ಶುಕ್ರವಾರ, ಜೂನ್ 5, 2020
27 °C

ಬಿ.ಪ್ಯಾಕ್ ಸಮೀಕ್ಷಾ ವರದಿ | ಖಾಸಗಿ ಸಾರಿಗೆ ಬಳಕೆದಾರರೇ ಹೆಚ್ಚು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಲಾಕ್‌ಡೌನ್ ತೆರವಾದ ನಂತರ ನಗರದಲ್ಲಿ ಸಾರ್ವಜನಿಕ ಸಾರಿಗೆ ಬಳಕೆದಾರರ ಸಂಖ್ಯೆ ಖಾಸಗಿ ಸಾರಿಗೆ ಬಳಕೆದಾರರಿಗಿಂತ ಶೇ 3ರಷ್ಟು ಕಡಿಮೆಯಾಗಿದೆ’ ಎಂದು ಬಿ.ಪ್ಯಾಕ್ ಆನ್‌ಲೈನ್ ಸಮೀಕ್ಷೆ ಹೇಳಿದೆ.

ಸಾರ್ವಜನಿಕ ಸಾರಿಗೆಯನ್ನು ಸುರಕ್ಷಿತ ಸಂಚಾರ ಆಯ್ಕೆಯನ್ನಾಗಿ ಮಾಡಲು ಸಾರಿಗೆ ಸಂಸ್ಥೆಗಳು ಅನುಸರಿಸಬೇಕಿರುವ ಮುನ್ನೆಚ್ಚರಿಕೆ ಕ್ರಮಗಳನ್ನು ಅರ್ಥಮಾಡಿಕೊಳ್ಳವ ಉದ್ದೇಶದಿಂದ ಈ ಸಮೀಕ್ಷೆ ನಡೆಸಲಾಗಿದೆ ಎಂದು ಬಿ.ಪ್ಯಾಕ್ ತಿಳಿಸಿದೆ.

ಖಾಸಗಿ ಸಾರಿಗೆ ಬಳಕೆದಾರರು ಶೇ 51ರಷ್ಟಿದ್ದರೆ, ಸಾರ್ವಜನಿಕ ಸಾರಿಗೆ ಬಳಸುವವರು ಶೇ 48ರಷ್ಟು ಇದ್ದಾರೆ. ಈ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಸಾರ್ವಜನಿಕ ಸಾರಿಗೆ ಸಂಸ್ಥೆಗಳು ವ್ಯವಸ್ಥಿತ ಕಾರ್ಯತಂತ್ರಗಳನ್ನೂ ರೂಪಿಸಬೇಕಾದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದೆ.

ಸಮೀಕ್ಷೆಯಲ್ಲಿ ಭಾಗವಹಿಸಿದವರಲ್ಲಿ ಶೇ 71ರಷ್ಟು ಜನ ಸಾರ್ವಜನಿಕ ಸಾರಿಗೆ ಬಳಕೆದಾರರಾಗಿದ್ದು, ಶೇ 29ರಷ್ಟು ಜನ ಖಾಸಗಿ ವಾಹನ ಬಳಕೆದಾರರಾಗಿದ್ದಾರೆ. ಲಾಕ್‌ಡೌನ್‌ಗೆ ಮುಂಚಿತವಾಗಿ ಸಾರ್ವಜನಿಕ ಸಾರಿಗೆ ಬಳಸುತ್ತಿದ್ದ ಶೇ 50ರಷ್ಟು ಜನರು ಲಾಕ್‌ಡೌನ್ ತೆರವುಗೊಳಿಸಿದ ನಂತರ ಕನಿಷ್ಠ ಮೂರು ತಿಂಗಳವರೆಗೆ ಸಾರ್ವಜನಿಕ ಸಾರಿಗೆ ಬಳಸದಿರಲು ನಿರ್ಧರಿಸಿದ್ದಾರೆ. ಈ ಪೈಕಿ ಶೇ 36ರಷ್ಟು ಜನರು ಸಾರ್ವಜನಿಕ ಸಾರಿಗೆಯನ್ನು ಯಾವಾಗಿನಿಂದ ಬಳಸುತ್ತಾರೆ ಎಂಬುದನ್ನು ನಿರ್ದಿಷ್ಟವಾಗಿ ತಿಳಿಸಿಲ್ಲ.

ಸಮೀಕ್ಷೆಯಲ್ಲಿ ಭಾಗವಹಿಸಿದ ಜನರಲ್ಲಿ ಶೇ 58ರಷ್ಟು ಜನ 5 ಕಿಲೋ ಮೀಟರಿಗೂ ಕಡಿಮೆ ಪ್ರಯಾಣ ಮಾಡಿದರೆ, 49ರಷ್ಟು ಜನ 5 ಕಿ.ಮೀಗೂ ಹೆಚ್ಚು ಪ್ರಯಾಣ ಮಾಡುವವರಾಗಿದ್ದಾರೆ.

‘ಈ ಸಮೀಕ್ಷೆಯಲ್ಲಿ ಭಾಗವಹಿಸಿದ 1,072 ಜನರಲ್ಲಿ ಬಹುತೇಕರು ಸಾರ್ವಜನಿಕ ಸಾರಿಗೆಯಲ್ಲಿ ಸುರಕ್ಷತಾ ಕ್ರಮಗಳನ್ನು ಹೆಚ್ಚಾಗಿ ಕೈಗೊಳ್ಳಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ’ ಎಂದು ಸಮೀಕ್ಷಾ ವರದಿ ಹೇಳಿದೆ.

‘ಬಿಎಂಟಿಸಿ, ರೈಲ್ಚೆ ಮತ್ತು ಮೆಟ್ರೊ ರೈಲು ಸಂಚಾರ ಆರಂಭಿಸುವ ಮುನ್ನ ಸಾರ್ವಜನಿಕರ ಸುರಕ್ಷತೆ ಹಾಗೂ ಸೋಂಕು ಹರಡುವುದನ್ನು ತಡೆಯಲು ಮುನ್ನೆಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಜನರಲ್ಲಿ ಜಾಗೃತಿ ಮೂಡಿಸಬೇಕು’ ಎಂದು ಬಿ.ಪ್ಯಾಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರೇವತಿ ಅಶೋಕ್ ತಿಳಿಸಿದ್ದಾರೆ.

ಆನ್‌ಲೈನ್ ಮೂಲಕ ಮುಂಗಡ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆಗೆ ಕೆಎಸ್‌ಆರ್‌ಟಿಸಿ ಅವಕಾಶ ಮಾಡಿಕೊಟ್ಟಿದೆ. ಬಸ್‌ ನಿಲ್ದಾಣಗಳಲ್ಲಿ ಟಿಕೆಟ್ ಖರೀದಿಗೆ ಜನ ಅಲೆದಾಡುವುದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಗುರುವಾರ ಪ್ರಯಾಣಕ್ಕೆ 5,626 ಮಂದಿ ಆಸನಗಳನ್ನು ಮುಂಗಡವಾಗಿ ಕಾಯ್ದಿರಿಸಿದ್ದಾರೆ ಎಂದು ನಿಗಮ ತಿಳಿಸಿದೆ.

www.ksrtc.inನಲ್ಲಿ ಮುಂಗಡ ಟಿಕೆಟ್ ಕಾಯ್ದಿರಿಸಬಹುದು.

 

 

ಕೆಎಸ್‌ಆರ್‌ಟಿಸಿ ಬಸ್‌ಗಳ ಕಾರ್ಯಾಚರಣೆ ಸಮಯವನ್ನು ಸಂಜೆ 7ರ ತನಕ ವಿಸ್ತರಣೆ ಮಾಡಲಾಗಿದ್ದು, ಬುಧವಾರ 2,633 ಬಸ್‌ಗಳಲ್ಲಿ 81,593 ಜನ ಪ್ರಯಾಣ ಮಾಡಿದರು.

ಈ ಹಿಂದಿನ ನಿಯಮದಂತೆ ಸಂಜೆ 7 ಗಂಟೆಯೊಳಗೆ ಬಸ್‌ಗಳು ತಲುಪಬೇಕಿತ್ತು. ಈಗ ಸಂಜೆ 7 ಗಂಟೆ ತನಕ ಬೆಂಗಳೂರು ಹಾಗೂ ಇತರೆ ನಗರಗಳಿಂದ ಬಸ್‌ಗಳು ಸಂಚಾರ ಆರಂಭಿಸಬಹುದು. ಕಾರ್ಯಾಚರಣೆ ಮುಕ್ತಾಯದ ಸಮಯ ನಿಗದಿ ಮಾಡಿಲ್ಲ.

ಬುಧವಾರ 2 ಸಾವಿರ ಬಸ್‌ಗಳ ಕಾರ್ಯಾಚರಣೆ ಗುರಿಯನ್ನು ಕೆಎಸ್ಆರ್‌ಟಿಸಿ ಹೊಂದಿದ್ದರೂ, ಪ್ರಯಾಣಿಕರ ಸಂಖ್ಯೆ ಹೆಚ್ಚಾದ ಕಾರಣ 633 ಬಸ್‌ಗಳನ್ನು ಹೆಚ್ಚುವರಿಯಾಗಿ ಕಾರ್ಯಾಚರಣೆ ಮಾಡಿತು.

ಬುಧವಾರ ಬೆಳಿಗ್ಗೆಯಿಂದಲೇ ಬೇರೆ ಊರುಗಳಿಗೆ ಪ್ರಯಾಣ ಮಾಡಲು ನಗರದ ಮೆಜೆಸ್ಟಿಕ್ ನಿಲ್ದಾಣದಲ್ಲಿ ಜನ ಜಮಾಯಿಸಿದ್ದರು. ಸರತಿ ಸಾಲಿನಲ್ಲಿ ನಿಂತು ಬಸ್‌ ಮುಂಗಡ ಟಿಕೆಟ್ ಖರೀದಿಸಿ ಪ್ರಯಾಣ ಮಾಡಿದರು.

ಲಾಕ್‌ಡೌನ್ ನಂತರ ದುಡಿಮೆಯೇ ಇಲ್ಲದ ಕಾರ್ಮಿಕರು ಬಸ್ ಟಿಕೆಟ್ ಖರೀದಿಗೂ ಹಣ ಇಲ್ಲದೆ ಪರದಾಡಿದರು. ‘ಊರಿಗೆ ತಲುಪಲು ಅವಕಾಶ ಮಾಡಿಕೊಡಿ’ ಎಂದು ಕಣ್ಣೀರಿಟ್ಟರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು