ಗುರುವಾರ , ನವೆಂಬರ್ 26, 2020
22 °C

ಮುನಿರತ್ನ ಹೆಸರಲ್ಲಿ ಅಲ್ಲ ಪಕ್ಷದ ಹೆಸರಲ್ಲಿ ಮತ ಯಾಚನೆ: ತುಳಸಿ ಮುನಿರಾಜುಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಚುನಾವಣೆಯಲ್ಲಿ ಪಕ್ಷದ ‘ಅಭ್ಯರ್ಥಿ’ಯ ಗೆಲುವಿಗಾಗಿ ಕೆಲಸ ಮಾಡುವಂತೆ ಅಧ್ಯಕ್ಷರು ಸೂಚನೆ ನೀಡಿದ್ದಾರೆ. ಅವರ ಮಾತಿಗೆ ಬೆಲೆ ಕೊಟ್ಟು ಹಿಂದೆ ಕ್ಷೇತ್ರದಲ್ಲಿ ಆಗಿದ್ದ ಎಲ್ಲ ಅಪಮಾನಗಳು ಮತ್ತು ನೋವುಗಳನ್ನು ನುಂಗಿಕೊಂಡು ಕೆಲಸ ಮಾಡುತ್ತಿದ್ದೇವೆ’ ಎಂದು ಆರ್‌.ಆರ್‌.ನಗರ ಬಿಜೆಪಿ ಟಿಕೆಟ್‌ ಆಕಾಂಕ್ಷಿ ತುಳಸಿ ಮುನಿರಾಜುಗೌಡ ಹೇಳಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮುನಿರತ್ನ ವಿರುದ್ಧ  ಪರಾಜಿತಗೊಂಡಿದ್ದ ಮುನಿರಾಜುಗೌಡ ಅವರು ಮುನಿರತ್ನ ಅವರ ಆಯ್ಕೆಯನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ  ಸುದೀರ್ಘ ಹೋರಾಟ ನಡೆಸಿದ್ದರು. ಆರ್‌.ಆರ್‌.ನಗರದಲ್ಲಿ ಮುನಿರತ್ನ ವಿರುದ್ಧ ಜಿದ್ದಾಜಿದ್ದಿನ ಹೋರಾಟ ನಡೆಸಿಕೊಂಡೇ ಬಂದಿರುವ ಅವರು, ಈಗ ಪಕ್ಷದ ಅಣತಿಯ ಮೇರೆಗೆ ಅನಿವಾರ್ಯವಾಗಿ ಮುನಿರತ್ನ ಪರ ಮತ ಕೇಳಬೇಕಾಗಿ ಬಂದಿದೆ. ಈ ಕುರಿತು ಅವರು ‘ಪ್ರಜಾವಾಣಿ’ ಜತೆ ಮಾತನಾಡಿದರು.

‘ಆರ್‌.ಆರ್‌.ನಗರದಲ್ಲಿ ಪಕ್ಷವನ್ನು ಗೆಲ್ಲಿಸಲು ಪಕ್ಷದ ಮೂಲ ಕಾರ್ಯಕರ್ತರೆಲ್ಲರೂ ಕೆಲಸ ಮಾಡುತ್ತಿದ್ದೇವೆ. ಇಲ್ಲಿ ಅಭ್ಯರ್ಥಿ ಅಥವಾ ವ್ಯಕ್ತಿ ಎನ್ನುವುದಕ್ಕಿಂತಲೂ ಪಕ್ಷವೇ ನಮಗೆ ಮುಖ್ಯ’ ಎಂದು ಅವರು  ತಿಳಿಸಿದರು.

‘ಪಕ್ಷ ಹೇಳಿದ್ದರಿಂದ ಮುನಿರತ್ನ ಹೆಸರಿನಲ್ಲಿ ಅಲ್ಲದಿದ್ದರೂ ‘ಪಕ್ಷದ’ ಹೆಸರಿನಲ್ಲಿ ಮತ ಕೇಳುತ್ತಿದ್ದೇವೆ. ಕಾಂಗ್ರೆಸ್‌ ಏನೇ ಕಸರತ್ತು ಮಾಡಿದರೂ ಕ್ಷೇತ್ರದಲ್ಲಿ ‘ಬಿಜೆಪಿ’ ಗೆಲ್ಲುತ್ತದೆ ಎಂಬ ವಿಶ್ವಾಸವಿದೆ. ಹಿಂದೆ ಕ್ಷೇತ್ರದಲ್ಲಿ ಮುನಿರತ್ನ ಅವರಿಂದ ನೋವು ಅನುಭವಿಸಿದ್ದ ಪಕ್ಷದ ಕಾರ್ಯಕರ್ತರು ಪ್ರಚಾರಕ್ಕೆ ಇಳಿಯಲು ಹಿಂದೇಟು ಹಾಕಿದ್ದರೂ, ಅವರ ಮನವೊಲಿಸಿದ್ದೇನೆ. ಹೀಗಾಗಿ ಅವರು ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಬೆರಳೆಣಿಕೆಯಷ್ಟು ಕಾರ್ಯಕರ್ತರು ಮಾತ್ರ ವೈಯಕ್ತಿಕ ಕಾರಣಗಳಿಂದ ಪ್ರಚಾರದಲ್ಲಿ ತೊಡಗಿಲ್ಲ’ ಎಂದು ಅವರು ಹೇಳಿದರು.

‘ಮುನಿರತ್ನ ಅವರು ಈವರೆಗೂ ಮೂಲ ಬಿಜೆಪಿ ಕಾರ್ಯಕರ್ತರನ್ನು ಮಾತನಾಡಿಸುವ ಪ್ರಯತ್ನ ಮಾಡಲಿಲ್ಲ. ಅದರ ಅಗತ್ಯವೂ ಇಲ್ಲ. ಪಕ್ಷ ಏನು ಹೇಳುತ್ತದೆಯೋ ಅಷ್ಟು ಮಾಡುವುದು ನಮ್ಮ ಕೆಲಸ. ಅದನ್ನು ಮಾಡುತ್ತಿದ್ದೇವೆ. ನಮ್ಮಷ್ಟಕ್ಕೆ ನಾವು ಪಕ್ಷದ ಪರ ಪ್ರಚಾರ ಮಾಡುತ್ತಿದ್ದರೆ, ಅವರ (ಮುನಿರತ್ನ) ಕಾರ್ಯಕರ್ತರು ಪ್ರತ್ಯೇಕವಾಗಿ ಕೆಲಸ ಮಾಡುತ್ತಿದ್ದಾರೆ. ಅವರೂ ಬಿಜೆಪಿ ಕಾರ್ಯಕರ್ತರನ್ನು ಕೂಡಿಕೊಂಡು ಕೆಲಸ ಮಾಡುವ ಆಸಕ್ತಿ ತೋರಿದಂತಿಲ್ಲ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಮೂಲ ಕಾರ್ಯಕರ್ತರು ಯಾರೂ ತಟಸ್ಥರಾಗಿ ಉಳಿದಿಲ್ಲ. ಆ ರೀತಿ ಮಾಡಿದರೆ, ಅದರಿಂದ ಬಿಜೆಪಿ ಮತದಾರರ ಮಧ್ಯೆ ತಪ್ಪು ಸಂದೇಶ ಹೋಗುತ್ತದೆ. ನಮ್ಮ ಮತದಾರರ ಮನವೊಲಿಸಿ ಪಕ್ಷದ ಪರವಾಗಿ ಮತ ಚಲಾಯಿಸುವಂತೆ ಮನವಿ ಮಾಡುತ್ತಿದ್ದೇವೆ. ಇದು ನಮಗೆ ಅತ್ಯಂತ ಕಷ್ಟದ ಕೆಲಸವಾಗಿದೆ. ಕ್ಷೇತ್ರದ ಸ್ಥಿತಿ ಗೊತ್ತಿರುವವರಿಗೆ ನಮ್ಮ ಮಾತಿನ ಮರ್ಮ ಗೊತ್ತಾಗುತ್ತದೆ’ ಎಂದು ತುಳಸಿ ಮುನಿರಾಜುಗೌಡ ಹೇಳಿದ್ದಾರೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು