ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೊಮ್ಮನಹಳ್ಳಿ: ಮನೆಗಳಿಗೆ ನುಗ್ಗಿದ ನೀರು

Published 12 ಮೇ 2024, 16:12 IST
Last Updated 12 ಮೇ 2024, 16:12 IST
ಅಕ್ಷರ ಗಾತ್ರ

ಬೊಮ್ಮನಹಳ್ಳಿ: ಬೊಮ್ಮನಹಳ್ಳಿ ಭಾಗದಲ್ಲಿ ಭಾನುವಾರ ಸುರಿದ ಮಳೆಯು ಸಾರ್ವಜನಿಕರಲ್ಲಿ ಖುಷಿ ತರಿಸಿತು. ಆದರೆ, ಕೇವಲ 15 ನಿಮಿಷ ಬಿರುಸಾಗಿ ಸುರಿದ ಮಳೆಯಿಂದ ತಗ್ಗು ಪ್ರದೇಶಗಳ ರಸ್ತೆಯಲ್ಲಿ ನೀರು ನಿಂತು ಸಂಚಾರಕ್ಕೆ ತೊಂದರೆಯಾಗಿದೆ.

ಬಿಳೇಕಹಳ್ಳಿಯ ತಗ್ಗು ಪ್ರದೇಶಗಳ ರಸ್ತೆಗಳು ಮಳೆಯಿಂದಾಗಿ ಜಲಾವೃತವಾಗಿದ್ದವು. ಸಾಧಾರಣ ಮಳೆಯಾದರೂ ಚರಂಡಿಗಳಲ್ಲಿ ಹೂಳು ತುಂಬಿದ್ದರಿಂದ ಮಳೆ ನೀರು ರಸ್ತೆಗಳಲ್ಲಿ ಹರಿದಿದೆ. ಬಂಡೇಪಾಳ್ಯದ ಕೊಳೆಗೇರಿ ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿ ಜನ ತೊಂದರೆ ಅನುಭವಿಸಿದರು.

‘ಚರಂಡಿ ನೀರು ಮನೆಗೆ ನುಗ್ಗಿ ಮನೆಯಲ್ಲಾ ಗಬ್ಬು ವಾಸನೆ, ಚರಂಡಿ ಹೂಳು ತೆಗೆದಿದ್ದರೆ ತೊಂದರೆ ಆಗುತ್ತಿರಲಿಲ್ಲ, ಆದರೆ, ಬಿಬಿಎಂಪಿಯವರು ಬಡವರು ವಾಸ ಮಾಡುವ ಕಾಲೊನಿ ಕಡೆ ಕಾಲಿಡೋದು ಅಪರೂಪ ಏನ್ಮಾಡೋದು’ ಎಂದು ಬಂಡೇಪಾಳ್ಯ ನಿವಾಸಿ ಗೌರಮ್ಮ ಅಸಹಾಯಕತೆ ವ್ಯಕ್ತಪಡಿಸಿದರು.

‘ಮಳೆ ಆರಂಭವಾದ ಹಿನ್ನೆಲೆಯಲ್ಲಿ ಒಂದು ವಾರದ ಹಿಂದೆಯೇ ಚರಂಡಿ ಹೂಳು ತೆಗೆಯುವಂತೆ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಆದರೆ, ಯಾವುದೇ ಕ್ರಮವಹಿಸಲಿಲ್ಲ. ಹೀಗಾಗಿ ಸಣ್ಣ ಮಳೆ ಸುರಿದರೂ ತೊಂದರೆ ಅನುಭವಿಸುವಂತಾಗಿದೆ’ ಎಂದು ಬಂಡೇಪಾಳ್ಯ ನಿವಾಸಿ ರಾಮಚಂದ್ರ ಹೇಳಿದರು.

‘ಚರಂಡಿ ಹೂಳು ತೆಗೆಯಲು ಯಾವುದೇ ಕಾರ್ಯಾದೇಶ ಈವರೆಗೂ ಬಂದಿಲ್ಲ. ಹೀಗಾಗಿ ಕೆಲಸ ಕೈಗೆತ್ತಿಕೊಳ್ಳಲು ಆಗುತ್ತಿಲ್ಲ. ಮೇಲಧಿಕಾರಿಗಳ ಜತೆ ಚರ್ಚಿಸಿ ಕ್ರಮವಹಿಸುತ್ತೇವೆ’ ಎಂದು ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರಾಜು ಹೇಳಿದರು.

‘ಮಳೆ ಕೊರತೆಯಿಂದ ಈ ಭಾಗದಲ್ಲಿ ಅಂತರ್ಜಲ ಪೂರ್ತಿಯಾಗಿ ಕುಸಿದಿದೆ. ಇದೀಗ ಮಳೆ ಆರಂಭ ಆಗಿರುವುದರಿಂದ ಅಂತರ್ಜಲ ಮರುಪೂರಣ ಆಗುವ ನಿರೀಕ್ಷೆ ಹೊಂದಿದ್ದೇವೆ’ ಎನ್ನುತ್ತಾರೆ ಮೈಕೊ ಬಡಾವಣೆ ನಿವಾಸಿ ಮಹಮ್ಮದ್ ರಫೀಕ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT