ಗುರುವಾರ , ಮೇ 19, 2022
21 °C
ಬಿಬಿಎಂಪಿಗೆ ಶಾಲಾ ಮೈದಾನ: ಸಚಿವ ಅಶೋಕ ಪ್ರಭಾವದ ಆರೋಪ

ಪರಭಾರೆ ಪ್ರಕ್ರಿಯೆಗೆ ತಡೆ ನೀಡಿದ ಹೈಕೋರ್ಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಪದ್ಮನಾಭನಗರ ಬಡಾವಣೆಯ ಮುಖ್ಯರಸ್ತೆಯಲ್ಲಿರುವ ಕಾರ್ಮೆಲ್‌ ಕನ್ನಡ ಶಾಲೆಗೆ ಅಂಟಿಕೊಂಡ ಅಂದಾಜು ಮೂರು ಸಾವಿರ ಚದರಡಿಯ ಆಟದ ಮೈದಾನವನ್ನು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿಗೆ) ಹಸ್ತಾಂತರಿಸಬೇಕು’ ಎಂದು ಕೋರಿ ಬಿಬಿಎಂಪಿ, ಬಿಡಿಎಗೆ (ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ) ಬರೆದಿರುವ ಪತ್ರ ಮತ್ತು ಈ ಸಂಬಂಧದ ಪರಭಾರೆ ಪ್ರಕ್ರಿಯೆಗೆ ಹೈಕೋರ್ಟ್‌ ಮಧ್ಯಂತರ ತಡೆ ನೀಡಿದೆ.

ಈ ಕುರಿತಂತೆ ಜಯನಗರ ಕೋ–ಆಪರೇಟಿವ್‌ ಹೌಸಿಂಗ್ ಸೊಸೈಟಿ ಲಿಮಿಟೆಡ್‌ ಕಾರ್ಯದರ್ಶಿ ಎಂ.ಶಿವಣ್ಣ ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ವೆಂಕಟೇಶ್ ಪಿ.ದಳವಾಯಿ, ‘ಖಾಸಗಿ ಕನ್ನಡ ಮಾಧ್ಯಮ ಶಾಲೆಯಾದ ಕಾರ್ಮೆಲ್ ವಿದ್ಯಾಸಂಸ್ಥೆಯಲ್ಲಿ ಎಲ್.ಕೆ.ಜಿ.ಯಿಂದ ಏಳನೇ ತರಗತಿಯವರಿಗೆ ಸುಮಾರು 400 ಮಕ್ಕಳು ಕಲಿಯುತ್ತಿದ್ದಾರೆ. 15 ಮಂದಿ ಬೋಧಕರಿದ್ದಾರೆ. ಈಗ ಏಕಾಏಕಿ ಈ ಪ್ರದೇಶವನ್ನು ಬಿಡಿಎ ತನಗೆ ಹಸ್ತಾಂತರಿಸಬೇಕು ಎಂದು ಬಿಬಿಎಂಪಿ ಕೋರಿದೆ. ಈ ಕೋರಿಕೆಯ ಹಿಂದೆ ಸ್ಥಳೀಯ ಶಾಸಕರೂ ಆದ ಕಂದಾಯ ಸಚಿವ ಆರ್.ಅಶೋಕ್‌ ಅವರ ನೇರ ಕುಮ್ಮಕ್ಕು ಇದೆ. ಆದ್ದರಿಂದ, ಈ ಜಾಗದ ಪರಭಾರೆ ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು’ ಎಂದು ಕೋರಿದರು.

ಈ ಮನವಿಗೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಹಾಗಾದರೆ ಸಚಿವರನ್ನೂ ಇದರಲ್ಲಿ ಪಾರ್ಟಿ ಮಾಡಬೇಕಲ್ಲವೇ‘ ಎಂದು ಪ್ರಶ್ನಿಸಿತು. ಇದಕ್ಕೆ ಉತ್ತರಿಸಿದ ವೆಂಕಟೇಶ್‌ ದಳವಾಯಿ, ‘ಸ್ವಾಮಿ, ಸಚಿವರು ಸೂಚನೆ ನೀಡಿರುವುದಕ್ಕೆ ದಾಖಲೆ ಇಲ್ಲ. ಆದ್ದರಿಂದ, ಅವರ ಬದಲಿಗೆ ಈಗಿರುವ ಪ್ರತಿವಾದಿಗಳಿಗೇ ತಾವು ಆದೇಶ ಮಾಡಬಹುದು’ ಎಂದು ಕೋರಿದರು. 

ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, ಬಿಬಿಎಂಪಿ ದಕ್ಷಿಣ ವಲಯದ ಯೋಜನಾ ವಿಭಾಗದ ಕಾರ್ಯಪಾಲಕ ಎಂಜಿನಿಯರ್, ಬಿಡಿಎ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮತ್ತು ಬಿಡಿಎ ಪ್ರದೇಶಾಧಿಕಾರಿಗೆ ನೋಟಿಸ್‌ ಜಾರಿಗೊಳಿಸಲು ಆದೇಶಿಸಿ ವಿಚಾರಣೆ ಮುಂದೂಡಿದೆ.

ಪ್ರಕರಣವೇನು?: ’182ನೇ ವಾರ್ಡ್‌ನಲ್ಲಿ ಕಾರ್ಮೆಲ್‌ ಶಾಲೆ ನಡೆಸಲು ಬಿಡಿಎ ಅನುಮತಿ ನೀಡಿದೆ. 30 ವರ್ಷಗಳ ಗುತ್ತಿಗೆ ಅವಧಿ 2022ರ ಫೆಬ್ರುವರಿಗೆ ಮುಕ್ತಾಯಗೊಂಡಿರುವುದರಿಂದ ಮುಂದಿನ ಅವಧಿಗೆ ವಿದ್ಯಾಸಂಸ್ಥೆ ಮುಂದು
ವರಿಸಲು ಅನುಮತಿ ನೀಡಬಾರದು ಎಂದು ಸ್ಥಳೀಯ ಶಾಸಕರೂ ಆದ ಸಚಿವರು ಸೂಚಿಸಿರುತ್ತಾರೆ’ ಎಂದು ಬಿಬಿಎಂಪಿ ಅಧಿಕಾರಿಗಳು ಬಿಡಿಎಗೆ ಪತ್ರ ಬರೆದು ಮೈದಾನವನ್ನು ಹಸ್ತಾಂತರಿಸಲು ಕೋರಿ ಪತ್ರ ಬರೆದಿದ್ದಾರೆ.

‘ಸಾರ್ವಜನಿಕರು ಹಾಗೂ ಪಾಲಿಕೆಯ ಆಸ್ತಿಯನ್ನು ಸಂರಕ್ಷಿಸುವ ಹಿತದೃಷ್ಟಿಯಿಂದ ಈ ಪ್ರದೇಶದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವುದು ಅತ್ಯವಶ್ಯವಿದೆ ಎಂದು ಬಿಬಿಎಂಪಿ ದಕ್ಷಿಣ ವಲಯದ ಯೋಜನಾ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ಅವರು, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಅವರಿಗೆ ಕಳೆದ ತಿಂಗಳ 10ರಂದು ಪತ್ರ ಬರೆದಿದ್ದಾರೆ. ಕಂದಾಯ ಸಚಿವರ ಸೂಚನೆಯಂತೆ ಈ ಪ್ರದೇಶವನ್ನು ಪಾಲಿಕೆಗೆ ಹಸ್ತಾಂತರಿಸಬೇಕು’ ಎಂದೂ ಈ ಪತ್ರದಲ್ಲಿ ವಿವರಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು