ಗುರುವಾರ , ಏಪ್ರಿಲ್ 9, 2020
19 °C
ಜಾರಕಬಂಡೆ ಕಾವಲ್‌ನ 3.7 ಎಕರೆ ಜಾಗ ಬಳಕೆ

ಮೀಸಲು ಅರಣ್ಯ ಸೀಳಿಕೊಂಡು ಸಾಗಲಿದೆ ಪಿಆರ್‌ಆರ್‌

ಪ್ರವೀಣ್‌ ಕುಮಾರ್‌ ಪಿ.ವಿ. Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ನಿರ್ಮಿಸಲು ಉದ್ದೇಶಿಸಿರುವ ಪೆರಿಫೆರಲ್‌ ವರ್ತುಲ ರಸ್ತೆಯು (ಪಿಆರ್‌ಆರ್‌) ನಗರದ ಉತ್ತರ ಭಾಗದಲ್ಲಿರುವ ಜಾರಕಬಂಡೆ ಕಾವಲ್‌ ಮೀಸಲು ಅರಣ್ಯವನ್ನು ಸೀಳಿಕೊಂಡು ಸಾಗಲಿದೆ. ಪಿಆರ್‌ಆರ್‌ ಸಲುವಾಗಿ 1.5 ಹೆಕ್ಟೇರ್‌ ಮೀಸಲು ಅರಣ್ಯ ಬಳಕೆ ಆಗಲಿದೆ.

ಈ ಯೋಜನೆಯಿಂದ ಇಲ್ಲಿನ ಕುರುಚಲು ಅರಣ್ಯಕ್ಕೆ ಕುತ್ತುಂಟಾಗಬಹುದು. ಹಾಗಾಗಿ ಪಿಆರ್‌ಆರ್‌ ಹಾದು ಹೋಗುವ ಮಾರ್ಗದಲ್ಲಿ ಮಾರ್ಪಾಡು ಮಾಡಿ, ಮೀಸಲು ಅರಣ್ಯವನ್ನು ಉಳಿಸಿಕೊಳ್ಳಬೇಕು ಎಂದು ಪರಿಸರ ಕಾರ್ಯಕರ್ತರು ಒತ್ತಾಯಿಸಿದ್ದಾರೆ.

ಜಾರಕ ಬಂಡೆ ಕಾವಲ್‌ ಮೀಸಲು ಅರಣ್ಯದಲ್ಲಿ ಎರಡು ಬ್ಲಾಕ್‌ಗಳಿವೆ. ಎ– ಬ್ಲಾಕ್‌ ಜಾಲಹಳ್ಳಿ ಬಳಿ ಇದ್ದರೆ, ಬಿ– ಬ್ಲಾಕ್‌ ಆವಲಹಳ್ಳಿ ಅರಣ್ಯದ ಬಳಿ ಇದೆ. ಚಿಟ್ಟೆ ಉದ್ಯಾನವನ್ನು ಹೊಂದಿರುವ ಬಿ–ಬ್ಲಾಕ್‌ ಮೂಲಕ ಪಿಆರ್‌ಆರ್‌ ಹಾದುಹೋಗಲಿದೆ.

‘ಇಲ್ಲಿ ಕುರುಚಲು ಕಾಡು ಮಾತ್ರ ಇದೆ. ಪಿಆರ್‌ಆರ್‌ಗೆ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ ಬಳಿಕ ಬಿ–ಬ್ಲಾಕ್‌ನಲ್ಲಿ ನಾವು ಇದಕ್ಕೆಂದೇ 150 ಮೀಟರ್‌ ಜಾಗವನ್ನು ಬಿಟ್ಟಿದ್ದೇವೆ. 16 ವರ್ಷಗಳಿಂದ ಇಲ್ಲಿ ಯಾವುದೇ ಗಿಡ ಮರಗಳನ್ನು ಬೆಳೆಸಿಲ್ಲ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಅರಣ್ಯ ಇಲಾಖೆ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಮೀಸಲು ಅರಣ್ಯವನ್ನು ಮೂಲಸೌಕರ್ಯ ಅಭಿವೃದ್ಧಿ ಚಟುವಟಿಕೆಗೆ ಬಳಸುವುದಾದರೆ, 1980ರ ಅರಣ್ಯ ಸಂರಕ್ಷಣಾ ಕಾಯ್ದೆ ಪ್ರಕಾರ ಅರಣ್ಯ ಇಲಾಖೆಯ ಒಪ್ಪಿಗೆ ಬೇಕು.

‘ಪಿಆರ್‌ಆರ್‌ಗೆ ಮೀಸಲು ಅರಣ್ಯದ ಜಾಗ ನೀಡುವಂತೆ ಕೋರಿ ಸದ್ಯಕ್ಕಂತೂ ನಮಗೆ ಬಿಡಿಎಯಿಂದ ಯಾವುದೇ ಕೋರಿಕೆ ಬಂದಿಲ್ಲ. ಕೋರಿಕೆ ಬಂದ ಬಳಿಕ ಈ ಬಗ್ಗೆ ಪರಿಶೀಲಿಸುತ್ತೇವೆ’ ಎಂದು ಬೆಂಗಳೂರು ನಗರ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಸಿ.ಸಿದ್ದರಾಮಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

‘ಒಂದು ವೇಳೆ ಮೀಸಲು ಅರಣ್ಯದ ಜಾಗವನ್ನು ಈ ಯೋಜನೆಗೆ ಬಳಸುವುದಾದರೆ ಅಷ್ಟೇ ಪ್ರಮಾಣದ ಬೇರೆ ಜಾಗವನ್ನು ಬಿಡಿಎ ನೀಡಬೇಕಾಗುತ್ತದೆ. ಇಲ್ಲಿ ಎಷ್ಟು ಕಾಡು ನಾಶವಾಗುತ್ತದೆ, ಮೀಸಲು ಅರಣ್ಯದ ಜಾಗಕ್ಕೆ ಪ್ರತಿಯಾಗಿ ನೀಡುವ ಜಾಗದಲ್ಲಿ ಕಾಡು ಬೆಳೆಸಲು ಎಷ್ಟು ವೆಚ್ಚವಾಗುತ್ತದೆ ಎಂದು ನೋಡಿಕೊಂಡು ಒಪ್ಪಂದಕ್ಕೆ ಬರಬೇಕಾಗುತ್ತದೆ’ ಎಂದರು.

‘ಮೀಸಲು ಅರಣ್ಯ ಮುಟ್ಟದಿರಿ’
‘ನಗರದ ಆಸುಪಾಸಿನಲ್ಲಿ ಸ್ವಲ್ಪವಾದರೂ ಹಸಿರು ಉಳಿದಿದ್ದರೆ, ಅದು ಜಾರಕಬಂಡೆ ಕಾವಲ್‌, ತುರಹಳ್ಳಿ, ಬನ್ನೇರುಘಟ್ಟ, ಜಿಕೆವಿಕೆ ಮುಂತಾದ ಕಡೆಗಳಲ್ಲಿ ಮಾತ್ರ. ಮೀಸಲು ಅರಣ್ಯ ಪ್ರದೇಶಗಳನ್ನು ಬೇರೆ ಉದ್ದೇಶಕ್ಕೆ ಬಳಸಿದರೆ ನಗರದ ಹಸಿರು ಕವಚ ರಕ್ಷಣೆಯ ಕೊನೆಯ ಅವಕಾಶವನ್ನೂ ಕಳೆದುಕೊಂಡಂತಾಗಲಿದೆ’ ಎಂದು ನಗರ ಜಿಲ್ಲೆಯ ಗೌರವ ವನ್ಯಜೀವಿ ವಾರ್ಡನ್‌ ಪ್ರಸನ್ನ ಕುಮಾರ್‌ ಅಭಿಪ್ರಾಯಪಟ್ಟರು.

‘ಮೂಲಸೌಕರ್ಯ ಯೋಜನೆಗಳಿಗಾಗಿ ಬಿಟ್ಟುಕೊಡುವ ಅರಣ್ಯ ಇಲಾಖೆ ಜಾಗಕ್ಕೆ ಬದಲಿಯಾಗಿ ಬೇರೆಲ್ಲೋ ಜಾಗವನ್ನು ನೀಡಲಾಗುತ್ತದೆ. ಇದರಿಂದ ಇಲ್ಲಿನ ಪರಿಸರ ವ್ಯವಸ್ಥೆಯ ಮೇಲಾಗುವ ಹಾನಿಯನ್ನು ಸರಿಪಡಿಸಲು ಸಾಧ್ಯವಿಲ್ಲ. ಒಂದು ವೇಳೆ ಜಾರಕಬಂಡೆ ಕಾವಲ್‌ನ ಮೀಸಲು ಅರಣ್ಯದ ಜಾಗವನ್ನು ಪಿಆರ್‌ಆರ್‌ಗೆ ಬಳಸುವುದು ಅನಿವಾರ್ಯವಾದರೆ, ಅರಣ್ಯ ಇಲಾಖೆಯು ಬೆನ್ನೇರುಘಟ್ಟ, ಆನೇಕಲ್‌ ಪರಿಸರದಲ್ಲಿ ಬದಲಿ ಜಾಗ ಪಡೆಯಬೇಕು’ ಎಂದು ಅವರು ಸಲಹೆ ನೀಡಿದರು.

ಅಂಕಿ ಅಂಶ

1,190 ಎಕರೆ: ಜಾರಕಬಂಡೆ ಕಾವಲ್‌ ಮೀಸಲು ಅರಣ್ಯದ ಒಟ್ಟು ವಿಸ್ತೀರ್ಣ

494 ಎಕರೆ: ಮೀಸಲು ಅರಣ್ಯದ ಬಿ–ಬ್ಲಾಕ್‌ನ ವಿಸ್ತೀರ್ಣ

3.70 ಎಕರೆ: ಪಿಆರ್‌ಆರ್‌ ಯೋಜನೆಗೆ ಬಳಕೆ ಆಗಲಿರುವ ಮೀಸಲು ಅರಣ್ಯ ಜಾಗ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು