ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲಗುವ ಜಾಗಕ್ಕಾಗಿ ಗಲಾಟೆ: ವ್ಯಕ್ತಿ ಕೊಲೆ

Published 14 ಡಿಸೆಂಬರ್ 2023, 15:51 IST
Last Updated 14 ಡಿಸೆಂಬರ್ 2023, 15:51 IST
ಅಕ್ಷರ ಗಾತ್ರ

ಬೆಂಗಳೂರು: ಮಲಗುವ ಜಾಗದ ವಿಚಾರವಾಗಿ ನಡೆದಿದ್ದ ಗಲಾಟೆಯಲ್ಲಿ ಅಪರಿಚಿತರೊಬ್ಬರನ್ನು ಕೊಲೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಆರ್.ಟಿ. ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಸ್ಥಳೀಯ ನಿವಾಸಿ ಸೈಯದ್ ಕಮ್ರಾನ್ ಹಾಗೂ ವಿಶಾಲ್ ಅಹಿವದಾಸ್ ಬಂಧಿತರು. ಕೊಲೆಯಾದ ವ್ಯಕ್ತಿಯ ಹೆಸರು ಹಾಗೂ ವಿಳಾಸ ಸದ್ಯಕ್ಕೆ ಪತ್ತೆಯಾಗಿಲ್ಲ. ಮೃತದೇಹವನ್ನು ಆಸ್ಪತ್ರೆಯಲ್ಲಿ ಇರಿಸಲಾಗಿದ್ದು, ಫೋಟೊವನ್ನು ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳ ಠಾಣೆಗಳಿಗೆ ಕಳುಹಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಬಂಧಿತ ಆರೋಪಿ ಕಮ್ರಾನ್ ವಿರುದ್ಧ ಈ ಹಿಂದೆಯೇ ಪ್ರಕರಣವೊಂದು ದಾಖಲಾಗಿತ್ತು. ಕುಟುಂಬದವರು ಈತನನ್ನು ಮನೆಯಿಂದ ಹೊರಗೆ ಹಾಕಿದ್ದರು. ಅಂದಿನಿಂದಲೇ ಈತ, ರಸ್ತೆ ಪಕ್ಕದಲ್ಲಿ ಹಾಗೂ ಖಾಲಿ ಕಟ್ಟಡಗಳಲ್ಲಿ ಮಲಗುತ್ತಿದ್ದ. ಆರೋಪಿ ವಿಶಾಲ್‌ ಸಹ ಮನೆಯಿಂದ ದೂರವಿದ್ದ. ಮಲಗುವ ಸ್ಥಳದಲ್ಲಿ ಇಬ್ಬರಿಗೂ ಪರಿಚಯವಾಗಿ ಸ್ನೇಹಿತರಾಗಿದ್ದರು’ ಎಂದು ತಿಳಿಸಿವೆ.

‘ಠಾಣೆ ವ್ಯಾಪ್ತಿಯಲ್ಲಿರುವ ಕೃಷ್ಣಪ್ಪ ಕಾಂಪ್ಲೆಕ್ಸ್‌ ಕಟ್ಟಡದ ಕೆಳ ಮಹಡಿಯಲ್ಲಿ ಅಪರಿಚಿತ ಮಲಗುತ್ತಿದ್ದರು. ಅದೇ ಜಾಗದಲ್ಲಿ ಕಮ್ರಾನ್ ಸಹ ಆಗಾಗ ಬಂದು ಮಲಗುತ್ತಿದ್ದರು. ಡಿ. 11ರಂದು ರಾತ್ರಿ ಅಪರಿಚಿತ ಬೇಗನೇ ಬಂದು ಸ್ಥಳದಲ್ಲಿ ಮಲಗಿದ್ದರು. ತಡರಾತ್ರಿ ಸ್ಥಳಕ್ಕೆ ಬಂದು ಅವರನ್ನು ಎಬ್ಬಿಸಿದ್ದ ಆರೋಪಿ ಕಮ್ರಾನ್, ಬೇರೆಡೆ ಹೋಗಿ ಮಲಗುವಂತೆ ಹೇಳಿದ್ದರು. ವಿಶಾಲ್ ಸಹ ಕಮ್ರಾನ್ ಜೊತೆ ಬಂದಿದ್ದ.’

‘ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿತ್ತು. ಇದೇ ಸಂದರ್ಭದಲ್ಲಿ ಕಮ್ರಾನ್ ಹಾಗೂ ವಿಶಾಲ್, ಅಪರಿಚಿತ ವ್ಯಕ್ತಿ ಮೇಲೆ ಹಲ್ಲೆ ಮಾಡಿದ್ದರು. ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಂದು ಸ್ಥಳದಿಂದ ಪರಾರಿಯಾಗಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

ಚೆನ್ನೈಗೆ ಹೋಗಲು ಸಜ್ಜು: ‘ಕೊಲೆ ನಂತರ ಆರೋಪಿಗಳು, ಪೊಲೀಸರಿಗೆ ಸಿಗಬಾರದೆಂದು ಚೆನ್ನೈಗೆ ಹೋಗಲು ತೀರ್ಮಾನಿಸಿದ್ದರು. ಅದಕ್ಕೆ ಅಗತ್ಯವಿದ್ದ ಹಣಕ್ಕಾಗಿ ಸಂಬಂಧಿಕರು ಹಾಗೂ ಸ್ನೇಹಿತರ ಬಳಿ ಕೇಳಿದ್ದರು. ಯಾರೊಬ್ಬರೂ ಹಣ ಕೊಟ್ಟಿರಲಿಲ್ಲ. ಹೀಗಾಗಿ, ಚೆನ್ನೈಗೆ ಹೋಗಲು ಸಾಧ್ಯವಾಗಲಿಲ್ಲ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಮೃತದೇಹ ನೋಡಿದ್ದ ಸ್ಥಳೀಯರು ಠಾಣೆಗೆ ಮಾಹಿತಿ ನೀಡಿದ್ದರು. ಕೊಲೆ ನಡೆದ ಸ್ಥಳದ ಸಮೀಪದಲ್ಲಿದ್ದ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯ ಪರಿಶೀಲಿಸಿದಾಗ, ಆರೋಪಿಗಳ ಸುಳಿವು ಸಿಕ್ಕಿತ್ತು. ಇಬ್ಬರನ್ನೂ ವಶಕ್ಕೆ ಪಡೆದಾಗ, ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ.’

‘ಮೃತ ವ್ಯಕ್ತಿಯ ಹೆಸರು ಹಾಗೂ ವಿಳಾಸದ ಬಗ್ಗೆ ಆರೋಪಿಗಳಿಗೂ ಮಾಹಿತಿ ಇಲ್ಲ. ಮೃತವ್ಯಕ್ತಿಯ ಹೆಸರು ಇಲ್ಲದೇ, ಆರೋಪಿಗಳನ್ನು ಪತ್ತೆ ಮಾಡಿದ ಅಪರೂಪದ ಪ್ರಕರಣ ಇದಾಗಿದೆ’ ಎಂದು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT