ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಡಬ್ಲ್ಯುಡಿ: ಮತ್ತೆ 9 ಮಂದಿಗೆ ಬಡ್ತಿಗೆ ತರಾತುರಿ?

ರಾಜ್ಯಪಾಲರಿಗೆ ದೂರು ಕೊಟ್ಟ ಎಸ್‌ಸಿಎಸ್‌ಟಿ ನೌಕರರ ಸಮಿತಿ
Last Updated 16 ಜುಲೈ 2019, 19:42 IST
ಅಕ್ಷರ ಗಾತ್ರ

ಬೆಂಗಳೂರು: ಮೈತ್ರಿ ಸರ್ಕಾರ ವಿಶ್ವಾಸಮತ ಯಾಚನೆಗೆ ದಿನ ನಿಗದಿಯಾಗಿರುವ ಬೆನ್ನಲ್ಲೇ, ಲೋಕೋಪಯೋಗಿ ಇಲಾಖೆಯಲ್ಲಿ ಮತ್ತೆ 9 ಮುಖ್ಯ ಎಂಜಿನಿಯರ್‌ ಹುದ್ದೆಗೆ ಬಡ್ತಿ ನೀಡಲು ತರಾತುರಿಯ ಪ್ರಯತ್ನ ನಡೆದಿದೆ.

ಮುಖ್ಯ ಎಂಜಿನಿಯರ್‌ ವೃಂದಕ್ಕೆ 34 ಮಂದಿಗೆ ಬಡ್ತಿ ನೀಡಲು ಲೋಕೋಪಯೋಗಿ ಇಲಾಖೆ ಜುಲೈ 12ರಂದು ಪಟ್ಟಿ ಸಿದ್ಧಪಡಿಸಿತ್ತು. ಈ ಅಧಿಕಾರಿಗಳ ಸೇವಾ ವಿವರದ ಮಾಹಿತಿ ಒದಗಿಸುವಂತೆ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿತ್ತು. ಈಗ ಈ ಪಟ್ಟಿಗೆ 9 ಸೂಪರಿಂಟೆಂಡೆಂಟ್‌ ಎಂಜಿನಿಯರ್‌ಗಳ ಹೆಸರು ಸೇರ್ಪಡೆ ಮಾಡಲಾಗಿದೆ.

ಇಲಾಖೆಯಲ್ಲಿ ಪ್ರಸ್ತುತ ಮುಖ್ಯ ಎಂಜಿನಿಯರ್‌ ವೃಂದದಲ್ಲಿ 15 ಹುದ್ದೆಗಳು ಖಾಲಿ ಇದ್ದು, ಸೂಪರಿಂಟೆಂಡೆಂಟ್‌ ಎಂಜಿನಿಯರ್‌
ಗಳಿಗೆ ಬಡ್ತಿ ನೀಡುವ ಮೂಲಕ ಭರ್ತಿ ಮಾಡಬೇಕಿದೆ. ಕರ್ನಾಟಕ ಸಿವಿಲ್‌ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು 1977ರ ನಿಯಮ 3 (2) ಎ ಅನ್ವಯ ಅರ್ಹ ಅಭ್ಯರ್ಥಿಗಳ ಸೇವಾ ವಿವರ ಹಾಗೂ ದಾಖಲೆಗಳನ್ನು ಒಳಗೊಂಡ ಪ್ರಸ್ತಾವನೆ ಸಲ್ಲಿಸುವಂತೆ ಸಿಬ್ಬಂದಿ ಹಾಗೂ ಸುಧಾರಣಾ ಇಲಾಖೆಯು ಲೋಕೋಪಯೋಗಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರಿಗೆ ಜುಲೈ 9ರಂದು ಸೂಚಿಸಿತ್ತು.

‘15 ಹುದ್ದೆಗಳಷ್ಟೇ ಖಾಲಿ ಇವೆ. ಆದರೆ, ಅಗತ್ಯಕ್ಕಿಂತ ಹೆಚ್ಚು ಹುದ್ದೆ ಸೃಷ್ಟಿಸಿ ಎಲ್ಲರಿಗೂ ಬಡ್ತಿ ನೀಡಲು ಒತ್ತಡ ಹೇರಲಾಗುತ್ತಿದೆ. ಇದಕ್ಕೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೂ, ಸಚಿವರ ಮೂಲಕ ಕೆಲವು ಅಧಿಕಾರಿಗಳು ಒತ್ತಡ ಹೇರುತ್ತಿದ್ದಾರೆ’ ಎಂದು ಹೆಸರು ಹೇಳಲಿಚ್ಚಿಸದ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ರಾಜ್ಯಪಾಲರಿಗೆ ದೂರು: ಲೋಕೋಪಯೋಗಿ ಇಲಾಖೆಯಲ್ಲಿ ಹುದ್ದೆ ಖಾಲಿ ಇಲ್ಲದಿದ್ದರೂ ಬೇಕಾಬಿಟ್ಟಿಯಾಗಿ ಬಡ್ತಿ ನೀಡಲಾಗಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ನೌಕರರ ಸಮನ್ವಯ ಸಮಿತಿಯು ರಾಜ್ಯಪಾಲ ವಜುಭಾಯಿ ವಾಲಾ ಅವರಿಗೆ ಮಂಗಳವಾರ ದೂರು ನೀಡಿದೆ.

‘ಬಡ್ತಿ ಮೀಸಲಾತಿ ಕಾಯ್ದೆ ಪ್ರಕಾರ, ಇಲಾಖೆಯಲ್ಲಿ ಅಂತಿಮ ಜ್ಯೇಷ್ಠತಾ ಪಟ್ಟಿಯನ್ನು ಇನ್ನೂ ಸಿದ್ಧಪಡಿಸಿಲ್ಲ. ಇಲಾಖೆಯಲ್ಲಿ ಇರುವುದು 520 ಎಂಜಿನಿಯರ್ ಹುದ್ದೆಗಳು. ಆದರೂ, 213 ಮಂದಿಯನ್ನು ಕಾರ್ಯನಿರ್ವಾಹಕ ಎಂಜಿನಿಯರ್ ವೃಂದಕ್ಕೆ ಬಡ್ತಿ ನೀಡಲಾಗಿದೆ. 150 ಅರ್ಹ ಅಭ್ಯರ್ಥಿಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಹುದ್ದೆಗಳು ಇಲ್ಲದಿದ್ದರೂ 114 ಅಧಿಕಾರಿಗಳಿಗೆ ಬಡ್ತಿ ನೀಡಲಾಗಿದೆ. ಈ ಎಲ್ಲ ಬಡ್ತಿಗಳನ್ನು ರದ್ದುಪಡಿಸಬೇಕು’ ಎಂದು ಸಮನ್ವಯ ಸಮಿತಿಯ ಅಧ್ಯಕ್ಷ ಡಿ.ಶಿವಶಂಕರ್‌ ಹಾಗೂ ಕಾನೂನು ಸಲಹೆಗಾರ ಡಿ.ಚಂದ್ರಶೇಖರಯ್ಯ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT