ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ಬಸ್‌ಗಳ ಸ್ಥಳಾಂತರ ಪ್ರಸ್ತಾವಕ್ಕೆ ಎಳ್ಳುನೀರು ಬಿಟ್ಟ ಸಾರಿಗೆ ಇಲಾಖೆ

ನಗರದೊಳಗೆ ಓಡಾಟ ನಿರ್ಬಂಧಿಸುವಂತೆ ಕೋರಿದ್ದ ಪೊಲೀಸರು
Last Updated 26 ಆಗಸ್ಟ್ 2018, 20:05 IST
ಅಕ್ಷರ ಗಾತ್ರ

ಬೆಂಗಳೂರು: ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಗೆ ಸಂಚರಿಸುವ ಖಾಸಗಿ ಬಸ್‌ಗಳನ್ನು ನಗರದ ಹೊರವಲಯಕ್ಕೆ ಸ್ಥಳಾಂತರಿಸುವ ಪ್ರಕ್ರಿಯೆಗೆ ಸಾರಿಗೆ ಇಲಾಖೆಯು ಎಳ್ಳುನೀರು ಬಿಟ್ಟಿದೆ. ಖಾಸಗಿ ಬಸ್ ಮಾಲೀಕರ ಒತ್ತಡಕ್ಕೆ ಮಣಿದಿರುವ ಉನ್ನತ ಅಧಿಕಾರಿಗಳು, ‘ಪ್ರಯಾಣಿಕರಿಂದ ವಿರೋಧ ವ್ಯಕ್ತವಾಗುತ್ತಿದೆ’ ಎಂಬ ಕಾರಣ ಕೊಟ್ಟು ಪ್ರಸ್ತಾವವನ್ನೇ ಸದ್ಯಕ್ಕೆ ಕೈ ಬಿಟ್ಟಿದ್ದಾರೆ.

ಕೆಎಸ್‌ಆರ್‌ಟಿಸಿಯ 60ಕ್ಕೂ ಹೆಚ್ಚು ಬಸ್‌ಗಳನ್ನು ಪೀಣ್ಯದ ಬಸವೇಶ್ವರ ನಿಲ್ದಾಣಕ್ಕೆ ಸ್ಥಳಾಂತರಿಸಲಾಗಿದೆ. ಅದೇ ಮಾದರಿಯಲ್ಲೇ ಸ್ಟೇಟ್ ಹಾಗೂ ಕಾಂಟ್ರಾಕ್ಟ್‌ ಕ್ಯಾರೇಜ್‌ ಪರವಾನಗಿಯ ಖಾಸಗಿ ಬಸ್‌ಗಳನ್ನೂ ಸ್ಥಳಾಂತರಿಸಲು ಇಲಾಖೆ ಚಿಂತನೆ ನಡೆಸಿತ್ತು. ಈ

‘ಖಾಸಗಿ ಬಸ್‌ಗಳ ಮಾಲೀಕರ ಒತ್ತಡಕ್ಕೆ ಮಣಿದು ಸಾರಿಗೆ ಇಲಾಖೆಯ ಉನ್ನತ ಅಧಿಕಾರಿಗಳು ಈ ತೀರ್ಮಾನ ಕೈಗೊಂಡಿದ್ದಾರೆ’ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಯೊಬ್ಬರು ದೂರಿದರು. ಅದನ್ನು ಅಲ್ಲಗೆಳೆದ ಸಾರಿಗೆ ಅಧಿಕಾರಿ, ‘ಒತ್ತಡಕ್ಕೆ ಮಣಿಯುವ ಪ್ರಶ್ನೆಯೇ ಇಲ್ಲ. ಪ್ರಯಾಣಿಕರಿಂದ ಮನವಿಗಳು ಬಂದಿವೆ. ಇಲಾಖೆಯ ಪ್ರಧಾನ ಕಾರ್ಯದರ್ಶಿಯವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮನವಿಗಳ ಬಗ್ಗೆ ಚರ್ಚಿಸಿಯೇ ತೀರ್ಮಾನ ಕೈಗೊಳ್ಳಲಾಗಿದೆ’ ಎಂದರು.

ನಗರದ ಆರ್‌ಟಿಒ ಕಚೇರಿಗಳಲ್ಲಿ 2019ರ ಮೇವರೆಗೆ 75.06 ಲಕ್ಷ ವಾಹನಗಳು ನೋಂದಣಿ ಆಗಿವೆ. ಬಸ್‌ಗಳ ನೋಂದಣಿ ಸಂಖ್ಯೆಯೂ ವರ್ಷದಿಂದ ವರ್ಷಕ್ಕೆ ದ್ವಿಗುಣವಾಗುತ್ತಿದೆ. ಆ ಬಸ್‌ಗಳು, ನಿತ್ಯವೂ ನಗರದ ಹಲವು ಭಾಗಗಳಿಂದ ನಿಗದಿತ ಊರುಗಳತ್ತ ಹೊರಡುತ್ತಿವೆ. ತುಮಕೂರು ರಸ್ತೆ, ಮೈಸೂರು ರಸ್ತೆ, ಬಳ್ಳಾರಿ ರಸ್ತೆಗಳಲ್ಲಿ ವಿಪರೀತ ದಟ್ಟಣೆ ಉಂಟಾಗಿ ಇತರೆ ವಾಹನಗಳ ಚಾಲಕರು ಹಾಗೂ ಪ್ರಯಾಣಿಕರು ಕಿರಿಕಿರಿ ಅನುಭವಿಸುತ್ತಿದ್ದಾರೆ.

ಆ ಬಗ್ಗೆ 2016ರಲ್ಲೇ ಅಧ್ಯಯನ ನಡೆಸಿದ್ದ ಸಂಚಾರ ಪೊಲೀಸರು, ‘ಖಾಸಗಿ ಬಸ್‌ಗಳು ನಗರದೊಳಗೆ ಓಡಾಡುವುದನ್ನು ನಿರ್ಬಂಧಿಸಿ. ಹೊರವಲಯಕ್ಕೆ ಸ್ಥಳಾಂತರಿಸಿ’ ಎಂದು ಸಾರಿಗೆ ಇಲಾಖೆಗೆ ಪ್ರಸ್ತಾವ ಸಲ್ಲಿಸಿದ್ದರು.

ಆ ಬಗ್ಗೆ ಮೇಲಿಂದ ಮೇಲೆ ಸಭೆ ನಡೆಸಿದ್ದ ಇಲಾಖೆಯ ಉನ್ನತ ಅಧಿಕಾರಿಗಳು, ‘ಖಾಸಗಿ ಬಸ್‌ಗಳ ಸ್ಥಳಾಂತರದಿಂದ ಪ್ರಯಾಣಿಕರಿಗೆ ತೊಂದರೆ ಆಗಲಿದೆ. ಸದ್ಯಕ್ಕೆ ಸ್ಥಳಾಂತರ ಮಾಡುವುದು ಸೂಕ್ತವಲ್ಲ’ ಎಂದು ಪೊಲೀಸರಿಗೆ ತಿಳಿಸಿದ್ದಾರೆ.

ಕಾರಣ ಕೊಟ್ಟಉನ್ನತ ಅಧಿಕಾರಿ: ಸಾರಿಗೆ ನಿಗಮಗಳು, ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ಅಧಿಕಾರಿಗಳು, ಸಂಚಾರ ಪೊಲೀಸರು ಹಾಗೂ ಬಸ್‌ ಕಂಪನಿ ಪ್ರತಿನಿಧಿಗಳ ಸಭೆ ಇತ್ತೀಚೆಗಷ್ಟೇ ನಡೆಯಿತು. ಪ್ರಸ್ತಾವ ಕೈಬಿಡುವುದಕ್ಕೆ ಉನ್ನತ ಅಧಿಕಾರಿಯು ಕೆಲವು ಕಾರಣಗಳನ್ನು ಕೊಟ್ಟಿದ್ದಾರೆ ಎಂದು ಮೂಲಗಳು ಹೇಳಿವೆ.

‘ನಗರದ ಪ್ರತಿಯೊಂದು ಭಾಗದಲ್ಲೂ ಖಾಸಗಿ ಬಸ್‌ನವರು ಪಿಕ್‌ ಅಪ್‌ ಪಾಯಿಂಟ್‌ (ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ಜಾಗ) ಮಾಡಿದ್ದಾರೆ. ಅದು ಜನರಿಗೆ ಅನುಕೂಲವಾಗಿದೆ. ಬಸ್‌ಗಳನ್ನು ಏಕಾಏಕಿ ಸ್ಥಳಾಂತರ ಮಾಡಿದರೆ, ಪ್ರಯಾಣಿಕರು ಪೀಣ್ಯದವರೆಗೆ ಹೋಗಿ ಬಸ್‌ ಹತ್ತಲು ಸಾಧ್ಯವಾಗುವುದಿಲ್ಲವೆಂದು ಉನ್ನತ ಅಧಿಕಾರಿ ಹೇಳಿದರು’ ಎಂದು ಮೂಲಗಳು ತಿಳಿಸಿವೆ.

‘ತುಮಕೂರು ರಸ್ತೆ ಮೂಲಕ 21 ಜಿಲ್ಲೆಗಳಿಗೆ ಮತ್ತು ಗೋವಾ ಹಾಗೂ ಮಹಾರಾಷ್ಟ್ರ ರಾಜ್ಯಗಳಿಗೆ ಬಸ್‌ಗಳು ಸಂಚರಿಸುತ್ತಿವೆ. ಆ ಬಸ್‌ಗಳೆಲ್ಲವೂ ಎಲೆಕ್ಟ್ರಾನಿಕ್ ಸಿಟಿ, ಜಯನಗರ, ಕೆ.ಆರ್.ಪುರ, ಮೆಜೆಸ್ಟಿಕ್ ಹಾಗೂ ಸುತ್ತಮುತ್ತಲ ಪ್ರದೇಶಗಳಿಂದಲೂ ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗುತ್ತಿವೆ. ಜತೆಗೆ, ಮೈಸೂರು ಹಾಗೂ ಬಳ್ಳಾರಿ ರಸ್ತೆಯ ಮೂಲಕ ಹೊರ ಜಿಲ್ಲೆಗಳಿಗೆ ಹೋಗುವ ಬಸ್‌ಗಳು ಸಹ ಆ ನಿಯಮವನ್ನೇ ಪಾಲಿಸುತ್ತಿರುವುದಾಗಿ ಉನ್ನತ ಅಧಿಕಾರಿ ಹೇಳಿದರು. ಅದಕ್ಕೆ ಉಳಿದೆಲ್ಲ ಅಧಿಕಾರಿಗಳು ಸಮ್ಮತಿ ಸೂಚಿಸಿದರು’ ಎಂದು ಮೂಲಗಳು ಹೇಳಿವೆ.

ಸಂಚಾರಕ್ಕೆ ತೊಂದರೆ ಆಗಲ್ಲ: ಪೊಲೀಸರು ನೀಡಿದ್ದ ಪ್ರಸ್ತಾವಕ್ಕೆ ಪ್ರತಿಯಾಗಿ ಖಾಸಗಿ ಬಸ್‌ಗಳ ಮಾಲೀಕರು ಸಹ ಸಾರಿಗೆ ಇಲಾಖೆಯ ಉನ್ನತ ಅಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

‘ಸಾರಿಗೆ ನಿಯಮಾವಳಿಗೆ ಬದ್ಧವಾಗಿ ಪರವಾನಗಿ ಪಡೆದು ಬಸ್‌ಗಳನ್ನು ಓಡಿಸುತ್ತಿದ್ದೇವೆ. ತೆರಿಗೆಯನ್ನೂ ಪಾವತಿಸುತ್ತಿದ್ದೇವೆ. ನಿತ್ಯವೂ ರಾತ್ರಿ 8ರಿಂದ 11 ಗಂಟೆ ಅವಧಿಯೊಳಗೆ ಬಸ್‌ಗಳೆಲ್ಲವೂ ನಗರದಿಂದ ಹೊರಟು ಹೋಗುತ್ತವೆ. ಬೆಳಿಗ್ಗೆ 8 ಗಂಟೆಯೊಳಗೆ ಬಸ್‌ಗಳು ನಗರಕ್ಕೆ ಬಂದು ಶೆಡ್‌ ಸೇರುತ್ತವೆ. ಅದನ್ನು ಹೊರತುಪಡಿಸಿ ಬೇರ‍್ಯಾವ ಅವಧಿಯಲ್ಲೂ ಬಸ್‌ಗಳು ರಸ್ತೆಗೆ ಇಳಿಯುವುದಿಲ್ಲ. ಹೀಗಾಗಿ, ಸಾರ್ವಜನಿಕರ ಓಡಾಟಕ್ಕೆ ಯಾವುದೇ ತೊಂದರೆ ಆಗುವುದಿಲ್ಲ’ ಎಂದು ಮನವಿಯಲ್ಲಿ ಬರೆಯಲಾಗಿದೆ.
**
‘ಪರಿಸ್ಥಿತಿ ಕಷ್ಟ’
‘ಬೆಂಗಳೂರಿನಲ್ಲಿ ವಾಹನಗಳ ಓಡಾಟಕ್ಕೆ ಕಡಿವಾಣ ಹಾಕಬೇಕಿದೆ. ಇಲ್ಲದಿದ್ದರೆ, ಸಂಚಾರ ವ್ಯವಸ್ಥೆಯಲ್ಲಿ ಕಷ್ಟದ ದಿನಗಳು ಬರಲಿವೆ’ ಎಂದು ಸಂಚಾರ ವಿಭಾಗದ ಹಿರಿಯ ಅಧಿಕಾರಿ ತಿಳಿಸಿದರು.

‘ಸಂಚಾರ ವ್ಯವಸ್ಥೆ ಸುಧಾರಣೆ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಪ್ರಸ್ತಾವ ಸಲ್ಲಿಸುತ್ತಲೇ ಇದ್ದೇವೆ. ಅವರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಜನರೂ ಹೊಸ ವಾಹನಗಳ ಖರೀದಿಸುವುದನ್ನು ಬಿಡುತ್ತಿಲ್ಲ. ಇದು ಹೀಗೇ ಮುಂದುವರಿದರೆ ನಗರದಲ್ಲಿ ವಾಹನಗಳನ್ನು ನಿಲ್ಲಿಸುವುದೂ ಕಷ್ಟವಾಗಲಿದೆ. ಪಾದಚಾರಿಗಳಿಗೂ ಸಹ ರಸ್ತೆಯಲ್ಲಿ ಜಾಗವಿಲ್ಲದಂತಾಗಿದೆ’ ಎಂದು ಅಭಿಪ್ರಾಯಪಟ್ಟರು.
*
‘ಪ್ರಯಾಣಿಕರ ಅಭಿಪ್ರಾಯ ಪರಿಗಣಿಸಿ’ ‘ಹೊರ ಜಿಲ್ಲೆ ಹಾಗೂ ರಾಜ್ಯದ ನಿವಾಸಿಗಳೇ ಬೆಂಗಳೂರಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಸವಿದ್ದಾರೆ. ಅವರು ಸಮಯ ಸಿಕ್ಕಾಗಲೆಲ್ಲ ತಮ್ಮೂರಿಗೆ ಹೋಗಿ ಬರುತ್ತಾರೆ. ಖಾಸಗಿ ಬಸ್‌ಗಳನ್ನು ಸ್ಥಳಾಂತರ ಮಾಡುವ ಮುನ್ನ ಅಂಥ ಪ್ರಯಾಣಿಕರ ಅಭಿಪ್ರಾಯವನ್ನು ಪರಿಗಣಿಸಬೇಕು’ ಎಂದು ಖಾಸಗಿ ಕಂಪನಿ ಉದ್ಯೋಗಿ ರಾಜಶೇಖರ್ ಎಂಬುವರು ಸಾರಿಗೆ ಅಧಿಕಾರಿಗಳಿಗೆ ಕಳುಹಿಸಿರುವ ಪತ್ರದಲ್ಲಿ ಬರೆದಿದ್ದಾರೆ.
**

ಅಂಕಿ–ಅಂಶ
18,635
ನಗರದ ಆರ್‌ಟಿಓಗಳಲ್ಲಿ ನೋಂದಣಿಯಾದ ಖಾಸಗಿ ಬಸ್‌ಗಳ ಸಂಖ್ಯೆ

60,000
ಬಸ್‌ಗಳಲ್ಲಿ ನಿತ್ಯ ಸಂಚರಿಸುವ ಪ್ರಯಾಣಿಕರ ಸರಾಸರಿ ಸಂಖ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT