ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತಿರೇಕದ ದೇಶಪ್ರೇಮ ರಾಷ್ಟ್ರಕ್ಕೆ ಮಾರಕ:

ಭಾರತೀಯ ಬಹುತ್ವ ಕುರಿತ ಚರ್ಚಾಗೋಷ್ಠಿಯಲ್ಲಿ ಇತಿಹಾಸಕಾರ ರಾಮಚಂದ್ರಗುಹಾ ಆತಂಕ
Last Updated 19 ಡಿಸೆಂಬರ್ 2019, 7:38 IST
ಅಕ್ಷರ ಗಾತ್ರ

ಬೆಂಗಳೂರು: ‘ದೇಶದಲ್ಲೀಗ ರಾಷ್ಟ್ರೀಯ ವಾದದ ಬದಲಿಗೆ ಅತಿರೇಕದ ರಾಷ್ಟ್ರಪ್ರೇಮ ಅಬ್ಬರಿಸುತ್ತಿದೆ. ಇದು ರಾಷ್ಟ್ರವನ್ನೇ ನಾಶಪಡಿಸುತ್ತದೆ’ ಎಂದು ಇತಿಹಾಸಕಾರ ರಾಮಚಂದ್ರ ಗುಹಾ ಎಚ್ಚರಿಸಿದರು.

ನಗರದಲ್ಲಿ ಬುಧವಾರ ಆಯೋಜಿಸಿದ್ದ ‘ಭಾರತೀಯ ಬಹುತ್ವ: ಭೂತ, ವರ್ತಮಾನ ಮತ್ತು ಭವಿಷ್ಯ’ ಕುರಿತ ಚರ್ಚಾಗೋಷ್ಠಿಯಲ್ಲಿ ಅವರು ಮಾತನಾಡಿದರು.

‘19ನೇ ಶತಮಾನದ ಯುರೋಪಿನ ರಾಷ್ಟ್ರೀಯತೆಯ ಮಾದರಿಯಲ್ಲಿ ಈಗ ಭಾರತದಲ್ಲಿ ರಾಷ್ಟ್ರೀಯತೆಯ ಪರಿಕಲ್ಪನೆ ಬೆಳೆದಿದೆ. ಒಂದೇ ಧರ್ಮ, ಒಂದೇ ಭಾಷೆ, ಒಬ್ಬರೇ ಶತ್ರು ಎಂಬುದು ಯೂರೋಪಿನ ರಾಷ್ಟ್ರೀಯತೆ. ಭಾರತದಲ್ಲೂ ಈಗ ಅದೇ ರೀತಿ ಒಂದೇ ಭಾಷೆ, ಒಂದೇ ಧರ್ಮ, ಒಂದೇ ಶತ್ರು ರಾಷ್ಟ್ರ– ಅದು ಪಾಕಿಸ್ತಾನ ಎಂಬ ಪರಿಕಲ್ಪನೆ ಬೆಳೆಸಲಾಗುತ್ತಿದೆ. ಬಹುತ್ವದ ಭಾರತಕ್ಕೆ ಈ ಮನೋಧರ್ಮ ಒಗ್ಗುವುದಿಲ್ಲ. ಈ ಬಗ್ಗೆ ಪ್ರಶ್ನೆ ಮಾಡಿದವರಿಗೆ ದೇಶದ್ರೋಹಿ, ನಗರ ನಕ್ಸಲ್ ಎಂಬ ಪಟ್ಟ ಕಟ್ಟಲಾಗುತ್ತಿದೆ’ ಎಂದರು.

‘ಗಾಂಧೀಜಿ ಹೇಳಿದ ಸ್ವರಾಜ್ಯ ತತ್ವದ ಆಧಾರದ ರಾಷ್ಟ್ರೀಯತೆಯೇ ಭಾರತಕ್ಕೆ ಬೇಕು. ಅಹಿಂಸೆ, ಕೋಮುಸೌಹಾರ್ದ, ಅಸ್ಪೃಶ್ಯತೆ ನಿವಾರಣೆ ಮತ್ತು ಆರ್ಥಿಕ ಸ್ವಾವಲಂಬನೆ ತತ್ವಗಳನ್ನು ಆಧರಿಸಿ ರಾಷ್ಟ್ರೀಯತೆ ಬೆಳೆಯಬೇಕಿದೆ’ ಎಂದು ಅವರು ಹೇಳಿದರು.

‘ಭ್ರಷ್ಟಾಚಾರ ಮತ್ತು ಕುಟುಂಬ ರಾಜಕಾರಣದಿಂದಾಗಿ ಕಾಂಗ್ರೆಸ್‌ ಅಧೋಗತಿಗೆ ತಲುಪಿದೆ. ಕಮ್ಯುನಿಸ್ಟರ ಬೂಟಾಟಿಕೆ, ಇಸ್ಲಾಮಿಕ್ ದೇಶದ ಪ್ರಯತ್ನಗಳು ಬಿಜೆಪಿಯನ್ನು ದೇಶದಲ್ಲಿ ಬೆಳೆಯುವಂತೆ ಮಾಡಿದೆ. ಬಲಪಂಥ ಈಗ ಭಾರತದಲ್ಲಿ ಮಾತ್ರವಲ್ಲ ಅಮೆರಿಕದಲ್ಲಿ ಟ್ರಂಪ್, ರಷ್ಯದಲ್ಲಿ ಪುಟಿನ್... ಹೀಗೆ ಎಲ್ಲೆಡೆ ಬಲಪಂಥ ಈಗ ಪ್ರಬಲಗೊಂಡಿದೆ’ ಎಂದರು.

'ಲಿಂಗ ಹಾಗೂ ಜಾತಿಯ ಕಾರಣಕ್ಕೆ ಬೆಳೆದಿರುವ ಅಸಮಾನತೆಯ ಬಗ್ಗೆ ನಮಗೆ ನಾಚಿಕೆಯಾಗಬೇಕು. ನಮ್ಮ ಚಿಂತನೆಗಳು ಶ್ರೇಷ್ಠ, ಬೇರೆ ದೇಶಗಳ ಚಿಂತನೆಗಳು ಕನಿಷ್ಠ ಎಂಬ ಮನೋಭಾವ ಬದಲಾಗಬೇಕು. ಜಗತ್ತಿಗೆ ನಾವು ತೆರೆದುಕೊಳ್ಳಬೇಕು’ ಎಂದು ಹೇಳಿದರು.

‘ಪೌರತ್ವ (ತಿದ್ದುಪಡಿ) ಕಾಯ್ದೆ ವಿರುದ್ಧ ನಾವು ಶಾಂತಿಯುತ ಹೋರಾಟ ನಡೆಸಬೇಕು. ಕಳೆದುಹೋಗಿರುವ ಪರಂಪರೆಯ ಮರುಸ್ಥಾಪನೆಗೆ ಪ್ರಯತ್ನಿಸಬೇಕು. ಸಂವಿಧಾನದ ಆಶಯಗಳ ಉಳಿವಿಗಾಗಿ ನಾವು ಒಗ್ಗೂಡಬೇಕಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT