ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರ‍್ಯಾಪಿಡ್‌ ರಸ್ತೆ’: ಹೆಚ್ಚಿನ ಬಾಳಿಕೆ

ಕಾಮಗಾರಿಗೆ ಅಧಿಕ ಸಮಯ ಬೇಕಿಲ್ಲ: ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌
Last Updated 23 ನವೆಂಬರ್ 2022, 16:05 IST
ಅಕ್ಷರ ಗಾತ್ರ

ಬೆಂಗಳೂರು: ‘ರ‍್ಯಾಪಿಡ್‌ ರಸ್ತೆ’ ನಿರ್ಮಾಣದ ಸಂದರ್ಭದಲ್ಲಿ ಸಂಚಾರ ದಟ್ಟಣೆಯನ್ನು ಹೆಚ್ಚಿನ ದಿನ ಅನುಭವಿಸುವಂತಿಲ್ಲ. ಪ್ಯಾನಲ್‌ ಅಳವಡಿಸಿದ ಮೂರು ದಿನದಲ್ಲೇ ಸಂಚಾರ ಆರಂಭಿಸಬಹುದು. ಹೆಚ್ಚಿನ ಬಾಳಿಕೆಯೂ ಬರುತ್ತದೆ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಹೇಳಿದರು.

ಹಳೆ ಮದ್ರಾಸ್ ರಸ್ತೆಯಲ್ಲಿ ‘ರ‍್ಯಾಪಿಡ್ ರಸ್ತೆ’ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿ ಅವರು ಬುಧವಾರ ಮಾತನಾಡಿದರು.

‘ವೈಟ್ ಟಾಪಿಂಗ್ ಅಥವಾ ಟೆಂಡರ್ ಶ್ಯೂರ್ ಕಾಮಗಾರಿ ಸಮಯದಲ್ಲಿ ವಾಹನಗಳ ಸಂಚಾರ ನಿಷೇಧಿಸುವುದರಿಂದ ದಟ್ಟಣೆ ಹೆಚ್ಚಾಗುತ್ತದೆ. ಇದನ್ನು ತಪ್ಪಿಸುವ ಸಲುವಾಗಿ ಪ್ರಾಯೋಗಿಕವಾಗಿ ‘ರ‍್ಯಾಪಿಡ್ ರಸ್ತೆ’ ಎಂಬ ವಿನೂತನ ತಂತ್ರಾಜ್ಞಾನವನ್ನು ದೇಶದಲ್ಲೇ ಪ್ರಥಮ ಬಾರಿಗೆ ನಾವು ಅನುಷ್ಠಾನಗೊಳಿಸುತ್ತಿದ್ದೇವೆ. ಕ್ಯೂರಿಂಗ್ ಅವಶ್ಯಕತೆ ಇಲ್ಲ. ಪ್ರೀ ಕಾಸ್ಟ್ ಪ್ಯಾನಲ್ ಅಳವಡಿಸಿದ ಕೂಡಲೆ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಬಹುದಾಗಿದೆ’ ಎಂದರು.

‘500 ಮೀಟರ್ ಉದ್ದದ ರಸ್ತೆಯಲ್ಲಿ ಪ್ರಾಯೋಗಿಕವಾಗಿ ರ‍್ಯಾಪಿಡ್ ರಸ್ತೆ (ಪ್ರೀಕಾಸ್ಟ್‌ ಪೋಸ್ಟ್ ಟೆನ್ಷನಿಂಗ್ ಕಾಂಕ್ರೀಟ್ ಪೇವ್‌ಮೆಂಟ್) ನಿರ್ಮಾಣ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇದನ್ನು ಎಲ್ಲೆಡೆ ವಿಸ್ತರಿಸುವ ಯೋಜನೆ ಇದೆ. ವೆಚ್ಚ ಶೇ 20ರಷ್ಟು ಹೆಚ್ಚಿದ್ದು, ಮುಂದಿನ ದಿನಗಳಲ್ಲಿ ಸ್ಥಳೀಯವಾಗಿ ಪ್ಯಾನಲ್‌ ತಯಾರಿಕೆಯಿಂದ ವೆಚ್ಚ ತಗ್ಗಲಿದೆ ಎಂದರು.

ವಿಂಡ್ ಟನಲ್ ರಸ್ತೆ ಜಂಕ್ಷನ್‌ನಲ್ಲಿ 2023ರ ಜೂನ್‌ ವೇಳೆಗೆ ಹಾಗೂ ಸುರಂಜನ್ ದಾಸ್ ಜಂಕ್ಷನ್ ಬಳಿ ಮಾರತಹಳ್ಳಿ ಕಡೆಯಿಂದ ಬೆಂಗಳೂರಿಗೆ ಬರುವ ರಿಟೈನಿಂಗ್ ವಾಲ್ ಕಾಮಗಾರಿ ಪೂರ್ಣಗೊಂಡಿದೆ. ಕೆಳಸೇತುವೆ ಕಾಮಗಾರಿಯನ್ನು ಜನವರಿ 15ರೊಳಗೆ ಪೂರ್ಣಗೊಳಿಸಬೇಕು ಎಂದು ಮುಖ್ಯ ಆಯುಕ್ತರು ಸೂಚಿಸಿದರು.

ಭೂಸ್ವಾಧೀನ: ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಒಟ್ಟು ₹90 ಕೋಟಿ ವೆಚ್ಚದಲ್ಲಿ ಗ್ರೇಡ್ ಸೆಪರೇಟರ್ ಕಾಮಗಾರಿ ನಡೆಯುತ್ತಿದೆ. ಹೂಡಿ ಜಂಕ್ಷನ್ ಮೇಲುಸೇತುವೆ, ಬಿಗ್ ಬಜಾರ್ ಜಂಕ್ಷನ್ ಹಾಗೂ ಓ-ಫಾರ್ಮ್ ಜಂಕ್ಷನ್ ಬಳಿ ಕೆಳಸೇತುವೆ ಕಾಮಗಾರಿ ನಡೆಯುತ್ತಿದೆ. ಅಗತ್ಯವಿರುವ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಕಂದಾಯ ನಕ್ಷೆಗಳನ್ನು ಪರಿಶೀಲಿಸಿ, ಸೂಕ್ತ ಕ್ರಮಕ್ಕೆ ಅಧಿಕಾರಿಗಳಿಗೆ ತುಷಾರ್‌ ಗಿರಿನಾಥ್‌ ಆದೇಶಿಸಿದರು.

ಪ್ರಧಾನ ಎಂಜಿನಿಯರ್‌ ಪ್ರಹ್ಲಾದ್, ಯೋಜನಾ ವಿಭಾಗದ ಮುಖ್ಯ ಎಂಜಿನಿಯರ್‌ ವಿನಾಯಕ್ ಸುಗೂರ್, ವಲಯ ಮುಖ್ಯ ಎಂಜಿನಿಯರ್‌ ಸುಗುಣಾ, ಕಾರ್ಯಪಾಲಕ ಎಂಜಿನಿಯರ್‌ ಗೀತಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT