ಸೋಮವಾರ, ಸೆಪ್ಟೆಂಬರ್ 21, 2020
21 °C

ಜನಪ್ರತಿನಿಧಿಗಳ ಖಾಸಗಿ ಆಸ್ಪತ್ರೆಗಳ ‘ವಾಸ್ತವ್ಯ’: ಜನರ ಟೀಕಾಪ್ರಹಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜನರ ಕಷ್ಟ ಅರಿಯಲು ಸಿದ್ಧರಿಲ್ಲ

ಈ ಹಿಂದೆ ಒಬ್ಬ ಜನಪ್ರತಿನಿಧಿ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ಸೇರಿದಾಗ ಆಡಳಿತ ಪಕ್ಷ ಅಥವಾ ವಿರೋಧ ಪಕ್ಷದವರು ಪೈಪೋಟಿಗೆ ಬಿದ್ದಂತೆ ಸರ್ಕಾರಿ ಆಸ್ಪತ್ರೆಗಳಿಗೆ ಸೇರಿ, ತಮ್ಮ ಅನುಕೂಲಕ್ಕೆ ತಕ್ಕ ವ್ಯವಸ್ಥೆ ಮಾಡಿಕೊಂಡು ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದರು. ಈಗ ಜನಸಾಮಾನ್ಯರ ಕಷ್ಟ ಅರಿಯಲು ಸಿಕ್ಕ ಅವಕಾಶವನ್ನೂ ನಾಯಕರು ಕಳೆದುಕೊಂಡಿರುವುದು ದುರದೃಷ್ಟಕರ.

- ಕೆ.ಎಂ.ರಮ್ಯಾ, ರಾಜರಾಜೇಶ್ವರಿ ನಗರ

ನುಡಿದಂತೆ ನಡೆಯಬೇಕಿತ್ತು

ಬಿ.ಎಸ್.ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ಅವರು ಎಷ್ಟೋ ಯುವ ನಾಯಕರಿಗೆ ಸ್ಫೂರ್ತಿ. ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಲ್ಲಿ, ಅವರ ಮೇಲಿನ ಅಭಿಪ್ರಾಯ ಹಾಗೂ ವರ್ಚಸ್ಸು ಮತ್ತಷ್ಟು ಬಲಗೊಳ್ಳುತ್ತಿತ್ತು. ಆಸ್ಪತ್ರೆಗಳ ಲೋಪದೋಷಗಳನ್ನು ಸರಿಪಡಿಸುವ ಅವಕಾಶವೂ ಇತ್ತು. ನುಡಿದಂತೆ ನಡೆ, ನಡೆದಂತೆ ನುಡಿ ಜೀವನದ ಭಾಗವಾಗಬೇಕಿತ್ತು.
- ರಘು ರಾಮಾನುಜಂ, ಸಾಮಾಜಿಕ ಕಾರ್ಯಕರ್ತ 

ಜನಸೇವಕರಲ್ಲ ಎಂದು ಸಾಬೀತು

ಜನಪ್ರತಿನಿಧಿಗಳಿಗೆ ತಮ್ಮ ವ್ಯವಸ್ಥೆಯ ಬಗ್ಗೆ ನಂಬಿಕೆಯಿಲ್ಲ ಎಂಬುದು ಇದೀಗ ಸಾಬೀತಾಗಿದೆ. ಸಮಾಜಕ್ಕೆ ಮಾದರಿಯಾಗಲು ಸಿಕ್ಕ ಅವಕಾಶವನ್ನು ಕಳೆದುಕೊಂಡಿರುವ ನಾಯಕರು ತಾವು ಜನಸೇವಕರಲ್ಲ, ಅಧಿಕಾರದ ಗದ್ದುಗೆಯಲ್ಲಿ ಮೆರೆಯುತ್ತಿರುವ ರಾಜಕಾರಣಿಗಳು ಎಂದೇ ಸಾಬೀತುಪಡಿಸಿದ್ದಾರೆ.

- ಸುಮಾ, ಬಿಇಎಂಎಲ್ ಬಡಾವಣೆ

ವಿದೇಶಕ್ಕೆ ಹೋಗಲಾರದೆ ಖಾಸಗಿ ಆಸ್ಪತ್ರೆಗೆ

ವಿಶ್ವದಾದ್ಯಂತ ಕೊರೊನಾ ಸಕ್ರಿಯವಾಗಿರುವುದರಿಂದ ಈ ರಾಜಕೀಯ ನಾಯಕರು ಹೊರದೇಶಗಳಿಗೆ ಹಾರಲಾರದೆ, ಇಲ್ಲಿನ ಖಾಸಗಿ ಆಸ್ಪತ್ರೆ ಸೇರಿಕೊಂಡಿದ್ದಾರೆ. ಭಾರತದಲ್ಲಿ ಉತ್ತಮ ವೈದ್ಯಕೀಯ ಚಿಕಿತ್ಸೆ ಇದೆ ಎನ್ನುವ ಪಂಡಿತರು, ಈಗಲಾದರೂ ಇವರಿಗೆ ಬುದ್ಧಿ ಹೇಳಬಹುದಿತ್ತು

-ಬಿ.ಎಂ.ನಾರಾಯಣಸ್ವಾಮಿ, ಮೈಕೊ ಬಡಾವಣೆ

ಕಾಳಜಿಯಿಲ್ಲದ ನಾಯಕರು

ಬಡವರ ಮಕ್ಕಳಿಗೆ ಸರ್ಕಾರಿ ಶಾಲೆ, ಶ್ರೀಮಂತ ಮಕ್ಕಳಿಗೆ ಖಾಸಗಿ ಶಾಲೆ ಎನ್ನುವಂತೆ ಈಗ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ಸ್ಥಿತಿಯೂ ಆಗಿದೆ. ಸರ್ಕಾರಿ ಆಸ್ಪತ್ರೆಗಳ ಗುಣಮಟ್ಟ ಸುಧಾರಿಸಿ, ಜನಸಾಮಾನ್ಯರಿಗೆ ಅಲ್ಲಿ ಉತ್ತಮ ಸೇವೆ ಸಿಗುವಂತೆ ಮಾಡುವ ದೂರದೃಷ್ಟಿ, ಕಾಳಜಿ ಈ ನಾಯಕರಿಗೆ ಇದ್ದಂತಿಲ್ಲ.

-ಬೈರಮಂಗಲ ರಾಮೇಗೌಡ, ನಿವೃತ್ತ ಪ್ರಾಧ್ಯಾಪಕ

ಆಸ್ಪತ್ರೆ ವಿಶ್ರಾಂತಿ ಗೃಹವಾಗಿದೆ

ಖಾಸಗಿ ಆಸ್ಪತ್ರೆಗಳು ರಾಜಕಾರಣಿಗಳಿಗೆ ವಿಶ್ರಾಂತಿ ಗೃಹಗಳಾಗಿವೆ. ರೋಗಿಗಳು ಹಾಸಿಗೆ ಸಿಗುತ್ತಿಲ್ಲ ಎಂದು ಪರದಾಡುತ್ತಿದ್ದರೆ, ರಾಜಕಾರಣಿಗಳು ಹಾಸಿಗೆ ಕಾಯ್ದಿರಿಸಿಕೊಂಡಿದ್ದಾರೆ. ಐಷಾರಾಮಿ ಆಸ್ಪತ್ರೆಯಲ್ಲಿ ದಾಖಲಾಗುವ ರಾಜಕಾರಣಿಗಳ ಲೆಕ್ಕಾಚಾರ ಒಳಗೊಂದು, ಹೊರಗೊಂದು. ಇವರೆಲ್ಲ ನಾವೇ ಆರಿಸಿದ ನಾಯಕರಲ್ಲವೇ?
-ರವಿ, ಗ್ರಂಥಪಾಲಕ, ಅಂಜನಾನಗರ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು