ಬುಧವಾರ, ಫೆಬ್ರವರಿ 19, 2020
27 °C
ಜೀವನ ಭತ್ಯೆ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯ

ಅಂಗವಿಕಲರಿಂದ ಪ್ರತಿಭಟನಾ ರ‍್ಯಾಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಶೇ 74ರವರೆಗಿನ ಅಂಗವಿಕಲತೆ ಹೊಂದಿದವರಿಗೆ ಮಾಸಿಕ ₹3 ಸಾವಿರ, ಅದಕ್ಕಿಂತ ಹೆಚ್ಚಿನ ಅಂಗವಿಕಲತೆ ಹೊಂದಿದವರಿಗೆ ₹5 ಸಾವಿರ ಜೀವನ ಭತ್ಯೆ ನೀಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆ
ಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ವತಿಯಿಂದ ಬುಧವಾರ ಪ್ರತಿಭಟನಾ ರ‍್ಯಾಲಿ ನಡೆಯಿತು.

ಮೈಸೂರು ಬ್ಯಾಂಕ್‌ ಬಳಿ ಇರುವ ಕಾನೂನು ಕಾಲೇಜಿನಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ನಡೆದ ಪ್ರತಿಭಟನಾ ರ‍್ಯಾಲಿಯಲ್ಲಿ 20 ಜಿಲ್ಲೆಗಳಿಂದ ಬಂದ ಒಂದು ಸಾವಿರಕ್ಕೂ ಹೆಚ್ಚು ಅಂಗವಿಕಲರು ಮತ್ತು ಪೋಷಕರು ಭಾಗವಹಿಸಿದ್ದರು.

ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆದ ಸಮಾವೇಶದಲ್ಲಿ ಒಕ್ಕೂಟದ ಅಧ್ಯಕ್ಷ ಜಿ.ಎನ್‌. ನಾಗರಾಜ್‌ ಮಾತನಾಡಿ, ‘ಅಂಗವಿಕಲರಿಗೆ ಸರ್ಕಾರ ಸದ್ಯ ನೀಡುತ್ತಿರುವ ₹600 ಮತ್ತು ₹1,400 ಮಾಸಾಶನ ಯಾವುದಕ್ಕೂ ಸಾಕಾಗುವುದಿಲ್ಲ. ಇದನ್ನು ಕನಿಷ್ಠ ₹5 ಸಾವಿರಕ್ಕೆ ಏರಿಸಬೇಕು’ ಎಂದು ಆಗ್ರಹಿಸಿದರು.

‘ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಕಾಯ್ದೆ–2016 ರಚನೆಯಾಗಿ ಮೂರು ವರ್ಷ ಕಳೆದರೂ ಜಾರಿಗೆ ಬಂದಿಲ್ಲ. ಇದಕ್ಕೆ ಸರ್ಕಾರದ ನಿರ್ಲಕ್ಷ್ಯ ಮತ್ತು ಆಯ–ವ್ಯಯದಲ್ಲಿ ಹಣ ಮೀಸಲಿಡದೇ ಇರುವುದು ಕಾರಣ. ಕಾಯ್ದೆ ಜಾರಿಗೆ ತರುವ ವಿಷಯದಲ್ಲಿ ಸರ್ಕಾರ ಗಂಭೀರ ಕ್ರಮ ತೆಗೆದುಕೊಳ್ಳಬೇಕು’ ಎಂದೂ ಅವರು ಆಗ್ರಹಿಸಿದರು.

‘ಅಂಗವಿಕಲರ ಪುನರ್ವಸತಿಗೆ ಕನಿಷ್ಠ ವೇತನ ₹18 ಸಾವಿರ ನೀಡಬೇಕು. ತೀವ್ರ ಅಂಗವಿಕಲತೆ ಅನುಭವಿಸುತ್ತಿರುವವರನ್ನು ನೋಡಿಕೊಳ್ಳುತ್ತಿರುವ ಪೋಷಕರಿಗೆ ₹3 ಸಾವಿರ ನೀಡಬೇಕು. ಅಂಗವಿಕಲರು ಮದುವೆಯಾದರೆ ಕನಿಷ್ಠ ₹3 ಲಕ್ಷದವರೆಗೆ ಪ್ರೋತ್ಸಾಹ ಧನ ನೀಡಬೇಕು’ ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ರಂಗಪ್ಪ ದಾಸರ ಒತ್ತಾಯಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)