ಗುರುವಾರ , ಜೂನ್ 24, 2021
23 °C
ಮನೆ ಆರೈಕೆಗೆ ಒಳಗಾಗುತ್ತಿರುವ ಕೋವಿಡ್ ಪೀಡಿತರು

ಕೋವಿಡ್‌-19: ಮುಚ್ಚುವ ಸ್ಥಿತಿಯಲ್ಲಿ ಖಾಸಗಿ ಆರೈಕೆ ಕೇಂದ್ರಗಳು

ವರುಣ ಹೆಗಡೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಖಾಸಗಿ ಆಸ್ಪತ್ರೆಗಳು ಹಾಗೂ ಹೋಟೆಲ್‌ಗಳ ಸಹಯೋಗದಲ್ಲಿ ಆರಂಭವಾದ ಕೋವಿಡ್‌ ಆರೈಕೆ ಕೇಂದ್ರಗಳು ಒಂದು ತಿಂಗಳಲ್ಲೇ ಮುಚ್ಚುವ ಸ್ಥಿತಿಗೆ ತಲುಪಿವೆ. 

ಲಾಕ್‌ಡೌನ್‌ ಅವಧಿಯಲ್ಲಿ ಗ್ರಾಹಕರಿಲ್ಲದೆ ನಷ್ಟ ಅನುಭವಿಸಿದ್ದ ಹೋಟೆಲ್‌ ಉದ್ಯಮಿಗಳು ಆರೈಕೆ ಕೇಂದ್ರಗಳು ಪ್ರಾರಂಭವಾದ ಬಳಿಕ ಲಾಭದ ನಿರೀಕ್ಷೆಯಲ್ಲಿದ್ದರು. ಖಾಸಗಿ ಆಸ್ಪತ್ರೆಗಳು ಕೂಡ ಅಲ್ಲಿ ಸೋಂಕಿತರಿಗೆ ವಿಶೇಷ ಸೌಲಭ್ಯಗಳನ್ನು ಒದಗಿಸುವುದಾಗಿ ಘೋಷಿಸಿ, ಅಗತ್ಯ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿಯನ್ನು ನೇಮಕ ಮಾಡಿದ್ದವು. ಆದರೆ, ಈಗ ಆ ಕೇಂದ್ರಗಳಿಗೆ ಬೀಗ ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ನಗರದಲ್ಲಿ ವರದಿಯಾಗುತ್ತಿರುವ ಶೇ 80ಕ್ಕೂ ಅಧಿಕ ಪ್ರಕರಣಗಳಲ್ಲಿ ಸೋಂಕಿನ ಲಕ್ಷಣಗಳು ಬಹಿರಂಗವಾಗಿ ಕಾಣಿಸುತ್ತಿಲ್ಲ. ಹೀಗಾಗಿ ಬಹುತೇಕರು ಮನೆಯ ಆರೈಕೆಗೆ ಒಳಗಾಗಿದ್ದಾರೆ. 

ಸುಗುಣ, ಪೀಪಲ್ ಟ್ರೀ, ಸಂಜೀವಿನಿ, ಅಪೋಲೊ, ಕೊಲಂಬಿಯಾ ಏಷ್ಯಾ, ಆಸ್ಟರ್‌ ಸಿಎಂಐ ಸೇರಿದಂತೆ ನಗರದ ಪ್ರಮುಖ ಆಸ್ಪತ್ರೆಗಳು 20 ಹೋಟೆಲ್‌ಗಳನ್ನು ಗುರುತಿಸಿ, ಸೇವೆ ನೀಡುತ್ತಿವೆ. ಸಾಮಾನ್ಯ ಹೋಟೆಲ್‌ನಲ್ಲಿ ಸೋಂಕಿತ ವ್ಯಕ್ತಿ ದಿನಕ್ಕೆ ₹ 8 ಸಾವಿರ, ಮೂರು ಸ್ಟಾರ್‌ಗಳ ಹೋಟೆಲ್‌ಗೆ ₹ 10 ಸಾವಿರ ಹಾಗೂ ಪಂಚತಾರಾ ಹೋಟೆಲ್‌ಗೆ ₹ 12 ಸಾವಿರ ನೀಡಬೇಕಾಗುತ್ತದೆ. ಇಲ್ಲಿ ರೋಗಿಯನ್ನು 10 ದಿನಗಳವರೆಗೆ ಇರಿಸಿಕೊಳ್ಳಲಾಗುತ್ತಿದೆ. ಹೀಗಾಗಿ ರೋಗಿ ಮನೆಗೆ ತೆರಳುವಾಗ ₹ 80 ಸಾವಿರದಿಂದ ₹ 1.20 ಲಕ್ಷ ಪಾವತಿಸಬೇಕು. ಮಧುಮೇಹ ಸೇರಿದಂತೆ ಬೇರೆ ಕಾಯಿಲೆಗಳ ಚಿಕಿತ್ಸೆಗೆ ಹಾಗೂ ಹೆಚ್ಚಿನ ಸೌಲಭ್ಯ ಬಯಸಿದಲ್ಲಿ ಪ್ರತ್ಯೇಕವಾಗಿ ಹಣ ನೀಡಬೇಕಾಗುತ್ತದೆ.

ಆಸ್ಪತ್ರೆಗಳಲ್ಲೂ ಹಾಸಿಗೆಗಳು ಖಾಲಿ: ಖಾಸಗಿ ಆಸ್ಪತ್ರೆಗಳು ಒಟ್ಟು ಹಾಸಿಗೆಗಳಲ್ಲಿ ಶೇ 50 ರಷ್ಟು ಹಾಸಿಗೆಗಳನ್ನು ಸರ್ಕಾರ ಶಿಫಾರಸು ಮಾಡುವ ರೋಗಿಗಳಿಗೆ ಮೀಸಲಿಡಬೇಕು. ಬಿಬಿಎಂಪಿಯ ಮಾಹಿತಿ ಪ‍್ರಕಾರ, ಖಾಸಗಿ ಆಸ್ಪತ್ರೆಗಳು 5,258 ಹಾಸಿಗೆಗಳನ್ನು ಕೋವಿಡ್‌ ಚಿಕಿತ್ಸೆಗೆ ಮೀಸಲಿರಿಸಿವೆ. ಅದರಲ್ಲಿ ಶೇ 60 ರಷ್ಟು ಹಾಸಿಗೆಗಳು ಖಾಲಿಯಿವೆ. ಖಾಸಗಿ ವೈದ್ಯಕೀಯ ಕಾಲೇಜುಗಳು 4,736 ಹಾಸಿಗೆಗಳನ್ನು ಮೀಸಲಿಟ್ಟಿದ್ದು, ಶೇ 40ರಷ್ಟು ಖಾಲಿ ಇವೆ. 

‘ಸರ್ಕಾರ ಮನೆ ಆರೈಕೆಗೆ ಅವಕಾಶ ನೀಡಿದ್ದರಿಂದ ಕೋವಿಡ್‌ ಆರೈಕೆ ಕೇಂದ್ರಗಳಿಗೆ ಬರುವವರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. 50 ಹಾಸಿಗೆಗಳ ಕೇಂದ್ರಗಳಲ್ಲಿ 6ರಿಂದ 8 ಸೋಂಕಿತರಿಗೆ ಚಿಕಿತ್ಸೆ ಒದಗಿಸಲಾಗುತ್ತಿದೆ. ಮುಂದಿನ ಒಂದು ವಾರ ಇದೇ ಸ್ಥಿತಿಯಿದ್ದಲ್ಲಿ ಕೇಂದ್ರಗಳನ್ನು ಸ್ಥಗಿತ ಮಾಡಲಾಗುವುದು’ ಎಂದು ಖಾಸಗಿ ಆಸ್ಪತ್ರೆ ಮತ್ತು ನರ್ಸಿಂಗ್ ಹೋಮ್‌ಗಳ ಅಸೋಸಿಯೇಷನ್ (ಫಾನಾ) ಅಧ್ಯಕ್ಷ ಡಾ.ಆರ್. ರವೀಂದ್ರ ತಿಳಿಸಿದರು.

ಹೋಟೆಲ್‌ಗಳಲ್ಲಿ ಪುನಃ ಆತಿಥ್ಯ
‘ಈ ಕೇಂದ್ರಗಳಿಂದ ನಮಗೆ ಯಾವುದೇ ಲಾಭವಾಗಿಲ್ಲ. ಶೇ 75 ರಷ್ಟು ಕೊಠಡಿಗಳನ್ನಾದರೂ ಬುಕ್ ಮಾಡಿಕೊಳ್ಳಬೇಕು ಎಂದು ಒಪ್ಪಂದದ ವೇಳೆಯೇ ಸೂಚಿಸಿದ್ದೆವು. ಆದರೆ, ಆಸ್ಪತ್ರೆಗಳು ಅಷ್ಟು ಪ್ರಮಾಣದಲ್ಲಿ ಕೊಠಡಿಗಳನ್ನು ಕಾಯ್ದಿರಿಸಿ, ಬಾಡಿಗೆ ನೀಡಲಿಲ್ಲ. ಪ್ರತಿ ಕೊಠಡಿಗೆ ₹ 2,500 ರಿಂದ ₹ 3,500 ನಿಗದಿಪಡಿಸಿದ್ದೆವು. ಒಪ್ಪಂದ ಕಡಿತ ಮಾಡಿಕೊಂಡಲ್ಲಿ ಹೋಟೆಲ್‌ಗಳಲ್ಲಿ ಪುನಃ ಆತಿಥ್ಯ ಪ್ರಾರಂಭಿಸಲಾಗುವುದು’ ಎಂದು ಬೃಹತ್ ಬೆಂಗಳೂರು ಹೋಟೆಲ್ ಸಂಘಟನೆಯ ಅಧ್ಯಕ್ಷ ಪಿ.ಸಿ. ರಾವ್ ತಿಳಿಸಿದರು.

**

ಕೋವಿಡ್‌– ಕೋವಿಡೇತರ ರೋಗಿಗಳಿಗೆ ಒಂದೇ ಕಡೆ ಚಿಕಿತ್ಸೆ ನೀಡುತ್ತಿರುವುದರಿಂದ ಸಮಸ್ಯೆಯಾಗಿದೆ. ಬೇರೆ ಕಾಯಿಲೆಯ ರೋಗಿಗಳು ಚಿಕಿತ್ಸೆಗೆ ಹಿಂದೇಟು ಹಾಕುತ್ತಿದ್ದಾರೆ.
-ಡಾ.ಆರ್. ರವೀಂದ್ರ, ಫಾನಾ ಅಧ್ಯಕ್ಷ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು