ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನ ಎಲ್ಲೆಡೆ ಸರಳ ಗಣರಾಜ್ಯೋತ್ಸವ

ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕತ್ತರಿ * ಧ್ವಜಾರೋಹಣಕ್ಕೆ ಸೀಮಿತವಾದ ಆಚರಣೆ
Last Updated 26 ಜನವರಿ 2021, 19:21 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಗಣರಾಜ್ಯೋತ್ಸವಕ್ಕೆ ಈ ಬಾರಿ ಕೋವಿಡ್ ಕರಿನೆರಳು ಕಾಡಿತು. ನಗರದ ಹಲವೆಡೆ ಸರಳವಾಗಿ ಗಣರಾಜ್ಯೋತ್ಸವ ಆಚರಿಸಲಾಯಿತು. ಅದ್ಧೂರಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಈ ಬಾರಿ ಕೈಬಿಡಲಾಗಿತ್ತು.

ಮಾಣಿಕ್ ಷಾ ಮೈದಾನದಲ್ಲಿ ವರ್ಷಂಪ್ರತಿ ನಡೆಯು ಕಾರ್ಯಕ್ರಮವು ಧ್ವಜಾರೋಹಣಕ್ಕೆ ಸೀಮಿತವಾಯಿತು. ನಗರದ ವಿಶ್ವವಿದ್ಯಾಲಯಗಳು, ಶಾಲಾ, ಕಾಲೇಜುಗಳು, ಸಂಘ- ಸಂಸ್ಥೆಗಳು, ಕನ್ನಡ ಸಾಹಿತ್ಯ ಪರಿಷತ್ತು, ಬಿಡಿಎ, ಕರ್ನಾಟಕ ದಲಿತ ಸಂಘರ್ಷ ಸಮಿತಿ, ವಾರ್ತಾ ಇಲಾಖೆ ಸೇರಿದಂತೆ ಸರ್ಕಾರ ಮತ್ತು ಸರಕಾರೇತರ ಸಂಸ್ಥೆಗಳಲ್ಲಿ ಧ್ವಜರೋಹಣಗಳು ನಡೆದವು.ಆಟೋರಿಕ್ಷಾಗಳು ಮತ್ತು ಬೈಕ್‌ಗಳು ಸೇರಿದಂತೆ ಅನೇಕ ವಾಹನಗಳಲ್ಲೂ ಬಾವುಟಗಳು ರಾರಾಜಿಸಿದವು.

ವಿದ್ಯಾರ್ಥಿಗಳು ಕೈಗೆ ಮತ್ತು ತಲೆಗೆ ತ್ರಿವರ್ಣದ ಬ್ಯಾಂಡ್ ತೊಟ್ಟು ಮೆರವಣಿಗೆ ನಡೆಸಿದರು. ಕೆಲ ಸಂಸ್ಥೆಗಳು ಮಕ್ಕಳಿಂದ ನೃತ್ಯ ಮತ್ತು ದೇಶ ಭಕ್ತಿ ಗೀತೆಗಳ ಗಾಯನವನ್ನು ಆಯೋಜಿಸಿದ್ದವು. ಭಾರತ ಮಾತೆಯ ವೇಷಧರಿಸಿದ್ದ ಮಕ್ಕಳು ಗಮನ ಸೆಳೆದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕೇಂದ್ರ ಕಚೇರಿಯಲ್ಲಿ 72ನೇ ಗಣರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಇಲಾಖೆಯ ಉಪನಿರ್ದೇಶಕ ಕೆ.ಪಿ. ಪುಟ್ಟಸ್ವಾಮಯ್ಯ ಧ್ವಜಾರೋಹಣ ನೆರವೇರಿಸಿದರು.
ನಾಗರಬಾವಿಯ ವಿಶ್ವೇಶ್ವರಯ್ಯ ಲೇಔಟ್‍ನ ಗಿಡದಕೋನೇನಹಳ್ಳಿಯಲ್ಲಿ ಆಯೋಜಿಸಿದ್ದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಮಕ್ಕಳಿಂದ ಧ್ವಜಾರೋಹಣ ನೆರವೇರಿತು.

ಜಯ ಕರ್ನಾಟಕ ಸಂಘಟನೆ ವತಿಯಿಂದ ಗಣರಾಜ್ಯೋತ್ಸವ ಅಂಗವಾಗಿ ಮಹಾತ್ಮ ಗಾಂಧೀಜಿ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು.

ಕನ್ನಡ ಸಾಹಿತ್ಯ ಪರಿಷತ್ತಿ ಆವರಣದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ ಪರಿಷತ್ತಿನ ಅಧ್ಯಕ್ಷ ಕಸಾಪ ಅಧ್ಯಕ್ಷ ಮನು ಬಳಿಗಾರ್‌, ‘ಸಂವಿಧಾನದ ಮುನ್ನುಡಿಯಲ್ಲಿ ‘ಭಾರತೀಯರು ನಾವೆಲ್ಲ ಒಂದೇ’ ಎಂದು ಸಾರಿದೆ. ರಾಷ್ಟ್ರೀಯತೆಗೆ ಧಕ್ಕೆ ಉಂಟಾದಾಗ ಎಲ್ಲರೂ ಒಂದಾಗಿ ಎದುರಿಸಬೇಕು. ಪ್ರತಿಯೊಬ್ಬ ಭಾರತೀಯರೂ ರಾಷ್ಟ್ರಪ್ರೇಮ, ಜಾತ್ಯತೀತ ನಿಲುವು, ದೇಶಕ್ಕಾಗಿ ತ್ಯಾಗ, ವಿಶಾಲ ಮನೋಭಾವ ಬೆಳಸಿಕೊಳ್ಳಬೇಕು’ ಎಂದರು. ಪರಿಷತ್ತಿನ ಗೌರವ ಕಾರ್ಯದರ್ಶಿ ಕೆ.ರಾಜಕುಮಾರ್, ಹಿರಿಯ ಪತ್ರಕರ್ತ ಪದ್ಮರಾಜ ದಂಡಾವತಿ, ಗೌರವ ಕೋಶಾಧ್ಯಕ್ಷ ಪಿ.ಮಲ್ಲಿಕಾರ್ಜುನಪ್ಪ ಭಾಗವಹಿಸಿದರು.

ಪಕ್ಷಗಳ ಕಚೇರಿಯಲ್ಲಿ ಗಣರಾಜ್ಯೋತ್ಸವ: ಬಿಜೆಪಿ ಕಚೇರಿಯಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ರಾಜ್ಯಸಭಾ ಸದಸ್ಯ ಕೆ.ಸಿ. ರಾಮಮೂರ್ತಿ, ಶಾಸಕ ಮುನಿರತ್ನ, ಛಲವಾದಿ ನಾರಾಯಣಸ್ವಾಮಿ ಭಾಗವಹಿಸಿದ್ದರು. ಜೆಡಿಎಸ್ ಕಚೇರಿಯಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಧ್ವಜಾರೋಹಣ ನೆರವೇರಿಸಿದರು.

ನಗರದ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ, ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಭಾಗವಹಿಸಿದ್ದರು.

ಮಾಸ್ಕ್‌, ಸ್ಯಾನಿಟೈಸರ್ ವಿತರಣೆ

ಸಂವಿಧಾನದ ಮೂಲ ಆಶಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ವಿಧಾನಸೌಧದ ಎದುರುಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಮಂಗಳವಾರ ಗಣರಾಜ್ಯೋತ್ಸವವನ್ನು ವಿಭಿನ್ನವಾಗಿ ಆಚರಿಸಲಾಯಿತು.

ಸಮಿತಿಯ ಅಧ್ಯಕ್ಷ ಸಿ.ಎಸ್. ರಘು ಅವರು ಸಂವಿಧಾನಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ವೇಷಧಾರಿಯಾಗಿ ಸಂವಿಧಾನದ ಪೀಠಿಕೆಯ ಪ್ರತಿ ಹಾಗೂ ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಿಸಿದರು.

ಈ ವೇಳೆ ಮಾತನಾಡಿದ ಸಿ.ಎಸ್. ರಘು, ‘ಸಂವಿಧಾನದ ಮೂಲ ಆಶಯಗಳನ್ನು ನಾವು ಮರೆಯುತ್ತಿದ್ದೇವೆ ಎನ್ನಿಸುತ್ತಿದೆ. ಸಂವಿಧಾನ ಸಂರಕ್ಷಿಸಿ ಪ್ರಜಾಪ್ರಭುತ್ವ ಉಳಿಸಿ ಎನ್ನುವ ಜನಜಾಗೃತಿಯ ಅಭಿಯಾನ ಹಮ್ಮಿಕೊಂಡಿದ್ದೇವೆ. ಅಂಬೇಡ್ಕರ್ ರಚಿಸಿದ ಸಂವಿಧಾನದ ಪ್ರತಿಗಳನ್ನು ನೀಡುತ್ತೇವೆ’ ಎಂದರು.

ಸಾಮಾಜಿಕ ಜಾಲತಾಣ ತ್ರಿವರ್ಣಮಯ

ಗಣರಾಜ್ಯೋತ್ಸವದ ಅಂಗವಾಗಿ ಜನ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ವಾಟ್ಸ್‌ಆ್ಯಪ್, ಫೇಸ್‌ಬುಕ್, ಟ್ವಿಟರ್‌ನಲ್ಲಿ ಡಿಜಿಟಲ್ ತ್ರಿವರ್ಣ ಧ್ವಜಗಳು ರಾರಾಜಿಸಿದವು.

‘ನೆಮ್ಮದಿಯ ಜೀವನಕ್ಕೆ ಅಂಬೇಡ್ಕರ್ ಕಾರಣ’

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ 72ನೇ ಗಣರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಅವರು ಧ್ವಜಾರೋಹಣ ನೆರವೇರಿಸಿದರು.

‘ಅಪ್ರತಿಮ ಜ್ಞಾನಿಯಾಗಿದ್ದ ಅಂಬೇಡ್ಕರ್ ಅವರು ಬೇರೆ ಬೇರೆ ದೇಶಗಳ ಸಂವಿಧಾನಗಳನ್ನು ಅಭ್ಯಾಸ ಮಾಡಿ ಅವುಗಳಲ್ಲಿನ ಪ್ರಮುಖ ಅಂಶಗಳನ್ನು ಕ್ರೋಢೀಕರಿಸಿ ನಮಗೊಂದು ಹೆಮ್ಮೆಯ ಸಂವಿಧಾನದ ರಚನೆ ಮಾಡಿ ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಈ ಸಂವಿಧಾನ ಇಲ್ಲದಿದ್ದರೆ ಇಂದು ದೇಶದ 130 ಕೋಟಿ ಜನರು ನೆಮ್ಮದಿ ಜೀವನ ನಡೆಸಲು ಸಾಧ್ಯವಾಗುತ್ತಿರಲಿಲ್ಲ’ ಎಂದು ವಿಶ್ವನಾಥ್‌ ತಿಳಿಸಿದರು.

ಡಿಎ ಆಯುಕ್ತ ಎಚ್‌.ಆರ್‌.ಮಹದೇವ್, ಕಾರ್ಯದರ್ಶಿ ವಾಸಂತಿ ಅಮರ್, ಉಪಾಯುಕ್ತ ಶಿವರಾಜ್ ಇದ್ದರು.

‘ಹೊಸ ಶಿಕ್ಷಣ ನೀತಿಯಿಂದ ಕ್ರಾಂತಿ’

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ 72ನೇ ಗಣರಾಜ್ಯೋತ್ಸವ ಆಚರಿಸಲಾಯಿತು. ಪ್ರೊ. ವೇಣುಗೋಪಾಲ್ ಧ್ವಜಾರೋಹಣ ನೆರವೇರಿದರು.

‘ಹಲವಾರು ಧರ್ಮ, ಸಂಸ್ಕೃತಿ, ಭಾಷೆ, ಜನಾಂಗಗಳನ್ನು ಒಳಗೊಂಡಿರವ ಭಾರತಕ್ಕೆ ಡಾ. ಬಿ.ಆರ್ ಅಂಬೇಡ್ಕರ್ ಅವರ ಪರಿಶ್ರಮದಿಂದ ಉತ್ತಮ ಸಂವಿಧಾನ ದೇಶಕ್ಕೆ ದೊರೆತಿದೆ. ದೇಶದ ಅಭಿವೃದ್ಧಿಗೆ ಗುಣಾತ್ಮಕ ಹಾಗೂ ಮೌಲ್ಯಾಧಾರಿತ ಶಿಕ್ಷಣ ಬಹಳ ಅವಶ್ಯಕ. ಹೊಸ ಶಿಕ್ಷಣ ನೀತಿಯಿಂದ ಇಡೀ ದೇಶದಲ್ಲಿಯೇ ಶಿಕ್ಷಣ ಕ್ರಾಂತಿಯ ಮೂಲಕ ದೇಶದ ಅಭಿವೃದ್ಧಿಗೆ ಕಾರಣವಾಗಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT