ಬುಧವಾರ, ಜೂನ್ 23, 2021
21 °C
ಮರಗಳ ತೆರವಿಗೆ ಅಹವಾಲು ಸಭೆಯಲ್ಲಿ ಸಾರ್ವಜನಿಕರ ಕಿಡಿ

ವಾಯು ಮಾಲಿನ್ಯ ಆತಂಕ: ಪಿಆರ್‌ಆರ್‌ ಯೋಜನೆ ಅವೈಜ್ಞಾನಿಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಲಹಂಕ: ‘ಉದ್ದೇಶಿತ ಪೆರಿಫೆರಲ್‌ ವರ್ತುಲ ರಸ್ತೆ ನಿರ್ಮಾಣಕ್ಕಾಗಿ ಬಿಡಿಎ ಭೂಸ್ವಾಧೀನ ಪ್ರಕ್ರಿಯೆ ನಡೆಸಿ 16 ವರ್ಷಗಳು ಕಳೆದಿವೆ. ಆದರೆ, ಯೋಜನೆ ಇನ್ನೂ ಅನುಷ್ಠಾನವಾಗಿಲ್ಲ. ಇದೊಂದು ಅವೈಜ್ಞಾನಿಕ ಯೋಜನೆ’ ಎಂದು ಮಾವಳ್ಳಿಪುರದ ರೈತ ಮುಖಂಡ ಶ್ರೀನಿವಾಸ್ ಹೇಳಿದರು.

ಪೆರಿಫೆರಲ್‌ ವರ್ತುಲ ರಸ್ತೆ ಯೋಜನೆಗಾಗಿ ಮರಗಳ ತೆರವು ಸಂಬಂಧ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಸಿಂಗನಾಯನಹಳ್ಳಿಯಲ್ಲಿ ಮಂಗಳವಾರ ಆಯೋಜಿಸಿದ್ದ ಸಾರ್ವಜನಿಕರ ಆಕ್ಷೇಪಣೆ ಹಾಗೂ ಅಹವಾಲು ಸಭೆಯಲ್ಲಿ ಅವರು ಮಾತನಾಡಿದರು.

‘ಬಿಬಿಎಂಪಿ ವ್ಯಾಪ್ತಿಯಲ್ಲಿ ಜನಸಂಖ್ಯೆ 1.30 ಕೋಟಿ ಇದೆ. ಹೆಚ್ಚಿನ ಸಂಚಾರ ದಟ್ಟಣೆಯಿಂದ ವಾಯುಮಾಲಿನ್ಯ ಉಂಟಾಗಿ ಗಾಳಿ ವಿಷವಾಗಿ, ನೀರು ಕಲುಷಿತವಾಗಿದೆ. ವಿಧಾನಸೌಧದಿಂದ 15 ಹಾಗೂ ಪಾಲಿಕೆ ವ್ಯಾಪ್ತಿಯಿಂದ ಕೇವಲ 1 ಕಿಲೋಮೀಟರ್ ದೂರದಲ್ಲಿ ಪಿಆರ್‌ಆರ್‌ ರಸ್ತೆ ನಿರ್ಮಿಸಲಾಗುತ್ತಿದೆ. ಈ ರಸ್ತೆ ಮಾಡುವುದರಿಂದ ಪರಿಸರಕ್ಕಾಗಲಿ, ಸಾರ್ವಜನಿಕರಿಗಾಗಲಿ ಯಾವುದೇ ಅನುಕೂಲವಾಗುವುದಿಲ್ಲ’ ಎಂದು ತಿಳಿಸಿದರು.

‘ಆರಂಭದಲ್ಲೇ ಯೋಜನೆ ಅನುಷ್ಠಾನಗೊಳಿಸಿದ್ದರೆ ಜನರಿಗೆ ಅನುಕೂಲವಾಗುತ್ತಿತ್ತು. ಆದರೆ, 16 ವರ್ಷಗಳಲ್ಲಿ 1810 ಎಕರೆ ಭೂಮಿಯನ್ನು ಕಳೆದುಕೊಂಡ ಕುಟುಂಬಗಳು ನಾಶವಾಗಿವೆ. ಎಷ್ಟೋ ಜನರು ಇದರ ನೋವಲ್ಲೇ ಮೃತಪಟ್ಟಿದ್ದು, ಈ ಬಗ್ಗೆ ಯಾವುದೇ ಸಮೀಕ್ಷೆ ನಡೆಸಿಲ್ಲ. ಕುಟುಂಬ ಸದಸ್ಯರ ಪಟ್ಟಿಯೂ ನಿಮ್ಮ ಬಳಿ ಇಲ್ಲ. ಸಂತ್ರಸ್ತರಿಗೆ ಸೂಕ್ತ ಪರಿಹಾರನ್ನೂ ನೀಡಿಲ್ಲ’ ಎಂದು ದೂರಿದರು.

‘ಈ ಯೋಜನೆಯು ಸಾರ್ವಜನಿಕರು, ರೈತರು ಹಾಗೂ ಪರಿಸರಕ್ಕೆ ವಿರುದ್ಧವಾಗಿದೆ. ರಿಯಲ್ ಎಸ್ಟೇಟ್ ಉದ್ಯಮಿಗಳ ಅನುಕೂಲಕ್ಕಾಗಿ ಮಾತ್ರ ಈ ರಸ್ತೆ ನಿರ್ಮಿಸುತ್ತಿದ್ದು, ಈ ಯೋಜನೆಯನ್ನು ಕೂಡಲೇ ಕೈಬಿಡಬೇಕು. ಯೋಜನೆಯನ್ನು ಮುಂದುವರಿಸಿದರೆ ಹೋರಾಟ ನಡೆಸುತ್ತೇವೆ’ ಎಂದು ಅವರು ಎಚ್ಚರಿಸಿದರು. 

ದೊಡ್ಡಬಳ್ಳಾಪುರ ವಕೀಲ ವಿಜಯಕುಮಾರ್, ‘ಈ ಯೋಜನೆ ಒಳ್ಳೆಯದೇ. ಆದರೆ, ನಿಯಮಗಳನ್ನು ಉಲ್ಲಂಘಿಸಿ ಯೋಜನೆ ಅನುಷ್ಠಾನ ಮಾಡಲಾಗುತ್ತಿದೆ. ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಹಾಗೂ ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿ ಯೋಜನೆಗೆ ಅನುಮತಿ ಪಡೆಯಲಾಗಿದೆ. ಸುಪ್ರೀಂ ಕೋರ್ಟ್‌ ಮಾರ್ಗಸೂಚಿ ಪ್ರಕಾರ ಮತ್ತೊಮ್ಮೆ ಅನುಮತಿ ಪಡೆದು ಕಾಮಗಾರಿ ನಡೆಸಬೇಕು’ ಎಂದು ಒತ್ತಾಯಿಸಿದರು. 

ಕರ್ನಾಟಕ ಕಿಸಾನ್ ಕಾಂಗ್ರೆಸ್ ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ಸಚಿನ್ ಮಿಗಾ, ‘ಮೆಟ್ರೊ ಯೋಜನೆಯ ಭೂ ಸಂತ್ರಸ್ತರಿಗೆ ‍ಪರಿಹಾರ ನೀಡುವ ಮಾದರಿಯಲ್ಲೇ ಪಿಆರ್‌ಆರ್‌ ಸಂತ್ರಸ್ತರಿಗೂ ಪರಿಹಾರ ನೀಡಬೇಕು. ಆಗ ಬಹುತೇಕ ರೈತರ ಸಮಸ್ಯೆ ಬಗೆಹರಿಯಲಿದೆ’ ಎಂದರು.

‘ಅಹವಾಲು ಸಭೆಯನ್ನು ಮುಂದೂಡಲಾಗಿದೆ ಎಂದು ಪತ್ರಿಕೆಗಳಲ್ಲಿ ಪ್ರಕಟಣೆ ಹೊರಡಿಸಿ, ರೈತರನ್ನು ದಿಕ್ಕು ತಪ್ಪಿಸಲಾಗಿದೆ. ಹೀಗಾಗಿ, 60 ರೈತರಷ್ಟೇ ಸಭೆಗೆ ಬಂದಿದ್ದಾರೆ. ಇಲ್ಲದಿದ್ದರೆ, ಸಾವಿರಾರು ರೈತರು ಸಭೆಗೆ ಬರುತ್ತಿದ್ದರು’ ಎಂದು ರೈತರು ಹೇಳಿದರು.

ಮತ್ತೊಮ್ಮೆ ಸಭೆ: ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಎನ್.ಶಿವಮೂರ್ತಿ, ‘ನಿಮ್ಮ ಸಲಹೆ ಸೂಚನೆಗಳನ್ನು ದಾಖಲೀಕರಿಸಿ ಎಲ್ಲವನ್ನೂ ಕ್ರೋಡೀಕರಿಸಲಾಗುವುದು. ಮುಂದಿನ ತಿಂಗಳು ದಿನಾಂಕ ನಿಗದಿಪಡಿಸಿ, ಮತ್ತೊಮ್ಮೆ ಸಭೆ ನಡೆಸಲಾಗುವುದು. ವೆಬಿನಾರ್‌ನಲ್ಲಿಯೂ ಈ ಬಗ್ಗೆ ಸಲಹೆ ಸೂಚನೆಗಳನ್ನು ಪಡೆದು, ಅಂತಿಮವಾಗಿ ಸಮಗ್ರ ವರದಿ ಸಿದ್ಧಪಡಿಸಲಾಗುವುದು’ ಎಂದು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು