ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆಸ್ತಿ ತೆರಿಗೆ: ವಲಯಗಳನ್ನು ಹೊಸತಾಗಿ ವರ್ಗೀಕರಿಸಿ’

ತೆರಿಗೆ ವಿವರ ಪತ್ರ ಸಲ್ಲಿಸಿದ 3 ವರ್ಷಗಳ ಬಳಿಕ ತೆರಿಗೆ ಮೊತ್ತ ಪರಿಷ್ಕರಿಸುವಂತಿಲ್ಲ: ವಿಧಾನ ಪರಿಷತ್‌ ಸದಸ್ಯ ಪಿ.ಆರ್‌.ರಮೇಶ್
Last Updated 8 ಆಗಸ್ಟ್ 2021, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಬಿಬಿಎಂಪಿ ವ್ಯಾಪ್ತಿಯ ಆಸ್ತಿ ಮಾಲೀಕರು ವಲಯ ವರ್ಗೀಕರಣಕ್ಕೆ ಅನುಗುಣವಾಗಿ ತೆರಿಗೆ ಪಾವತಿಸುತ್ತಿಲ್ಲ ಎಂಬ ಕಾರಣಕ್ಕೆ ಐದು ವರ್ಷಗಳ ಹಿಂದಿನಿಂದ ತೆರಿಗೆಯನ್ನು ಈಗ ವಸೂಲಿ ಮಾಡಲು ಕಾನೂನಿನಲ್ಲಿ ಅವಕಾಶ ಇಲ್ಲ. ಹಾಗಾಗಿ ವಲಯಗಳನ್ನು ಹೊಸತಾಗಿ ವರ್ಗೀಕರಿಸುವ ಮೂಲಕ ಈ ಸಮಸ್ಯೆ ನೀಗಿಸಬಹುದು’ ಎಂದು ವಿಧಾನ ಪರಿಷತ್‌ ಸದಸ್ಯ ಪಿ.ಆರ್‌.ರಮೇಶ್‌ ಸಲಹೆ ನೀಡಿದ್ದಾರೆ.

‘ಕಟ್ಟಡ ಮಾಲೀಕರಿಗೆ ಬಿಬಿಎಂಪಿಯು ಐದು ವರ್ಷಗಳ ತೆರಿಗೆ ವ್ಯತ್ಯಾಸದ ಬಾಕಿ ಮೊತ್ತಕ್ಕೆ ವಾರ್ಷಿಕ ಶೇ 24ರಷ್ಟು ದಂಡವನ್ನೂ ವಿಧಿಸಿ 1976ರ ಕೆಎಂಸಿ ಕಾಯ್ದೆಯ ಸೆಕ್ಷನ್‌ 108 (ಎ) ಪ್ರಕಾರ ನೋಟಿಸ್‌ ಜಾರಿ ಮಾಡುತ್ತಿದೆ. ಈ ನೋಟಿಸ್‌ಗಳು ಸಿದ್ಧವಾಗಿದ್ದು 2021ರ ಫೆಬ್ರುವರಿಯಲ್ಲಿ. ಆದರೆ, ಮಾಲೀಕರಿಗೆ ಜಾರಿಯಾಗಿದ್ದು ಜುಲೈ ಬಳಿಕ. 2020ರ ಬಿಬಿಎಂಪಿ ಕಾಯ್ದೆ ಜಾರಿಗೆ ಬಂದ ಬಳಿಕ 1976ರ ಕೆಎಂಸಿ ಕಾಯ್ದೆ ಬಿಬಿಎಂಪಿಗೆ ಅನ್ವಯ ಆಗುವುದಿಲ್ಲ. ಈಗ ನೋಟಿಸ್‌ ನೀಡುವುದಿದ್ದರೆ ಬಿಬಿಎಂಪಿ ಕಾಯ್ದೆಯನ್ವಯವೇ ನೀಡಬೇಕಾಗುತ್ತದೆ’ ಎಂದು ಸ್ಪಷ್ಟಪಡಿಸಿದರು.

ಕಟ್ಟಡ ಮಾಲೀಕರು ತೆರಿಗೆ ತಪ್ಪಿಸಿಕೊಳ್ಳುವ ಸಂದೇಹ ಬಂದರೆ ಬಿಬಿಎಂಪಿ ಆಯುಕ್ತರು ಕೆಎಂಸಿ ಕಾಯ್ದೆಯ ಸೆಕ್ಷನ್‌ 108 (11)ರ ಪ್ರಕಾರ ಕಟ್ಟಡಗಳನ್ನು ಅನಿಶ್ಚಿತವಾಗಿ ಆಯ್ಕೆ ಮಾಡಿ ಪರಿಶೀಲನೆಗೆ ಒಳಪಡಿಸಬಹುದು. ಅದಕ್ಕೆ ಮಾಲೀಕರು ನಿರಾಕರಿಸಿದರೆ ಅವರಿಗೆ ಸಮಂಜಸವಾದ ಅವಕಾಶ ನೀಡಿ ತೆರಿಗೆಯನ್ನು ನಿರ್ಧರಿಸಬಹುದು. ಈ ರೀತಿ ಅನಿಶ್ಚಿತ ಆಯ್ಕೆ ಮೂಲಕ ಪರಿಶೀಲನೆ ಮಾಡಿದಾಗ ಆಸ್ತಿ ಮಾಲೀಕರು ಸಲ್ಲಿಸಿದ ತೆರಿಗೆ ವಿವರ ಪತ್ರಗಳು ಸರಿ ಇಲ್ಲದಿದ್ದರೆ, ಅಥವಾ ಕಡಿಮೆ ಮೊತ್ತವನ್ನು ನಮೂದಿಸಿದ್ದರೆ ತೆರಿಗೆಯನ್ನು ಮರು ನಿರ್ಧಾರ ಮಾಡಬಹುದು. ಪರಿಷ್ಕೃತ ತೆರಿಗೆಯ ಮೊತ್ತವು ಮಾಲೀಕ ಸಲ್ಲಿಸಿದ ತೆರಿಗೆ ವಿವರ ಪತ್ರದ ಮೊತ್ತಕ್ಕಿಂತ ಶೇ 5ಕ್ಕಿಂತ ಹೆಚ್ಚಿದ್ದರೆ ತಪ್ಪಿಸಿಕೊಂಡ ತೆರಿಗೆ ಮೊತ್ತಕ್ಕೆ ವಾರ್ಷಿಕ ಶೇ 24ರಷ್ಟು ಬಡ್ಡಿ ಸಮೇತ ವಸೂಲಿ ಮಾಡಬಹುದು.

‘ಈ ರೀತಿ ತೆರಿಗೆ ಪರಿಷ್ಕರಿಸುವುದಕ್ಕೆ ಕೆಎಂಸಿ ಕಾಯ್ದೆಯಲ್ಲಿ ಕೆಲವೊಂದು ನಿಬಂಧನೆಗಳೂ ಇವೆ. ಈ ಕಾಯ್ದೆಯ ಸೆಕ್ಷನ್‌ 108 (13)ರ ಪ್ರಕಾರ ಪರಿಶೀಲನೆ ಬಳಿಕ ನಿಗದಿಪಡಿಸಿದ ಮೊತ್ತಕ್ಕೆ ಆಕ್ಷೇಪ ಸಲ್ಲಿಸಲು ಮಾಲೀಕರಿಗೆ 30 ದಿನಗಳು ಕಾಲಾವಕಾಶ ನೀಡಬೇಕು. ಅವರು ಆಕ್ಷೇಪಗಳನ್ನು ಸಲ್ಲಿಸಿದರೆ ಅದನ್ನು ಪರಿಗಣಿಸಿ ತೆರಿಗೆಯ ಮೊತ್ತವನ್ನು ಪರಿಷ್ಕರಿಸಬಹುದು. ಆದರೆ, ಪರಿಷ್ಕರಣೆಯ ಆದೇಶವನ್ನು ಮಾಲೀಕರು ಆಕ್ಷೇಪ ಸಲ್ಲಿಸಿದ 60 ದಿನಗಳ ಒಳಗೆ ಸಲ್ಲಿಸಬೇಕು. ಸೆಕ್ಷನ್ 108 (14)ರ ಪ್ರಕಾರ ಕಟ್ಟಡ ಮಾಲೀಕರು ತೆರಿಗೆ ವಿವರ ಪತ್ರ ಸಲ್ಲಿಸಿದ ಮೂರು ವರ್ಷಗಳ ಬಳಿಕ ತೆರಿಗೆ ಮೊತ್ತವನ್ನು ಪರಿಷ್ಕರಣೆ ಮಾಡುವಂತಿಲ್ಲ‘ ಎಂದರು.

ವಲಯ ವರ್ಗೀಕರಣಕ್ಕೆ ಸಂಬಂಧಿಸಿದ ಮಾಹಿತಿ ಈಗಲೂ ಬಿಬಿಎಂ‍ಪಿ ವೆಬ್‌ಸೈಟ್‌ನಲ್ಲಿ ಲಭ್ಯವಿಲ್ಲ. ವಲಯಗಳ ಬದಲಾವಣೆ ಮಾಡಿದಾಗ ಸಾರ್ವಜನಿಕರಿಗೆ ಮಾಹಿತಿ ನೀಡುವುದು ಪಾಲಿಕೆಯ ಕರ್ತವ್ಯವಲ್ಲವೇ. ಮಾಹಿತಿಯೇ ನೀಡದಿದ್ದರೆ ಜನರಿಗೆ ತಿಳಿಯುವುದಾದರೂ ಹೇಗೆ’ ಎಂದು ಅವರು ಪ್ರಶ್ನಿಸಿದರು.

‘ನಷ್ಟವನ್ನು ತಪ್ಪಿತಸ್ಥ ಅಧಿಕಾರಿಗಳಿಂದ ವಸೂಲಿ ಮಾಡಿ’

‘ಆಸ್ತಿ ತೆರಿಗೆಯನ್ನು ವಲಯ ವರ್ಗೀಕರಣಕ್ಕೆ ಅನುಗುಣವಾಗಿ ವಸೂಲಿ ಮಾಡದೇ ಇರುವುದು ಅಧಿಕಾರಿಗಳ ಲೋಪ. ತೆರಿಗೆ ವಿವರ ಸಲ್ಲಿಸಿದ ತಕ್ಷಣವೇ ವಲಯ ವರ್ಗೀಕರಣ ಸರಿ ಇದೆಯೇ ಎಂದು ಪರಿಶೀಲಿಸುತ್ತಿದ್ದರೆ ಇಂತಹ ಲೋಪಕ್ಕೆ ಅವಕಾಶವೇ ಇರುತ್ತಿರಲಿಲ್ಲ. ಇದರಿಂದ ಬಿಬಿಎಂಪಿಗೆ ನಷ್ಟವಾಗಿರುವುದು ನಿಜ. ಈ ನಷ್ಟವನ್ನು ಅಧಿಕಾರಿಗಳಿಂದಲೇ ವಸೂಲಿ ಮಾಡಬೇಕು. ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತು ಮಾಡಿ, ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು’ ಎಂದು ಪಿ.ಆರ್‌. ರಮೇಶ್ ಒತ್ತಾಯಿಸಿದರು.

-0-
‘ವಸೂಲಿಗೆ ಮುಂದಾದರೆ ಕಾನೂನು ಸಮರ’

‘ಕಾನೂನು ಮೀರಿ ಕಟ್ಟಡ ಮಾಲೀಕರಿಂದಲೇ ತೆರಿಗೆ ವ್ಯತ್ಯಾಸದ ಮೊತ್ತವನ್ನು ವಸೂಲಿ ಮಾಡಲು ಮುಂದಾದರೆ ಬಿಬಿಎಂಪಿ ವಿರುದ್ಧ ಕಾನೂನು ಸಮರ ನಡೆಸುವುದು ಅನಿವಾರ್ಯ. ಈಗಾಗಲೇ ಜಾರಿ ಮಾಡಿರುವ ನೋಟಿಸ್‌ಗಳನ್ನು ಪಾಲಿಕೆ ಹಿಂಪಡೆಯಬೇಕು. ಅದನ್ನು ಬಿಟ್ಟು ಬಲವಂತದ ವಸೂಲಿ ಮುಂದುವರಿಸಿದರೆ ನ್ಯಾಯಾಲಯದ ಮೊರೆ ಹೋಗಲಿದ್ದೇವೆ’ ಎಂದು ಪಿ.ಆರ್‌.ರಮೇಶ್‌ ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT