ಕೆ.ಆರ್.ಪುರ: ಜಾತಿನಿಂದನೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಮುನಿರತ್ನ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಿ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿಯ (ಅಂಬೇಡ್ಕರ್ ವಾದ) ಕಾರ್ಯಕರ್ತರು ವೈಟ್‌ಫೀಲ್ಡ್ ಉಪ ವಿಭಾಗದ ಡಿಸಿಪಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
ಮುನಿರತ್ನ ಅವರು ದಲಿತ ಸಮುದಾಯವನ್ನು ಅಪಮಾನ ಮಾಡಿದ್ದಾರೆ. ಅಲ್ಲದೆ ಮಹಿಳೆಯರ ಬಗ್ಗೆ ಅಸಭ್ಯವಾಗಿ ಮಾತನಾಡಿದ್ದಾರೆ. ಸಮಾಜ ತಲೆತಗ್ಗಿಸುವ ಘಟನೆಗೆ ಸಾಕ್ಷಿಯಾಗಿದೆ ಎಂದು ಸಮಿತಿಯ ಬೆಂಗಳೂರು ವಿಭಾಗೀಯ ಉಪ ಪ್ರಧಾನ ಸಂಚಾಲಕ ಮಣಿಪಾಲ್ ರಾಜಪ್ಪ ಆಕ್ರೋಶ ವ್ಯಕ್ತಪಡಿಸಿದರು.
ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಅಂದಾಜು 70 ಸಾವಿರ ದಲಿತ ಸಮುದಾಯದ ಮತದಾರರಿದ್ದು ಅವರ ಮತ ಪಡೆದು ಗೆದ್ದಿದ್ದಾರೆ. ಅಧಿಕಾರ ಸಿಕ್ಕ ತಕ್ಷಣ ದಲಿತರನ್ನು ಅತ್ಯಂತ ಕೀಳುಮಟ್ಟದಲ್ಲಿ ನಡೆಸಿಕೊಳ್ಳುತ್ತಿದ್ದಾರೆ ಎಂದು ದೂರಿದರು.
ಪ್ರಧಾನ ಸಂಚಾಲಕ ವಿ.ಗೋವಿಂದ ಕುಮಾರ್ ಅವರು ಮಾತನಾಡಿ, ಮುನಿರತ್ನ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಬೇಕು ಎಂದು ಸವಾಲು ಹಾಕಿದರು.