ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬ್ಬನ್‌ ಉದ್ಯಾನದಲ್ಲಿ ಓದಿನ ಧ್ಯಾನ! ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ

‘ಕಬ್ಬನ್‌ ರೀಡ್ಸ್‌’ಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ, ಕಥೆ, ಕವನಗಳ ರಚನೆಗೆ ವೇದಿಕೆ
Published 27 ಆಗಸ್ಟ್ 2023, 0:29 IST
Last Updated 27 ಆಗಸ್ಟ್ 2023, 0:29 IST
ಅಕ್ಷರ ಗಾತ್ರ

ಬೆಂಗಳೂರು: ‘ಸಿಲಿಕಾನ್‌ ಸಿಟಿ’ಯ ವಾಯುವಿಹಾರಿಗಳ ಮತ್ತು ಪ್ರೇಮಿಗಳ ಸ್ವರ್ಗ ಕಬ್ಬನ್‌ ಉದ್ಯಾನ ಈಗ ಪುಸ್ತಕ ಪ‍್ರೇಮಿಗಳ ಅಚ್ಚುಮೆಚ್ಚಿನ ತಾಣವಾಗಿದೆ. ಹಚ್ಚಹಸಿರಿನ ಹುಲ್ಲು ಹಾಸಿನಲ್ಲಿ ಪುಸ್ತಕ ಓದಿನ ಆನಂದದ ಜೊತೆಗೆ ಚಿತ್ರಕಲೆ, ಕಥೆ–ಕವನಗಳ ರಚನೆಗೆ ವೇದಿಕೆಯಾಗಿದೆ. 

ಪುಸ್ತಕ ಓದುವ ಹವ್ಯಾಸ ವೃದ್ಧಿಸುವ ಉದ್ದೇಶದಿಂದ ಸ್ವಯಂ ಉದ್ಯೋಗಿಗಳಾದ ಹರ್ಷ ಸ್ನೇಹಾಂಶು ಮತ್ತು ಶ್ರುತಿ ಸಾಹ ಅವರು ‘ಕಬ್ಬನ್‌ ರೀಡ್ಸ್‌’ ಎಂಬ ಇನ್‌ಸ್ಟಾಗ್ರಾಂ ಪೇಜ್‌ ಸ್ಥಾಪಿಸಿದ್ದಾರೆ. ಈ ಮೂಲಕ ಕಬ್ಬನ್‌ ಉದ್ಯಾನ, ಲಾಲ್‌ಬಾಗ್‌ ಸೇರಿ ನಗರದಲ್ಲಿರುವ ವಿವಿಧ ಉದ್ಯಾನಗಳಲ್ಲಿ ಸಾರ್ವಜನಿಕರಲ್ಲಿ ಪುಸ್ತಕ ಓದುವ ಹವ್ಯಾಸವನ್ನು ಹೆಚ್ಚಿಸುವ ಕೆಲಸ ಮಾಡುತ್ತಿದೆ. 

ಪ್ರತಿ ಶನಿವಾರ ಬೆಳಿಗ್ಗೆ 9 ರಿಂದ ಮಧ್ಯಾಹ್ನ 2ರವರೆಗೆ ಕಬ್ಬನ್‌ ಉದ್ಯಾನದ ಹುಲ್ಲುಹಾಸು, ಮರಗಳ ಬುಡದಲ್ಲಿ ಪುಸ್ತಕಗಳನ್ನು ಓದುತ್ತಿರುವ ಪುಸ್ತಕ ಪ್ರಿಯರು, ಕಥೆ–ಕವನ ರಚಿಸುವ ಯುವ ಕವಿಗಳು ಮತ್ತು ಪ್ರಕೃತಿ ಸೌಂದರ್ಯವನ್ನು ಕುಂಚದಲ್ಲಿ ಅರಳಿಸುವ ಕಲಾವಿದರ ದಂಡು ಸಿಗುತ್ತದೆ. ಇದರಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿರುವುದು ವಿಶೇಷ. 

‘ಸ್ವ ಉದ್ಯೋಗಿ ಹರ್ಷ ಸ್ನೇಹಾಂಶು ಮತ್ತು ಶ್ರು‌ತಿ ಸಾಹ ಎಂಬ ಯುವ ಜೋಡಿ ಪ್ರತಿ ಶನಿವಾರ ಇಂದಿರಾನಗರದಿಂದ ಕಬ್ಬನ್‌ ಉದ್ಯಾನಕ್ಕೆ ಸೈಕ್ಲಿಂಗ್‌ ಮತ್ತು ಪುಸ್ತಕ ಓದುವುದಕ್ಕೆ ಬರುತ್ತಿದ್ದರು. ಪುಸ್ತಕ ಓದುವ ಆಸಕ್ತಿ ಇರುವವರೂ ನಮ್ಮೊಂದಿಗೆ ಸೇರಿಕೊಳ್ಳಬಹುದು ಎಂದು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲೊಂದು ಪೋಸ್ಟ್‌ ಮಾಡಿದ್ದರು. ಇದಕ್ಕೆ ಸ್ನೇಹಿತರಿಬ್ಬರು ಸೇರಿಕೊಂಡರು. ಇದು, ಹೀಗೆ ಮುಂದುವರೆದು ‘ಕಬ್ಬನ್‌ ರೀಡ್ಸ್‌’ ಇನ್‌ಸ್ಟಾಗ್ರಾಂ ಪೇಜ್‌ ಹುಟ್ಟಿಕೊಂಡಿತು. ಹಂತ–ಹಂತವಾಗಿ ಈ ವೇದಿಕೆಯಲ್ಲಿ ಹಲವಾರು ಜನ ಸ್ವಇಚ್ಛೆಯಿಂದ ಭಾಗವಹಿಸುತ್ತಿದ್ದಾರೆ’ ಎಂದು ವೇದಿಕೆಯ ಚಿತ್ಕಲೆ ಡಿ. ಪ್ರಕಾಶ್ ತಿಳಿಸಿದರು.

‘2023ರ ಜನವರಿ 7ರಂದು ಅಧಿಕೃತವಾಗಿ ಪ್ರಾರಂಭವಾದ ‘ಕಬ್ಬನ್‌ ರೀಡ್ಸ್‌’ ಸಾಮಾಜಿಕ ಮಾಧ್ಯಮಗಳಲ್ಲಿ ಪುಸ್ತಕ ಓದುವ, ಚಿತ್ರಕಲೆ ಬಿಡಿಸುವ ರೀಲ್ಸ್‌ಗಳನ್ನು ಅಪ್‌ಲೋಡ್‌ ಮಾಡುವ ಮೂಲಕ ಹೆಚ್ಚು–ಹೆಚ್ಚು ಓದುಗರನ್ನು ಸೆಳೆಯಲು ಪ್ರಾರಂಭಿಸಿತು. ಇದುವರೆಗೂ ಸುಮಾರು 33 ಸೆಷನ್‌ಗಳ ನಡೆದಿದ್ದು, ಪ್ರತಿ ಶನಿವಾರ ಓದುಗರ ಸಂಖ್ಯೆ ಹೆಚ್ಚುತ್ತಲೆ ಇದೆ’ ಎಂದು ಕಬ್ಬನ್‌ ರೀಡ್ಸ್‌ನ ಸಂಸ್ಥಾಪಕರಾದ ಹರ್ಷ, ಶ್ರುತಿ ಸಾಹ ತಿಳಿಸಿದರು.

‘ಓದುಗರ ಸಂಖ್ಯೆ ಹೆಚ್ಚಿಸುವುದೇ ಕಬ್ಬನ್‌ ರೀಡ್ಸ್‌ನ ಮುಖ್ಯ ಗುರಿಯಾಗಿದೆ. ಇದರಿಂದ, ನಮಗೆ ಬೇರೆ ಯಾವುದೇ ರೀತಿಯ ಲಾಭ ಗಳಿಸುವ ಉದ್ದೇಶವಿಲ್ಲ’ ಎಂದು ತಿಳಿಸಿದರು.

‘ನಾಲ್ಕು ತಿಂಗಳ ಹಿಂದೆಯೇ ಕಬ್ಬನ್‌ ರೀಡ್ಸ್‌ ಓದುವ ಬಳಗಕ್ಕೆ ಸೇರಿಕೊಂಡಿದ್ದೇನೆ. ಪ್ರಕೃತಿಯ ಮಡಲಲ್ಲಿ ಕುಳಿತುಕೊಂಡು ಪುಸ್ತಕ ಓದುವ ಆಸೆ ಈಡೇರಿದೆ. ಪ್ರತಿ ಶನಿವಾರ ಹೊಸಬರ ಭೇಟಿಯಾಗುತ್ತದೆ. ಪ್ರಚಲಿತ ವಿದ್ಯಮಾನಗಳ ವಿಚಾರಗಳ ವಿನಿಮಯ ಮಾಡಿಕೊಳ್ಳುವುದಕ್ಕೆ ಇದೊಂದು ಉತ್ತಮ ವೇದಿಕೆಯಾಗಿದೆ’ ಎಂದು ಓದುಗ ವಸಂತ ಕಿಣಿ ಅನುಭವ ಹಂಚಿಕೊಂಡರು. 

ಮೋದಿ ಮೆಚ್ಚುಗೆ: ‘ಕಬ್ಬನ್‌ ರೀಡ್ಸ್‌’  ಬಗ್ಗೆ ಸಂಸದ ಪಿ.ಸಿ. ಮೋಹನ್ ಅವರು ಟ್ವೀಟ್‌ ಮಾಡಿದ್ದರು. ಇದನ್ನು ಮರುಟ್ವೀಟ್‌ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ‘ಓದುವ ಆನಂದವನ್ನು ಹರಡುವ ಪ್ರಯತ್ನ ಶ್ಲಾಘನೀಯ’ ಎಂದು ಕಬ್ಬನ್‌ ರೀಡ್ಸ್‌ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಕಬ್ಬನ್‌ ಉದ್ಯಾನದಲ್ಲಿ ಶನಿವಾರ ಭಾಗವಹಿಸಿದ್ದ ಪ್ರಸ್ತಕಪ್ರಿಯರು. ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.
ಕಬ್ಬನ್‌ ಉದ್ಯಾನದಲ್ಲಿ ಶನಿವಾರ ಭಾಗವಹಿಸಿದ್ದ ಪ್ರಸ್ತಕಪ್ರಿಯರು. ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.
ರೂಬಿನಾಜ್
ರೂಬಿನಾಜ್
ಪೂಜಾ
ಪೂಜಾ
ಕಬ್ಬನ್ ರೀಡ್ಸ್‌ನ ಸದಸ್ಯರು ತಮ್ಮ ಪುಸ್ತಕಗಳು ಮತ್ತು ಕಲಾಕೃತಿಗಳೊಂದಿಗೆ ಶನಿವಾರ ಕಂಡದ್ದು ಹೀಗೆ.
ಕಬ್ಬನ್ ರೀಡ್ಸ್‌ನ ಸದಸ್ಯರು ತಮ್ಮ ಪುಸ್ತಕಗಳು ಮತ್ತು ಕಲಾಕೃತಿಗಳೊಂದಿಗೆ ಶನಿವಾರ ಕಂಡದ್ದು ಹೀಗೆ.

ಕಬ್ಬನ್‌ ರೀಡ್ಸ್‌ ಎಂಬ ಓದುವ ಬಳಗದಲ್ಲಿ ಸೇರಿಕೊಂಡಿರುವುದು ಬಹಳ ಖುಷಿ ನೀಡಿದೆ. ಪ್ರತಿ ಶನಿವಾರ ಪ್ರಕೃತಿಯ ಸೌಂದರ್ಯವನ್ನು ಕುಂಚದ ಮೂಲಕ ಅನಾವರಣಗೊಳಿಸುತ್ತಿದ್ದೇನೆ.

ಪೂಜಾ ಎಂಜಿನಿಯರ್

ತಿಂಗಳಿಂದ ಪ್ರತಿ ಶನಿವಾರ ಕಬ್ಬನ್‌ ಉದ್ಯಾನಕ್ಕೆ ಬರುತ್ತಿದ್ದೇನೆ. ಇಲ್ಲಿ ಸಾಂಸ್ಕೃತಿಕ ವಿನಿಮಯದ ಜತೆಗೆ ಹೊಸತನ ಕಲಿಯುವುದಕ್ಕೆ ಒಳ್ಳೆಯ ವೇದಿಕೆಯಾಗಿದೆ.

ರೂಬಿನಾಜ್ ಕವಿಯತ್ರಿ

ಅಂತರರಾಷ್ಟ್ರೀಯ ಮಟ್ಟದಲ್ಲಿ ‘ಕಬ್ಬನ್‌ ರೀಡ್ಸ್‌’ ಕಬ್ಬನ್‌ ರೀಡ್ಸ್‌ನೊಂದಿಗೆ ದೇಶ–ವಿದೇಶಗಳಲ್ಲಿ 60ಕ್ಕೂ ಹೆಚ್ಚು ರೀಡ್ಸ್‌ ತಂಡಗಳು ಸಂಯೋಜಿತವಾಗಿವೆ. ಮುಂಬೈ ದೆಹಲಿ ಪುಣೆ ಚೆನ್ನೈ ಹೈದರಾಬಾದ್ ಕೋಲ್ಕತ್ತ ಕೊಚ್ಚಿ ಗೋವಾ ಅಹಮದಾಬಾದ್ ವಿಜಯವಾಡ ಪಾಂಡಿಚೇರಿ ತ್ರಿಶೂರ್ ಶ್ರೀನಗರ ಕಟಕ್ ಶಿಲ್ಲಾಂಗ್ ಜೈಪುರ ಮತ್ತು ಕ್ವಾಲಾಲಂಪುರ ಆ್ಯಮ್‌ಸ್ಟರ್ಡಾಮ್ ಮೆಲ್ಬೋರ್ನ್ ಲಂಡನ್‌ ದುಬೈ ಪ್ಯಾರಿಸ್‌ ಜೋಹಾನಸ್‌ಬರ್ಗ್‌ ಸಿಯಾಟಲ್ ನ್ಯೂಯಾರ್ಕ್‌ ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT