ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕಾಲುವೆಯಲ್ಲೇಕೆ ಕೊಳಕು ನೀರು–ಹೂಳು

Last Updated 11 ಅಕ್ಟೋಬರ್ 2020, 21:30 IST
ಅಕ್ಷರ ಗಾತ್ರ
ADVERTISEMENT
""
""

ಬೆಂಗಳೂರು: ಸಾವಿರ ಕೆರೆಗಳ ನಾಡೆಂದು ಕರೆಸಿಕೊಂಡ ಈ ನಗರದ ರಾಜಕಾಲುವೆಗಳೆಲ್ಲ ನಿರ್ಮಾಣವಾಗಿದ್ದು ರಾಜಮಹಾರಾಜರ ಕಾಲದಲ್ಲಿ. ಮಳೆ ಬಂದು ಒಂದು ಕೆರೆ ತುಂಬಿ ಉಕ್ಕಿ ಹರಿದಾಗ ಹೆಚ್ಚುವರಿ ನೀರು ಪೋಲಾಗದಂತೆ ತಡೆದು ಅದನ್ನು ಇನ್ನೊಂದು ಕೆರೆ ಒಡಲಿಗೆ ಒಯ್ಯುವ ಮೂಲಕ ನಗರದ ಜಲಸೆಲೆಯನ್ನು ಕಾಪಾ ಡುವ ವೈಜ್ಞಾನಿಕ ರಚನೆಗಳೇ ಈ ರಾಜಕಾಲುವೆಗಳು. ಮಳೆನೀರನ್ನು ಕೆರೆಗಳಿಗೆ ಸೇರಿಸಬೇಕಾದ ರಾಜಕಾಲುವೆಗಳಲ್ಲೀಗ ಹರಿಯುತ್ತಿರುವುದು ಕೊಳಕು ನೀರು.

2016–17 ಮತ್ತು 2017–18ರಲ್ಲಿ ಭಾರಿ ಮಳೆಗೆ ನಗರದಲ್ಲಿ ರಾಜಕಾಲುವೆ ಗಳು ಉಕ್ಕಿ ಹರಿದು ಅವಾಂತರ ಸೃಷ್ಟಿಯಾದಾಗ ಸರ್ಕಾರ ಎಚ್ಚೆತ್ತುಕೊಂಡಿತ್ತು. ರಾಜ ಕಾಲುವೆ ಹಾಗೂ ಅದರ ಮೀಸಲು ಪ್ರದೇಶದ ಒತ್ತುವರಿಗಳನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸುವಂತೆ ಕಟ್ಟುನಿಟ್ಟಿನ ಆದೇಶ ಮಾಡಿತು. ರಾಜಕಾಲುವೆಗಳನ್ನು ಸುಸ್ಥಿತಿಗೆ ತರಲು ಭರಪೂರ ಅನುದಾನವನ್ನೂ ಬಿಡುಗಡೆ ಮಾಡಿತು.

ಬಿಬಿಎಂಪಿಯ ಅಂಕಿ ಅಂಶಗಳ ಪ್ರಕಾರ, ಐದು ವರ್ಷಗಳಲ್ಲಿ ರಾಜಕಾಲುವೆಗಳ ಅಭಿವೃದ್ಧಿಗೆ ₹1 ಸಾವಿರ ಕೋಟಿಗೂ ಹೆಚ್ಚು ಖರ್ಚು ಮಾಡಲಾಗಿದೆ. 842 ಕಿ.ಮೀ ಉದ್ದದ ರಾಜಕಾಲುವೆಯಲ್ಲಿ ಸರಿ ಸುಮಾರು 440 ಕಿ.ಮೀ ಉದ್ದದಲ್ಲಿ ಕಾಂಕ್ರೀಟ್‌ ತಡೆಗೋಡೆ ರಚಿಸಲಾಗಿದೆ. ಅದಕ್ಕೆ ಆಳೆತ್ತರದ ತಂತಿ ಬೇಲಿ ನಿರ್ಮಿಸಿ ಕಸ ಸುರಿಯುವುದನ್ನು ನಿಯಂತ್ರಿಸಲಾಗಿದೆ. 14ನೇ ಹಣಕಾಸು ಆಯೋಗದ ಅನುದಾನವನ್ನು ಇದಕ್ಕೆ ಬಳಸಿಕೊಳ್ಳಲು ನಿರ್ಧರಿಸಿತ್ತು. ದುರಸ್ತಿಗೊಂಡ 440 ಕಿ.ಮೀ ಉದ್ದದ ಕಾಲುವೆ ಜಾಲದಲ್ಲಿ ಒಂದು ಬಾರಿಗೆ ಸಂಪೂರ್ಣ ಹೂಳೆತ್ತಲು ₹33.99 ಕೋಟಿ ವೆಚ್ಚ ಮಾಡಲಾಗಿದೆ.

ವಾರ್ಷಿಕ ನಿರ್ವಹಣೆ: ಈ ಹಿಂದೆ ಎಲ್ಲಿ ಕಾಲುವೆಗಳಲ್ಲಿ ಕಸಕಡ್ಡಿ, ಹೂಳು ತುಂಬಿ ನೀರು ಕಟ್ಟಿಕೊಂಡು ಪ್ರವಾಹ ಕಾಣಿಸಿಕೊಳ್ಳುತ್ತದೋ ಅಲ್ಲಿ ಮಾತ್ರ ಗಿಡಗಂಟಿ ತೆರವುಗೊಳಿಸಿ ಹೂಳೆತ್ತಲಾಗುತ್ತಿತ್ತು. ಈ ಕಾಮಗಾರಿಯನ್ನು ತುಂಡು ಗುತ್ತಿಗೆ ನೀಡ ಲಾಗುತ್ತಿತ್ತು. ಬಿಲ್‌ ಪಾವತಿ ವಿಳಂಬವಾಗುತ್ತದೆ ಎಂಬ ಕಾರಣಕ್ಕೆ ಗುತ್ತಿಗೆದಾರರು ತುರ್ತು ಸಂದರ್ಭದಲ್ಲಿ ಕಾಲುವೆ ಹೂಳೆತ್ತಲು ಮುಂದೆ ಬರುತ್ತಿರಲಿಲ್ಲ. ಇದರಿಂದಾಗಿ ರಾಜಕಾಲುವೆಗಳು ಕಟ್ಟಿಕೊಂಡು ಮಳೆ ಬಂದಾಗ ಸಮಸ್ಯೆ ಮತ್ತಷ್ಟು ಬಿಗಡಾಯಿ ಸುತ್ತಿತ್ತು. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ರಾಜಕಾಲುವೆಗಳ ವಾರ್ಷಿಕ ನಿರ್ವಹಣೆಯನ್ನು ಒಂದೇ ಸಂಸ್ಥೆಗೆ ಗುತ್ತಿಗೆ ನೀಡಲು ಬಿಬಿಎಂಪಿ ನಿರ್ಧರಿಸಿತ್ತು.

ಗುತ್ತಿಗೆ ಪಡೆದ ಸಂಸ್ಥೆ ಹೂಳೆತ್ತುವುದಕ್ಕೆ ಎಂಟು ವಲಯಗಳಿಗೆ ಎಂಟು ರೊಬೋಟಿಕ್‌ ಯಂತ್ರಗಳನ್ನ ಬಳಸಬೇಕು. ಎತ್ತಿದ ಹೂಳನ್ನು ಸಾಗಿಸುವುದಕ್ಕೂ ಹೈಡ್ರಾಲಿಕ್‌ ಬಾಗಿಲಿರುವ ಟಿಪ್ಪರ್‌ಗಳನ್ನೇ ಬಳಸಬೇಕು. ಹನಿ ನೀರೂ ಸೋರದಂತೆ ತಡೆಯುವ ವ್ಯವಸ್ಥೆ (ಗ್ಯಾಸ್ಕೆಟ್‌) ಈ ಟಿಪ್ಪರ್‌ನಲ್ಲಿರಬೇಕು. ರಾಜಕಾಲುವೆ ಮೇಲೆ ನಿಗಾ ಇಡಲು 10 ಕಿ.ಮೀ. ದೂರಕ್ಕೆ ಒಬ್ಬ ಮೇಲ್ವಿಚಾರಕ, ಪ್ರತಿ ಕಿ.ಮೀ.ಗೆ ಇಬ್ಬರು ಕಾರ್ಮಿಕರನ್ನು ನೇಮಿಸಬೇಕು ಎಂಬ ಷರತ್ತುಗಳನ್ನು ಒಳಗೊಂಡ ಗುತ್ತಿಗೆ ಇದು.

ನಗರದ ಬ್ಯಾಟರಾಯನಪುರ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಇರುವ ರಾಜಕಾಲುವೆ ಯಲ್ಲಿ ಮಣ್ಣಿನ ರಾಶಿ ಭಾನುವಾರ ಕಂಡುಬಂತು -ಪ್ರಜಾವಾಣಿ ಚಿತ್ರ/ಎಂ.ಎಸ್.ಮಂಜುನಾಥ್

ವಾರ್ಷಿಕ ನಿರ್ವಹಣೆ ಕಾಮಗಾರಿಯನ್ನು ಯೋಗಾ ಆ್ಯಂಡ್‌ ಕೋ ಸಂಸ್ಥೆಗೆ ಮೂರು ವರ್ಷಗಳಿಗೆ ಗುತ್ತಿಗೆ ನೀಡಲಾಗಿದೆ. ವಾರ್ಷಿಕ ₹ 36.64 ಕೋಟಿ ಮೊತ್ತದ ಈ ಗುತ್ತಿಗೆ 2019ರ ಏ.09ರಿಂದ ಜಾರಿಗೆ ಬಂದಿದೆ. ಪ್ರತಿ ಕಿ.ಮೀ. ಉದ್ದದ ರಾಜಕಾಲುವೆ ನಿರ್ವಹಣೆಗೆ ಈ ಸಂಸ್ಥೆಗೆ ₹ 69,390 ಪಾವತಿಸಲಾಗುತ್ತದೆ.

ಗುತ್ತಿಗೆಯ ಎಲ್ಲ ಷರತ್ತುಗಳು ಜಾರಿಯಾಗುತ್ತಿದ್ದರೆ 440 ಕಿ.ಮೀ ಉದ್ದದ ರಾಜಕಾಲುವೆಗಳ ಚಿತ್ರಣವೇ ಬದಲಾಗಬೇಕಿತ್ತು. ವಾಸ್ತವದಲ್ಲಿ ಹಾಗಾಗಿದೆಯೇ ಎಂದು ನೋಡಿದರೆ ನಿರಾಶೆಯಾಗುತ್ತದೆ. ಇತ್ತೀಚಿನ ನಾಲ್ಕೈದು ವರ್ಷಗಳಿಗೆ ಹೋಲಿಸಿದರೆ ಈ ಸಲ ಮಳೆಗೆ ರಾಜಕಾಲುವೆ ಉಕ್ಕಿ ಅನಾಹುತ ಸೃಷ್ಟಿಯಾಗಿರುವ ಪ್ರಮಾಣ ಸ್ವಲ್ಪಕಡಿಮೆ ಎಂಬುದು ನಿಜ. ಆದರೆ, ಗುತ್ತಿಗೆ ಷರತ್ತಿನ ಪ್ರಕಾರ ರಾಜಕಾಲುವೆಗಳ ನಿರ್ವಹಣೆ ಆಗುತ್ತಿಲ್ಲ ಎಂಬುದೂ ಅಷ್ಟೇ ಸತ್ಯ. ಹೂಳೆತ್ತಲು ರೊಬೋಟಿಕ್‌ ಯಂತ್ರ ಬಳಸಬೇಕೆಂದ ಪ್ರಮುಖ ಷರತ್ತೇ ಒಂದೂವರೆ ವರ್ಷದ ಬಳಿಕವೂ ಜಾರಿಯಾಗಿಲ್ಲ.

‘ರೋಬೋಟಿಕ್‌ ಯಂತ್ರ ಬಳಸಿಲ್ಲವಾದರೂ ಹೂಳೆತ್ತುವ ಕಾರ್ಯದಲ್ಲಿ ಲೋಪವಾಗಿಲ್ಲ. ಈ ಯಂತ್ರಗಳನ್ನು ಬಳಸದ ಕಾರಣಕ್ಕೆ ಗುತ್ತಿಗೆದಾರರಿಗೆ ಟೆಂಡರ್‌ ಮೊತ್ತದ ಶೇ 25ರಷ್ಟನ್ನು ದಂಡ ವಿಧಿಸಲಾಗಿದೆ. ಗುತ್ತಿಗೆ ಸಂಸ್ಥೆಯೊಂದಕ್ಕೆ₹10.50 ಕೋಟಿ ದಂಡ ವಿಧಿಸಿದ್ದು ಬಿಬಿಎಂಪಿ ಇತಿಹಾಸದಲ್ಲೇ ಮೊದಲು’ ಎಂದು ಬಿಬಿಎಂಪಿ ಮುಖ್ಯ ಎಂಜಿನಿಯರ್‌ (ರಾಜಕಾಲುವೆ ನಿರ್ಹವಣೆ) ಬಿ.ಎಸ್‌.ಪ್ರಹ್ಲಾದ್‌ ಸಮರ್ಥಿಸಿಕೊಳ್ಳುತ್ತಾರೆ.

ಕೇವಲ ದಂಡ ವಿಧಿಸಿದರೆ ಸಾಕೇ?: ಗುತ್ತಿಗೆ ಕರಾರು ಮಾಡಿಕೊಂಡ ನಾಲ್ಕು ತಿಂಗಳ ಒಳಗೆ ರೊಬೊಟಿಕ್‌ ಯಂತ್ರ ಖರೀದಿಸಬೇಕು ಎಂಬ ಷರತ್ತನ್ನು ಪಾಲಿಸದ ಗುತ್ತಿಗೆಯನ್ನೇಕೆ ರದ್ದು ಮಾಡಿಲ್ಲ ಎಂಬುದು ಪ್ರಶ್ನೆ. ಅಷ್ಟಕ್ಕೂ ರೊಬೋಟಿಕ್‌ ಯಂತ್ರವನ್ನೇ ಬಳಸಬೇಕು ಎಂದು ಬಿಬಿಎಂಪಿ ಷರತ್ತು ವಿಧಿಸಿದ್ದು, ಅವು ರಾಜಕಾಲುವೆಯ ಅಗಲಕ್ಕೆ ಹಾಗೂ ಎತ್ತರಕ್ಕೆ ಅನುಗುಣವಾಗಿ ಗಾತ್ರವನ್ನು ಬದಲು ಮಾಡಿಕೊಳ್ಳುವ ಹಾಗೂಎಂತಹ ಏರು ತಗ್ಗುಗಳನ್ನೂ ಹತ್ತಿಳಿಯುವ ಸಾಮರ್ಥ್ಯವನ್ನು ಹೊಂದಿವೆ. ಕೆಲವು ಇಕ್ಕಟ್ಟಿನ ಪ್ರದೇಶದಲ್ಲೂ ಹೂಳನ್ನು ಚೆನ್ನಾಗಿ ತೆಗೆಯುತ್ತವೆ ಎಂಬ ಕಾರಣಕ್ಕೆ.ರೊಬೊಟಿಕ್‌ ಯಂತ್ರಗಳ ಮಹತ್ವ ಅರ್ಥವಾಗಬೇಕಿದ್ದರೆ ಮಂತ್ರಿ ಮಾಲ್‌ ಬಳಿ ಹಾದು ಹೋಗುವ ರಾಜಕಾಲುವೆಯನ್ನು ನೋಡಬೇಕು. ಅಲ್ಲಿ ಪೆಟ್ರೋಲ್‌ ಬಂಕ್‌ ಪಕ್ಕದಲ್ಲಿ ಜೆಸಿಬಿ ರಾಜಕಾಲುವೆಗೆ ಇಳಿದು ಸ್ವಚ್ಛಗೊಳಿಸಲು ಸಾಧ್ಯವಿಲ್ಲ. ಸಣ್ಣ ಮಳೆಯಾದರೂ ಸಾಕು, ಈ ಪ್ರದೇಶದ ರಸ್ತೆಯಲ್ಲಿ ಮೂರು– ನಾಲ್ಕು ಅಡಿ ನೀರು ನಿಂತು ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗುತ್ತದೆ. ಶನಿವಾರ ರಾತ್ರಿ ಸುರಿದ ಮಳೆಗೂ ಇಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು.

‘ಕೊರೊನಾ ಕಾಣಿಸಿಕೊಂಡಿದ್ದರಿಂದ ಗುತ್ತಿಗೆದಾರರು ಇಟಲಿಯಿಂದ ರೊಬೋಟಿಕ್‌ ಯಂತ್ರ ತರಿಸುವಾಗ ವಿಳಂಬವಾಯಿತು. ನವೆಂಬರ್‌ ಮೊದಲ ವಾರದಲ್ಲೇ ಕನಿಷ್ಠ ನಾಲ್ಕು ರೊಬೋಟಿಕ್ ಯಂತ್ರಗಳಾದರೂ ರಾಜಕಾಲುವೆಗಳಿಗೆ ಇಳಿಯಲಿವೆ’ ಎಂದು ಪ್ರಹ್ಲಾದ್‌ ಭರವಸೆ ನೀಡಿದರು. ನಗರದಲ್ಲಿ ಕಾಂಕ್ರೀಟ್‌ ತಡೆಗೋಡೆಗಳಿರುವ ರಾಜಕಾಲುವೆಗಳಲ್ಲೂ ಹೂಳು ತುಂಬಿರುವ ದೃಶ್ಯ ಮಾಮೂಲಿ. ಗುತ್ತಿಗೆ ಷರತ್ತುಗಳು ಸರಿಯಾಗಿ ಪಾಲನೆಯಾಗುತ್ತಿದ್ದರೆ ಪರಿಸ್ಥಿತಿ ಹೀಗಿರಲು ಹೇಗೆ ಸಾಧ್ಯ?

ಬಿರು ಬೇಸಿಗೆಯಲ್ಲೂ ಬತ್ತದ ರಾಜಕಾಲುವೆಗಳು

ನಗರದ ರಾಜಕಾಲುವೆಗಳು ಬಿರು ಬೇಸಿಗೆಯಲ್ಲೂ ಬತ್ತುವುದಿಲ್ಲ. ಯಾವತ್ತೂ ಬರಿದಾಗದ ಈ ರಾಜಕಾಲುವೆಗಳ ಹಿಂದಿನ ಮರ್ಮ ಅಚ್ಚರಿ ತರುವಂತಹದ್ದು. ಅಪಾರ್ಟ್‌ಮೆಂಟ್‌ಗಳೂ ಸೇರಿದಂತೆ ವಿವಿಧ ಕಟ್ಟಡಗಳು ರಾಜಕಾಲುವೆಗಳಿಗೆ ಶೌಚಾಲಯದ ನೀರನ್ನು ಸಂಸ್ಕರಿಸದೆಯೇ ಹರಿಯ ಬಿಡುತ್ತಿರುವುದೇ ಇದಕ್ಕೆ ಕಾರಣ. ಜಲಮಂಡಳಿಯೂ ಕೆಲವು ಕಡೆ ಒಳಚರಂಡಿಯ ಕೊಳಚೆ ನೀರನ್ನು ಸಂಸ್ಕರಿಸದೆಯೇ ರಾಜಕಾಲುವೆಗಳಿಗೆ ಹರಿಯ ಬಿಡುತ್ತದೆ. ಮಳೆನೀರನ್ನು ಕೆರೆಯ ಒಡಲಿಗೆ ಹರಿಸಬೇಕಾದ ಈ ಕಾಲುವೆಗಳು ಇದರಿಂದಾಗಿ ನಗರದ ಜಲಸೆಲೆಗಳನ್ನೇ ಕಲುಷಿತಗೊಳಿಸುತ್ತಿವೆ. ರಾಜಕಾಲುವೆಗಳನ್ನು ಸ್ವಚ್ಛವಾಗಿಟ್ಟುಕೊಂಡರೆ ನಗರದ ಕೆರೆಗಳೂ ಸ್ವಚ್ಛವಾಗಿರುತ್ತವೆ.

‘ಕಾಲುವೆಗಳಲ್ಲಿ ಗಿಡಗಂಟಿಗಳು ಹುಲುಸಾಗಿ ಬೆಳೆಯುವುದಕ್ಕೆಶೌಚನೀರು ಗೊಬ್ಬರದಂತೆ ವರ್ತಿಸುತ್ತದೆ. ರಾಜಕಾಲುವೆಯನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಸ್ವಚ್ಛಗೊಳಿಸುತ್ತೇವೆ. ಆದರೂ ಒಂದೇ ತಿಂಗಳಲ್ಲಿ ಮತ್ತೆ ಅಲ್ಲಿ ಗಿಡಗಳು ಬೆಳೆಯುತ್ತವೆ’ ಎಂದು ಬಿ.ಎಸ್‌.ಪ್ರಹ್ಲಾದ್‌ ವಿವರಿಸಿದರು.

ಕಾಂಕ್ರೀಟ್‌ ತಡೆಗೋಡೆ ನಿರ್ಮಿಸಿರುವಲ್ಲಿರಾಜಕಾಲುವೆಗೆ ಅಕ್ರಮವಾಗಿ ಶೌಚನೀರನ್ನು ಕಾಲುವೆಗೆ ಹರಿಸಲು ಹೇಗೆ ಸಾಧ್ಯ. ವಾರ್ಷಿಕ ನಿರ್ವಹಣೆ ಗುತ್ತಿಗೆ ಜಾರಿಯಾದ ಬಳಿ ಪ್ರತಿ ಕಿ.ಮೀ ರಾಜಕಾಲುವೆಯನ್ನು ನೋಡಿಕೊಳ್ಳಲು ಇಬ್ಬರು ಸಿಬ್ಬಂದಿಯನ್ನು ನೇಮಿಸಬೇಕು. ಹಾಗಿರುವಾಗ ಯಾರಾದರೂ ಅಕ್ರಮವಾಗಿ ಶೌಚನೀರನ್ನು ಕಾಲುವೆಗೆ ಹರಿಯಬಿಟ್ಟರೆ ಪತ್ತೆಹಚ್ಚುವುದು ಅಷ್ಟೊಂದು ಕಷ್ಟವೇ ಎಂಬುದು ಯಕ್ಷಪ್ರಶ್ನೆ.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಜಲಮಂಡಳಿ 287.7 ಕಿ.ಮೀ ಉದ್ದದ ರಾಜಕಾಲುವೆಯ ಜಂಟಿ ಸಮೀಕ್ಷೆ ನಡೆಸಿವೆ. ಶೌಚನೀರನ್ನು ಸಂಸ್ಕರಿಸದೆಯೇ ರಾಜಕಾಲುವೆಗೆ ಬಿಡುತ್ತಿರುವ 268 ಕಟ್ಟಡ ಮಾಲೀಕರಿಗೆ ಕೆಎಸ್‌ಪಿಸಿಬಿ ನೋಟಿಸ್‌ ನೀಡಿದೆ. ಅದರಲ್ಲಿ 151 ಸಂಪರ್ಕಗಳನ್ನು ಸಕ್ರಮಗೊಳಿಸಲಾಗಿದೆ.

ತೆರವಾಯ್ತೆ 6.5 ಲಕ್ಷ ಘನ ಮೀಟರ್‌ ಹೂಳು?

ನಗರದಲ್ಲಿ 440 ಮೀ ಉದ್ದದ ರಾಜಕಾಲುವೆಯಲ್ಲಿ ಪ್ರತಿ ವರ್ಷ 6.5 ಲಕ್ಷ ಘನ ಮೀಟರ್‌ ಹೂಳು ಉತ್ಪತ್ತಿ ಆಗುತ್ತದೆ ಎಂಬುದು ಬಿಬಿಎಂಪಿ ಅಂದಾಜು. ’ನಗರದಲ್ಲಿ ಪ್ರತಿವರ್ಷ ಸರಾಸರಿ 80 ದಿನ ಮಳೆಯಾಗುತ್ತದೆ. ಒಂದು ದಿನ ಮಳೆಯಾದರೆ ರಾಜಕಾಲುವೆಯಲ್ಲಿ ಅಂದಾಜು 1 ಸೆಂಟಿ ಮೀಟರ್‌ನಷ್ಟು ಹೂಳು ಸೃಷ್ಟಿಯಾಗುತ್ತದೆ. ಅಂದರೆ 80 ದಿನಗಳಲ್ಲಿ 80 ಸೆಂಟಿ ಮೀಟರ್‌ಗಳಷ್ಟು ಹೂಳು ತುಂಬುತ್ತದೆ. ಮಳೆ ಪ್ರಮಾಣ ವ್ಯತ್ಯಯವಾಗುವುದರಿಂದ ಇದರ ಅರ್ಧದಷ್ಟು ಹೂಳನ್ನು ಮಾತ್ರ ನಾವು ಲೆಕ್ಕಕ್ಕೆ ತೆಗೆದುಕೊಳ್ಳುತ್ತೇವೆ. ಈ ಪ್ರಕಾರ ವರ್ಷಕ್ಕೆ ನಾವು ನಿರ್ವಹಣೆಯನ್ನು ಗುತ್ತಿಗೆ ನೀಡಿರುವ ರಾಜಕಾಲುವೆಗಳಲ್ಲಿ ಅಂದಾಜು 6.5 ಲಕ್ಷ ಘನ ಮೀಟರ್‌ ಹೂಳು ಉತ್ಪತ್ತಿಯಾಗುತ್ತದೆ’ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳುತ್ತಾರೆ.

ಈ ಲೆಕ್ಕಾಚಾರ ಒಪ್ಪತಕ್ಕದ್ದೇ. ಬಿಬಿಎಂಪಿ ದಾಖಲೆಗಳ ಪ್ರಕಾರ 2018–19ರಲ್ಲಿ ರಾಜಕಾಲುವೆಗಳಿಂದ 6.52 ಲಕ್ಷ ಘನ ಮೀ. ಹೂಳೆತ್ತಲಾಗಿದ್ದು, ಅದಕ್ಕೆ ₹ 36.88 ಕೋಟಿ ವೆಚ್ಚವಾಗಿದೆ. ಆದರೆ, ಇಷ್ಟೊಂದು ಹೂಳನ್ನು ಬಿಬಿಎಂಪಿ ತೆರವುಗೊಳಿಸಿದ್ದು ನಿಜವೇ?

ಹೂಳನ್ನು ಅಂಜನಾಪುರ ಬಳಿಯ ಕ್ವಾರಿಯಲ್ಲಿ ವಿಲೇ ಮಾಡಲಾಗುತ್ತಿದೆ ಎನ್ನುತ್ತಾರೆ ಬಿಬಿಎಂಪಿ ಅಧಿಕಾರಿಗಳು. ಇಷ್ಟು ಹೂಳನ್ನು ಒಂದು ಎಕರೆಯಲ್ಲಿ ರಾಶಿ ಹಾಕಿದರೆ ಅದರ ಗಾತ್ರ 4,047 ಚದರ ಕ್ಯುಬಿಕ್‌ ಮೀ ಆಗುತ್ತಿತ್ತು. ಅಂದರೆ 528 ಅಡಿ ಎತ್ತರದ ಬೆಟ್ಟ ಆಗಬೇಕಿತ್ತು. ಒಂದು ಲಾರಿ 15 ಕ್ಯುಬಿಕ್‌ ಮೀ ಹೂಳನ್ನು ಸಾಗಿಸಬಲ್ಲುದು. ಇಷ್ಟು ಹೂಳು ಸಾಗಿಸಲು 43,492 ಟ್ರಿಪ್‌, ಅಂದರೆ ನಿತ್ಯ 480 ಟ್ರಿಪ್‌ಗಳಷ್ಟು ಹೂಳು ಸಾಗಿಸಬೇಕಾಗುತ್ತದೆ. ಅಷ್ಟೊಂದು ಪ್ರಮಾಣದಲ್ಲಿ ಹೂಳು ಸಾಗಿಸುತ್ತಿದ್ದರೆ ಅದರಿಂದ ಸಂಚಾರ ದಟ್ಟಣೆ ಮೇಲೆ ಆಗುವ ಪರಿಣಾಮ ಹೇಗಿರುತ್ತಿತ್ತು ಎಂಬುದು ತರ್ಕಕ್ಕೆ ನಿಲುಕುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT