ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೂವರು ಅಮಾಯಕರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದ ಪಿಎಸ್​ಐ ಸೇರಿ ನಾಲ್ವರ ಅಮಾನತು

ಬಾತ್ಮೀದಾರನ ಮಾತು ಕೇಳಿ ಅಮಾಯಕರ ವಿರುದ್ಧ ಪ್ರಕರಣ
Published : 15 ಸೆಪ್ಟೆಂಬರ್ 2024, 15:24 IST
Last Updated : 16 ಸೆಪ್ಟೆಂಬರ್ 2024, 3:10 IST
ಫಾಲೋ ಮಾಡಿ
Comments

ಬೆಂಗಳೂರು: ಬಾತ್ಮೀದಾರನ ಮಾತು ನಂಬಿ ಸತ್ಯಾಸತ್ಯತೆ ಪರಿಶೀಲನೆ ನಡೆಸದೆ ಮಾದಕ ವಸ್ತುಗಳ ಮಾರಾಟ ಪ್ರಕರಣದಲ್ಲಿ ಮೂವರು ಅಮಾಯಕರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದ ಪ್ರಕರಣದಲ್ಲಿ ನಾಲ್ವರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.

‘ಬನಶಂಕರಿ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್‌ ಶ್ರೀಧರ್ ಗುಗ್ರಿ, ಸಹಾಯಕ ಪೊಲೀಸ್ ಸಬ್ ಇನ್‌ಸ್ಪೆಕ್ಟರ್‌ ಎಸ್.ಕೆ.ರಾಜು, ಕಾನ್‌ಸ್ಟೆಬಲ್‌ಗಳಾದ ಸತೀಶ್ ಬಗಲಿ ಹಾಗೂ ತಿಮ್ಮಣ್ಣ ಪೂಜಾರ ಅವರನ್ನು ಕರ್ತವ್ಯಲೋಪದ ಆರೋಪದಲ್ಲಿ ಅಮಾನತುಗೊಳಿಸಿ, ಇಲಾಖೆ ವಿಚಾರಣೆಗೆ ಆದೇಶಿಸಲಾಗಿದೆ.

‘ಪ್ರಕರಣದಲ್ಲಿ ಪೊಲೀಸರ ಪಾತ್ರವೇನು? ಬಾತ್ಮೀದಾರನ ಜತೆ ಶಾಮೀಲಾಗಲು ಏನು ಕಾರಣ? ಈ ಕೇಸ್‌ನಲ್ಲಿ ಯಾವ ರೀತಿ ಲಾಭ ಪಡೆದಿದ್ದಾರೆ ಎಂಬುದರ ಬಗ್ಗೆಯೂ ತನಿಖೆ ನಡೆಯುತ್ತಿದೆ‘ ಎಂದು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಭರಮಪ್ಪ ಜಗಲಾಸರ್ ತಿಳಿಸಿದರು.

ಪೊಲೀಸ್ ಬಾತ್ಮೀದಾರ ರಾಜನ್ ಹಾಗೂ ಈತನ ಸ್ನೇಹಿತೆ ಚೈತ್ರಾ ಎಂಬಾಕೆಯನ್ನು ಸುಬ್ರಹ್ಮಣ್ಯಪುರ ಉಪ ವಿಭಾಗದ ಎಸಿಪಿ ನೇತೃತ್ವದ ತಂಡ ಬಂಧಿಸಿದೆ.

ಆ. 9ರಂದು ಕದಿರೇನಹಳ್ಳಿಯ ಸಿಮೆಂಟ್ ರಸ್ತೆಯಲ್ಲಿ ಮಾದಕ ಪದಾರ್ಥಗಳ ಮಾರಾಟ ಮಾಡುತ್ತಿದ್ದ ಆರೋಪದಡಿ ಮೂವರು ವ್ಯಕ್ತಿಗಳನ್ನು ಬನಶಂಕರಿ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದರು. ಅವರ ದ್ವಿಚಕ್ರ ವಾಹನದಲ್ಲಿ ಬಚ್ಚಿಡಲಾಗಿದ್ದ 400 ಗ್ರಾಂ ಗೂ ಅಧಿಕ ತೂಕದ ಆಫೀಮು ಜಪ್ತಿ ಮಾಡಿದ್ದರು. ಠಾಣಾಧಿಕಾರಿ ಶ್ರೀಧರ್‌ ಅವರು ಮೂವರ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದರು. ನ್ಯಾಯಾಲಯ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದ್ದರಿಂದ 20 ದಿನ ಜೈಲು ವಾಸ ಅನುಭವಿಸಿದ್ದರು. 

ಈ ನಡುವೆ ಬಂಧನಕ್ಕೆ ಒಳಗಾದ ವ್ಯಕ್ತಿಗಳ ಕುಟುಂಬಸ್ಥರು ಪೊಲೀಸರ ಬಂಧನ ಕಾರ್ಯಾಚರಣೆಯ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು. ಪೊಲೀಸ್ ಬಾತ್ಮೀದಾರನಾಗಿದ್ದ ರಾಜನ್ ಎಂಬಾತನ ಕೈವಾಡದ ಬಗ್ಗೆ ಅನುಮಾನ ವ್ಯಕ್ತಪಡಿಸಿ ನಗರ ಪೊಲೀಸ್ ಕಮಿಷನರ್‌ಗೆ ದೂರು ನೀಡಿದ್ದರು. ಪ್ರಕರಣದ ತನಿಖೆ ನಡೆಸಿ ವರದಿ ನೀಡುವಂತೆ ಸುಬ್ರಹ್ಮಣ್ಯಪುರ ಉಪವಿಭಾಗದ ಎಸಿಪಿ ಗಿರೀಶ್ ಅವರಿಗೆ ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಆದೇಶಿಸಿದ್ದರು.

ತನಿಖೆ ನಡೆಸಿದ್ದ ಎಸಿಪಿ ಗಿರೀಶ್, ಪ್ರಕರಣದಲ್ಲಿ ಬಾತ್ಮೀದಾರನ ಸುಳ್ಳು ಮಾಹಿತಿ ಹಾಗೂ ಪೊಲೀಸ್ ಸಿಬ್ಬಂದಿಯ ಕರ್ತವ್ಯಲೋಪ ಇರುವುದರ ಕುರಿತು ಸೆ. 12ರಂದು ಡಿಸಿಪಿಗೆ ಆಂತರಿಕ ವರದಿ ಸಲ್ಲಿಸಿದ್ದರು. ಅದರನ್ವಯ ನಾಲ್ವರು ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.

ಸ್ನೇಹಿತೆ ಜತೆ ಸೇರಿ ಸಂಚು

‘ಹಲವು ವರ್ಷಗಳಿಂದ ಪೊಲೀಸ್ ಬಾತ್ಮೀದಾರನಾಗಿದ್ದ ರಾಜನ್, ಪ್ರಕರಣದಲ್ಲಿ ಬಂಧಿತರಾಗಿದ್ದ ಮೂವರು ವ್ಯಕ್ತಿಗಳೊಂದಿಗೆ ವೈಯಕ್ತಿಕ ದ್ವೇಷ ಹೊಂದಿದ್ದ. ಮೂವರನ್ನೂ ಪ್ರಕರಣದಲ್ಲಿ ಸಿಲುಕಿಸಲು ಸಂಚು ರೂಪಿಸಿ, ತನ್ನ ಸ್ನೇಹಿತೆಯ ಮೂಲಕ ಅವರ ದ್ವಿಚಕ್ರ ವಾಹನದಲ್ಲಿ ಮಾದಕ ಪದಾರ್ಥ ಇರಿಸಿದ್ದ. ನಂತರ ಪೊಲೀಸರಿಗೆ ಮಾಹಿತಿ ನೀಡಿ ದಾಳಿ ಮಾಡಿಸಿದ್ದ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಬಾತ್ಮೀದಾರ ರಾಜನ್ ಮಾಹಿತಿಯನ್ನು ಪರಿಶೀಲಿಸದೆಯೇ ಪೊಲೀಸರು ಮೂವರು ಅಮಾಯಕರನ್ನು ಬಂಧಿಸಿದ್ದರು. ಅವರು ಈಗ ಜಾಮೀನು ಪಡೆದು ಹೊರ ಬಂದಿದ್ದಾರೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT