ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಲಿ ಸಂಚರಿಸುವ ಬಸ್‌ ಸೇವೆ ರದ್ದು

ಬೆಂಗಳೂರು–ಹಾಸನ, ಬೆಂಗಳೂರು–ಮೈಸೂರು ನಡುವೆ 126 ಬಸ್‌ ಸಂಚಾರ ಸ್ಥಗಿತ
Last Updated 4 ಫೆಬ್ರುವರಿ 2020, 4:22 IST
ಅಕ್ಷರ ಗಾತ್ರ
ADVERTISEMENT
""

ಬೆಂಗಳೂರು: ಮೂರು ನಾಲ್ಕುಪ್ರಯಾಣಿಕರಿದ್ದರೂ ಖಾಲಿ ಸಂಚರಿಸುವ ಬಸ್‌ಗಳ ಸೇವೆ ರದ್ದುಪಡಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಕ್ರಮ ಕೈಗೊಂಡಿದೆ. ಮೊದಲ ಹಂತದಲ್ಲಿ ಮೈಸೂರು–ಬೆಂಗಳೂರು, ಹಾಸನ–ಬೆಂಗಳೂರು ನಡುವೆ 126 ಬಸ್‌ಗಳ ಸಂಚಾರವನ್ನು ಸ್ಥಗಿತಗೊಳಿಸಿದೆ.

ಹಾಸನ–ಬೆಂಗಳೂರು ಮತ್ತು ಮೈಸೂರು–ಬೆಂಗಳೂರು ನಡುವೆ ಸಂಚರಿಸುವ ಕೆಎಸ್‌ಆರ್‌ಟಿಸಿ ‘ಕರ್ನಾಟಕ ಸಾರಿಗೆ (ಕೆಂಪು ಬಸ್)’ ಬಸ್‌ಗಳ ನಡುವೆಯೇ ಪೈಪೋಟಿ ತಪ್ಪಿಸಲು ನಿಗಮ ಈ ಕ್ರಮ ಕೈಗೊಂಡಿದೆ.

ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಯಾವುದೇ ಕ್ಷಣದಲ್ಲಿ ಹೋದರೂ ಹಾಸನ ಕಡೆ ಹೋಗುವ ಬಸ್‌ಗಳು ಐದಾರು ಬಸ್‌ಗಳು ಹೊರಟು ನಿಂತಿರುತ್ತವೆ. ಬ್ಯಾಗ್ ಹಿಡಿದು ಮೂರ್ನಾಲ್ಕು ಮಂದಿ ಒಟ್ಟಿಗೆ ಬರುವುದನ್ನು ಕಂಡರೆ ನಿರ್ವಾಹಕರು ಓಡಿ ಹೋಗಿ ಕೈ ಹಿಡಿದು ಎಳೆದುಕೊಂಡು ತಮ್ಮ ಬಸ್‌ಗಳಿಗೆ ಹತ್ತಿಸಿಕೊಳ್ಳುತ್ತಾರೆ. ಪ್ಲಾಟ್‌ಫಾರಂನಲ್ಲಿ ಬಸ್‌ ನಿಲ್ಲಿಸಲು ಜಾಗಕ್ಕಾಗಿ ಚಾಲಕರ ನಡುವೆ ಪರಸ್ಪರ ಜಗಳ ನಡೆಯುವುದೂ ಇಲ್ಲಿ ಸರ್ವೇಸಾಮಾನ್ಯ. ಮೈಸೂರು ಕಡೆಗೆ ಹೋಗುವ ಬಸ್‌ಗಳು ಹೊರಡುವ ಸ್ಯಾಟಲೈಟ್ ನಿಲ್ದಾಣದಲ್ಲೂ ಇದೇ ಪರಿಸ್ಥಿತಿ.

ಮಧ್ಯರಾತ್ರಿ ಪ್ರಯಾಣಿಕರ ಸಂಖ್ಯೆ ಕಡಿಮೆ ಇದ್ದರೂ ಒಂದೇ ಸಮಯಕ್ಕೆ ನಾಲ್ಕೈದು ಬಸ್‌ಗಳು ಹೊರಡುತ್ತವೆ. ‘ಸರ್ ಆರಾಮವಾಗಿ ಸೀಟ್‌ ಮೇಲೆ ಮಲಗಿಕೊಂಡು ಹೋಗಬಹುದು ನಮ್ಮ ಬಸ್‌ಗೆ ಬನ್ನಿ’ ಎಂದು ನಿರ್ವಾಹಕರು ಮತ್ತು ಚಾಲಕರು ಗೋಗರೆಯುವುದು ಕೂಡ ಸಾಮಾನ್ಯ.

ನಿಗಮದ ಬೇರೆ ಬೇರೆ ವಿಭಾಗಗಳು ಮತ್ತು ಘಟಕಗಳ ನಡುವೆ ಸಮನ್ವಯದ ಕೊರತೆಯಿಂದ ಏಕಕಾಲಕ್ಕೆ ನಾಲ್ಕೈದು ಬಸ್‌ಗಳು ಹೊರಡುತ್ತವೆ. ಮೊದಲೇ ನಷ್ಟದಲ್ಲಿರುವ ನಿಗಮ ಖಾಲಿ ಬಸ್‌ಗಳನ್ನು ಓಡಿಸುವ ಮೂಲಕ ಹೊರೆ ಹೆಚ್ಚಿಸಿಕೊಳ್ಳುತ್ತಿದೆ. ಇಂಧನಕ್ಕೆ ಮತ್ತು ಬಸ್‌ಗಳ ನಿರ್ವಹಣೆ ಮಾಡುವ ವೆಚ್ಚವನ್ನು ಸರಿದೂಗಿಸುವಷ್ಟು ವರಮಾನವೂ ನಿಗಮಕ್ಕೆ ಬರುತ್ತಿಲ್ಲ.

ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು ಅಧಿಕಾರಿಗಳ ಸಭೆ ನಡೆಸಿ ಖಾಲಿ ಸಂಚರಿಸುವ ಬಸ್‌ಗಳಿಗೆ ಬ್ರೇಕ್ ಹಾಕಲು ಸೂಚನೆ ನೀಡಿದ್ದರು. ತಳ ಹಂತದಿಂದ ಮಾಹಿತಿ ಪಡೆದಿರುವ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವ‌ಯೋಗಿ ಸಿ. ಕಳಸದ, ಎಲ್ಲಾ ವಿಭಾಗದ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿ ಒಟ್ಟು 126 ಬಸ್‌ಗಳ ಸಂಚಾರ ರದ್ದುಗೊಳಿಸಿದ್ದಾರೆ.

‘ವೈಜ್ಞಾನಿಕವಾಗಿ ಮಾರ್ಗಗಳ ಮರುನಿಗದಿಗೆ ಕ್ರಮ’

‘ಪ್ರತಿ ಎರಡು ನಿಮಿಷಕ್ಕೊಂದು ಬಸ್‌ ಈ ಎರಡೂ ಮಾರ್ಗಗಳಲ್ಲಿ ಸಂಚರಿಸುತ್ತಿದ್ದವು. ಪ್ರಯಾಣಿಕರಿಗೆ ತೊಂದರೆ ಆಗದಂತೆ ವೈಜ್ಞಾನಿಕವಾಗಿ ಬಸ್‌ ಸಂಚಾರವನ್ನು ಮರುನಿಗದಿ ಮಾಡಲಾಗಿದೆ’ ಎಂದು ಶಿವಯೋಗಿ ಸಿ. ಕಳಸದ ‘‍‍‍‍ಪ್ರಜಾವಾಣಿ’ಗೆ ತಿಳಿಸಿದರು.‘ಮೊದಲ ಹಂತದಲ್ಲಿ ಈ ಎರಡು ಮಾರ್ಗಗಳಲ್ಲಿ ಬಸ್‌ಗಳ ಸಂಖ್ಯೆ ಕಡಿಮೆ ಮಾಡಲಾಗಿದೆ.ಬಸ್‌ಗಳನ್ನು ಅಗತ್ಯ ಇರುವ ಬೇರೆ ಮಾರ್ಗಗಳಿಗೆ ಬಳಸಿಕೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ಬೇರೆ ಮಾರ್ಗಗಳಲ್ಲೂ ಇದೇ ಪ್ರಯೋಗ ನಡೆಸಲಾಗುವುದು’ ಎಂದು ಹೇಳಿದರು.

‘ಮೈಸೂರಿಗೆ ರೈಲುಗಳ ಸಂಖ್ಯೆ ಹೆಚ್ಚಳವಾಗಿದೆ. ವಿಮಾನ ಸೌಲಭ್ಯವೂ ಇದೆ. ಹಾಸನಕ್ಕೂ ನೇರ ರೈಲು ಸಂಚಾರ ಆರಂಭವಾಗಿದೆ. ಹೀಗಾಗಿ ಈ ಎರಡೂ ಮಾರ್ಗಗಳಲ್ಲಿ ಬಸ್‌ನಲ್ಲಿ ‍ಪ್ರಯಾಣಿಸುವವರ ಸಂಖ್ಯೆ ಮೊದಲಿಗಿಂತ ಕಡಿಮೆಯಾಗಿದೆ. ಬಸ್‌ಗಳ ಸಂಖ್ಯೆ ಕಡಿಮೆಯಾದರೂ ಮೈಸೂರಿಗೆ ಪ್ರತಿ 3ರಿಂದ 5ನಿಮಿಷಕ್ಕೆ ಹಾಗೂ ಹಾಸನಕ್ಕೆ ಪ್ರತಿ 4ರಿಂದ 6 ನಿಮಿಷಕ್ಕೆ ಒಂದರಂತೆ ಬಸ್‌ ಸೇವೆ ಲಭ್ಯ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT