ಶುಕ್ರವಾರ, ಜನವರಿ 21, 2022
29 °C

ಟಯರ್‌ 2 ನಗರಗಳಲ್ಲಿ ಇಂಟರ್‌ನೆಟ್‌ ಸೇವೆ ಬಲಪಡಿಸಲು ಆದ್ಯತೆ: ರಾಜೀವ್‌ ಚಂದ್ರಶೇಖರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಭಾರತ ಮತ್ತು ವಿದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ತಂತ್ರಜ್ಞಾನ ವಲಯದ ಬಹುತೇಕ ಕಂಪನಿಗಳು ‘ವರ್ಕ್‌ ಫ್ರಮ್‌ ಹೋಂ’ನತ್ತ ಒಲವು ತೋರುತ್ತಿವೆ. ಹೀಗಾಗಿ ಕರ್ನಾಟಕದ ಟಯರ್ 2 ನಗರಗಳಲ್ಲಿ ಇಂಟರ್‌ನೆಟ್‌ ಸೇವೆ ಬಲಪಡಿಸಲು ಹೆಚ್ಚಿನ ಒತ್ತು ನೀಡಲಾಗುತ್ತದೆ’ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ, ಕೌಶಲಾಭಿವೃದ್ಧಿ ಮತ್ತು ಉದ್ಯಮಶೀಲತೆ ಖಾತೆಯ ರಾಜ್ಯ ಸಚಿವ ರಾಜೀವ್‌ ಚಂದ್ರಶೇಖರ್‌ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು ‘ಮುಂದಿನ ದಿನಗಳಲ್ಲಿ ಟಯರ್‌ 2 ನಗರಗಳಲ್ಲಿ ವರ್ಚುವಲ್‌ ಐಟಿ ಪಾರ್ಕ್‌ಗಳನ್ನು ಸ್ಥಾಪಿಸಿದರೆ ಹೆಚ್ಚು ಅನುಕೂಲ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಇದನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ನಗರಗಳಲ್ಲಿ ಇಂಟರ್‌ನೆಟ್‌ ಸಂಪರ್ಕ ಬಲಪಡಿಸುವುದು ಹಾಗೂ ಇಂಟರ್‌ನೆಟ್‌ ಸ್ಟೋರೇಜ್‌ (ಕ್ಲೌಡ್‌ ಸ್ಟೋರೇಜ್‌) ಸಾಮರ್ಥ್ಯ ಹೆಚ್ಚಿಸುವುದಕ್ಕೆ ಒತ್ತು ನೀಡಲಾಗುತ್ತದೆ’ ಎಂದರು.

‘ದೇಶದ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಬ್ರಾಡ್‌ಬ್ಯಾಂಡ್‌ ಸಂಪ‍ರ್ಕ ಕಲ್ಪಿಸಿ, ಆ ಮೂಲಕ 6 ಲಕ್ಷಕ್ಕೂ ಅಧಿಕ ಹಳ್ಳಿಗಳಿಗೆ ವೈಫೈ ಸೇವೆ ಒದಗಿಸಬೇಕೆಂಬ ಕನಸಿನೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಕೋವಿಡ್‌ ಪೂರ್ವದಲ್ಲೇ ‘ಭಾರತ್‌ನೆಟ್‌’ಗೆ ಚಾಲನೆ ನೀಡಿದ್ದರು. ಇದು ದೂರದೃಷ್ಟಿಯ ಯೋಜನೆ. ಕೋವಿಡ್‌ ನಂತರದ ಕಾಲದಲ್ಲಿ ಇಂಟರ್‌ನೆಟ್‌ ಸೌಕರ್ಯ ತೀರಾ ಅಗತ್ಯ. ಹೀಗಾಗಿಯೇ ನಮ್ಮ ಸಚಿವಾಲಯವು ಪ್ರತಿ ಜಿಲ್ಲೆಯ ಒಂದು ಹಳ್ಳಿಯಂತೆ ಒಟ್ಟು 5 ಸಾವಿರ ಹಳ್ಳಿಗಳಿಗೆ ಇಂಟರ್‌ನೆಟ್‌ ಸೌಕರ್ಯ ಒದಗಿಸಲು ಮುಂದಾಗಿದೆ’ ಎಂದು ತಿಳಿಸಿದರು.

‘ಕಳೆದ ಐದು ವರ್ಷಗಳಲ್ಲಿ ಕೌಶಲ ಭಾರತ ಮಿಷನ್‌ ಅಡಿಯಲ್ಲಿ ಪ್ರತಿ ಜಿಲ್ಲೆಗೆ ಒಂದರಂತೆ 800ಕ್ಕೂ ಅಧಿಕ ಪ್ರಧಾನಮಂತ್ರಿ ಕೌಶಲ ಕೇಂದ್ರಗಳನ್ನು ಆರಂಭಿಸಲಾಗಿದೆ. 20 ಸಾವಿರಕ್ಕೂ ಹೆಚ್ಚು ತರಬೇತಿ ಕೇಂದ್ರಗಳನ್ನು ತೆರೆಯಲಾಗಿದೆ. 14 ಸಾವಿರ ಐಟಿಐ, ಸುಮಾರು 2 ಸಾವಿರ ಜನಶಿಕ್ಷಣ ಸಂಸ್ಥಾನಗಳನ್ನು ಸ್ಥಾಪಿಸಿ 2 ಕೋಟಿಗೂ ಅಧಿಕ ಜನರಿಗೆ ಕೌಶಲ ತರಬೇತಿ ನೀಡಲಾಗಿದೆ’ ಎಂದು ಹೇಳಿದರು.

‘ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲೂ ಕೌಶಲ ತರಬೇತಿಗೆ ಒತ್ತು ನೀಡಲಾಗಿದೆ. ಆರ್ಥಿಕ ತೊಂದರೆ ಹಾಗೂ ಇನ್ನಿತರ ಕಾರಣಗಳಿಂದಾಗಿ ಉನ್ನತ ವ್ಯಾಸಂಗ ಮಾಡಲು ಆಗದಿರುವವರು ಕೌಶಲ ತರಬೇತಿ ಪಡೆದು ಬದುಕು ರೂಪಿಸಿಕೊಳ್ಳಲು ಅವಕಾಶವಿದೆ. ಡಿಜಿಟಲ್‌ ಅವಕಾಶಗಳು ಕೆಲವೇ ನಗರಗಳಿಗೆ ಸೀಮಿತವಾಗಬಾರದು. ಅದು ಆರ್ಥಿಕತೆಗೆ ಮಾರಕ’ ಎಂದರು.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು