ಶುಕ್ರವಾರ, ಫೆಬ್ರವರಿ 21, 2020
18 °C
ಮೈಕೊ ಲೇಔಟ್ ಠಾಣೆ ಪಿಎಸ್‌ಐ, ಕಾನ್‌ಸ್ಟೆಬಲ್ ಅಮಾನತು

ಕ್ಯಾಮೆರಾದಲ್ಲಿ ಸೆರೆಯಾಯ್ತು ಪಿಎಸ್‌ಐ ವಸೂಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಕ್ರಮ ಚಟುವಟಿಕೆ ನಡೆಯುತ್ತಿತ್ತು ಎನ್ನಲಾದ ಲಾಡ್ಜೊಂದಕ್ಕೆ ಹೋಗಿ ಕೆಲಸಗಾರರಿಂದ ಅಕ್ರಮವಾಗಿ ಹಣ ಕಿತ್ತುಕೊಂಡಿದ್ದ ಆರೋಪದಡಿ ಮೈಕೊ ಲೇಔಟ್ ಠಾಣೆ ಪಿಎಸ್‌ಐ ದಾದಾ ಅಯಾತ್‌ ಹಾಗೂ ಇನ್ನೊಂದು ಪ್ರಕರಣದಲ್ಲಿ ಬಂಡೇಪಾಳ್ಯ ಠಾಣೆಯ ಕಾನ್‌ಸ್ಟೆಬಲ್ ಪ್ರಶಾಂತ್ ಎಂಬುವರನ್ನು ಅಮಾನತು ಮಾಡಲಾಗಿದೆ.

ಈ ಸಂಬಂಧ ಆಗ್ನೇಯ ವಿಭಾಗದ ಡಿಸಿಪಿ ಇಶಾ ಪಂತ್ ಆದೇಶ ಹೊರಡಿಸಿದ್ದಾರೆ.

‘ಪಿಎಸ್‌ಐ ಹಾಗೂ ಕಾನ್‌ಸ್ಟೆಬಲ್ ಅಧಿಕಾರ ದುರುಪಯೋಗಪಡಿಸಿಕೊಂಡು ಕರ್ತವ್ಯಲೋಪ ಎಸಗಿರುವ ಬಗ್ಗೆ ಮೈಕೊ ಲೇಔಟ್ ಉಪವಿಭಾಗದ ಎಸಿಪಿ ಅವರು ವರದಿ ನೀಡಿದ್ದರು. ಅದನ್ನು ಆಧರಿಸಿ ಇಬ್ಬರನ್ನೂ ಅಮಾನತು ಮಾಡಲಾಗಿದ್ದು, ಇಲಾಖೆ ವಿಚಾರಣೆ ನಡೆಸಲಾಗುತ್ತಿದೆ’ ಎಂದು ಇಶಾ ಪಂತ್ ‘ಪ್ರಜಾವಾಣಿ’ಗೆ ತಿಳಿಸಿದರು.

ಏನಿದು ಪ್ರಕರಣ: ‘ಮೈಕೊ ಲೇಔಟ್ ಠಾಣೆ ವ್ಯಾಪ್ತಿಯ ಲಾಡ್ಜೊಂದಕ್ಕೆ ಫೆ. 4ರಂದು ಪಿಎಸ್‌ಐ ದಾದಾ ಅಯಾತ್‌ ಹೋಗಿದ್ದರು. ಅಕ್ರಮ ಚಟುವಟಿಕೆ ನಡೆಸುತ್ತಿದ್ದ ಆರೋಪದಡಿ ಲಾಡ್ಜ್‌ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಿದ್ದರು. ಅವರ ಜೇಬಿಗೆ ಕೈ ಹಾಕಿ ಹಣ ಕಿತ್ತುಕೊಂಡಿದ್ದರು. ಈ ದೃಶ್ಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು’ ಎಂದು ಪೊಲೀಸ್ ಮೂಲಗಳು ತಿಳಿಸಿದೆ.

‘ಎಸ್ಐ ಕೃತ್ಯದ ವಿರುದ್ಧ ಲಾಡ್ಜ್‌ ಸಿಬ್ಬಂದಿಯೇ ಠಾಣೆಯ ಇನ್‌ಸ್ಪೆಕ್ಟರ್ ಅವರಿಗೆ ದೂರು ನೀಡಿದ್ದರು. ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಗಳನ್ನೂ ಕೊಟ್ಟಿದ್ದರು. ಬಳಿಕ ತನಿಖೆ ನಡೆಸಿದ್ದ ಮೈಕೊ ಲೇಔಟ್ ಉಪವಿಭಾಗದ ಎಸಿಪಿ, ಪಿಎಸ್‌ಐ ವಿರುದ್ಧ ಕ್ರಮ ಕೈಗೊಳ್ಳುವಂತೆ ಡಿಸಿಪಿ ಅವರಿಗೆ ವರದಿ ನೀಡಿದ್ದರು’ ಎಂದು ಮೂಲಗಳು ಹೇಳಿವೆ.

‘ಕಾನ್‌ಸ್ಟೆಬಲ್ ಪ್ರಶಾಂತ್ ಮೇಲೆಯೂ ಗಂಭೀರ ಆರೋಪವಿದೆ. ಅದು ಸಹ ತನಿಖೆಯಿಂದ ಬಯಲಾಗಿದೆ. ಆತನ ವಿರುದ್ಧವೂ ಇಲಾಖಾ ವಿಚಾರಣೆ ನಡೆಯುತ್ತಿದೆ’ ಎಂದೂ ಮೂಲಗಳು ತಿಳಿಸಿವೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು