ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಪ್ಟೆಂಬರ್‌ನಲ್ಲಿ ವಿಮಾನ ನಿಲ್ದಾಣಕ್ಕೆ ರೈಲು

ರೈಲು ನಿಲ್ದಾಣ ಕಾಮಗಾರಿ ಬಹುತೇಕ ಮುಕ್ತಾಯ
Last Updated 19 ಆಗಸ್ಟ್ 2020, 20:51 IST
ಅಕ್ಷರ ಗಾತ್ರ

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಕೆಐಎ) ರೈಲು ಸಂಪರ್ಕ ಕಲ್ಪಿಸಬೇಕು ಎಂಬ ಬಹುದಿನಗಳ ಕನಸು ನನಸಾಗುವ ಕಾಲ ಕಡೆಗೂ ಸನ್ನಿಹಿತವಾಗಿದೆ. ರೈಲು ನಿಲುಗಡೆ ತಾಣದ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು,ಎಲ್ಲವೂ ಅಂದುಕೊಂಡಂತೆ ಆದರೆ ಸೆಪ್ಟೆಂಬರ್‌ನಲ್ಲಿ ನಿಲ್ದಾಣ ಕಾರ್ಯಾರಂಭ ಮಾಡಲಿದೆ.

‘ಕಾಮಗಾರಿ ಪೂರ್ಣಗೊಂಡಿದ್ದು, ವಿಮಾನ ಪ್ರಯಾಣಿಕರಿಗೆ ರೈಲ್ವೆ ಇಲಾಖೆ ನೀಡುತ್ತಿರುವ ಕೊಡುಗೆ ಇದಾಗಿದೆ’ ಎಂದುರೈಲ್ವೆ ಸಚಿವ ಪಿಯೂಷ್ ಗೋಯಲ್ ಟ್ವೀಟ್ ಮಾಡಿದ್ದಾರೆ.

‘ಬಾಕಿ ಇರುವ ಸಣ್ಣಪುಟ್ಟ ಕೆಲಸ ಮುಂದಿನ ತಿಂಗಳ ವೇಳೆಗೆ ಪೂರ್ಣಗೊಳ್ಳಲಿದ್ದು, ಪ್ರಯಾಣಿಕ ರೈಲುಗಳ ಸಂಚಾರ ಆರಂಭವಾದ ಕೂಡಲೇ ಈ ನಿಲ್ದಾಣ ಕೂಡ ಕಾರ್ಯಾರಂಭಗೊಳ್ಳಲಿದೆ’ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ದೇವನಹಳ್ಳಿ ಮತ್ತು ದೊಡ್ಡಜಾಲ ನಡುವೆ ಇರುವ ಈ ರೈಲು ನಿಲ್ದಾಣವು, ವಿಮಾನ ನಿಲ್ದಾಣದ ಕ್ಯಾಂಪಸ್‌ಗೆ ಹೊಂದಿಕೊಂಡಂತೆಯೇ ಇದೆ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್‌ಆರ್‌) ರೈಲು ನಿಲ್ದಾಣದಿಂದ ಈ ನಿಲ್ದಾಣಕ್ಕೆ 30ರಿಂದ 35 ನಿಮಿಷದಲ್ಲಿ ಪ್ರಯಾಣ ಮಾಡಬಹುದು. ಅಲ್ಲದೇ ₹30 ದರದಲ್ಲೇ ವಿಮಾನ ನಿಲ್ದಾಣಕ್ಕೆ ತಲುಪಬಹುದು.

ವಿಮಾನ ಪ್ರಯಾಣಿಕರು ಮತ್ತು ನಿಲ್ದಾಣ ಉದ್ಯೋಗಿಗಳು ಬಿಎಂಟಿಸಿ ಬಸ್ ಮತ್ತು ದುಬಾರಿ ವೆಚ್ಚದ ಕ್ಯಾಬ್‌ಗಳನ್ನು ಅವಲಂಬಿಸಿದ್ದಾರೆ. ಮೆಜೆಸ್ಟಿಕ್‌ನಿಂದ ವಿಮಾನ ನಿಲ್ದಾಣಕ್ಕೆ ತೆರಳುವ ಬಿಎಂಟಿಸಿ ‘ವಜ್ರವಾಯು’ ಬಸ್‌ ಪ್ರಯಾಣ ದರ ₹235 ಇದೆ. ಕನಿಷ್ಠ ಒಂದು ಗಂಟೆಯಾದರೂ ಸಮಯ ಬೇಕಾಗುತ್ತಿದೆ. ಈ ಎಲ್ಲಾ ಸಮಸ್ಯೆಗಳಿಗೂ ಹೊಸ ರೈಲು ನಿಲ್ದಾಣ ಪರಿಹಾರ ನೀಡಲಿದೆ.

‘₹3 ಕೋಟಿ ಮೊತ್ತದ ಯೋಜನೆಯ ಸಂಪೂರ್ಣ ವೆಚ್ಚವನ್ನು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್‌ (ಬಿಐಎಎಲ್‌) ಭರಿಸಿದೆ’ ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಇ. ವಿಜಯಾ ತಿಳಿಸಿದರು.

‘ಈ ಮಾರ್ಗದಲ್ಲಿ ಸದ್ಯ ಸಂಚರಿಸುತ್ತಿರುವ ಎಲ್ಲಾ 6 ರೈಲುಗಳ ನಿಲುಗಡೆಗೂ ಅವಕಾಶ ನೀಡಲಾಗುವುದು. ಜನರ ಪ್ರತಿಕ್ರಿಯೆ ಆಧರಿಸಿ ರೈಲುಗಳ ಸಂಖ್ಯೆ ಹೆಚ್ಚಿಸಲಾಗುವುದು’ ಎಂದು ಹೇಳಿದರು.

‘ವಿಮಾನ ನಿಲ್ದಾಣದಿಂದ ರೈಲು ನಿಲ್ದಾಣಕ್ಕೆ 3.5 ಕಿಲೋ ಮೀಟರ್ ದೂರವಿದೆ. ಪ್ರಯಾಣಿಕರ ಸಂಚಾರಕ್ಕೆ ಬಿಐಎಎಲ್‌ ಸ್ವಂತ ಬಸ್‌ಗಳ ಸಂಚಾರ ಆರಂಭಿಸಲು ಸಿದ್ಧತೆ ಮಾಡಿಕೊಂಡಿದೆ. 8ರಿಂದ 15 ನಿಮಿಷದ ಹಾದಿ ಇದಾಗಲಿದೆ’ ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT