ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರ್‍ಯಾಪಿಡ್‌ ಟೆಸ್ಟ್‌: ಕಾರ್ಯಪಡೆ ತೀರ್ಮಾನ

Last Updated 29 ಜೂನ್ 2020, 20:45 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ನಗರದಲ್ಲಿ ಕೋವಿಡ್‌–19 ಪ್ರಕರಣಗಳನ್ನು ತ್ವರಿಗತಿಯಲ್ಲಿ ಪತ್ತೆ ಮಾಡಲು ‘ರ್‍ಯಾಪಿಡ್ ಆಂಟಿಜನ್‌ ಪರೀಕ್ಷೆ’ ನಡೆಸಲು ಸಚಿವರ ಕಾರ್ಯಪಡೆ ತೀರ್ಮಾನಿಸಿದೆ.

ಬಳ್ಳಾರಿಯಲ್ಲಿ ‌ರ್‍ಯಾಪಿಡ್ ಪರೀಕ್ಷೆ ನಡೆಸಲಾಗಿದೆ. ಈ ರೀತಿಯ ಪರೀಕ್ಷೆಯಿಂದ ಗಂಟಲ ದ್ರವದಲ್ಲಿ ವೈರಸ್‌ ಇದೆಯೇ ಎಂಬುದನ್ನು ಬೇಗನೆ ಪತ್ತೆ ಮಾಡಬಹುದು. ಇದರಿಂದ ಕೋವಿಡ್‌ ಪರೀಕ್ಷೆಯ ಪ್ರಕ್ರಿಯೆಗೆ ವೇಗ ನೀಡಬಹುದು ಎಂದು ಕಾರ್ಯಪಡೆಯ ಸದಸ್ಯರೂ ಆಗಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ನಗರದಲ್ಲಿರುವ ಫೀವರ್‌ ಕ್ಲಿನಿಕ್‌ಗಳಲ್ಲಿ ರ್‍ಯಾಪಿಡ್‌ ಪರೀಕ್ಷೆ ನಡೆಸಲಾಗುವುದು. ಅಲ್ಲದೆ, ರ್‍ಯಾಂಡಮ್‌ ಪರೀಕ್ಷೆಯ ಸಂಖ್ಯೆಗಳನ್ನು ಹೆಚ್ಚಿಸಲಾಗುವುದು ಎಂದರು.

ಆಂಟಿಜನ್‌ ಕಿಟ್‌ನಿಂದ ಕೊರೊನಾ ವೈರಸ್‌ ಅನ್ನು ಕೇವಲ 30 ನಿಮಿಷಗಳಲ್ಲಿ ಪತ್ತೆ ಮಾಡಬಹುದು. ಈ ಹಿಂದೆ ಶಂಕಿತ ವ್ಯಕ್ತಿಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಿದರೆ 24 ರಿಂದ 48 ಗಂಟೆಗಳು ಕಾಯಬೇಕಾಗಿತ್ತು. ಇದರಿಂದ ವ್ಯಕ್ತಿಯ ಆರೋಗ್ಯದಲ್ಲಿ ಏರುಪೇರಾಗುತ್ತಿತ್ತು. ಈಗ ಅತಿ ಬೇಗನೆ ಪರೀಕ್ಷಾ ವರದಿ ಸಿಗುವುದರಿಂದ ತಕ್ಷಣವೇ ಚಿಕಿತ್ಸೆ ಆರಂಭಿಸಬಹುದು. ಮರಣ ಪ್ರಮಾಣವನ್ನೂ ತಗ್ಗಿಸಬಹುದು ಎಂದು ಬಸವರಾಜ್ ಹೇಳಿದರು.

ಖಾಸಗಿ ಆಸ್ಪತ್ರೆ ವೈದ್ಯರು, ನರ್ಸ್‌ ಸಿಬ್ಬಂದಿಯನ್ನು ಕೊರೊನಾ ವಾರಿಯರ್ಸ್‌ ಪಟ್ಟಿಗೆ ಸೇರ್ಪಡೆಗೊಳಿಸಲಾಗುವುದು. ಇದರಿಂದ ಕೊರೊನಾ ವಾರಿಯರ್ಸ್‌ಗೆ ಇರುವ ವಿಮಾ ಸೌಲಭ್ಯ ಖಾಸಗಿಯವರಿಗೂ ಸಿಗುತ್ತದೆ.

ಕೋವಿಡ್‌–19 ರೋಗಿಗಳಿಗೆ ಚಿಕಿತ್ಸೆ ನೀಡಲು ನಿರಾಕರಿಸಿದರೆ, ಅಂತಹ ವೈದ್ಯರ ಪರವಾನಗಿಯನ್ನು ನವೀಕರಣಗೊಳಿಸುವುದಿಲ್ಲ. ಪ್ಯಾರಾ ಮೆಡಿಕಲ್‌ ಸಿಬ್ಬಂದಿಯನ್ನೂ ಬಳಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಲಾಕ್‌ಡೌನ್‌ ವಿಚಾರ ಸಭೆಯಲ್ಲಿ ಚರ್ಚೆಗೆ ಬರಲಿಲ್ಲ. ಈ ಬಗ್ಗೆ ತಜ್ಞರೇ ಮುಖ್ಯಮಂತ್ರಿಯರಿಗೆ ವರದಿ ನೀಡಿದ್ದಾರೆ ಎಂದು ಅವರು ಹೇಳಿದರು.

ಕೋವಿಡ್‌ ಕರ್ತವ್ಯಕ್ಕೆ 64 ತಹಶೀಲ್ದಾರ್‌ಗಳು
ಕೋವಿಡ್‌ ಸೋಂಕು ನಿಯಂತ್ರಣ ಕರ್ತವ್ಯ ನಿರ್ವಹಿಸುವ ಸಲುವಾಗಿ 64 ಪ್ರೊಬೇಷನರಿ ತಹಸೀಲ್ದಾರ್‌ಗಳನ್ನು ಬಿಬಿಎಂಪಿ ಸೇವೆಗೆ ಕಂದಾಯ ಇಲಾಖೆ ನಿಯೋಜಿಸಿದೆ.

ಈ ತಹಸೀಲ್ದಾರ್‌ಗಳು 2015ನೇ ಸಾಲಿನಲ್ಲಿ ನೇಮಕಾತಿಯಲ್ಲಿ ಆಯ್ಕೆಯಾಗಿದ್ದರು. ಇವರನ್ನು ಕೋವಿಡ್‌ 19 ನೋಡಲ್‌ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ. ತಕ್ಷಣವೇ ಬಿಬಿಎಂಪಿ ಆಯುಕ್ತರನ್ನು ಭೇಟಿಯಾಗಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಬೇಕು. ಮುಂದಿನ ಆದೇಶದವರೆಗೂ ಬಿಬಿಎಂಪಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ಕಂದಾಯ ಇಲಾಖೆ ಸೋಮವಾರ ಆದೇಶ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT