ಚಿಮೂ ಸಂಶೋಧನೆಗಳು ಮಾಹಿತಿಪೂರ್ಣ: ಎಚ್.ದಂಡಪ್ಪ

ಬೆಂಗಳೂರು: ‘ಸಂಶೋಧನೆ ಎಂಬ ವಿಷಯ ಅತ್ಯಂತ ನೀರಸ. ಆದರೆ, ಎಂ.ಚಿದಾನಂದ ಮೂರ್ತಿ (ಚಿಮೂ) ಸಂಶೋಧನೆಗಳು ಮಾಹಿತಿ ಸಂಗ್ರಹ ಹಾಗೂ ವಿಶ್ಲೇಷಣೆಯಿಂದ ಕೂಡಿರುತ್ತಿತ್ತು. ಮಾಹಿತಿಪೂರ್ಣ ಮತ್ತು ಸ್ವಾರಸ್ಯಕರವಾಗಿಯೂ ಇರುತ್ತಿತ್ತು’ ಎಂದು ವಿಮರ್ಶಕ ಎಚ್.ದಂಡಪ್ಪ ತಿಳಿಸಿದರು.
ಕನ್ನಡ ಗೆಳೆಯರ ಬಳಗವು ನಗರದಲ್ಲಿ ಸೋಮವಾರ ಆಯೋಜಿಸಿದ್ದ ‘ಎಂ.ಚಿದಾನಂದ ಮೂರ್ತಿ ಅವರ ವರ್ಷದ ನೆನಪು’ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಸಂಶೋಧನೆಗಳು ವರ್ತಮಾನಕ್ಕೆ ಪೂರಕವಾಗಿ ಇರದಿದ್ದರೆ, ಅವು ವ್ಯರ್ಥ. ಚಿಮೂ ಅವರ ಸಂಶೋಧನೆಗಳು ಹೊಸತನದೊಂದಿಗೆ ಕೂಡಿದ್ದು, ವರ್ತಮಾನಕ್ಕೆ ಪೂರಕವಾಗಿ ಇರುತ್ತಿದ್ದವು. ಭಾಷೆ, ಇತಿಹಾಸ, ಸಂಸ್ಕೃತಿಗೆ ಸಂಬಂಧಿಸಿದ ಸಮಗ್ರ ಸಂಶೋಧನೆಗಳಿಗೆ ಹೆಸರಾಗಿದ್ದರು’ ಎಂದರು.
ವಿಡಿಯೊ ಸಂದೇಶದಲ್ಲಿ ಮಾತನಾಡಿದ ಸಚಿವ ಎಸ್.ಸುರೇಶ್ ಕುಮಾರ್, ‘ಚಿಮೂ ಅವರ ಸಂಶೋಧನೆಗಳಿಂದ ಹೊರಬಿದ್ದ ಅನೇಕ ಸತ್ಯಾಂಶಗಳು ನಮ್ಮನ್ನು ಎಚ್ಚರಿಸಿವೆ. ತಮ್ಮ ವ್ಯಕ್ತಿತ್ವದ ಭವಿಷ್ಯದ ಬಗ್ಗೆ ಲೆಕ್ಕಿಸದೆ, ಟಿಪ್ಪು ಸುಲ್ತಾನ್, ಹಂಪಿ ಸೇರಿದಂತೆ ಪ್ರಮುಖ ವಿಚಾರಗಳನ್ನು ಧೈರ್ಯವಾಗಿ ವ್ಯಕ್ತಪಡಿಸಿದ್ದರು’ ಎಂದರು.
ಕನ್ನಡ ಗೆಳೆಯರ ಬಳಗದ ಸಂಚಾಲಕ ರಾ.ನಂ.ಚಂದ್ರಶೇಖರ್,‘ಮೇ 10ರಂದು ಚಿಮೂ ಕುರಿತಾದ ಪುಸ್ತಕ ಹೊರತರಲಾಗುವುದು’ ಎಂದರು.
ಕಾರ್ಯಕ್ರಮದಲ್ಲಿ ಭಾಷಾ ವಿಜ್ಞಾನಿ ಕೆ.ಪಿ.ಭಟ್, ಸಂಶೋಧಕಿ ಉಷಾ ಕಿರಣ್, ಸಪ್ನ ಬುಕ್ ಹೌಸ್ನ ನಿತಿನ್ ಷಾ, ಕನ್ನಡ ಹೋರಾಟಗಾರ ರು.ಬಸಪ್ಪ, ರಾಮಕೃಷ್ಣ ಅವರಿಗೆ ‘ಚಿದಾನಂದಮೂರ್ತಿ ನೆನಪಿನ ಗೌರವ’ ನೀಡಿ ಸನ್ಮಾನಿಸಲಾಯಿತು.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.