ಸೋಮವಾರ, ಏಪ್ರಿಲ್ 6, 2020
19 °C
₹8,842 ಕೋಟಿ ಪರಿಹಾರ ಪ್ರಸ್ತಾವ ಸಿದ್ಧಪಡಿಸಿದ ಬಿಡಿಎ l ₹ 15000 ಕೋಟಿ ಪರಿಹಾರಕ್ಕೆ ರೈತರ ಒತ್ತಾಯ

ಪಿಆರ್‌ಆರ್‌: ಭೂಪರಿಹಾರ ಹಗ್ಗ ಜಗ್ಗಾಟ

ಪ್ರವೀಣ್‌ ಕುಮಾರ್ ಪಿ.ವಿ. Updated:

ಅಕ್ಷರ ಗಾತ್ರ : | |

ಬೆಂಗಳೂರು: ಪೆರಿಫೆರಲ್‌ ವರ್ತುಲ ರಸ್ತೆಗೆ (‍ಪಿಆರ್‌ಆರ್‌) ರೈತರಿಂದ ಸ್ವಾಧೀನಪಡಿಸಿಕೊಳ್ಳುವ ಜಾಗಕ್ಕೆ ಪರಿಹಾರ ನಿಗದಿಪಡಿಸುವ ವಿಚಾರ ಸದ್ಯಕ್ಕೆ ಬಗೆಹರಿಯುವ ಲಕ್ಷಣ ಕಾಣಿಸುತ್ತಿಲ್ಲ. ಈಗಿನ ಮಾರ್ಗಸೂಚಿ ದರಕ್ಕಿಂತಲೂ ಹೆಚ್ಚು ಪರಿಹಾರ ನೀಡುವಂತೆ ರೈತರು ಪಟ್ಟು ಹಿಡಿದಿದ್ದರೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಇದಕ್ಕೆ ಒಪ್ಪುತ್ತಿಲ್ಲ.

ಈ ಬಿಕ್ಕಟ್ಟು ಬಗೆಹರಿಸುವ ಬಗ್ಗೆ ಬಿಡಿಎ ಅಧಿಕಾರಿಗಳು ನಗರಾಭಿವೃದ್ಧಿ ಇಲಾಖೆ ಉನ್ನತ ಅಧಿಕಾರಿಗಳ ಜೊತೆ ಮಂಗಳವಾರ ಮತ್ತೆ ಸಭೆ ನಡೆಸಿದರು.

ಈ ಯೋಜನೆಗೆ ಸ್ವಾಧೀನಪಡಿಸಿಕೊಳ್ಳುವ ಜಮೀನಿಗೆ 2017ರ–18ನೇ ಸಾಲಿನ ಮಾರ್ಗಸೂಚಿ ದರ ಹಾಗೂ ಅದಕ್ಕೆ ಶೇ 100ರಷ್ಟು ಸೊಲೇಷಿಯಂ ಸೇರಿಸಿ ಪರಿಹಾರ ನಿಗದಿಪಡಿಸಲು 2018ರ ಡಿ. 15ರಂದು ನಡೆದಿದ್ದ ಬಿಡಿಎ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಈ ಮೊತ್ತಕ್ಕೆ ನಂತರದ ಪ್ರತಿ ವರ್ಷವೂ ಶೇ 12ರಷ್ಟು ಹೆಚ್ಚುವರಿ ಮಾರುಕಟ್ಟೆ ದರದಂತೆ ಲೆಕ್ಕ ಹಾಕಿ ಪರಿಹಾರ ನೀಡಲು ತೀರ್ಮಾನಿಸಲಾಗಿತ್ತು. ‘ಭೂಸ್ವಾಧೀನಕ್ಕೆ ಹೊರಡಿಸಿರುವ ಪ್ರಾಥಮಿಕ ಅಧಿಸೂಚನೆ ಪ್ರಕಾರ ಒಟ್ಟು ₹ 2,110 ಕೋಟಿ ಪರಿಹಾರವನ್ನು ಮಾತ್ರ ನೀಡಬೇಕಾಗುತ್ತದೆ. ಈಗಿನ ಮಾರುಕಟ್ಟೆ ದರದ ಪ್ರಕಾರ ಪರಿಹಾರ ನೀಡಿದರೆ ಗರಿಷ್ಠ ₹ 8,842 ಕೋಟಿ ಬೇಕಾಗಬಹುದು ಎಂದು ಅಂದಾಜು ಮಾಡಿದ್ದೇವೆ. ಈ ಪ್ರಸ್ತಾಪಕ್ಕೆ ಸರ್ಕಾರ ಒಪ್ಪಿದರೆ ಮಾತ್ರ ಇಷ್ಟು ಪರಿಹಾರ ನೀಡಬಹುದು’ ಎಂದು ಬಿಡಿಎ ಅಧಿಕಾರಿಯೊಬ್ಬರು ತಿಳಿಸಿದರು.

ಪರಿಹಾರ ಸೂತ್ರಕ್ಕೆ ಒಪ್ಪದ ರೈತರು: ಬಿಡಿಎ ನಿಗದಿಪಡಿಸಿರುವಷ್ಟು ಪರಿಹಾರ ಪಡೆಯುವುದಕ್ಕೆ ರೈತರು ಸುತಾರಾಂ ಒಪ್ಪುತ್ತಿಲ್ಲ.

‘ಪಿಆರ್‌ಆರ್‌ ಯೋಜನೆ ಜಾರಿಯಾಗುವ ಪ್ರದೇಶಗಳಲ್ಲಿ ಜಮೀನುಗಳ ಮಾರ್ಗಸೂಚಿ ದರವನ್ನು ಹೆಚ್ಚಿಸಬಾರದು ಎಂದು 2014ರಲ್ಲಿ ಸರ್ಕಾರ ಆದೇಶ ಮಾಡಿತು. ಆ ಬಳಿಕ ನಗರದ ಬೇರೆ ಪ್ರದೇಶಗಳ ಜಮೀನಿನ ದರ ಅನೇಕ ಪಟ್ಟು ಹೆಚ್ಚಳವಾಗಿದ್ದರೂ, ಪಿಆರ್‌ಆರ್‌ ವ್ಯಾಪ್ತಿಯ ಜಮೀನುಗಳ ದರ 6 ವರ್ಷಗಳ ಹಿಂದೆ ಇದ್ದಷ್ಟೇ ಇದೆ. ಈಗ ಸರ್ಕಾರ ಮಾರ್ಗಸೂಚಿ ದರದ ಪ್ರಕಾರ ಪರಿಹಾರ ನೀಡಿದರೂ ರೈತರಿಗೆ ಅನ್ಯಾಯವಾಗುತ್ತದೆ’ ಎಂದು ಕರ್ನಾಟಕ ರಾಜ್ಯ ರೈತರ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ವಿವರಿಸಿದರು.

‘2014ರ ಬಳಿಕ ಆಗಿರುವ ಜಮೀನಿನ ಮಾರ್ಗಸೂಚಿ ದರ ಹೆಚ್ಚಳದ ಪ್ರಮಾಣವನ್ನು ಪರಿಗಣಿಸಿದರೆ, ಸರ್ಕಾರ ರೈತರಿಂದ ಸ್ವಾಧೀನಪಡಿಸಿಕೊಳ್ಳುವ ಜಮೀನಿಗೆ ಪರಿಹಾರ ನೀಡಲು ಒಟ್ಟು ₹ 15,436 ಕೋಟಿ ವ್ಯಯಿಸಬೇಕಾಗುತ್ತದೆ. ಇಷ್ಟು ಮೊತ್ತ ಭರಿಸಲು ಸಾಧ್ಯವಿಲ್ಲದಿದ್ದರೆ ಸರ್ಕಾರ ಪ್ರಾಥಮಿಕ ಅಧಿಸೂಚನೆಯನ್ನು ಹಿಂದಕ್ಕೆ ಪಡೆಯಲಿ’ ಎಂದು ಅವರು ಒತ್ತಾಯಿಸಿದರು.

‘2007ರಲ್ಲಿ ಈ ಯೋಜನೆಗೆ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ ಬಳಿಕ ತಮ್ಮ ಜಮೀನನ್ನು ಅಭಿವೃದ್ಧಿಪಡಿಸಲಾಗದೆ ರೈತರು ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಇದನ್ನು ಭರಿಸುವವರು ಯಾರು’ ಎಂದು ಪ್ರಶ್ನಿಸಿದರು.

ಪರಿಹಾರದ ವಿವರ

ಪಿಆರ್‌ಆರ್‌ಗೆ ಸ್ವಾಧೀನ ಪಡಿಸಿಕೊಳ್ಳುವ ಜಮೀನಿಗೆ 2013ರ ಭೂಸ್ವಾಧೀನ ಕಾಯ್ದೆಯ ಪ್ರಕಾರ ನಗದು ಅಥವಾ ಟಿಡಿಆರ್‌ ರೂಪದಲ್ಲಿ ಪರಿಹಾರ ನೀಡುವಂತೆ ಸರ್ಕಾರ 2019ರ ಅ. 3ರಂದು ಆದೇಶ ಮಾಡಿತ್ತು. ಅದರ ಪ್ರಮುಖ ಅಂಶಗಳು ಇಂತಿವೆ

- 2 ಎಕರೆವರೆಗಿನ ಜಮೀನಿಗೆ ನಗದು ಪರಿಹಾರ

- 2 ಎಕರೆಗಿಂತ ಹೆಚ್ಚಿನ ಜಮೀನಿಗೆ ಶೇ 50ರಷ್ಟು ನಗದು ಮತ್ತು ಶೇ 50ರಷ್ಟು ಟಿಡಿಆರ್‌ ಅಥವಾ ಪೂರ್ಣ ಪ್ರಮಾಣದಲ್ಲಿ ಟಿಡಿಆರ್‌

-ಪಿಆರ್‌ಆರ್‌ಗೆ ಅಗತ್ಯವಿರುವ ಸರ್ಕಾರಿ ಜಮೀನುಗಳನ್ನು ಉಚಿತವಾಗಿ ನೀಡುವುದು

-ನಿಗಮ ಮಂಡಳಿಗಳ ಜಮೀನುಗಳಿಗೆ ಸರ್ಕಾರಿ ಮಾರ್ಗಸೂಚಿ ದರಕ್ಕೆ ಅನುಗುಣವಾಗಿ ಪರಿಹಾರ ನೀಡುವುದು

₹ 11 ಸಾವಿರ ಕೋಟಿಗೆ ಅನುಮೋದನೆ

ಪಿಆರ್‌ಆರ್‌ ಯೋಜನೆಗೆ ಒಟ್ಟು 11 ಸಾವಿರ ಕೋಟಿ ಅನುದಾನ ನೀಡಲು ಆರ್ಥಿಕ ಇಲಾಖೆಯು 2018–19ನೇ ಸಾಲಿನಲ್ಲಿ ಒಪ್ಪಿಗೆ ನೀಡಿತ್ತು. ಈ ಅನುದಾನವನ್ನು 2021–22ನೇ ಸಾಲಿನವರೆಗೆ ಹಂತ ಹಂತವಾಗಿ ಬಿಡುಗಡೆ ಮಾಡಲು ಹಾಗೂ ಬಾಕಿ ಮೊತ್ತಕ್ಕೆ 2022– 23ರಿಂದ 2032–33ರ ನಡುವೆ ಮೂಲಸೌಲಭ್ಯ ನಿಧಿಯಿಂದ ಸಾಲ ಒದಗಿಸಲು ಆರ್ಥಿಕ ಇಲಾಖೆ ಸಲಹೆ ನೀಡಿತ್ತು. 

ಯಾವ ವರ್ಷ ಎಷ್ಟು ಕೋಟಿ?

ವರ್ಷ; ಅನುದಾನ (₹ ಕೋಟಿಗಳಲ್ಲಿ)

2019–20; ₹ 2 ಸಾವಿರ

2020–21; ₹ 3,500

2021–22; ₹ 3,500 

 –0–

ಅಂಕಿ ಅಂಶ
66 ಕಿ.ಮೀ, ಪಿಆರ್‌ಆರ್‌ ಉದ್ದ

1810 ಎಕರೆ 18.5 ಗುಂಟೆ, ಪಿಆರ್‌ಆರ್‌ ಯೋಜನೆಗೆ ಅಗತ್ಯವಿರುವ ಜಮೀನು

₹ 3500 ಕೋಟಿ, ಪಿಆರ್‌ಆರ್‌ ಕಾಮಗಾರಿಗೆ ತಗಲುವ ವೆಚ್ಚ

ಪ್ರತಿಭಟನೆ ಹಿಂಪಡೆದ ಬಳಿಕ ಸರ್ಕಾರ ತನ್ನ ಮಾತನ್ನು ಮರೆತುಬಿಟ್ಟಿದೆ. ಹಾಗಾಗಿ ಇದೇ 28ರಿಂದ ಮತ್ತೆ ಪ್ರತಿಭಟನೆ ಮುಂದುವರಿಸುತ್ತೇವೆ.
ಕೋಡಿಹಳ್ಳಿ ಚಂದ್ರಶೇಖರ್‌, ರಾಜ್ಯ ರೈತ ಸಂಘದ ಅಧ್ಯಕ್ಷ

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು