ಗುರುವಾರ , ಅಕ್ಟೋಬರ್ 29, 2020
19 °C
ಇಸ್ರೊ ಮಹತ್ವದ ಸುಧಾರಣಾ ಕ್ರಮ ಪ್ರಕಟ

ಖಾಸಗಿಗೆ ಬಾಗಿಲು ತೆರೆದ ‘ಬಾಹ್ಯಾಕಾಶ’: ರಾಕೆಟ್, ಉಪಗ್ರಹ‌ ನಿರ್ಮಾಣಕ್ಕೆ ಅವಕಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಖಾಸಗಿ ಉದ್ಯಮಗಳು ದೇಶದಲ್ಲಿ ಸ್ವತಂತ್ರವಾಗಿ ಬಾಹ್ಯಾಕಾಶ ಚಟುವಟಿಕೆಗಳನ್ನು ನಡೆಸಲು ಅವಕಾಶ ನೀಡುವ ಮಹತ್ವದ ಸುಧಾರಣಾ ನೀತಿಯನ್ನು ಭಾರತೀಯ ಬಾಹ್ಯಾಕಾಶ ವಿಜ್ಞಾನ ಸಂಶೋಧನಾ ಸಂಸ್ಥೆ (ಇಸ್ರೊ) ಪ್ರಕಟಿಸಿದೆ.

ರಾಕೆಟ್‌ ನಿರ್ಮಾಣ, ಉಪಗ್ರಹ ನಿರ್ಮಾಣ ಮತ್ತು ಉಡಾವಣೆಗಳಂತಹ ಕಾರ್ಯಗಳನ್ನೂ ಖಾಸಗಿಯವರೂ ಇನ್ನು ಮುಂದೆ ಕೈಗೊಳ್ಳಬಹುದಾಗಿದ್ದು, ಇದಕ್ಕೆ ಅಗತ್ಯ ನೆರವು, ತಂತ್ರಜ್ಞಾನ ವೆರ್ಗಾವಣೆಗೆ ಇಸ್ರೊ ಸಹಕಾರ ನೀಡಲಿದೆ ಎಂದು ಇಸ್ರೊ ಅಧ್ಯಕ್ಷ ಡಾ.ಕೆ.ಶಿವನ್ ತಿಳಿಸಿದ್ದಾರೆ.

ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ಭಾರತ ಜಾಗತಿಕ ಶಕ್ತಿಯಾಗಿ ಹೊರ ಹೊಮ್ಮಲು ಮತ್ತು ಅತ್ಯಂತ ಕಡಿಮೆ ವೆಚ್ಚದಲ್ಲಿ ಈ ಚಟುವಟಿಕೆಗಳನ್ನು ನಡೆಸುವುದರಿಂದ ಬಾಹ್ಯಾಕಾಶ ವಿಜ್ಞಾನ ಮೂಲದ ಆದಾಯ ಗಣನೀಯ ಪ್ರಮಾಣದಲ್ಲಿ ಹೆಚ್ಚಿಸಲು ಸಾಧ್ಯವಾಗಲಿದೆ ಎಂದು ಶಿವನ್‌ ಹೇಳಿದರು.

ಇದನ್ನೂ ಓದಿಬಾಹ್ಯಾಕಾಶ ಸಂಶೋಧನೆ: ಖಾಸಗಿ ಕಂಪನಿಗಳ ಭಾಗವಹಿಸುವಿಕೆಗೆ ಕೇಂದ್ರ ಅನುಮೋದನೆ

ಖಾಸಗಿಯವರು ಇಲ್ಲಿಯವರೆಗೆ ಇಸ್ರೊಗೆ ಬಿಡಿ ಭಾಗಗಳನ್ನು ತಯಾರಿಸುವುದಷ್ಟಕ್ಕೇ ಸೀಮಿತವಾಗಿದ್ದರು. ಇನ್ನು ಮುಂದೆ ಬಾಹ್ಯಾಕಾಶ ಸಂಸ್ಥೆಗೆ ಸಮಾನವಾಗಿ ಬೆಳೆಯುವುದಕ್ಕೆ ಅವಕಾಶ ನೀಡುವ ಮಹತ್ವದ ಸುಧಾರಣಾ ಕ್ರಮ ಇದಾಗಿದೆ. ಇದರಿಂದ ದೇಶದಲ್ಲಿ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಅಭಿವೃದ್ದಿಯ ಹೊಸ ಯುಗವೇ ಸೃಷ್ಟಿಯಾಗಲಿದೆ ಎಂದರು.

ಖಾಸಗಿಯವರು ಏನೆಲ್ಲ ಮಾಡಬಹುದು: ರಾಕೆಟ್‌ ನಿರ್ಮಾಣ, ರಾಕೆಟ್‌ ಉಡ್ಡಯನ, ಉಪಗ್ರಹ ಮತ್ತು ಅದರ ಪೇಲೋಡ್‌ ನಿರ್ಮಾಣದಿಂದ ಮೊದಲ್ಗೊಂಡು ಹಲವು ಚಟುವಟಿಕೆಗಳು ಮತ್ತು ಸೇವೆಗಳನ್ನು ನೀಡಬಹುದು. ಸಂಶೋಧನೆ ಮತ್ತು ಅಭಿವೃದ್ಧಿಯಲ್ಲೂ ತೊಡಗಿಕೊಳ್ಳಬಹುದು. ಇದರಿಂದ ದೇಶದಲ್ಲಿ ಉದ್ಯಮ ಬೆಳೆಯುವುದರ ಜೊತೆಗೆ ಅಪಾರ ಪ್ರಮಾಣದಲ್ಲಿ ಉದ್ಯೋಗವೂ ಸೃಷ್ಟಿಯಾಗಲಿದೆ ಎಂದು ಶಿವನ್‌ ತಿಳಿಸಿದರು.

ಖಾಸಗಿ ಕ್ಷೇತ್ರದ ದೊಡ್ಡ, ಸಣ್ಣ ಮಟ್ಟದ ಉದ್ಯಮಗಳು ಮತ್ತು ಸಾರ್ಟ್‌ಅಪ್‌ಗಳು ಭಾಗವಹಿಸಬಹುದು. ಇವರ ಚಟುವಟಿಕೆಗಳ ಗುಣಮಟ್ಟ, ಸುರಕ್ಷತೆ ಮತ್ತು ಭದ್ರತೆಯನ್ನು ಇಸ್ರೊ ನೋಡಿಕೊಳ್ಳಲಿದೆ ಎಂದು ಹೇಳಿದರು.

ಸ್ವಾಯತ್ತ ಸ್ಥಾನಮಾನ: ಖಾಸಗಿ ಚಟುವಟಿಕೆಗಳು ಸ್ವಾಯತ್ತವಾಗಿ ಕಾರ್ಯ ನಿರ್ವಹಿಸುತ್ತವೆ. ಇಸ್ರೊ ನೋಡಲ್‌ ಏಜೆನ್ಸಿಯಾಗಿರುತ್ತದೆ. ಇದಕ್ಕಾಗಿಯೇ ‘ಇನ್‌ಸ್ಪೇಸ್‌’ ಎಂಬ ಪ್ರತ್ಯೇಕ ಸಂಸ್ಥೆ ಹುಟ್ಟು ಹಾಕುತ್ತೇವೆ. ಇದರಲ್ಲಿ ಖಾಸಗಿ ಉದ್ಯಮಗಳ ಪ್ರತಿನಿಧಿಗಳು,ಇಸ್ರೊ ಮತ್ತು ಸರ್ಕಾರದ ಪ್ರತಿನಿಧಿಗಳೂ ಇರುತ್ತಾರೆ ಎಂದು ಶಿವನ್ ವಿವರಿಸಿದರು.

ಇನ್‌ಸ್ಪೇಸ್‌ ಸ್ವತಂತ್ರ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ. ಬಾಹ್ಯಾಕಾಶ ಚಟುವಟಿಕೆಗಳಲ್ಲಿ ತೊಡಗುವ ಸಂಸ್ಥೆಗಳಿಗೆ ಅಗತ್ಯ ಜ್ಞಾನವನ್ನು ನೀಡಲಿದೆ. ‘ಇನ್‌ಸ್ಪೇಸ್‌’ ಇನ್ನು ಆರು ತಿಂಗಳಲ್ಲಿ ಸ್ಥಾಪನೆ ಆಗಿದೆ. ಆದರೆ, ಸಾಕಷ್ಟು ಖಾಸಗಿ ಸಂಸ್ಥೆಗಳು ಈಗಾಗಲೇ ಪ್ರಸ್ತಾವನೆ ಸಲ್ಲಿಸಿವೆ. ಇದಕ್ಕೆ ಒಪ್ಪಿಗೆ ನೀಡುವ ಪ್ರಕ್ರಿಯೆ ಸದ್ಯದಲ್ಲೇ ಚಾಲನೆ ನೀಡುತ್ತೇವೆ ಎಂದರು.

ಸುಧಾರಣೆ ಕ್ರಮವಾಗಿ ಹೊಸ ನ್ಯಾವಿಗೇಷನ್‌ ನೀತಿ ಜಾರಿ ಮಾಡಲಾಗುವುದು, ದೂರಸಂವೇದಿ ನೀತಿ ಮತ್ತು ಉಪ್ರಗ್ರಹ ನೀತಿಯನ್ನೂ ಪರಿಷ್ಕರಿಸಲಾಗುವುದು. ಖಾಸಗಿ ಕಂಪನಿಗಳು ಬೇಡಿಕೆ ಪೂರೈಕೆ ಮಾದರಿಗೆ ಸೀಮಿತವಾಗಿ ಕಾರ್ಯ ನಿರ್ವಹಿಸಬೇಕಾಗುತ್ತದೆ ಎಂದೂ ತಿಳಿಸಿದರು.

ಇಸ್ರೊ ಪಾತ್ರವೇನು: ಇಸ್ರೊ ಬಾಹಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಅತ್ಯಂತ ಮುಂದುವರಿದ ಸಂಶೋಧನೆಗಳು ಮತ್ತು ಅಂತರ ಗ್ರಹಯಾನಗಳ ಬಗ್ಗೆ ಹೆಚ್ಚಿನ ಒತ್ತು ನೀಡಲಿದೆ. ಜಾಗತಿಕ ಬಾಹ್ಯಾಕಾಶ ಕ್ಷೇತ್ರದ ಪವರ್‌ ಹೌಸ್ ಆಗಿ ಭಾರತ ರೂಪುಗೊಳ್ಳಲಿದೆ ಎಂದು ಶಿವನ್ ವಿಶ್ವಾಸ ವ್ಯಕ್ತಪಡಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು