ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರುಕಟ್ಟೆ ದರದ ಆಧಾರದಲ್ಲಿ ಬಾಡಿಗೆ ಮರುನಿಗದಿ

324 ಆಸ್ತಿಗಳನ್ನು ಗುತ್ತಿಗೆಗೆ ನೀಡಿರುವ ಬಿಬಿಎಂಪಿ
Last Updated 17 ಅಕ್ಟೋಬರ್ 2020, 21:04 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ಗುತ್ತಿಗೆ ಅವಧಿ ಮುಗಿದಿರುವ ಆಸ್ತಿಗಳನ್ನು ಮರಳಿ ವಶಕ್ಕೆ ಹಿಂಪಡೆಯಲಾಗುತ್ತಿದೆ. ಈಗಿನ ಮಾರುಕಟ್ಟೆ ದರದ ಆಧಾರದಲ್ಲಿ ಬಾಡಿಗೆಯನ್ನು ನಿಗದಿಪಡಿಸಿ ಗುತ್ತಿಗೆ ನೀಡಲು ಕ್ರಮವಹಿಸಲಾಗುತ್ತಿದೆ.

ಬಿಬಿಎಂಪಿ ಆಡಳಿತಾಧಿಕಾರಿ ಗೌರವ್‌ ಗುಪ್ತ ಅವರು ನಡೆಸಿದ ಸಭೆಯಲ್ಲಿ ಬಿಬಿಎಂಪಿಯ ಆಸ್ತಿಗಳ ನಿರ್ವಹಣೆ ವಿಭಾಗದ ಅಧಿಕಾರಿಗಳು ಈ ಮಾಹಿತಿ ನೀಡಿದ್ದಾರೆ.

‘ಬಿಬಿಎಂಪಿಯ ಒಡೆತನದ ಆಸ್ತಿಗಳ ಸಂರಕ್ಷಣೆಗೆ ಮತ್ತು ಅವುಗಳಿಂದ ಹೆಚ್ಚು ಸಂಪನ್ಮೂಲ ಕ್ರೂಢಿಕರಣ ಮಾಡುವುದಕ್ಕೆ ಕ್ರಮವಹಿಸಬೇಕು. ಎಲ್ಲಾ ಆಸ್ತಿಗಳನ್ನು ಸರಿಯಾಗಿ ಸರ್ವೇ ಮಾಡಿ ಆ ಜಾಗಕ್ಕೆ ತಂತಿ ಬೇಲಿ ಅಳವಡಿಸಬೇಕು’ ಎಂದು ಬಿಬಿಎಂಪಿ ಆಡಳಿತಾಧಿಕಾರಿ ಗೌರವ ಗುಪ್ತ ಸೂಚನೆ ನೀಡಿದರು.

ಪಾಲಿಕೆ ಆಸ್ತಿಗಳ ವಿವರವನ್ನು ಒದಗಿಸಿದ ಬಿಬಿಎಂಪಿಯ ಉಪಆಯುಕ್ತ (ಆಸ್ತಿಗಳು) ಹರೀಶ್ ನಾಯ್ಕ್, ‘ಪಾಲಿಕೆ ಭೂಮಿ’ ತಂತ್ರಾಂಶದಲ್ಲಿ ಇದುವರೆಗೆ 1,700 ಆಸ್ತಿಗಳಿಗೆ ಸ್ವತ್ತಿನ ಗುರುತಿನ ಸಂಖ್ಯೆ (ಪಿಐಡಿ) ನೀಡಲಾಗಿದೆ. ಬಿಬಿಎಂಪಿ ಆಸ್ತಿಗಳ ಸರ್ವೆ ಮಾಡಲು ನಾಲ್ವರು ಭೂಮಾಪಕರು ಕಾರ್ಯನಿರ್ವಹಿಸುತ್ತಿದ್ದಾರೆ’ ಎಂದರು.

ಬಿಬಿಎಂಪಿಯ ಜಾಹೀರಾತು ವಿಭಾಗದಿಂದ ಬರುತ್ತಿರುವ ವರಮಾನದ ಬಗ್ಗೆಯೂ ಆಡಳಿತಾಧಿಕಾರಿ ಮಾಹಿತಿ ಪಡೆದರು. ‘ನಗರದಲ್ಲಿ ಬಿಬಿಎಂಪಿ ಹೊರಾಂಗಣ ಸೈನೇಜ್ ಮತ್ತು ಸಾರ್ವಜನಿಕ ಸಂದೇಶ ಬೈಲಾ-2018 ಜಾರಿಯಲ್ಲಿದೆ. ಇದರ ಪ್ರಕಾರ ನಗರದದಲ್ಲಿ ವಾಣಿಜ್ಯ ಜಾಹೀರಾತುಗಳಿಗೆ ಸಂಬಂಧಿಸಿದ ಹೋರ್ಡಿಂಗ್‌ಗಳ ಪ್ರದರ್ಶನಕ್ಕೆ ಅವಕಾಶವಿಲ್ಲ’ ಎಂದು ಜಂಟಿ ಆಯುಕ್ತ (ಜಾಹೀರಾತು) ವೆಂಕಟೇಶ್ ಗಮನಕ್ಕೆ ತಂದರು.

‘ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ಸ್ಥಾಪಿಸಲಾಗಿರುವ ಬಸ್ ಪ್ರಯಾಣಿಕರ ತಂಗುದಾಣ, ಪಾದಚಾರಿಗಳ ಮೇಲುಸೇತುವೆ (ಸ್ಕೈವಾಕ್) ಹಾಗೂ ಸಾರ್ವಜನಿಕ ಶೌಚಾಲಯ ಹಾಗೂ ಪೊಲೀಸ್ ಚೌಕಿಗಳ ಬಳಿ ಮಾತ್ರ ಜಾಹೀರಾತು ಹಾಕಲು ಅವಕಾಶವಿದೆ’ ಎಂದು ಮಾಹಿತಿ ನೀಡಿದರು.

ಪಿಪಿಪಿ ಮಾದರಿಯಲ್ಲಿ ನಿರ್ಮಿಸಿದ ಮೂಲಸೌಕರ್ಯಗಳಲ್ಲಿ ಅಳವಡಿಸಿರುವ ಜಾಹೀರಾತುಗಳು, ಅವುಗಳನ್ನು ಯಾರಿಗೆ ಗುತ್ತಿಗೆ ನೀಡಲಾಗಿದೆ ಮತ್ತು ಜಾಹೀರಾತಿಗೆ ಎಷ್ಟು ದರ ನಿಗದಿಪಡಿಸಲಾಗಿದೆ, ಅದರಿಂದ ಎಷ್ಟು ವರಮಾನ ಬರಲಿದೆ ಎಂಬ ಸಮಗ್ರ ಮಾಹಿತಿ ಶೀಘ್ರವೇ ಒದಗಿಸಬೇಕು. ಗುತ್ತಿಗೆ ಅವಧಿ ಪೂರ್ಣಗೊಂಡಿದ್ದರೆ, ಅವುಗಳನ್ನು ನವೀಕರಿಸುವಾಗ ಹೆಚ್ಚು ವರಮಾನ ಸಂಗ್ರಹಿಸಲು ಕ್ರಮವಹಿಸಬೇಕು’ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT