ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಮೇಲೂ ಗುಂಡು ಹಾರಿಸಿದ

ಜಯನಗರ ಪೊಲೀಸರಿಂದ ಪತ್ನಿ ಕೊಂದ ಉದ್ಯಮಿ ಗಣೇಶ್‌ ಬಂಧನ
Last Updated 22 ಜೂನ್ 2018, 19:43 IST
ಅಕ್ಷರ ಗಾತ್ರ

ಬೆಂಗಳೂರು: ಪತ್ನಿಯನ್ನು ಕೊಂದು ಪರಾರಿಯಾಗಿದ್ದ ಆರೋಪಿ ಗಣೇಶ್‌ (45), ತನ್ನಿಬ್ಬರು ಮಕ್ಕಳ ಮೇಲೂ ಗುಂಡು ಹಾರಿಸಿ ಕೊಲೆಗೆ ಯತ್ನಿಸಿದ್ದಾನೆ.

ಜಯನಗರದ 4ನೇ ಹಂತದ ನಿವಾಸಿ ಗಣೇಶ್, ರಿಯಲ್‌ ಎಸ್ಟೇಟ್‌ ಉದ್ಯಮಿ. ಆತ, ಗುರುವಾರ ರಾತ್ರಿ ಪತ್ನಿ ಸಹನಾ (42) ಮೇಲೆ ಗುಂಡು ಹಾರಿಸಿ ಕೊಲೆ ಮಾಡಿದ್ದ. ನಂತರ, ತನ್ನ ಮೂವರು ಮಕ್ಕಳ ಸಮೇತ ಪರಾರಿಯಾಗಿದ್ದ. ಶುಕ್ರವಾರ ಬೆಳಿಗ್ಗೆ ಇಬ್ಬರು ಮಕ್ಕಳ ಮೇಲೆ ಗುಂಡು ಹಾರಿಸಿ ಪರಾರಿಯಾಗಲು ಯತ್ನಿಸಿದ್ದ. ಆತನನ್ನು ಬೆನ್ನಟ್ಟಿ ಬಂಧಿಸಿದ್ದೇವೆ ಎಂದು ಜಯನಗರ ಪೊಲೀಸರು ಹೇಳಿದರು.

ಘಟನೆಯಲ್ಲಿ ಮಕ್ಕಳಾದ ಸಿದ್ಧಾರ್ಥ (15) ಹಾಗೂ ಸಾಕ್ಷಿ (9) ಗಾಯಗೊಂಡಿದ್ದಾರೆ. ಅವರಿಬ್ಬರನ್ನು ಕನಕಪುರ ರಸ್ತೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾಕ್ಷಿಯ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ. ಇನ್ನೊಬ್ಬ ಮಗ ಸಮೀತ್‌ (12), ಅಂಗವಿಕಲ. ಆತ ಸುರಕ್ಷಿತವಾಗಿದ್ದಾನೆ ಎಂದರು.

ಹಾಸನ ಜಿಲ್ಲೆಯ ಸಕಲೇಶಪುರದ ಗಣೇಶ್, 17 ವರ್ಷಗಳ ಹಿಂದೆ ಸಹನಾರನ್ನು ಮದುವೆಯಾಗಿದ್ದ. ದಂಪತಿಗೆ ಮೂವರು ಮಕ್ಕಳು (ಸಿದ್ಧಾರ್ಥ ದತ್ತು ಮಗ). ಸಕಲೇಶಪುರದಲ್ಲಿದ್ದ ಕಾಫಿ ತೋಟ ಹೊಂದಿದ್ದ ಆತ, ಅದನ್ನು ಮಾರಾಟ ಮಾಡಿ ಬೆಂಗಳೂರಿಗೆ ಬಂದಿದ್ದ. ರಿಯಲ್ ಎಸ್ಟೇಟ್ ಉದ್ಯಮಿ ಆರಂಭಿಸಿದ್ದ. ಕನಕಪುರದ ಸಮೀಪ ರೆಸಾರ್ಟ್‌ ನಡೆಸುತ್ತಿದ್ದ ಎಂದರು.

ವ್ಯವಹಾರಕ್ಕಾಗಿ ಗಣೇಶ್, ಸ್ನೇಹಿತರು ಹಾಗೂ ಪರಿಚಯಸ್ಥರ ಬಳಿ ಲಕ್ಷಾಂತರ ರೂಪಾಯಿ ಸಾಲ ಪಡೆದಿದ್ದ. ಇತ್ತೀಚೆಗೆ ಆತನ ವ್ಯವಹಾರದಲ್ಲಿ ನಷ್ಟ ಉಂಟಾಗಿತ್ತು. ಸಾಲಗಾರರ ಕಾಟವೂ ಹೆಚ್ಚಾಗಿತ್ತು. ಅದರಿಂದಾಗಿ, ತನ್ನ ಮನೆಯನ್ನು ಮಾರಾಟ ಮಾಡಲು ಆತ ಮುಂದಾಗಿದ್ದ. ಅದಕ್ಕೆ ಪತ್ನಿ ವಿರೋಧ ವ್ಯಕ್ತಪಡಿಸಿದ್ದರು ಎಂದರು.

ಮನೆ ಮಾರಾಟ ಸಂಬಂಧ ದಂಪತಿ ನಡುವೆ ಹಲವು ಬಾರಿ ಗಲಾಟೆ ಆಗಿತ್ತು. ಗುರುವಾರ ಬೆಳಿಗ್ಗೆ ಮಕ್ಕಳು ಶಾಲೆಗೆ ಹೋಗಿದ್ದ ವೇಳೆಯಲ್ಲಿ ಆರೋಪಿಯು ಪತ್ನಿ ಜತೆ ಜಗಳ ತೆಗೆದಿದ್ದ. ಮಾತಿಗೆ ಮಾತು ಬೆಳೆಯುತ್ತಿದ್ದಂತೆ ಗಣೇಶ್‌, ಪತ್ನಿ ಮೇಲೆ ಮೂರು ಸುತ್ತು ಗುಂಡುಹಾರಿಸಿದ್ದ. ಎದೆಗೆ ಗುಂಡು ತಗುಲಿದ್ದರಿಂದ ಅವರು ಸ್ಥಳದಲ್ಲೇ ಮೃತಪಟ್ಟರು ಎಂದು ಪೊಲೀಸರು ವಿವರಿಸಿದರು.

ಜೆ.ಪಿ.ನಗರದಲ್ಲಿ ವಾಸವಿರುವ ಸಹನಾ ಪೋಷಕರು, ನಿತ್ಯವೂ ಮಗಳಿಗೆ ಕರೆ ಮಾಡುತ್ತಿದ್ದರು. ಗುರುವಾರ ಕರೆ ಮಾಡಿದಾಗ ಮಗಳು ಸ್ವೀಕರಿಸಿರಲಿಲ್ಲ. ಅನುಮಾನಗೊಂಡ ಅವರು, ರಾತ್ರಿ 9 ಗಂಟೆಗೆ ಜಯನಗರದ ಮನೆಗೆ ಹೋಗಿ ನೋಡಿದಾಗಲೇ ಕೃತ್ಯ ನಡೆದಿದ್ದು ಗೊತ್ತಾಗಿದೆ ಎಂದರು.

ಸಿ.ಸಿ.ಟಿ.ವಿ ಕ್ಯಾಮೆರಾದಿಂದ ಪತ್ತೆ: ಆರೋಪಿ ಗಣೇಶ್‌, ಕಾರಿನಲ್ಲಿ ಪರಾರಿಯಾದ ದೃಶ್ಯ ಮನೆಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ನೋಂದಣಿ ಸಂಖ್ಯೆ ತಿಳಿದುಕೊಂಡ ಪೊಲೀಸರು, ಕಾರಿಗಾಗಿ ಹುಡುಕಾಟ ನಡೆಸಿದ್ದರು.

ಶಾಲೆಯಿಂದ ಮಕ್ಕಳ ಕರೆದೊಯ್ದಿದ್ದ
ಪತ್ನಿ ಕೊಂದ ಬಳಿ ಆರೋಪಿ, ಮಕ್ಕಳಿದ್ದ ಶಾಲೆಗೆ ಹೋಗಿದ್ದ. ಅವರನ್ನು ಕರೆದುಕೊಂಡು ಅಂಚೆಪಾಳ್ಯ ಸಮೀಪದ ತೋಟದ ಮನೆಗೆ ಕರೆದೊಯ್ದಿದ್ದ. ಅಲ್ಲಿಯೇ ರಾತ್ರಿ ಕಳೆದಿದ್ದ ಎಂದು ಪೊಲೀಸರು ತಿಳಿಸಿದರು.

ಬೆಳಿಗ್ಗೆ ಮನೆ ಎದುರು ಆಟವಾಡುತ್ತಿದ್ದ ಸಿದ್ಧಾರ್ಥ ಮತ್ತು ಸಾಕ್ಷಿ ಮೇಲೆ ಗುಂಡು ಹಾರಿಸಿದ್ದ. ಗಾಯದಿಂದ ಬಳಲುತ್ತಿದ್ದ ಮಕ್ಕಳು, ನೀರು ನೀರು... ಎಂದು ನರಳುತ್ತಿದ್ದರು. ನೀರು ಕೊಡದ ಆರೋಪಿ, ಅವರಿಬ್ಬರನ್ನು ಕಾರಿನಲ್ಲಿ ಹತ್ತಿಸಿಕೊಂಡು ಮೈಸೂರು ರಸ್ತೆಯತ್ತ ಹೊರಟಿದ್ದ ಎಂದರು.

ಆ ಬಗ್ಗೆ ಮಾಹಿತಿ ಪಡೆದ ವಿಶೇಷ ತಂಡ, ನಡುರಸ್ತೆಯಲ್ಲೇ ಕಾರು ಅಡ್ಡಗಟ್ಟಿ ಆತನನ್ನು ಬಂಧಿಸಿತು. ಅವಾಗಲೇ ಕಾರಿನಲ್ಲಿ ಮಕ್ಕಳು ನರಳಾಡು ತ್ತಿದ್ದದ್ದು ತಿಳಿಯಿತು ಎಂದು ಪೊಲೀಸರು ವಿವರಿಸಿದರು.

‘ಸಾಲ ತೀರಿಸಲು ಒತ್ತಡ ಇತ್ತು. ಮನೆ ಮಾರಾಟ ಮಾಡಲು ಒಪ್ಪದಿದ್ದಕ್ಕೆ ಪತ್ನಿಯನ್ನು ಕೊಂದೆ. ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿ ಕೃತ್ಯ ಎಸಗಿದೆ’ ಎಂದು ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.

‘ಆತನಿಂದ ಪಿಸ್ತೂಲ್ ಜಪ್ತಿ ಮಾಡಿದ್ದೇವೆ. ಅದಕ್ಕೆ ಆತ, ಪರವಾನಗಿ ಸಹ ಪಡೆದಿದ್ದ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT