ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರ್ವಜನಿಕ ಸಾರಿಗೆ ಸೇವೆ ಪುನರಾರಂಭ- ಶೇ 50 ಆಸನ ಸಾಮರ್ಥ್ಯದೊಂದಿಗೆ ಸಂಚಾರ

13 ತಾಸು ಬಸ್‌ ಸಂಚಾರ
Last Updated 21 ಜೂನ್ 2021, 1:44 IST
ಅಕ್ಷರ ಗಾತ್ರ

ಬೆಂಗಳೂರು: ಲಾಕ್‌ಡೌನ್‌ ನಿರ್ಬಂಧ ಸಡಿಲಿಸುತ್ತಿದ್ದಂತೆಯೇ ನಗರದಲ್ಲಿ ಸೋಮವಾರದಿಂದ ಸಾರ್ವಜನಿಕ ಸಾರಿಗೆ ಸೇವೆ ಪುನರಾರಂಭವಾಗಲಿದೆ. ಮೆಟ್ರೊ ರೈಲುಗಳು ದಿನದ 7 ತಾಸು ಸಾರ್ವಜನಿಕ ಸೇವೆಗೆ ಲಭ್ಯವಿದ್ದರೆ, ದಿನದಲ್ಲಿ 13 ತಾಸು ಬಿಎಂಟಿಸಿ ಬಸ್‌ಗಳು ಸಂಚರಿಸಲಿವೆ.

ಮೆಟ್ರೊ ರೈಲುಗಳು ಮತ್ತು ರೈಲು ನಿಲ್ದಾಣಗಳನ್ನು ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್‌ಸಿಎಲ್‌) ಸಂಪೂರ್ಣ ಸ್ಯಾನಿಟೈಸ್‌ ಮಾಡಿದೆ. ನಿಲ್ದಾಣದ ಮುಂದೆ ಸ್ಯಾನಿಟೈಸರ್‌ಗಳ ವ್ಯವಸ್ಥೆ, ದೇಹದ ಉಷ್ಣಾಂಶ ಪರೀಕ್ಷಿಸುವ ಸಾಧನಗಳನ್ನು ಅಳವಡಿಸಲಾಗಿದೆ.

ಸೋಮವಾರದಿಂದ ಶುಕ್ರವಾರದವರೆಗೆ ‘ನಮ್ಮ ಮೆಟ್ರೊ’ದ ಹಸಿರು ಮತ್ತು ನೇರಳೆ ಮಾರ್ಗ ಎರಡರಲ್ಲಿಯೂ ಬೆಳಿಗ್ಗೆ 7ರಿಂದ 11ರವರೆಗೆ ಮತ್ತು ಮಧ್ಯಾಹ್ನ 3ರಿಂದ ಸಂಜೆ 6ರವರೆಗೆ ಐದು ನಿಮಿಷಗಳ ಅಂತರದಲ್ಲಿ ಮೆಟ್ರೊ ರೈಲುಗಳು ಸಂಚರಿಸಲಿವೆ. ವಾರಾಂತ್ಯ ಕರ್ಫ್ಯೂ ಜಾರಿಯಲ್ಲಿ ಇರುವುದರಿಂದ ಶನಿವಾರ–ಭಾನುವಾರ ಮೆಟ್ರೊ ರೈಲು ಸೇವೆ ಇರುವುದಿಲ್ಲ.

ಪ್ರಯಾಣಿಕರ ದಟ್ಟಣೆ ಹೆಚ್ಚಿದ್ದರೆ, ರೈಲುಗಳ ನಡುವಣ ಕಾರ್ಯಾಚರಣೆ ಅವಧಿಯ ಅಂತರವನ್ನು ತಗ್ಗಿಸಲಾಗುವುದು ಎಂದು ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ಹೇಳಿದೆ. ಸಂಜೆ 6ಗಂಟೆಗೆ ನಾಲ್ಕೂ ಟರ್ಮಿನಲ್‌ಗಳ ಕಡೆಗೆ ಏಕಕಾಲದಲ್ಲಿ ಕೊನೆಯ ಮೆಟ್ರೊ ರೈಲುಗಳು ಹೊರಡಲಿವೆ.

ಟೋಕನ್‌ ಇಲ್ಲ:ಜನ ಪರಸ್ಪರ ಸಂಪರ್ಕಕ್ಕೆ ಬರುವುದನ್ನು ಆದಷ್ಟು ಕಡಿಮೆ ಮಾಡುವ ಉದ್ದೇಶದಿಂದ ನಿಗಮವು ಟೋಕನ್‌ ವಿತರಿಸುತ್ತಿಲ್ಲ. ಸ್ಮಾರ್ಟ್‌ ಕಾರ್ಡ್‌ ಹೊಂದಿದವರಿಗೆ ಮಾತ್ರ ಪ್ರಯಾಣಕ್ಕೆ ಅವಕಾಶವಿದೆ.

ಮೊಬೈಲ್‌ ಅಪ್ಲಿಕೇಷನ್‌ ಹಾಗೂ ಬಿಎಂಆರ್‌ಸಿಎಲ್‌ ವೆಬ್‌ಸೈಟ್‌ ಮೂಲಕವೂ ಸ್ಮಾರ್ಟ್‌ ಕಾರ್ಡ್‌ ಖರೀದಿ ಮತ್ತು ರಿಚಾರ್ಜ್‌ ಮಾಡಿಕೊಳ್ಳಬಹುದು ಎಂದೂ ಬಿಎಂಆರ್‌ಸಿಎಲ್‌ ಹೇಳಿದೆ. ನಿಲ್ದಾಣಗಳ ಕೌಂಟರ್‌ಗಳಲ್ಲಿ ನಗದು ನೀಡಿಯೂ ಹೊಸ ಸ್ಮಾರ್ಟ್‌ ಕಾರ್ಡ್‌ಗಳನ್ನು ಖರೀದಿಸಬಹುದಾಗಿದೆ.

ಬಸ್‌ಗಳೂ ಸಿದ್ಧ:ಮೆಟ್ರೊ ರೈಲುಗಳು ಮಾತ್ರವಲ್ಲದೆ, ಬಿಎಂಟಿಸಿ ಬಸ್‌ಗಳು ಶೇ 50 ಆಸನ ಸಾಮರ್ಥ್ಯದೊಂದಿಗೆ ಸಂಚಾರ ಆರಂಭಿಸಲಿವೆ.

ಪ್ರಯಾಣಿಕರ ದಟ್ಟಣೆ ಇರುವಂತಹ ಮಾರ್ಗಗಳಲ್ಲಿ 2,000 ಬಸ್‌ ಸೇವೆಯನ್ನು ಸಂಸ್ಥೆ ಒದಗಿಸಲಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ, ಕೆಂಪೇಗೌಡ ಬಸ್ ನಿಲ್ದಾಣ ಮತ್ತು ಎಲೆಕ್ಟ್ರಾನಿಕ್ ಸಿಟಿಗೆ ಒಟ್ಟು 17 ವಾಯುವಜ್ರ ಬಸ್ಸುಗಳು 117 ಸರದಿಯಲ್ಲಿ ಸಂಚರಿಸಲಿವೆ. ಪ್ರಯಾಣಿಕರ ದಟ್ಟಣೆ ಹೆಚ್ಚಾದರೆ ಬಸ್‌ಗಳ ಸಂಖ್ಯೆಯನ್ನೂ ಹೆಚ್ಚಿಸಲಾಗುವುದು ಎಂದು ಬಿಎಂಟಿಸಿ ಹೇಳಿದೆ.

ಪಾಸ್‌ ಅವಧಿ ವಿಸ್ತರಣೆ:ಏಪ್ರಿಲ್‌ನ ಸಾಮಾನ್ಯ ಮಾಸಿಕ ಪಾಸುಗಳ ಅವಧಿಯನ್ನು ಜುಲೈ 8ರವರೆಗೆ ವಿಸ್ತರಿಸಲಾಗಿದೆ. ಎಲ್ಲ ಬಸ್‌ಗಳಲ್ಲಿ ಡಿಜಿಟಲ್‌ ಟಿಕೆಟಿಂಗ್‌ ವ್ಯವಸ್ಥೆ ಮಾಡಲಾಗಿದೆ. ಬಸ್‌ಗಳು ಬೆಳಿಗ್ಗೆ 6ರಿಂದ ರಾತ್ರಿ 7ರವರೆಗೆ ಸಂಚರಿಸಲಿವೆ.

ಲಸಿಕೆ ಕಡ್ಡಾಯ:ಕರ್ತವ್ಯಕ್ಕೆ ಹಾಜರಾಗುವ ಎಲ್ಲ ಚಾಲಕ–ನಿರ್ವಾಹಕರು ಲಸಿಕೆ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ. ಅಲ್ಲದೆ, ಮಾಸ್ಕ್‌, ಸ್ಯಾನಿಟೈಸರ್‌ ವಿತರಿಸಲಾಗಿದೆ. ಸಿಬ್ಬಂದಿ ಮತ್ತು ಪ್ರಯಾಣಿಕರು ಮಾಸ್ಕ್‌ ಧರಿಸುವುದನ್ನು ಕಡ್ಡಾಯ ಮಾಡಲಾಗಿದೆ. ಬಸ್‌ಗಳನ್ನು ಕೂಡ ಸ್ಯಾನಿಟೈಸ್‌ ಮಾಡಲಾಗಿದೆ. ಆಸನಗಳು ಖಾಲಿ ಇದ್ದಾಗ ಮಾತ್ರ ಪ್ರಯಾಣಿಸಲು ಜನರಿಗೆ ಅವಕಾಶ ನೀಡುವಂತೆ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ.

ದರ್ಶಿನಿಗಳಲ್ಲಿ ಸೇವೆ ಇಂದಿನಿಂದ

ನಗರದಲ್ಲಿನ ಸುಮಾರು 24 ಸಾವಿರ ಹೋಟೆಲ್‌ಗಳ ಪೈಕಿ ಬಹುತೇಕ ಹೋಟೆಲ್‌ಗಳಲ್ಲಿ ಸೋಮವಾರದಿಂದ ಸೇವೆ ಪುನರಾರಂಭವಾಗಲಿದೆ. ಬೆಳಿಗ್ಗೆ 6ರಿಂದ ಸಂಜೆ 5ರವರೆಗೆ ಹೋಟೆಲ್‌ಗಳಲ್ಲಿಯೇ ಆಹಾರ ಸೇವಿಸಲು ಅವಕಾಶವಿದೆ. 5ರ ನಂತರ ಪಾರ್ಸೆಲ್‌ ತೆಗೆದುಕೊಂಡು ಹೋಗಬಹುದಾಗಿದೆ.

‘ನಗರದ ಎಲ್ಲ ದರ್ಶಿನಿಗಳು ಸೋಮವಾರದಿಂದ ಸೇವೆ ನೀಡಲು ಸಜ್ಜಾಗಿವೆ. ಐಷಾರಾಮಿ ರೆಸ್ಟೋರೆಂಟ್‌ಗಳು (ಫೈನ್‌ಡೈಯಿಂಗ್‌) ಹಂತ–ಹಂತವಾಗಿ ಕಾರ್ಯಾರಂಭ ಮಾಡಲಿವೆ. ಸದ್ಯ ನಗರದಲ್ಲಿರುವ ಎಲ್ಲ ಹೋಟೆಲ್‌ ಕಾರ್ಮಿಕರಿಗೆ ಲಸಿಕೆ ಹಾಕಿಸಲಾಗಿದೆ. ಹೋಟೆಲ್‌ಗಳನ್ನು ಸಂಪೂರ್ಣ ಸ್ಯಾನಿಟೈಸ್‌ ಮಾಡಲಾಗಿದೆ’ ಎಂದು ಬೃಹತ್ ಬೆಂಗಳೂರು ಹೋಟೆಲ್‌ಗಳ ಸಂಘದ ಅಧ್ಯಕ್ಷ ಪಿ.ಸಿ.ರಾವ್ ‘ಪ್ರಜಾವಾಣಿ‘ಗೆ ತಿಳಿಸಿದರು.

‘ಹೋಟೆಲ್‌ಗಳಲ್ಲಿ ಈಗ ಶೇ 40ರಷ್ಟು ಕಾರ್ಮಿಕರು ಇದ್ದಾರೆ. ಉಳಿದ ಶೇ 60ರಷ್ಟು ಕಾರ್ಮಿಕರು ಮಂಗಳವಾರ–ಬುಧವಾರದ ವೇಳೆಗೆ ಬರಬಹುದು. ಅವರಿಗೂ ಎಫ್‌ಕೆಸಿಸಿಐನಲ್ಲಿ ಲಸಿಕೆ ವಿತರಿಸುವ ಅಭಿಯಾನ ಹಮ್ಮಿಕೊಳ್ಳಲಾಗಿದೆ’ ಎಂದು ಹೇಳಿದರು.

‘ಕೋಣೆ ಇರುವ ಹೋಟೆಲ್‌ಗಳು ಸದ್ಯಕ್ಕೆ ಆರಂಭವಾಗುವುದಿಲ್ಲ. ಉಳಿದಂತೆ ಎಲ್ಲ ಹೋಟೆಲ್‌ಗಳಲ್ಲಿಯೂ ಸೇವೆ ಇರಲಿದೆ. ಹೋಟೆಲ್‌ ಕಾರ್ಮಿಕರು, ಸಿಬ್ಬಂದಿ ಮತ್ತು ಗ್ರಾಹಕರ ಸುರಕ್ಷತೆಗೆ ಅಗತ್ಯವಿರುವ ಎಲ್ಲ ಕ್ರಮಗಳನ್ನೂ ಕೈಗೊಳ್ಳಲಾಗಿದೆ. ಕೋವಿಡ್ ಮಾರ್ಗಸೂಚಿಯನ್ವಯವೇ ಹೋಟೆಲ್‌ಗಳು ಕಾರ್ಯನಿರ್ವಹಿಸಲಿವೆ’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT