ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಭಾವಿಗಳ ಜಾಗ ಉಳಿಸಲು ಬಡವರ ಮನೆ ತೆರವು: ಬಿಬಿಎಂಪಿ ವಿರುದ್ಧ ಆಕ್ರೋಶ

ಕೆ.ಆರ್.ಪುರ – ಬಿಬಿಎಂಪಿ ವಿರುದ್ಧ ಸ್ಥಳೀಯ ನಿವಾಸಿಗಳ ಆಕ್ರೋಶ
Last Updated 11 ಸೆಪ್ಟೆಂಬರ್ 2022, 22:30 IST
ಅಕ್ಷರ ಗಾತ್ರ

ಕೆ.ಆರ್.ಪುರ: ರಾಜಕಾಲುವೆ ಒತ್ತುವರಿ ತೆರವಿಗೆ ಪಾಲಿಕೆ ನಿರ್ಧರಿಸಿದ್ದು, ವೈಜ್ಞಾನಿಕವಾಗಿ ಸರ್ವೇ ನಡೆಸದೆ ಹಾಗೂ ನೋಟಿಸ್‌ ಸಹ ನೀಡದೆ ಪ್ರಭಾವಿಗಳ ಜಮೀನು ಉಳಿಸಲು ಬಡವರ ಮನೆಗಳನ್ನು ಒಡೆಯಲು ಬಿಬಿಎಂಪಿ ಮುಂದಾಗಿದೆ ಎಂದು ಸ್ಥಳೀಯ ನಿವಾಸಿಗಳು ಆಕ್ರೋಶ ಹೊರಹಾಕಿದ್ದಾರೆ.

ಬಸವನಪುರ ವಾರ್ಡ್‌ನ ಗಾಯಿತ್ರಿ ಬಡಾವಣೆಯ ದೇವಸಂದ್ರ ಸ್ಮಶಾನದಿಂದ ಶೀಗೆಹಳ್ಳಿ ಕೆರೆಗೆ ಸಂಪರ್ಕ ಕಲ್ಪಿಸುವ ರಾಜಕಾಲುವೆ ಒತ್ತುವರಿ ತೆರವು ಸೋಮವಾರದಿಂದ ನಡೆಸಲು ಮುಂದಾಗಿದ್ದು, ರಾಜಕಾಲುವೆ ಹೊಂದಿ ಕೊಂಡಿರುವ ಮನೆಗಳಿಗೆ ಗುರುತು ಮಾಡಿ ಮನೆಯ ಅರ್ಧದಷ್ಟು ಭಾಗ ಅಂದರೆ 10 ಮೀಟರ್‌ನಷ್ಟು ಮನೆಯ ಜಾಗವನ್ನು ಒಡೆಯಲು ಮುಂದಾಗಿದೆ. ಬಿಬಿಎಂಪಿಯ ಈ ದಿಢೀರ್ ನಿರ್ಧಾರದಿಂದ ಮನೆ ಕಳೆದುಕೊಳ್ಳುವ ಭೀತಿಯಲ್ಲಿ ಮನೆ ಮಾಲೀಕರದ್ದು.

ಬಸವನಪುರ ವಾರ್ಡಿನ ಗಾಯಿತ್ರಿ ಬಡಾವಣೆ, ಎಸ್.ಆರ್.ಬಡಾವಣೆ, ಮಂಜುನಾಥ್ ಬಡಾವಣೆಯ ಐವತ್ತಕ್ಕೂ ಹೆಚ್ಚು ಮನೆಗಳು ಒತ್ತುವರಿಯಿಂದ ತೆರವು ಕಾರ್ಯ ಸೋಮವಾರದಿಂದ ಆರಂಭಗೊಳ್ಳಲಿರುವುದರಿಂದ 500ಕ್ಕೂ ಹೆಚ್ಚು ಕುಟುಂಬಗಳು ಮನೆ ಕಳೆದುಕೊಳ್ಳುವ ಭೀತಿಯಲ್ಲಿವೆ.

ಅವೈಜ್ಞಾನಿಕವಾಗಿ ಸರ್ವೇ ಕಾರ್ಯ ಮಾಡಿ ಬಡವರ ಮನೆಗಳನ್ನು ಕೆಡವಲು ಬಿಬಿಎಂಪಿ ಮುಂದಾಗಿದ್ದು, ಪಕ್ಕದ ಅಪಾರ್ಟ್‌ಮೆಂಟ್‌ ಹಾಗೂ ಕಾಲೇಜು ಒತ್ತುವರಿ ಮಾಡಿಕೊಂಡಿರುವ ಜಾಗ ಸರ್ವೇ ಮಾಡದೇ ಪ್ರಭಾವಿಗಳ ಒತ್ತಡಕ್ಕೆ ಮಣಿದು ನಮಗೆ ಯಾವುದೇ ನೋಟಿಸ್‌ ನೀಡದೆ ಮನೆ ತೆರವು ಕಾರ್ಯಕ್ಕೆ‌ ಬಿಬಿಎಂಪಿ ಮುಂದಾಗಿದೆ. ಬಿಬಿಎಂಪಿ ಅಧಿಕಾರಿಗಳು ಪ್ರಭಾವಿಗಳ ಅಪಾರ್ಟ್‌ಮೆಂಟ್‌ ಹಾಗೂ ಕಾಲೇಜು ಒತ್ತುವರಿ ಆಗಿರುವ ಬಗ್ಗೆ ಕೆಂಪು ಗುರುತು ಮಾಡಿದ್ದರು. ಈಗ ಏಕಾಏಕಿ ಅವರ ಜಾಗಗಳನ್ನು ಒತ್ತುವರಿ ತೆರವು ಮಾಡದೇ ನಮ್ಮ ಮನೆಗಳನ್ನು ಒಡೆಯಲು ಮುಂದಾಗಿದ್ದಾರೆ ಎಂದು ಮನೆ ಮಾಲೀಕರಾದ ಉಷಾ ರಾಣಿ ಆಕ್ರೋಶ ವ್ಯಕ್ತಪಡಿಸಿದರು.

‘ಹಲವು ವರ್ಷಗಳಿಂದ ಮನೆ ಕಂದಾಯ ಕಟ್ಟಿಕೊಂಡು ಬರುತ್ತಿದ್ದೇವೆ. ಕಾನೂನು ಪ್ರಕಾರ ಯೋಜನಾ ನಕ್ಷೆಗೆ ಬಿಬಿಎಂಪಿಯಿಂದ ಅನುಮೋದನೆ ಪಡೆದಿದ್ದೇವೆ. ಯಾವ ಆಧಾರದ ಮೇಲೆ ನಮ್ಮ ಮನೆ ಒತ್ತುವರಿ ಆಗಿದೆ ಎಂದು ಒಡೆಯುತ್ತಿದ್ದಾರೆ’ ಎಂದು ಸ್ಥಳೀಯ ನಿವಾಸಿ ವೆಂಕಟೇಶ ಹೇಳಿದರು.

ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಇಪ್ಪತ್ತು ವರ್ಷದ ಹಿಂದೆ ಬಡಾವಣೆಯಲ್ಲಿ ನಿವೇಶನ ಖರೀದಿ ಮಾಡಿಕೊಂಡು ಮನೆ ಕಟ್ಟಿಸಿಕೊಂಡಿದ್ದೇವೆ. ಆಗ ಒಂದೂವರೆ ಅಡಿಯಷ್ಟು ಮಾತ್ರ ಮೋರಿ ಇತ್ತು. ರಾಜಕಾಲುವೆ ಇತ್ತೆಂದು ನಮಗೆ ಗೊತ್ತಿರಲಿಲ್ಲ. ನಂತರ ರಾಜಕಾಲುವೆ ಆಗಿದೆ. ಮನೆ ಕಟ್ಟಿಸುವ ಮುಂಚೆಯೆ ರಾಜಕಾಲುವೆಗೆ ಜಾಗ ಬಿಟ್ಟು ಮನೆ ಕಟ್ಟಿಸಿಕೊಂಡಿದ್ದೇವೆ. ಈಗ ಅಧಿಕಾರಿಗಳು ಬಂದು ರಾಜಕಾಲುವೆ ಒತ್ತುವರಿ ಮಾಡಿಕೊಂಡಿದ್ದೇವೆ ಎಂದು ಹೇಳಿ ಮನೆ ಒಡೆಯಲು ಮುಂದಾಗಿದ್ದಾರೆ ಎಂದು ಕಮಲಾ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT