ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊರಗುತ್ತಿಗೆ ಶಿಕ್ಷಕರು ಬಾಣಲೆಯಿಂದ ಬೆಂಕಿಗೆ!

ಗುಣಮಟ್ಟದ ಶಿಕ್ಷಣ ಎಂದರೆ ಕಡಿಮೆ ವೇತನ ಕೊಡುವುದೇ: ಹೊರಗುತ್ತಿಗೆ ಶಿಕ್ಷಕರ ಪ್ರಶ್ನೆ
ಗುರು ಪಿ.ಎಸ್.
Published 25 ಡಿಸೆಂಬರ್ 2023, 20:17 IST
Last Updated 25 ಡಿಸೆಂಬರ್ 2023, 20:17 IST
ಅಕ್ಷರ ಗಾತ್ರ

ಬೆಂಗಳೂರು: ‘ನಾವೆಲ್ಲರೂ ಬಾಣಲೆಯಿಂದ ಬೆಂಕಿಗೆ ಬೀಳುವ ಭೀತಿಯಲ್ಲಿದ್ದೇವೆ...’

ಬಿಬಿಎಂಪಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರ ಆತಂಕದ ಮಾತು ಇದು.

ಬಿಬಿಎಂಪಿ ಶಾಲೆಗಳಿಗೆ ಶಿಕ್ಷಕರನ್ನು ಪೂರೈಸುವ ಜವಾಬ್ದಾರಿಯನ್ನು ಶಿಕ್ಷಣ ಇಲಾಖೆಗೆ ನೀಡುವ ಸರ್ಕಾರದ ನಿರ್ಧಾರ 500ಕ್ಕೂ ಹೆಚ್ಚಿನ ಶಿಕ್ಷಕರನ್ನು ಚಿಂತೆಗೀಡುಮಾಡಿದೆ.

‘ಬಿಬಿಎಂಪಿ ಪ್ರೌಢಶಾಲೆಯಲ್ಲಿ 15 ವರ್ಷಗಳಿಂದ ನಾನು ಹೊರಗುತ್ತಿಗೆ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದೇನೆ. ತಿಂಗಳಿಗೆ ಕೇವಲ ₹18,500 ವೇತನ ಬರುತ್ತಿದೆ. ಬೆಂಗಳೂರಿನಂತಹ ನಗರದಲ್ಲಿ ಇಷ್ಟು ಸಂಬಳದಲ್ಲಿ ಜೀವನ ನಡೆಸುವುದೇ ಕಷ್ಟವಾಗಿದೆ. ಆದರೆ, ಶಿಕ್ಷಕರನ್ನು ಪೂರೈಸುವ ಜವಾಬ್ದಾರಿಯನ್ನು ಶಿಕ್ಷಣ ಇಲಾಖೆಗೆ ವಹಿಸಿದರೆ, ನಾವು ಅತಿಥಿ ಶಿಕ್ಷಕರಾಗಬೇಕಾಗುತ್ತದೆ. ಆಗ, ಇದರ ಅರ್ಧದಷ್ಟೂ ವೇತನ ಕೊಡುವುದಿಲ್ಲ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಶಿಕ್ಷಕರೊಬ್ಬರು ಅಳಲು ತೋಡಿಕೊಂಡರು.

‘ಅನೇಕ ಶಿಕ್ಷಕರು ಹೊರಗುತ್ತಿಗೆಯಲ್ಲೇ 10–15 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಈಗ ಪಾಲಿಕೆ ಬಿಟ್ಟು, ಇಲಾಖೆಗೆ ಹೋದರೆ ಇಷ್ಟು ವರ್ಷಗಳ ನಮ್ಮ ಹೊರಗುತ್ತಿಗೆ ಸೇವೆಯನ್ನು ಗಣನೆಗೇ ತೆಗೆದುಕೊಳ್ಳುವುದಿಲ್ಲ. ಸೇವಾ ಭದ್ರತೆಗಾಗಿ ಹೋರಾಡುತ್ತಿದ್ದ ನಮ್ಮನ್ನು, ಈಗಿರುವ ಕೆಲಸದಿಂದಲೂ ತೆಗೆದುಹಾಕುವ ಪ್ರಯತ್ನ ನಡೆಯುತ್ತಿದೆ’ ಎಂದರು.

‘ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂದು ನಾಲ್ಕು ವರ್ಷಗಳ ಹಿಂದೆ ಪಾಲಿಕೆಯ ಸಾಮಾನ್ಯ ಸಭೆಯಲ್ಲಿಯೇ ತೀರ್ಮಾನ ಆಗಿತ್ತು. ಅದನ್ನು ಅನುಷ್ಠಾನಗೊಳಿಸುವ ವೇಳೆಗೆ ಕೋವಿಡ್‌ ಬಿಕ್ಕಟ್ಟು ಸೃಷ್ಟಿಯಾಯಿತು. ಅದಾದ ನಂತರ, ಪಾಲಿಕೆಯಲ್ಲಿ ಹಣ ಇಲ್ಲ ಎಂದು ಹೇಳತೊಡಗಿದರು. ಗುಣಮಟ್ಟದ ಶಿಕ್ಷಣ ಎಂದರೆ, ಹೊರಗುತ್ತಿಗೆ ಶಿಕ್ಷಕರಿಗೆ ಕಡಿಮೆ ವೇತನ ಕೊಡುವುದು ಎಂದರ್ಥವೇ ’ ಎಂದು ಮತ್ತೊಬ್ಬ ಶಿಕ್ಷಕರು ಪ್ರಶ್ನಿಸಿದರು.

‘ವಯೋಮಿತಿ ಮೀರುತ್ತಿರುವ ನಮ್ಮಂಥ ಅನೇಕರು ಈ ಕೆಲಸವನ್ನೇ ನಂಬಿಕೊಂಡಿದ್ದಾರೆ. ಆದರೂ, ನಮ್ಮ ವಿಷಯದಲ್ಲಿ ಬಿಬಿಎಂಪಿ ಅಧಿಕಾರಿಗಳು ದಿನಕ್ಕೊಂದು ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ’ ಎಂದು ಪ್ರೌಢಶಾಲಾ ಶಿಕ್ಷಕಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

‘ನಮ್ಮಲ್ಲಿ ಎಂಟು ಜನ ಶಿಕ್ಷಕರಿದ್ದೇವೆ. ಅದರಲ್ಲಿ ನಾನೊಬ್ಬನೇ ಕಾಯಂ ಶಿಕ್ಷಕ. ಉಳಿದ ಎಲ್ಲರೂ ಹೊರಗುತ್ತಿಗೆ ಶಿಕ್ಷಕರಾಗಿದ್ದು, ಎಲ್ಲರೂ ಉತ್ತಮವಾಗಿ ಕೆಲಸ ಮಾಡುತ್ತಾರೆ’ ಎಂದು ಬಿಬಿಎಂಪಿ ಬಾಲಕಿಯರ ಪ್ರೌಢಶಾಲೆಯ ಉಪಪ್ರಾಂಶುಪಾಲ ಸಲೀಂ ಹೇಳಿದರು.

‘ಹೊರಗುತ್ತಿಗೆ ಶಿಕ್ಷಕರಿಗೆ ಇನ್ನೂ ಕಡಿಮೆ ವೇತನ ನೀಡಿದರೆ ಅದರಿಂದ ಶಿಕ್ಷಣದ ಗುಣಮಟ್ಟದ ಮೇಲೂ ಪರಿಣಾಮವಾಗಬಹುದು’ ಎಂದು ಬಿಬಿಎಂಪಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಖಜಾಂಚಿ ಎನ್.ಎಸ್. ಸೋಮಶೇಖರ್‌ ಹೇಳಿದರು.

ಬಡವರ ಮಕ್ಕಳೇ ಹೆಚ್ಚಿರುವ ಬಿಬಿಎಂಪಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಬೇಕು ಎಂಬುದು ನಮ್ಮ ಉದ್ದೇಶ. ಶಿಕ್ಷಕರ ಸ್ಥಿತಿ–ಗತಿ ಕುರಿತು ಮತ್ತೊಮ್ಮೆ ಪರಿಶೀಲಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು
ಡಿ.ಕೆ. ಶಿವಕುಮಾರ್, ಬೆಂಗಳೂರು ನಗರಾಭಿವೃದ್ಧಿ ಸಚಿವ

‘ಉತ್ತಮ ಶಿಕ್ಷಕರಿಗೆ ಆತಂಕ ಬೇಡ’

‘ಗುಣಮಟ್ಟ ಸುಧಾರಿಸಬೇಕು ಮತ್ತು ಉತ್ತಮ ಫಲಿತಾಂಶ ಸಿಗಬೇಕು ಎಂಬ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಉತ್ತಮವಾಗಿ ಬೋಧಿಸುವ ಶಿಕ್ಷಕರಿಗೆ ಯಾವುದೇ ಆತಂಕ ಬೇಡ’ ಎಂದು ಬಿಬಿಎಂಪಿ ಮುಖ್ಯಆಯುಕ್ತ ತುಷಾರ್ ಗಿರಿನಾಥ್ ‘ಪ್ರಜಾವಾಣಿ’ಗೆ ತಿಳಿಸಿದರು.

‘2024–25ರಿಂದ ಶಿಕ್ಷಕರನ್ನು ಪೂರೈಸುವ ಜವಾಬ್ದಾರಿ ಶಿಕ್ಷಣ ಇಲಾಖೆಗೆ ನೀಡಲಾಗುತ್ತಿದ್ದರೂ, ಆಯಾ ಶಾಲೆಗಳಿಗೆ ಶಿಕ್ಷಕರನ್ನು ಆಯ್ಕೆ ಮಾಡಿಕೊಳ್ಳುವುದು ಆಯಾ ಎಸ್‌ಡಿಎಂಸಿ ಕರ್ತವ್ಯ.  ಎಸ್‌ಡಿಎಂಸಿಗಳಲ್ಲಿ ಪೋಷಕರೂ ಇರುವುದರಿಂದ ಉತ್ತಮ ಶಿಕ್ಷಕರನ್ನು ತೆಗೆದುಕೊಳ್ಳಬಹುದು. ಬೆಂಗಳೂರಿನಲ್ಲಿ ಈ ಶಿಕ್ಷಕರ ವೇತನ ಎಷ್ಟಿರಬೇಕು ಎಂಬುದನ್ನು ಶಿಕ್ಷಣ ಇಲಾಖೆಯೇ ತೀರ್ಮಾನಿಸುತ್ತದೆ. ಆದರೆ, ನಮ್ಮ ಮೊದಲ ಆದ್ಯತೆ ಈಗ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರನ್ನೇ ತೆಗೆದುಕೊಳ್ಳುವುದಾಗಿರುತ್ತದೆ’ ಎಂದರು.

‘ಬೇರೆ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುವ ಕಾಯಂ ಶಿಕ್ಷಕರು ಬೆಂಗಳೂರಿಗೆ ಬರಬಹುದು. ಪ್ರಾರಂಭದಲ್ಲಿ ಇಂತಹ ಶೇ 10ರಿಂದ ಶೇ 15ರಷ್ಟು ಶಿಕ್ಷಕರನ್ನು ಮಾತ್ರ ಹೊರಗಡೆಯಿಂದ ತೆಗೆದುಕೊಳ್ಳಲು ಮಾತುಕತೆ ನಡೆಸಿದ್ದೇವೆ’ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT