ಶುಕ್ರವಾರ, ಆಗಸ್ಟ್ 19, 2022
22 °C
ಎರಡು ಬಾರಿ ಪ್ಲಾಸ್ಮಾ ದಾನ ಮಾಡಿ ಮಾದರಿಯಾದ ಡಾ.ಬಿ.ಜಿ. ಧರ್ಮಾನಂದ್

ಭಯವೆಂಬ ಸೋಂಕು ತೊಲಗಿದಲ್ಲಿ ಕಾಯಿಲೆ ದೂರ: ಡಾ.ಬಿ.ಜಿ. ಧರ್ಮಾನಂದ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಕೊರೊನಾ ಸೋಂಕಿನ ಬಗ್ಗೆ ಸೃಷ್ಟಿಸಲಾಗಿರುವ ಭಯವು ಸೋಂಕಿಗಿಂತ ಹೆಚ್ಚು  ಅಪಾಯಕಾರಿ. ಜನರು ತಮ್ಮಲ್ಲಿನ ಭಯ ಹೊಡೆದೊಡಿಸಿ, ಸೋಂಕಿತರನ್ನು ಕಳಂಕಿತರಂತೆ ನೋಡುವುದನ್ನು ನಿಲ್ಲಿಸಿದಲ್ಲಿ ಈ ಕಾಯಿಲೆಯನ್ನು ಸುಲಭವಾಗಿ ಹಿಮ್ಮೆಟ್ಟಿಸಿ, ಮುಂದೆ ಸಾಗಬಹುದು’.

– ಇದು ನಗರದ ವಿಕ್ರಮ್ ಆಸ್ಪತ್ರೆಯ ಸಂಧಿವಾತಶಾಸ್ತ್ರಜ್ಞ ಡಾ.ಬಿ.ಜಿ. ಧರ್ಮಾನಂದ್ ಅವರ ಮನದಾಳದ ಮಾತುಗಳು. ಜೂ.18ರಂದು ಸೋಂಕಿತರಾಗಿದ್ದ ಅವರು, ಈಗ ಚೇತರಿಸಿಕೊಂಡು ಪುನಃ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಸೋಂಕಿನಿಂದ ಗಂಭೀರವಾಗಿ ಅಸ್ವಸ್ಥರಾಗಿದ್ದ ಇಬ್ಬರು ರೋಗಿಗಳಿಗೆ ಸ್ವಯಂಪ್ರೇರಿತರಾಗಿ ಪ್ಲಾಸ್ಮಾ ದಾನ ಮಾಡುವ ಮೂಲಕ ಮಾದರಿಯಾಗಿದ್ದಾರೆ. 

‘ಸಾಕಷ್ಟು ಮುಂಜಾಗರೂಕತಾ ಕ್ರಮಗಳನ್ನು ಅನುಸರಿದರೂ ಕೊರೊನಾ ಸೋಂಕು ಹೇಗೆ ನನ್ನ ದೇಹದ ಮೇಲೆ ದಾಳಿ ನಡೆಸಿತು ಎನ್ನುವುದು ತಿಳಿದಿಲ್ಲ. ರೋಗಿಗಳನ್ನು ತಪಾಸಣೆ ಮಾಡುತ್ತಿರುವ ವೇಳೆ ಸೋಂಕು ಹರಡಿರುವ ಸಾಧ್ಯತೆಯಿದೆ. ಜ್ವರದ ಲಕ್ಷಣಗಳು ಕಾಣಿಸಿಕೊಂಡ ಕಾರಣ ಕೋವಿಡ್ ಪರೀಕ್ಷೆ ಮಾಡಿಸಿಕೊಂಡೆ. ಸೋಂಕಿತನಾಗಿರುವುದು ಖಚಿತಪಟ್ಟ ಬಳಿಕ ಕರ್ತವ್ಯನಿರ್ವಹಿಸುತ್ತಿದ್ದ ಆಸ್ಪತ್ರೆಯಲ್ಲಿಯೇ ರೋಗಿಯಾಗಿ ಚಿಕಿತ್ಸೆ ಪಡೆದುಕೊಂಡೆ. ಬಳಿಕ 14 ದಿನಗಳು ಮನೆ ಕ್ವಾರಂಟೈನ್‌ಗೆ ಒಳಗಾಗಿ, ಪುನಃ ಸೇವೆಗೆ ಹಾಜರಾಗಿದ್ದೇನೆ’ ಎಂದು ಡಾ.ಬಿ.ಜಿ. ಧರ್ಮಾನಂದ್  ‘ಪ್ರಜಾವಾಣಿ’ಗೆ ತಿಳಿಸಿದರು. 

‘ಕೋವಿಡ್‌ ಹಾಗೂ ಚಿಕಿತ್ಸೆ ಬಗ್ಗೆ ತಿಳಿದಿದ್ದರಿಂದ ಸೋಂಕಿತನಾದಾಗ ಭಯ ಆಗಲಿಲ್ಲ. ಹೀಗಾಗಿ ಬೇಗ ಚೇತರಿಸಿಕೊಳ್ಳಲು ಸಾಧ್ಯವಾಯಿತು. ಮನೆ ಕ್ವಾರಂಟೈನ್‌ ಅವಧಿ ಮುಗಿದ ಬಳಿಕ ಪ್ಲಾಸ್ಮಾ ಬ್ಯಾಂಕಿಗೆ ಎರಡು ಬಾರಿ ಪ್ಲಾಸ್ಮಾ ದಾನ ಮಾಡಿದೆ. ಇಬ್ಬರು ರೋಗಿಗಳಿಗೆ ಸಹಾಯವಾಯಿತು. ರೋಗದಿಂದ ಚೇತರಿಸಿಕೊಂಡವರಲ್ಲಿ ಪ್ರತಿಕಾಯಗಳು ವೃದ್ಧಿಯಾಗಿರುತ್ತವೆ. ರಕ್ತದಲ್ಲಿರುವ ನೀರಿನ ಅಂಶ ತೆಗೆದು, ರೋಗನಿರೋಧಕಶಕ್ತಿ ಕಡಿಮೆ ಇದ್ದವರಿಗೆ ನೀಡಲಾಗುತ್ತದೆ. ನಮ್ಮ ದೇಹದಲ್ಲಿ 2 ಲೀಟರ್‌ನಷ್ಟು ಪ್ಲಾಸ್ಮಾ ಇರುತ್ತದೆ. ಹಾಗಾಗಿ ಪ್ಲಾಸ್ಮಾ ದಾನ ಮಾಡುವುದರಿಂದ ಯಾವುದೇ ಸಮಸ್ಯೆಯಾಗುವುದಿಲ್ಲ’ ಎಂದರು. 

‘ಕೋವಿಡ್‌ ಪರೀಕ್ಷೆ ಮಾಡಿಸಿಕೊಂಡಾಗ ಸೋಂಕು ದೃಢಪಟ್ಟಲ್ಲಿ ನಮ್ಮನ್ನು ಅಕ್ಕಪಕ್ಕದ ಮನೆಯವರು ಬೇರೆ ದೃಷ್ಟಿಯಿಂದ ನೋಡುತ್ತಾರೆ ಎಂಬ ಭಾವನೆಯಿಂದ ಕೆಲವರು ಮನೆಯಲ್ಲಿಯೇ ಕುಳಿತುಕೊಳ್ಳುತ್ತಿದ್ದಾರೆ. ಒಂದು ವಾರ ಕಳೆದ ಬಳಿಕ ಸಮಸ್ಯೆ ಜಾಸ್ತಿಯಾದಾಗ ಆಸ್ಪತ್ರೆಗಳಿಗೆ ತೆರಳುತ್ತಾರೆ. ಅಂತಹವರಿಗೆ ಹೆಚ್ಚಿನ ಸಮಸ್ಯೆ ಆಗುವ ಸಾಧ್ಯತೆ ಇರುತ್ತದೆ. ಭಯ, ಹಿಂಜರಿಕೆ ಬಿಟ್ಟು ಪರೀಕ್ಷೆ ಮಾಡಿಸಿಕೊಳ್ಳಬೇಕು. ಪೌಷ್ಟಿಕ ಆಹಾರ ಸೇವಿಸುವ ಜತೆಗೆ ವ್ಯಾಯಾಮ ಮಾಡಬೇಕು’ ಎಂದು ಕಿವಿಮಾತು ಹೇಳಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು