ಗುರುವಾರ , ಜನವರಿ 23, 2020
28 °C
ರಾಷ್ಟ್ರೀಯ ಪೌರತ್ವ ನೋಂದಣಿ, ಜನಸಂಖ್ಯಾ ನೋಂದಣಿಗೂ ವಿರೋಧ

ಸಿಎಎ ವಿರುದ್ಧ ಭಾರಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪೌರತ್ವ (ತಿದ್ದುಪಡಿ) ಕಾಯ್ದೆ, ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಹಾಗೂ ಜನಸಂಖ್ಯಾ ನೋಂದಣಿ (ಎನ್‌ಪಿಆರ್‌) ವಿರೋಧಿಸಿ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಯಿತು.

ಆಲ್ ಮಜೀದ್‌ ಸಮಿತಿ ನೇತೃತ್ವದಲ್ಲಿ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಬೆಂಬಲದೊಂದಿಗೆ ಏರ್ಪಡಿಸಿದ್ದ ‘ಭಾರತ ಉಳಿಸಿ, ಸಂವಿಧಾನ ರಕ್ಷಿಸಿ’ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸಾವಿರಾರು ಜನರು, ಸಿಎಆರ್‌, ಎನ್‌ಆರ್‌ಸಿ, ಎನ್‌ಪಿಆರ್‌ ವಿರುದ್ಧದ ಘೋಷಣೆಗಳನ್ನು ಕೂಗಿದರು.

‘ದೇಶದ ಜಾತ್ಯತೀತ ಮೌಲ್ಯಗಳನ್ನು ಬುಡಮೇಲು ಮಾಡುವ ಕುತಂತ್ರದಿಂದ ಕೇಂದ್ರ ಸರ್ಕಾರ  ಪೌರತ್ವ (ತಿದ್ದುಪಡಿ) ಕಾಯ್ದೆ ಜಾರಿಗೆ ತಂದಿರುವುದು ಸ್ಪಷ್ಟವಾಗುತ್ತದೆ. ಪಾಕಿಸ್ತಾನ, ಅಫ್ಗಾನಿಸ್ತಾನ ಮತ್ತು ಬಾಂಗ್ಲಾದ ಮುಸ್ಲಿಮೇತರರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಇವುಗಳನ್ನು ತರಲಾಗುತ್ತಿದೆ’ ಎಂದು ಪ್ರತಿಭಟನಕಾರರು ದೂರಿದರು.

‘ನಮ್ಮದು ರಾಜ್ಯಾಂಗ ಆಧಾರದ ಮೇಲೆ ರಚಿಸಿದ ದೇಶವಾಗಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ಎಲ್ಲ ಜಾತಿ, ವರ್ಗದ ಜನ ಪ್ರಾಣ ಕೊಟ್ಟಿದ್ದಾರೆ. ಪೌರತ್ವ ನೋಂದಣಿಯ ನೆಪದಲ್ಲಿ ಸಮಾಜವನ್ನು ಒಡೆಯುವುದು ಬೇಡ’ ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌. ದೊರೆಸ್ವಾಮಿ ಆಗ್ರಹಿಸಿದರು.

‘ಸಿಎಎ ಮತ್ತು ಎನ್‌ಆರ್‌ಸಿಯಿಂದ ತೊಂದರೆ ಇಲ್ಲ ಎನ್ನುವ ಪ್ರಧಾನಿ ನರೇಂದ್ರ ಮೋದಿ, ತಮ್ಮ ತಾಯಿಯ ಬಳಿ ಪೌರತ್ವ ನೋಂದಣಿಗೆ ಅಗತ್ಯವಿರುವ ದಾಖಲೆ ಇದೆಯೇ ಎಂಬುದನ್ನು ಮೊದಲು ಬಹಿರಂಗಪಡಿಸಲಿ’ ಎಂದು ಶಾಸಕ ಜಮೀರ್ ಅಹಮದ್ ಖಾನ್ ಸವಾಲು ಹಾಕಿದರು.

ಪಾಕಿಸ್ತಾನದಲ್ಲಿ ನೂರು ವರ್ಷ ಜೀವಿಸುವ ಬದಲು, ಜಾತ್ಯತೀತವಾದ ಭಾರತದಲ್ಲಿ ಒಂದು ದಿನ ಜೀವಿಸಿದರೆ ಸಾಕು ಎನ್ನುವ ಭಾವನೆ ನಮ್ಮಲಿದೆ. ಆದರೆ, ಮೋದಿ, ಗೃಹ ಸಚಿವ ಅಮಿತ್ ಶಾ ಅವರು ಈ ಭಾವನೆಗಳಿಗೆ ಹುಳಿ ಹಿಂಡುತ್ತಿದ್ದಾರೆ’ ಎಂದು ಗೋರಿಪಾಳ್ಯದ ಫಾರೂಖಿಯಾ ಮಸೀದಿಯ ಮೌಲಾನ ಪಿ.ಎಂ.ಮುಜಮಿಲ್‌ ನುಡಿದರು.

ಪ್ರತಿಭಟನೆ ಹಿನ್ನೆಲೆಯಲ್ಲಿ ಮೈದಾನದ ಸುತ್ತಮುತ್ತ ವ್ಯಾಪಕ ಬಂದೋಬಸ್ತ್‌ ಏರ್ಪಡಿಸಲಾಗಿತ್ತು. ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು. ಯಾವುದೇ ಅಹಿತಕರ ಘಟನೆಗಳಿಲ್ಲದೆ ಸಭೆ ಶಾಂತಿಯುತವಾಗಿ ಮುಕ್ತಾಯವಾಯಿತು. ಇದಕ್ಕೂ ಮೊದಲು ಮೆರವಣಿಗೆ ನಡೆಸಲಾಯಿತು.

ಮೈಸೂರು ರಸ್ತೆ ಸೇರಿದಂತೆ ಸಮಾವೇಶ ನಡೆಯುತ್ತಿದ್ದ ಮೈದಾನದ ಸಮೀಪದ ಎಲ್ಲ ರಸ್ತೆಗಳಲ್ಲೂ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಚಾಲಕರು ಮುಂದೆ ಸಾಗಲು ಹರಸಾಹಸ ಪಡುತ್ತಿದ್ದುದು ಕಂಡುಬಂತು.

ಮೊಳಗಿದ ರಾಷ್ಟ್ರಗೀತೆ...
ಸಭೆ ಆರಂಭಿಸುವ ಮೊದಲು ಪ್ರತಿಭಟನಾಕಾರರು ರಾಷ್ಟ್ರಗೀತೆ ಹಾಡಿದರು. ಮೆರವಣಿಗೆ ಹಾಗೂ ಬಹಿರಂಗ ಸಭೆಯಲ್ಲಿ ತ್ರಿವರ್ಣ ಧ್ವಜಗಳು ಹಾರಾಡಿದವು. ಅನೇಕರು ಭುಜದಲ್ಲಿ ಮತ್ತು ತೋಳಿನಲ್ಲಿ ಕಪ್ಪುಪಟ್ಟಿ ಕಟ್ಟಿಕೊಂಡಿದ್ದರು. 

*
ನಾನು ನಾಲ್ಕು ಸಲ ಶಾಸಕನಾಗಿದ್ದೇನೆ. ನನ್ನದೇ ದಾಖಲೆ ಹೊಂದಿಸಲು ನಾಲ್ಕು ತಿಂಗಳು ಬೇಕಾಯಿತು. ಇನ್ನು ಸಾಮಾನ್ಯ ಜನ ಹೇಗೆ ಜೋಡಿಸಬೇಕು?
-ಜಮೀರ್‌ ಅಹಮದ್‌, ಕಾಂಗ್ರೆಸ್‌ ಶಾಸಕ


ಟೌನ್‌ಹಾಲ್‌ ಮುಂದೆ ನಡೆದ ಪ್ರತಿಭಟನೆಯಲ್ಲಿ ಭಿತ್ತಿಪತ್ರ ಹಿಡಿದ ಯುವತಿ 

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು