ವೀಸಾ ಪಡೆಯಲು ಅರ್ಜಿ ಸಲ್ಲಿಸಿದ್ದರು. ಆದರೆ, ಅರ್ಜಿ ತಿರಸ್ಕೃತಗೊಂಡಿತ್ತು. ಈ ಬಗ್ಗೆ ಯುವತಿ, ಆರೋಪಿಗೆ ವಿಷಯ ತಿಳಿಸಿದ್ದರು. ಪ್ರಧಾನ ಮಂತ್ರಿ ಕಚೇರಿಯಿಂದಲೇ ವೀಸಾ ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದ ಆರೋಪಿ, ‘ಹಲವು ದೇಶಗಳಲ್ಲಿ ನಿಮ್ಮ ಮೇಲೆ ಭಯೋತ್ಪದನಾ ಕೃತ್ಯ ಎಸಗಿದ್ದ ಪ್ರಕರಣ ದಾಖಲಾಗಿದೆ. ನಿಮ್ಮ ವೀಸಾ ನಿಷ್ಕ್ರಿಯ ಮಾಡಿದ್ದಾರೆ’ ಎಂದು ಯುವತಿಯನ್ನು ಹೆದರಿಸಿದ್ದ. ಪ್ರಕರಣ ರದ್ದುಪಡಿಸುವುದಾಗಿ ಹೇಳಿ ಯುವತಿಯಿಂದ ಹಂತ ಹಂತವಾಗಿ ₹ 89 ಲಕ್ಷ ಪಡೆದುಕೊಂಡಿದ್ದ’ ಎಂದು ಪೊಲೀಸರು ತಿಳಿಸಿದರು.

‘ಮತ್ತಷ್ಟು ಹಣಕ್ಕೆ ಆರೋಪಿ ಬೇಡಿಕೆ ಇರಿಸಿದ್ದರು. ಇದರಿಂದ ಅನುಮಾನಗೊಂಡ ಯುವತಿ, ಠಾಣೆಗೆ ದೂರು ನೀಡಿದ್ದರು’ ಎಂದೂ ಹೇಳಿದರು.

ಮನೆ ಮೇಲೆ ದಾಳಿ: ‘ಆರೋಪಿ ಅರಹಂತ್ ಮೋಹನ್‌ಕುಮಾರ್ ಮನೆ ಮೇಲೆ ದಾಳಿ ಮಾಡಲಾಗಿದೆ. ವಿವಿಧ ಬ್ಯಾಂಕ್‌ಗಳ ಖಾತೆ ವಿವರ, ಪಾಸ್‌ಪೋರ್ಟ್‌, ನೋಟ್‌ ಪುಸ್ತಕ, ವಿವಿಧ ದೇಶಗಳ ಪ್ರವಾಸದ ಟಿಕೆಟ್‌ಗಳು ಸೇರಿ ಹಲವು ದಾಖಲೆಗಳನ್ನು ಜಪ್ತಿ ಮಾಡಲಾಗಿದೆ. ಮತ್ತಷ್ಟು ಮಂದಿಗೆ ಆರೋಪಿ ವಂಚಿಸಿರುವ ಮಾಹಿತಿ ಇದೆ’ ಎಂದು ಪೊಲೀಸರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು