ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | ದಿನವಿಡೀ ಮಳೆ; ತಣ್ಣಗಾಯಿತು ಇಳೆ

ಮಾರತ್‌ಹಳ್ಳಿ, ಎಂ.ಎಸ್‌.ಪಾಳ್ಯ, ಜಯಮಹಲ್ ರಸ್ತೆಯಲ್ಲಿ ಪರದಾಡಿದ ವಾಹನ ಸವಾರರು
Published 20 ಮೇ 2024, 0:30 IST
Last Updated 20 ಮೇ 2024, 0:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ವಿವಿಧೆಡೆ ಭಾನುವಾರ ಉತ್ತಮ ಮಳೆಯಾಗಿದ್ದು, ಯಲಹಂಕದ ನಾರ್ತ್‌ಹುಡ್‌ ಅಪಾರ್ಟ್‌ಮೆಂಟ್‌ ಒಳಗೆ ನೀರು ನುಗ್ಗಿದೆ. ವಿವಿಧೆಡೆ ರಸ್ತೆಗಳಲ್ಲಿಯೇ ನೀರು ಹರಿದ ಕಾರಣ ವಾಹನ ಸಂಚಾರಕ್ಕೆ ತೊಡಕು ಉಂಟಾಗಿದೆ.

ಶನಿವಾರ ತಡರಾತ್ರಿವರೆಗೆ ಮಳೆ ಸುರಿದಿದ್ದು, ಭಾನುವಾರ ಮುಂಜಾನೆ ಸ್ವಲ್ಪ ಕಡಿಮೆಯಾಗಿತ್ತು. ಬಳಿಕ ದಿನವಿಡೀ ನಗರದ ಬೇರೆ ಬೇರೆ ಪ್ರದೇಶಗಳಲ್ಲಿ ಮಳೆ ಸುರಿಯತೊಡಗಿತು. ಸಂಜೆ ಗುಡುಗು ಸಹಿತ ಮಳೆಯಾಗಿದೆ.

ಮಾರತ್‌ಹಳ್ಳಿ ಪೊಲೀಸ್‌ ಠಾಣೆ ಬಳಿಯ ಸರ್ವಿಸ್‌ ರಸ್ತೆಯಲ್ಲಿ ನೀರು ನಿಂತು ಕಾಲುವೆಯಂತಾಯಿತು. ಕಾಡುಬೀಸನಹಳ್ಳಿ ಕಡೆಗೆ ಸಂಚರಿಸುವ ವಾಹನಗಳು ಇದರಿಂದ ನಿಧಾನವಾಗಿ ಸಾಗುವಂತಾಯಿತು. ಎಂ.ಎಸ್‌. ಪಾಳ್ಯದಲ್ಲಿ ರಸ್ತೆ ಕಾಣದಷ್ಟು ನೀರು ನಿಂತಿತ್ತು. ಜಯಮಹಲ್‌ ರಸ್ತೆಯ ಸಿಕ್ಯುಎಸಿ ಬಳಿ ರಸ್ತೆಯಲ್ಲಿಯೇ ನೀರು ಪ್ರವಾಹದಂತೆ ಹರಿಯಿತು. ಬಿನ್ನಿಮಿಲ್‌ ಬಳಿ ರಸ್ತೆಯಲ್ಲಿ ನೀರು ನಿಂತಿದ್ದರಿಂದ ಹುಣಸೆಮರ ಜಂಕ್ಷನ್‌ ಕಡೆಗೆ ಸಾಗುವ ವಾಹನಗಳಿಗೆ ತೊಂದರೆ ಉಂಟಾಯಿತು.

ಪೀಣ್ಯ ಪ್ಲೈಓವರ್ ರಸ್ತೆಯಲ್ಲಿ ನೀರು ಹರಿದ ಕಾರಣ ಎರಡೂ ಕಡೆಯ ವಾಹನಗಳ ಸಂಚಾರ ನಿಧಾನಗತಿ ಪಡೆಯಿತು. ಇದರಿಂದ ವಾಹನಗಳು ಸಾಲುಗಟ್ಟಿ ನಿಲ್ಲುವಂತಾಯಿತು. ಸಿಟಿ ಮಾರುಕಟ್ಟೆ ಡೌನ್ ರ‍್ಯಾಂಪ್‌ ಬಳಿ ನೀರು ನಿಂತಿದ್ದರಿಂದ ಪುರಭವನ ಕಡೆಗೆ ಸಾಗುವ ವಾಹನಗಳು ಪರದಾಡುವಂತಾಯಿತು.

ಚಾಮರಾಜಪೇಟೆಯಲ್ಲಿ ಮಳೆಯ ಸಿಂಚನದ ನಡುವೆಯೇ ಸಾಗಿದವರು –ಪ್ರಜಾವಾಣಿ ಚಿತ್ರ: ಎಂ.ಎಸ್‌.ಮಂಜುನಾಥ್‌
ಚಾಮರಾಜಪೇಟೆಯಲ್ಲಿ ಮಳೆಯ ಸಿಂಚನದ ನಡುವೆಯೇ ಸಾಗಿದವರು –ಪ್ರಜಾವಾಣಿ ಚಿತ್ರ: ಎಂ.ಎಸ್‌.ಮಂಜುನಾಥ್‌

ಬಸವನಗುಡಿ, ಪುಲಕೇಶಿನಗರ, ರಾಜಾಜಿನಗರ, ಎಂ.ಜಿ. ರಸ್ತೆ, ಶಿವಾಜಿನಗರ, ಆರ್‌.ಟಿ.ನಗರ, ಎಚ್‌ಆರ್‌ಬಿಆರ್‌ ಬಡಾವಣೆ, ರಿಚ್‌ಮಂಡ್‌ ಸರ್ಕಲ್‌, ರಾಜಮಹಲ್‌ ಗುಟ್ಟಹಳ್ಳಿ, ಆರ್‌.ಆರ್‌. ನಗರ, ಯಶವಂತಪುರ, ಹೆಬ್ಬಾಳ, ಸಂಪಂಗಿನಗರ, ಶಾಂತಿನಗರ ಸೇರಿ ಅನೇಕ ಕಡೆ ಉತ್ತಮ ಮಳೆಯಾಗಿದೆ.

ನಗರದಲ್ಲಿ ಎರಡು ದಿನ ಭಾರಿ ಮಳೆ: ನಗರದ ಹಲವೆಡೆ ಸೋಮವಾರ ಹಾಗೂ ಮಂಗಳವಾರ ಧಾರಾಕಾರ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಯಲಹಂಕದ ನಾರ್ತ್‌ಹುಡ್‌ ಅಪಾರ್ಟ್‌ಮೆಂಟ್‌ ಪಕ್ಕದ ರಸ್ತೆಯಲ್ಲಿ ನೀರು ಹೀಗೆ ತುಂಬಿದೆ ನೋಡಿ
ಯಲಹಂಕದ ನಾರ್ತ್‌ಹುಡ್‌ ಅಪಾರ್ಟ್‌ಮೆಂಟ್‌ ಪಕ್ಕದ ರಸ್ತೆಯಲ್ಲಿ ನೀರು ಹೀಗೆ ತುಂಬಿದೆ ನೋಡಿ

ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದೆ. ಮಧ್ಯಾಹ್ನ, ಸಂಜೆ ಅಥವಾ ತಡರಾತ್ರಿ ಗುಡುಗು, ಮಿಂಚು ಸಹಿತ ಧಾರಾಕಾರ ಮಳೆಯಾಗಲಿದೆ ಎಂದು ಸೂಚನೆ ನೀಡಿದೆ.

ನಗರದಲ್ಲಿ ಗರಿಷ್ಠ 29 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 22 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗುವ ಸಾಧ್ಯತೆಯಿದೆ ಎಂದು ಹೇಳಿದೆ.

ನಾಯಂಡಹಳ್ಳಿ ವೃತ್ತದಲ್ಲಿ ಜಲಭರಿತ ರಸ್ತೆಯಲ್ಲಿ ವಾಹನ ಚಾಲಕರು ಚಿಂತಿಸಿ ಮುಂದೆ ಸಾಗಬೇಕಾಯಿತು -ಪ್ರಜಾವಾಣಿ ಚಿತ್ರ/ರಂಜು ಪಿ
ನಾಯಂಡಹಳ್ಳಿ ವೃತ್ತದಲ್ಲಿ ಜಲಭರಿತ ರಸ್ತೆಯಲ್ಲಿ ವಾಹನ ಚಾಲಕರು ಚಿಂತಿಸಿ ಮುಂದೆ ಸಾಗಬೇಕಾಯಿತು -ಪ್ರಜಾವಾಣಿ ಚಿತ್ರ/ರಂಜು ಪಿ
ಎಂ.ಜಿ ರಸ್ತೆಯಲ್ಲಿ ಮಗು ಜತೆಗೆ ಹುಡುಗಿಯೊಬ್ಬಳು ಫ್ಲೆಕ್ಸ್‌ ಕೆಳಗೆ ಕುಳಿತು ಮಳೆಯಿಂದ ರಕ್ಷಣೆ ಪಡೆದಳು - ಪ್ರಜಾವಾಣಿ ಚಿತ್ರ/ಕಿಶೋರ್ ಕುಮಾರ್ ಬೋಳಾರ್
ಎಂ.ಜಿ ರಸ್ತೆಯಲ್ಲಿ ಮಗು ಜತೆಗೆ ಹುಡುಗಿಯೊಬ್ಬಳು ಫ್ಲೆಕ್ಸ್‌ ಕೆಳಗೆ ಕುಳಿತು ಮಳೆಯಿಂದ ರಕ್ಷಣೆ ಪಡೆದಳು - ಪ್ರಜಾವಾಣಿ ಚಿತ್ರ/ಕಿಶೋರ್ ಕುಮಾರ್ ಬೋಳಾರ್

ವಿಲ್ಲಾಗಳಿಗೆ ನುಗ್ಗಿದ ಕೊಳಚೆ ನೀರು

ಯಲಹಂಕದಲ್ಲಿ ರಾಜಕಾಲುವೆ ಸಮಸ್ಯೆಯಿಂದಾಗಿ ನಾರ್ತ್‌ಹುಡ್‌ ಅಪಾರ್ಟ್‌ಮೆಂಟ್‌ ಅಪಾರ್ಟ್‌ಮೆಂಟ್‌ ಮತ್ತು ಸುತ್ತಮುತ್ತಲಿನ ವಿಲ್ಲಾಗಳಿಗೆ ಕೊಳಚೆ ನೀರು ಹಾಗೂ ಮಳೆ ನೀರು ನುಗ್ಗಿತು. ರಸ್ತೆಯೇ ಕಾಣದಂತ ಪರಿಸ್ಥಿತಿ ಉಂಟಾಯಿತು. ಹಲವು ಮನೆಗಳ ಒಳಗೆ ಒಂದಡಿಗಿಂತ ಎತ್ತರದಷ್ಟು ನೀರು ನಿಂತು ದವಸ ಧಾನ್ಯಗಳು ಬಟ್ಟೆ ಇನ್ನಿತರ ವಸ್ತುಗಳು ನೀರಿನಲ್ಲಿ ಒದ್ದೆಯಾದವು. ‘ರಾಜಕಾಲುವೆಯನ್ನು ಸರಿಪಡಿಸದೇ ಇರುವುದರಿಂದ ಮಳೆ ಬಂದರೆ ಸಮಸ್ಯೆಯಾಗಲಿದೆ ಎಂದು ವಾರದ ಹಿಂದೆಯೇ ಬಿಬಿಎಂಪಿ ಅಧಿಕಾರಿಗಳಿಗೆ ಮನವಿ ನೀಡಿದ್ದೆವು. ಎಲ್ಲ ಸರಿ ಮಾಡುತ್ತೇವೆ ಒತ್ತಡ ಹೇರಬೇಡಿ ಎಂದು ಅಧಿಕಾರಿಗಳು ತಿಳಿಸಿದ್ದರು. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ. ಕಳೆದ ವರ್ಷ ಮಳೆಗಾಲದಲ್ಲಿಯೂ ನೀರು ಬಂದಿತ್ತಾದರೂ ಈ ಪ್ರಮಾಣದಲ್ಲಿ ಇರಲಿಲ್ಲ. ಇಷ್ಟೊಂದು ನೀರು ನುಗ್ಗುವಷ್ಟು ಮಳೆಯಾಗಿಲ್ಲ. ರಾಜಕಾಲುವೆಯ ಕೊಳಚೆ ನುಗ್ಗಿದೆ. ವಾಸನೆಯಿಂದ ಬದುಕುವುದೇ ಕಷ್ಟ’ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

ಕೆ.ಆರ್. ಮಾರ್ಕೆಟ್‌ ರಸ್ತೆಯಲ್ಲಿ ಮಳೆ ನೀರು ದಾಟಿ ಮುಂದಕ್ಕೆ ಹೋಗಲು ಜನರ ಪಡಿಪಾಟಲು–ಪ್ರಜಾವಾಣಿ ಚಿತ್ರ: ಎಂ.ಎಸ್‌.ಮಂಜುನಾಥ್‌
ಕೆ.ಆರ್. ಮಾರ್ಕೆಟ್‌ ರಸ್ತೆಯಲ್ಲಿ ಮಳೆ ನೀರು ದಾಟಿ ಮುಂದಕ್ಕೆ ಹೋಗಲು ಜನರ ಪಡಿಪಾಟಲು–ಪ್ರಜಾವಾಣಿ ಚಿತ್ರ: ಎಂ.ಎಸ್‌.ಮಂಜುನಾಥ್‌

ಭಾನುವಾರ ಬೆಳಿಗ್ಗೆ 8.30ರ ವರೆಗೆ ಸುರಿದ ಮಳೆ (ಸೆಂ.ಮೀಗಳಲ್ಲಿ)

  • ಯಲಹಂಕ;6.4

  • ವಿದ್ಯಾರಣ್ಯಪುರ;5.8

  • ನಂದಿನಿ ಬಡಾವಣೆ;5.5

  • ಶೆಟ್ಟಿಹಳ್ಳಿ;4.9

  • ಚೌಡೇಶ್ವರಿ ವಾರ್ಡ್‌;4.8

  • ಬಾಗಲಗುಂಟೆ;4.5

  • ಮಾರಪ್ಪನಪಾಳ್ಯ;3.9

  • ನಾಗಪುರ;3.3

  • ಪೀಣ್ಯ ಇಂಡಸ್ಟ್ರಿಯಲ್‌ ಪ್ರದೇಶ;3.1

  • ಕೊಡಿಗೆಹಳ್ಳಿ;2.8

ಹೆಸರುಘಟ್ಟ ಹೋಬಳಿಯಲ್ಲಿ 9 ಸೆಂ.ಮೀ. ಮಳೆ: 

ಹೆಸರಘಟ್ಟ ಹೋಬಳಿಯಾದ್ಯಂತ ಶನಿವಾರ ರಾತ್ರಿ ಮತ್ತು ಭಾನುವಾರ ಭಾರಿ ಮಳೆಯಾಗಿದ್ದು 9 ಸೆಂ.ಮೀ. ಮಳೆ ದಾಖಲಾಗಿದೆ.  ಹುರುಳಿಚಿಕ್ಕನಹಳ್ಳಿ ಮತ್ತು ಹೆಸರಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರಂತರವಾಗಿ ಉತ್ತಮ ಮಳೆಯಾಗಿದೆ. ಗೋಪಾಲಪುರ ಬೊಮ್ಮಶೆಟ್ಟಹಳ್ಳಿ ಹುಸ್ಕೂರು ತೋಟಗೆರೆ ಸೇರಿದಂತೆ ಹಲವೆಡೆ ಗುಡುಗು ಸಹಿತ ಶನಿವಾರ ರಾತ್ರಿ ಮಳೆಯಾಗಿದ್ದು ಭಾನುವಾರ ಕೂಡ ಮುಂದುವರಿಯಿತು.  ಪೀಣ್ಯ ದಾಸರಹಳ್ಳಿ ವರದಿ: ಶೆಟ್ಟಿಹಳ್ಳಿ ಬಾಗಲಗುಂಟೆ ದಾಸರಹಳ್ಳಿ ಚಿಕ್ಕಬಾಣಾವರ ತುಮಕೂರು ರಸ್ತೆ ಭಾಗಗಳಲ್ಲಿ 20 ನಿಮಿಷಗಳ ಕಾಲ ಉತ್ತಮ ಮಳೆಯಾಯಿತು. ಪೀಣ್ಯ 2ನೇ ಹಂತ ಸುಂಕದಕಟ್ಟೆ ಹೆಗ್ಗನಹಳ್ಳಿ ಭಾಗದಲ್ಲಿ ಸಾಧಾರಣ ಮಳೆಯಾಯಿತು.  ರಾಜರಾಜೇಶ್ವರಿನಗರ ವರದಿ: ಜ್ಞಾನಭಾರತಿ ವಾರ್ಡ್‍ನ ಮುನೇಶ್ವರ ಬಡಾವಣೆಯ ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ನೀರು ನುಗ್ಗಿ ಜನರು ಸಮಸ್ಯೆ ಎದುರಿಸಿದರು. ಲಕ್ಷ್ಮಿದೇವಿನಗರ ವಾರ್ಡ್‍ನ ಹಲವು ಕಡೆ ಮಳೆ ನೀರಿನಿಂದ ಚರಂಡಿ ಕಟ್ಟಿಕೊಂಡಿದ್ದವು. ಬಿಬಿಎಂಪಿ ಸಿಬ್ಬಂದಿ ಚರಂಡಿಯಲ್ಲಿ ಕಟ್ಟಿಕೊಂಡಿದ್ದ ಮಣ್ಣು ತೆಗೆದು ನೀರು ಸರಾಗವಾಗಿ ಹರಿಯುವಂತೆ ಮಾಡಿದರು. ಆರ್.ಆರ್.ನಗರ ಪ್ರವೇಶದ್ವಾರದಲ್ಲಿ ಜಲಾವೃತ್ತಗೊಂಡಿದ್ದರಿಂದ ವಾಹನ ಸವಾರರು ಪರದಾಡಿದರು. ನಾಗರಹೊಳೆನಗರ ಮತ್ತು ವರ್ತುಲ ರಸ್ತೆಯ ಉಲ್ಲಾಳು ಕೆರೆ ಸಮೀಪದಿಂದ ಸೊಣ್ಣೆನಹಳ್ಳಿ ಮಾರುತಿನಗರವರೆಗೆ ರಸ್ತೆಯ ಎರಡು ಕಡೆ ನೀರು ಶೇಖರಣೆಯಾಗಿ ಸವಾರರು ಕಷ್ಟಪಟ್ಟು ಸಂಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT