ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜ್ಯದಲ್ಲಿ ತೃತೀಯ ಶಕ್ತಿಗೆ ಅವಕಾಶವಿದೆ: ಸಿ.ಎಂ.ಇಬ್ರಾಹಿಂ

ರಾಮಕೃಷ್ಣ ಹೆಗಡೆ ಜನ್ಮದಿನಾಚರಣೆ: ಗಣ್ಯರಿಗೆ ‘ಕಾಯಕ ಶ್ರೀ’ ಪ್ರಶಸ್ತಿ ಪ್ರದಾನ
Published 29 ಆಗಸ್ಟ್ 2024, 16:08 IST
Last Updated 29 ಆಗಸ್ಟ್ 2024, 16:08 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಸ್ತುತ ರಾಜ್ಯ ರಾಜಕೀಯದಲ್ಲಿ ತೃತೀಯ ಶಕ್ತಿಗೆ ಅವಕಾಶ ಇದೆ. ಜನತಾ ಪರಿವಾರದ ನಾಯಕರು ಮತ್ತೆ ಒಂದಾದರೆ ಅದು ಸಾಧ್ಯವಾಗುತ್ತದೆ ಎಂದು ಕೇಂದ್ರದ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಹೇಳಿದರು.

ಜನತಾ ಪಕ್ಷದ ವತಿಯಿಂದ ನಗರದಲ್ಲಿ ಗುರುವಾರ ಆಯೋಜಿಸಿದ್ದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ 97ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷ ಬೇಡವಾದರೆ ಎಲ್ಲಿಗೆ ಹೋಗಬೇಕು? ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು? ಎಂಬುದಕ್ಕೆ ಉತ್ತರವಿಲ್ಲ. ಈ ನಿಟ್ಟಿನಲ್ಲಿ ರೈತಸಂಘ, ದಿಂಗಾಲೇಶ್ವರ ಸ್ವಾಮೀಜಿ, ವೀರೆಂದ್ರ ಹೆಗ್ಗಡೆ ಸೇರಿದಂತೆ ವಿಚಾರವಾದಿ ಸ್ವಾಮೀಜಿಗಳ ಜತೆ ಚರ್ಚೆ ನಡೆಸಿದ್ದೇನೆ. ತೃತೀಯ ಶಕ್ತಿಯಿಂದ ಮಾತ್ರ ದಲಿತರು ಮತ್ತು ಅಲ್ಪಸಂಖ್ಯಾತರಿಗೆ ಮರ್ಯಾದೆ ಸಿಗುವುದು. ದಕ್ಷಿಣ ಭಾರತದಲ್ಲಿ ಪ್ರಾದೇಶಿಕ ಪಕ್ಷಗಳೇ ಅಧಿಕಾರ ನಡೆಸುತ್ತಿರುವುದು. ನಾನು ಆಶಾವಾದಿ, ಬದಲಾವಣೆ ಸಾಧ್ಯ ಎಂಬ ನಂಬಿಕೆ ಇದೆ’ ಎಂದರು.

‘ನಾನು ಮೊದಲ ಬಾರಿ ಚುನಾವಣೆಗೆ ಸ್ಪರ್ಧಿಸಿದಾಗ ₹ 4 ಸಾವಿರ ಖರ್ಚಾಗಿತ್ತು. ಈಗ ಮಹಾತ್ಮ ಗಾಂಧಿ ಸ್ಪರ್ಧಿಸಿದರೂ ₹ 10 ಕೋಟಿ ಖರ್ಚು ಮಾಡಬೇಕಾದ ಪರಿಸ್ಥಿತಿ ಇದೆ. ಶೇಕಡ 70–80 ರಷ್ಟು ಜನರು ಮತ ಕೇಳಲು ಬಂದವರ ಬಳಿಯೇ ಹಣ ಕೇಳುತ್ತಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ಕೆಲವು ರಾಜಕಾರಣಿಗಳು ಸೇಡಿನ ರಾಜಕೀಯ ಮಾಡುತ್ತಾರೆ. ಆದರೆ, ರಾಮಕೃಷ್ಣ ಹೆಗಡೆ ಅವರು ಎಂದೂ ಸೇಡಿನ ರಾಜಕೀಯ ಮಾಡಲಿಲ್ಲ. ಕಾರ್ಯಕರ್ತರಿಗೆ ಸೂಕ್ತ ಸ್ಥಾನ ನೀಡಿ, ಗೌರವ ಕೊಡುತ್ತಿದ್ದರು ಎಂದು ಹೇಳಿದರು.

ರಾಮಕೃಷ್ಣ ಹೆಗಡೆ, ವೀರಂದ್ರ ಪಾಟೀಲ, ಜೆ.ಎಚ್‌.ಪಟೇಲ್ ಹಾಗೂ ರಾಜಕೀಯ ಇತಿಹಾಸ ಕುರಿತು ಪುಸ್ತಕ ಬರೆಯುತ್ತಿದ್ದು, ಜನವರಿಯಲ್ಲಿ ಬಿಡುಗಡೆಯಾಗಲಿದೆ ಎಂದರು.

ಮಾಜಿ ಸಚಿವರಾದ ಬಿ.ಸೋಮಶೇಖರ್, ಲೀಲಾದೇವಿ ಆರ್. ಪ್ರಸಾದ್ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಪಿ.ನಾಡಗೌಡ ಅವರು ರಾಮಕೃಷ್ಣ ಹೆಗಡೆ ಅವರೊಂದಿಗಿನ ‌ಒಡನಾಟವನ್ನು ಸ್ಮರಿಸಿದರು.

ಇದೇ ವೇಳೆ ಇಬ್ರಾಹಿಂ, ನಾಡಗೌಡ, ಲೀಲಾದೇವಿ, ಬಿಜೆಪಿ ಮುಖಂಡ ಭಾಸ್ಕರ್ ರಾವ್, ಬಿ. ಸೋಮಶೇಖರ್ ಅವರಿಗೆ ‘ಮೌಲ್ಯಾಧಾರಿತ ಕಾಯಕಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೈ ಪ್ರಕಾಶ್ ಬಂಧು, ಉಪಾಧ್ಯಕ್ಷ ಅನುಜ್ ಜಿ ಶರ್ಮ, ಮುಖಂಡರಾದ ಆರ್‌.ವಿ.ಹರೀಶ್, ರಾಬಿನ್ ಮ್ಯಾಥ್ಯೂ ಉಪಸ್ಥಿತರಿದ್ದರು.

‘ಪ್ರಧಾನಿಯಾಗುವ ಅರ್ಹತೆ ಹೊಂದಿದ್ದ ಹೆಗಡೆ’

ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರಿಗೆ ಪ್ರಧಾನಿಯಾಗುವ ಅರ್ಹತೆ ಇತ್ತು. ಆದರೆ ಅಧಿಕಾರಕ್ಕಾಗಿ ಅವರು ಕೀಳು ಮಟ್ಟದ ರಾಜಕೀಯ ಮಾಡಲಿಲ್ಲ ಎಂದು ಶಿಕ್ಷಣ ತಜ್ಞ ಗುರುರಾಜ ಕರಜಗಿ ಹೇಳಿದರು. ರಾಷ್ಟ್ರೀಯ ನವ ನಿರ್ಮಾಣ ವೇದಿಕೆ ಏರ್ಪಡಿಸಿದ್ದ ‘ರಾಮಕೃಷ್ಣ ಹೆಗಡೆ–98’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ವಿ.ಪಿ. ಸಿಂಗ್ ಅವರ ಜತೆ ಭಿನ್ನಾಭಿಪ್ರಾಯ ಇದ್ದರೂ ತೋರಿಸಿಕೊಳ್ಳದೇ ಅವರಿಗೆ ಬೆಂಬಲವಾಗಿದ್ದರು. ದೂರವಾಣಿ ಕದ್ದಾಲಿಕೆ ಆರೋಪ ಕೇಳಿ ಬಂದಾಗ ರಾಜೀನಾಮೆ ನೀಡುವ ಮೂಲಕ ತಾನು ಅಧಿಕಾರಕ್ಕೆ ಅಂಟಿಕೊಂಡವನಲ್ಲ ಎಂಬುದನ್ನು ಸಾಬೀತುಪಡಿಸಿದರು’ ಎಂದರು. ತುರ್ತುಸ್ಥಿತಿ ಪರಿಸ್ಥಿತಿಯಲ್ಲಿ ಜೈಲಿಗೆ ಹೋಗಿ ಬಂದ ಬಳಿಕ ಹೆಗಡೆ ಗಡ್ಡ ಬಿಡಲು ಆರಂಭಿಸಿದರು. ಓದು ಚರ್ಚೆ ಬುದ್ದಿಜೀವಿಗಳೊಂದಿಗೆ ಬೆರೆಯಲು ಶುರು ಮಾಡಿದರು. ಉತ್ತಮ ಹಾಸ್ಯ ಪ್ರಜ್ಞೆ ಹೊಂದಿದ್ದ ಅವರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತಿದ್ದರು ಎಂದು ಹೇಳಿದರು. ಶ್ರೀಪಾದ ಭಟ್‌ ನಿರ್ದೇಶನದ ಮಂಟೇಸ್ವಾಮಿ ಕಾವ್ಯ ಪ್ರಯೋಗ ನಿಜವರಿತು ನುಡಿವವ ‘ಶರಣ’ ಪ್ರದರ್ಶಿಸಲಾಯಿತು. ಕಲಾವಿದರಾದ ಶಾಲೋಮ್ ಸನ್ನುತಾ ಅನುಷ್ ಶೆಟ್ಟಿ ಮುನ್ನ ಮೈಸೂರು ರೋಹಿತ್ ಶ್ರೀಧರ್ ಭಾಗವಹಿಸಿದ್ದರು. ಮುಖ್ಯಮಂತ್ರಿಯವರ ಸಲಹೆಗಾರ ಬಿ.ಆರ್. ಪಾಟೀಲ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಕರ್ನಾಟಕ ಚಿತ್ರಕಲಾ ಪರಿಷತ್‌ ಅಧ್ಯಕ್ಷ ಬಿ.ಎಲ್.ಶಂಕರ್‌ ಕಾರ್ಮಿಕ ನಾಯಕ ಆರ್‌.ವಿ.ಹರೀಶ್‌ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT