ಭಾನುವಾರ, ಮೇ 29, 2022
21 °C
ಸಾಂಸ್ಕೃತಿಕ ಕಾರ್ಯಕ್ರಮ ಇಲ್ಲ: * ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ

ಗಣರಾಜ್ಯೋತ್ಸವ: ಗಣ್ಯರಿಗಷ್ಟೇ ಅವಕಾಶ, ಮಾಣೇಕ್‌ ಷಾ ಮೈದಾನದಲ್ಲಿ ಪೊಲೀಸ್‌ ಭದ್ರತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚಳವಾಗುತ್ತಿರುವುದರಿಂದ ಇದೇ 26ರಂದು ಮಾಣೇಕ್‌ ಷಾ ಪರೇಡ್‌ ಮೈದಾನದಲ್ಲಿ ನಡೆಯುವ ಗಣರಾಜ್ಯೋತ್ಸವದಲ್ಲಿ ಭಾಗವಹಿಸಲು ಆಯ್ದ ಗಣ್ಯರಿಗಷ್ಟೇ ಅವಕಾಶ ಕಲ್ಪಿಸಲಾಗಿದೆ. ಈ ಬಾರಿಯೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿದ್ದು, ಸಾರ್ವಜನಿಕರ ಪ್ರವೇಶವನ್ನೂ ನಿಷೇಧಿಸಲಾಗಿದೆ.

ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ, ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಹಾಗೂ ನಗರ ಪೊಲೀಸ್‌ ಕಮಿಷನರ್‌ ಕಮಲ್‌ ಪಂತ್‌ ಅವರು ಸೋಮವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ಹಾಗೂ ಭದ್ರತೆ ಕುರಿತ ಮಾಹಿತಿ ಹಂಚಿಕೊಂಡರು.

ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ್‌, ‘ಗಣರಾಜ್ಯೋತ್ಸವಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ರಾಜ್ಯಪಾಲರು ಇದೇ 26ರ ಬೆಳಿಗ್ಗೆ 9 ಗಂಟೆಗೆ ಧ್ವಜಾರೋಹಣ ನೆರವೇರಿಸಲಿದ್ದು, ಬಳಿಕ ಗೌರವ ವಂದನೆ ಸ್ವೀಕರಿಸಿ ರಾಜ್ಯದ ಜನರಿಗೆ ಸಂದೇಶ ನೀಡಲಿದ್ದಾರೆ. ಕೆಎಸ್‌ಆರ್‌ಪಿ, ಸಿಆರ್‌ಪಿಎಫ್‌, ಬಿಎಸ್‌ಎಫ್‌, ಸಿಎಆರ್‌, ಕೆಎಸ್‌ಐಎಸ್‌ಎಫ್‌, ಸಂಚಾರ ಪೊಲೀಸ್‌, ಮಹಿಳಾ ಪೊಲೀಸ್‌, ಗೃಹರಕ್ಷಕ ದಳ, ಸಂಚಾರ ವಾರ್ಡನ್‌, ಅಗ್ನಿಶಾಮಕ ದಳ, ಶ್ವಾನ ದಳ, ವಾದ್ಯವೃಂದ (ಬ್ಯಾಂಡ್‌) ಸೇರಿದಂತೆ ಒಟ್ಟು 21 ತುಕಡಿಗಳ ಸುಮಾರು 500 ಮಂದಿ ಪಥ ಸಂಚಲನದಲ್ಲಿ ಪಾಲ್ಗೊಳ್ಳಲಿದ್ದಾರೆ’ ಎಂದು ಮಾಹಿತಿ ನೀಡಿದರು.

 ಗೌರವ್‌ ಗುಪ್ತ, ‘ ಮೈದಾನದ ಸುತ್ತಲೂ ಪೊಲೀಸ್‌ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಈ ಪರಿಸರದಲ್ಲಿ 60 ಸಿಸಿಟಿವಿ ಕ್ಯಾಮೆರಾಗಳು ಹಾಗೂ ಎರಡು ಬ್ಯಾಗೇಜ್‌ ಸ್ಕ್ಯಾನರ್‌ಗಳ ವ್ಯವಸ್ಥೆ ಮಾಡಲಾಗಿದೆ.  ಅಗ್ನಿಶಾಮಕ ದಳದ ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಆಂಬುಲೆನ್ಸ್‌, ವೈದ್ಯಕೀಯ ಹಾಗೂ ವೈದ್ಯಕೀಯೇತರ ಸಿಬ್ಬಂದಿಯೂ ಇರಲಿದ್ದಾರೆ. ನಗರದ ಹಲವು ಆಸ್ಪತ್ರೆಗಳಲ್ಲಿ ಸಾಕಷ್ಟು ಸಂಖ್ಯೆಯ ಹಾಸಿಗೆಗಳನ್ನೂ ಕಾಯ್ದಿರಿಸಲಾಗಿದೆ’ ಎಂದು ತಿಳಿಸಿದರು.

‘ಕಾರ್ಯಕ್ರಮ ವೀಕ್ಷಿಸಲು ಬರುವ ಸ್ವಾತಂತ್ರ್ಯ ಹೋರಾಟಗಾರರು, ಅತಿಗಣ್ಯ ಹಾಗೂ ಗಣ್ಯರಿಗೆ ಒಟ್ಟು 200 ಆಸನಗಳ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರು ಪ್ರವೇಶ ದ್ವಾರದಲ್ಲಿರುವ ಸಿಬ್ಬಂದಿಯ ಎದುರು ಆಹ್ವಾನ ಪತ್ರಿಕೆ ಹಾಗೂ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು’ ಹೇಳಿದರು.

ಪಥ ಸಂಚಲನಕ್ಕೆ ಆಶಿಶ್‌ ಚನ್ನಪ್ಪ ನೇತೃತ್ವ

‘ಲೆಫ್ಟಿನೆಂಟ್‌ ಕರ್ನಲ್‌ ಆಶಿಶ್‌ ಚನ್ನಪ್ಪ ಹಾಗೂ ಮೇಜರ್‌ ಲಲಿತ್‌ ಕುಮಾರ್‌ ಮುಂದಾಳತ್ವದಲ್ಲಿ ಗಣರಾಜ್ಯೋತ್ಸವದ ಪಥ ಸಂಚಲನ ನಡೆಯಲಿದೆ. ಆಂಧ್ರಪ್ರದೇಶದ ವಿಶೇಷ ತುಕಡಿ ಸೇರಿ ಒಟ್ಟು 16 ತುಕಡಿಗಳು ಪಾಲ್ಗೊಳ್ಳಲಿವೆ. 5 ವಾದ್ಯ ವೃಂದ, 2 ಡಿ ಸ್ವಾಟ್‌, 4 ಕ್ಯು.ಆರ್‌.ಟಿ, 2 ಆರ್‌.ಐ.ವಿ ಹಾಗೂ 6 ಅಶ್ವಗಳನ್ನು ಒಳಗೊಂಡ ತಂಡವು ಪಥ ಸಂಚಲನದ ಮೆರುಗು ಹೆಚ್ಚಿಸಲಿದೆ’ ಎಂದು ನಗರ ಪೊಲೀಸ್‌ ಕಮಿಷನರ್‌ ಕಮಲ್‌ ಪಂತ್‌ ತಿಳಿಸಿದರು.

‘ಬಂದೋಬಸ್ತ್‌ಗೆ ಸಾಕಷ್ಟು ಸಿಬ್ಬಂದಿ ನಿಯೋಜಿಸಲಾಗಿದೆ. ಮಫ್ತಿಯಲ್ಲೂ ಪೊಲೀಸರು ಕರ್ತವ್ಯ ನಿರ್ವಹಿಸಲಿದ್ದಾರೆ. ತುರ್ತು ಪರಿಸ್ಥಿತಿ ಎದುರಿಸಲು ಗರುಡ ಪಡೆಯ ವಾಹನಗಳನ್ನೂ ಸನ್ನದ್ಧಗೊಳಿಸಲಾಗಿದೆ. ಸಮಾರಂಭಕ್ಕೆ ಬರುವವರು ಬೆಳಿಗ್ಗೆ 8.40ರ ಒಳಗೆ ಆಸೀನರಾಗಿರಬೇಕು’ ಎಂದು ಹೇಳಿದರು. 

ವಾಹನ ನಿಲುಗಡೆ, ಮೈದಾನ ಪ್ರವೇಶಕ್ಕೆ ಪ್ರತ್ಯೇಕ ವ್ಯವಸ್ಥೆ

*ಬಿಳಿ ಹಾಗೂ ತಿಳಿ ಗುಲಾಬಿ (ಪಿಂಕ್‌) ಬಣ್ಣದ ಪಾಸ್‌ ಹೊಂದಿರುವ ಆಹ್ವಾನಿತರು ಕಬ್ಬನ್‌ ರಸ್ತೆ, ಮಣಿಪಾಲ್‌ ಸೆಂಟರ್‌ನಿಂದ ಕೆ.ಆರ್‌.ರಸ್ತೆ ಮತ್ತು ಕಬ್ಬನ್‌ ರಸ್ತೆ ವೃತ್ತದವರೆಗೆ, ಮೈನ್‌ ಗಾರ್ಡ್‌ ಕ್ರಾಸ್‌ ರಸ್ತೆ, ಸಫೀನಾ ಪ್ಲಾಜಾ ಮುಂಭಾಗ, ಕಾಮರಾಜ ರಸ್ತೆ, ಆರ್ಮಿ ಪಬ್ಲಿಕ್‌ ಶಾಲೆ ಮುಂಭಾಗದ ಎರಡು ಬದಿಗಳಲ್ಲಿ ವಾಹನ ನಿಲುಗಡೆ ಮಾಡಬಹುದು.

*ಬಿಳಿ ಬಣ್ಣದ ಪಾಸ್‌ ಹೊಂದಿರುವವರು ದ್ವಾರ ಸಂಖ್ಯೆ 2 ಹಾಗೂ ಪಿಂಕ್‌ ಬಣ್ಣದ ಪಾಸ್‌ ಹೊಂದಿರುವವರು ದ್ವಾರ ಸಂಖ್ಯೆ 3ರ ಮೂಲಕ ಮೈದಾನ ಪ್ರವೇಶಿಸಬೇಕು.

*ಸಚಿವರು, ಸರ್ಕಾರದ ಕಾರ್ಯದರ್ಶಿಗಳು, ರಕ್ಷಣಾ ಅಧಿಕಾರಿಗಳು, ಪೊಲೀಸ್‌ ಅಧಿಕಾರಿಗಳು ಕಬ್ಬನ್‌ ರಸ್ತೆಯಿಂದ ದ್ವಾರ ಸಂಖ್ಯೆ 2ರ ಮೂಲಕ ಮೈದಾನ ಪ್ರವೇಶಿಸಿ  ಉತ್ತರ ಹಾಗೂ ಪಶ್ಚಿಮ ಭಾಗಗಳ ಫಿಶ್‌ ಬೋನ್‌ ಬಳಿ ಪಾರ್ಕಿಂಗ್‌ ಮಾಡಬೇಕು.

*ಮಾಧ್ಯಮದವರು, ಪೊಲೀಸ್‌ ಉಪ ಆಯುಕ್ತರು ಹಾಗೂ ಇತರೆ ಇಲಾಖೆಗಳ ಮೇಲಧಿಕಾರಿಗಳು ದ್ವಾರ ಸಂಖ್ಯೆ 3ರ ಮೂಲಕ ಮೈದಾನ ಪ್ರವೇಶಿಸಿ ಪೂರ್ವ ಭಾಗದಲ್ಲಿ ವಾಹನ ನಿಲ್ಲಿಸಬೇಕು.

*ತುರ್ತು ಸೇವಾ ವಾಹನಗಳು ದ್ವಾರ ಸಂಖ್ಯೆ 2ರ ಮೂಲಕ ಒಳ ಪ್ರವೇಶಿಸಿ ಮೈದಾನದ ಪೋರ್ಟ್‌ ವಾಲ್ ಹಿಂಭಾಗದಲ್ಲಿ ನಿಲುಗಡೆ ಹೊಂದಬೇಕು.

ಬಂದೋಬಸ್ತ್‌ಗೆ ನಿಯೋಜಿಸಲಾಗಿರುವ ಸಿಬ್ಬಂದಿ

11- ಡಿಸಿಪಿ

20- ಎಸಿಪಿ

60- ಪೊಲೀಸ್‌ ಇನ್‌ಸ್ಪೆಕ್ಟರ್‌

125- ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ಗಳು

1,400- ಇತರೆ ಅಧಿಕಾರಿ/ಸಿಬ್ಬಂದಿ, ಕೆಎಸ್‌ಆರ್‌ಪಿ, ಸಿಎಆರ್‌, ಗೃಹರಕ್ಷಕದಳ ಹಾಗೂ ಟ್ರಾಫಿಕ್‌ ವಾರ್ಡನ್‌ಗಳು

ಈ ರಸ್ತೆಗಳಲ್ಲಿ ವಾಹನ ನಿಲುಗಡೆ ನಿಷಿದ್ಧ

* ಸೆಂಟ್ರಲ್‌ ಸ್ಟ್ರೀಟ್‌, ಅನಿಲ್‌ ಕುಂಬ್ಳೆ ವೃತ್ತದಿಂದ ಶಿವಾಜಿನಗರ ಬಸ್‌ ನಿಲ್ದಾಣ
ದವರೆಗೆ

* ಕಬ್ಬನ್‌ ರಸ್ತೆ, ಸಿ.ಟಿ.ಓ ವೃತ್ತದಿಂದ ಕೆ.ಆರ್‌.ರಸ್ತೆ ಮತ್ತು ಕಬ್ಬನ್‌ ರಸ್ತೆ ಜಂಕ್ಷನ್‌ವರೆಗೆ

* ಎಂ.ಜಿ.ರಸ್ತೆ, ಅನಿಲ್‌ ಕುಂಬ್ಳೆ ವೃತ್ತದಿಂದ ಕ್ವೀನ್ಸ್‌ ವೃತ್ತದವರೆಗೆ

ಸಂಚಾರ ಮಾರ್ಗ ಬದಲಾವಣೆ

ಇದೇ 26ರಂದು ಬೆಳಿಗ್ಗೆ 8.30ರಿಂದ 10.30ರವರೆಗೆ ಕಬ್ಬನ್‌ ರಸ್ತೆ, ಬಿ.ಆರ್‌.ವಿ.ಜಂಕ್ಷನ್‌ನಿಂದ ಕಾಮರಾಜ ರಸ್ತೆ ಜಂಕ್ಷನ್‌ವರೆಗೆ ಎರಡು ದಿಕ್ಕುಗಳಲ್ಲಿ ಸಂಚಾರ ನಿರ್ಬಂಧಿಸಲಾಗಿದ್ದು, ಇದಕ್ಕೆ ಬದಲಿ ಮಾರ್ಗಗಳನ್ನು ಸೂಚಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು