ಬುಧವಾರ, ಮೇ 25, 2022
29 °C

ವೇಮನ ಜಯಂತಿ ಕಾರ್ಯಕ್ರಮ ಮೊಟಕುಗೊಳಿಸಿದ್ದಕ್ಕೆ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೆ.ಆರ್.ಪುರ: ಪೂರ್ವ ತಾಲ್ಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ ಮಹಾಯೋಗಿ ವೇಮನ 610 ನೇ ಜಯಂತೋತ್ಸವದಲ್ಲಿ ವಿಶೇಷ ತಹಶಿಲ್ದಾರ್ ನಾಗಪ್ರಶಾಂತ್ ಅವರು ರೆಡ್ಡಿ ಸಮುದಾಯದ ಜನಪ್ರತಿನಿಧಿಗಳಿಗೆ ವೇದಿಕೆಯಲ್ಲಿ ಮಾತನಾಡಲು ಅವಕಾಶ ನೀಡಿಲ್ಲ ಎಂದು ಆರೋಪಿಸಿ ಬಿಎಂಟಿಸಿ ಅಧ್ಯಕ್ಷ ಎನ್‌.ಎಸ್‌. ನಂದೀಶ್ ರೆಡ್ಡಿ ನೇತೃತ್ವದಲ್ಲಿ ರೆಡ್ಡಿ ಸಮುದಾಯದ ಮುಖಂಡರು ತಾಲ್ಲೂಕು ಕಚೇರಿ ಮುಂದೆ ಬುಧವಾರ ಪ್ರತಿಭಟನೆ ನಡೆಸಿದರು.

ಕಾರ್ಯಕ್ರಮ ಬೆಳಿಗ್ಗೆ 11 ಗಂಟೆಗೆ ಆರಂಭವಾಗಬೇಕಿತ್ತು. ಸಚಿವ ಬೈರತಿ ಬಸವರಾಜ ಅವರು ತಾಲ್ಲೂಕು ಆಸ್ಪತ್ರೆ ಅವ್ಯವಸ್ಥೆ ಕುರಿತು ಪರಿಶೀಲನೆಗೆ ತೆರಳಿದ್ದರಿಂದ ಹದಿನೈದು ನಿಮಿಷ ತಡವಾಗಿತ್ತು. ಸಚಿವರ ಬರುವಿಕೆಗಾಗಿ ವಿಶೇಷ ತಹಶಿಲ್ದಾರ್ ನಾಗಪ್ರಶಾಂತ್  ದಾರಿ ಕಾಯುತ್ತ ನಿಂತಿದ್ದರು. ಶಾಸಕ ಅರವಿಂದ ಲಿಂಬಾವಳಿ, ರಾಜ್ಯಸಭಾ ಸದಸ್ಯ ಕೆ.ಸಿ.ರಾಮಮೂರ್ತಿ, ಸಂಸದ ಪಿ.ಸಿ.ಮೋಹನ್, ನಂದೀಶ್ ರೆಡ್ಡಿ, ಪದ್ಮನಾಭ ರೆಡ್ಡಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಬೈರತಿ ಬಸವರಾಜ ತರಾತುರಿಯಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಭಾಷಣ ಮಾಡಿ ನಿರ್ಗಮಿಸುತ್ತಿದ್ದಂತೆ ವಿಶೇಷ ತಹಶಿಲ್ದಾರ್ ಕಾರ್ಯಕ್ರಮ ಮೊಟಕುಗೊಳಿಸಿದರು. ಇದರಿಂದ ಕೆರಳಿದ ನಂದೀಶ್ ರೆಡ್ಡಿ ಅವರು, ‘ಕೆ.ಸಿ.ರಾಮಮೂರ್ತಿ, ಪಿ.ಸಿ.ಮೋಹನ್, ಅವರಿಗೆ ನಾಗಪ್ರಶಾಂತ್ ಮಾತನಾಡಲು ಅವಕಾಶ ನೀಡಿಲ್ಲ. ಅವರ ತಲೆದಂಡವಾಗಬೇಕು’ ಎಂದು ಪಟ್ಟು ಹಿಡಿದು ಧರಣಿ ನಡೆಸಿದರು.

ನಂತರ ಮಾತನಾಡಿದ ನಂದೀಶ್ ರೆಡ್ಡಿ, ‘ತಾಲ್ಲೂಕು ಆಡಳಿತ ವತಿಯಿಂದ ಬೇರೆ ಬೇರೆ ಸಮುದಾಯದ ಜಯಂತಿಗಳನ್ನು ಅದ್ದೂರಿಯಾಗಿ ಆಚರಿಸಿ ರೆಡ್ಡಿ ಸಮುದಾಯದ ವೇಮನ ಜಯಂತಿಯನ್ನು ಮಾತ್ರ ಅಲ್ಪಾವಧಿಯಲ್ಲಿ ಕಾರ್ಯಕ್ರಮ ಮೊಟಕುಗೊಳಿಸಲಾಗಿದೆ. ಪೂರ್ವ ತಾಲ್ಲೂಕಿನಲ್ಲಿ ರೆಡ್ಡಿ ಸಮುದಾಯದವರು ಹೆಚ್ಚಿನ ಪ್ರಮಾಣದಲ್ಲಿದ್ದಾರೆ. ನಮ್ಮ ಹಲವು ಬೇಡಿಕೆಗಳು ಇದ್ದು ನಮ್ಮ ಸಮುದಾಯದ ಪ್ರತಿನಿಧಿಗಳು ಮಾತನಾಡಲು ಅವಕಾಶ ನೀಡದೆ ಒಂದೇ ವಾಕ್ಯದಲ್ಲಿ ಕಾರ್ಯಕ್ರಮ ಮುಗಿಸಿ ವೇಮನನಿಗೆ ಅವಮಾನ ಮಾಡಲಾಗಿದೆ’ ಎಂದು ದೂರಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು