ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಆರ್‌ಆರ್‌: ಭೂಸ್ವಾಧೀನ ಶೀಘ್ರ

ಪರಿಹಾರ ನಿಗದಿಪಡಿಸಲು ಮುಖ್ಯಮಂತ್ರಿ ಜತೆ ಸಮಾಲೋಚನೆ: ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ ಭರವಸೆ
Last Updated 28 ಫೆಬ್ರುವರಿ 2020, 20:19 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಪೆರಿಫೆರಲ್‌ ಹೊರ ವರ್ತುಲ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸುವುದು ಹಾಗೂ ಪರಿಹಾರ ನೀಡುವ ಬಗ್ಗೆ ಒಂದು ವಾರದಲ್ಲಿ ಸ್ಪಷ್ಟ ನಿರ್ಧಾರ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದರು.

ವಿಕಾಸಸೌಧದಲ್ಲಿ ಶುಕ್ರವಾರ ರೈತ ಸಂಘಟನೆ ಮುಖಂಡರ ಜತೆ ಮಾತುಕತೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ‘ಶೀಘ್ರವೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜತೆ ಮಾತುಕತೆ ನಡೆಸಿ, ಪರಿಹಾರ ನಿಗದಿಪಡಿಸಲಾಗುವುದು. ವರ್ತುಲ ರಸ್ತೆ ನಿರ್ಮಾಣ ಮಾಡಬೇಕೇ? ಬೇಡವೆ? ಎಂಬ ಬಗ್ಗೆಯೂ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ’ ಎಂದರು.

ಎರಡು ಎಕರೆಗಿಂತ ಹೆಚ್ಚು ಜಮೀನು ಕಳೆದುಕೊಂಡರೆ ಪರಿಹಾರ ಮೊತ್ತದಲ್ಲಿ ಅರ್ಧದಷ್ಟು ಹಣ ನೀಡಿ, ಉಳಿದದ್ದಕ್ಕೆ ಟಿಡಿಆರ್ ಕೊಡುವುದು, ಎರಡು ಎಕರೆಗಿಂತ ಕಡಿಮೆ ಭೂಮಿ ಕಳೆದುಕೊಂಡರೆ ಹಣದ ರೂಪದಲ್ಲಿ ಪರಿಹಾರ ನೀಡುವ ಬಗ್ಗೆ ಚರ್ಚಿಸಲಾಗಿದೆ. ಹೊರ ವರ್ತುಲ ರಸ್ತೆ ಹಾದುಹೋಗುವ ಮಾರ್ಗದಲ್ಲಿ 2014ರಿಂದಲೂ ಮಾರ್ಗಸೂಚಿ ಬೆಲೆ
ಯನ್ನು ಹೆಚ್ಚಳ ಮಾಡಿಲ್ಲ. ಮಾರ್ಗಸೂಚಿ ಬೆಲೆ ಹೆಚ್ಚಳಮಾಡಿ ಈಗಿನ ಮಾರುಕಟ್ಟೆ ದರದಲ್ಲಿ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯಿಸುತ್ತಿದ್ದಾರೆ. ಹಾಗಾಗಿ ಎಲ್ಲ ಆಯಾಮಗಳಿಂದಲೂ ಚರ್ಚಿಸಲಾಗುವುದು ಎಂದು ವಿವರಿಸಿದರು.

ವರ್ತುಲ ರಸ್ತೆ ನಿರ್ಮಾಣಕ್ಕೆ ಬೇಕಾದ ಭೂಮಿಯನ್ನು ಗುರುತಿಸಿ, ನೋಟಿಫೈ ಮಾಡಿ 15 ವರ್ಷಗಳು ಕಳೆದಿವೆ. 2013ರಲ್ಲಿ ಮಾಡಿಕೊಂಡ ಒಪ್ಪಂದದ ಬೆಲೆಗೆ ಈಗ ಭೂಮಿ ಕೊಡಲು ರೈತರು ಒಪ್ಪುತ್ತಿಲ್ಲ. ಹೆಚ್ಚಿನ ಪರಿಹಾರ ಕೇಳುತ್ತಿದ್ದು, ಬದಲಾದ ಪರಿಸ್ಥಿತಿಯಲ್ಲಿ ಬೇಡಿಕೆಗಳೂ ಬದಲಾಗಿವೆ. ರೈತ ಮುಖಂಡರು, ಅಧಿಕಾರಿಗಳ ಜತೆಗೆ ಹಲವು ಸುತ್ತಿನ ಮಾತುಕತೆ ನಡೆಸಲಾಗಿದೆ ಎಂದು ಹೇಳಿದರು.

‘ಈ ಯೋಜನೆಗೆ ಒಟ್ಟು ₹15,436 ಕೋಟಿ ನಿಗದಿಪಡಿಸುವಂತೆ ರೈತರು ಕೇಳುತ್ತಿದ್ದಾರೆ.ಆದರೆ ₹4,500 ಕೋಟಿ ವೆಚ್ಚದಲ್ಲಿ ಯೋಜನೆ ಮುಗಿಯಬೇಕು ಎಂಬುದು ಸರ್ಕಾರದ ಲೆಕ್ಕಾಚಾರ. ಬದಲಾದ ಪರಿಸ್ಥಿತಿಯಲ್ಲಿ ₹8 ಸಾವಿರ ಕೋಟಿಯಿಂದ ₹10 ಸಾವಿರ ಕೋಟಿ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ’ ಎಂದು ಶಾಸಕ ಎಸ್.ಆರ್.ವಿಶ್ವನಾಥ್ ತಿಳಿಸಿದರು.

ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ರಾಕೇಶ್ ಸಿಂಗ್, ಬಿಡಿಎಸ್ ಆಯುಕ್ತ ಜಿ.ಎಸ್‌. ಪ್ರಕಾಶ್‌ ಸಭೆಯಲ್ಲಿ ಪಾಲ್ಗೊಂಡಿದ್ದರು.

1810 ಎಕರೆ ಭೂಸ್ವಾಧೀನ ಮಾಡಬೇಕಿದೆ

1600 ಎಕರೆ ಖಾಸಗಿ ಜಮೀನು ಸ್ವಾಧೀನ

500 ಎಕರೆಗೆ ಟಿಡಿಆರ್ ನೀಡುವುದು

ಮಾರುಕಟ್ಟೆ ದರಕ್ಕೆ ಬೇಡಿಕೆ

ಹೊರ ವರ್ತುಲ ರಸ್ತೆ ನಿರ್ಮಾಣಕ್ಕೆ ವಶಪಡಿಸಿಕೊಳ್ಳುವ ಜಮೀನಿಗೆ ಪ್ರಸ್ತುತ ಮಾರುಕಟ್ಟೆ ದರ ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಒತ್ತಾಯಿಸಿದರು.

ರಸ್ತೆ ನಿರ್ಮಿಸಲಿರುವ ಬಿಡಿಎ ಈಗ ಯೋಜನಾ ವೆಚ್ಚವನ್ನು ₹9 ಸಾವಿರ ಕೋಟಿಗೆ ನಿಗದಿಪಡಿಸಿದೆ. 2014ರಿಂದಲೂ ಈ ಭಾಗದಲ್ಲಿಮಾರ್ಗಸೂಚಿ ದರದಲ್ಲಿ ಹೆಚ್ಚಳ ಮಾಡಿಲ್ಲ. ಇದನ್ನು ಹೆಚ್ಚಳ ಮಾಡಿದರೆ ಯೋಜನಾ ಗಾತ್ರ 15,436 ಕೋಟಿಗೆ ಏರಿಕೆಯಾಗಲಿದೆ. ಸಮರ್ಪಕವಾಗಿ ಪರಿಹಾರ ನೀಡದಿದ್ದರೆ ರೈತರು ಹೋರಾಟಕ್ಕೆ ಇಳಿಯಲಿದ್ದಾರೆ ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT